ಎರಡು ವರ್ಷಗಳು ಕಳೆದವು. ಮೀನಾಕ್ಷಮ್ಮ ಶಾಂತ ಮುದ್ರೆಯ ಹೆಣ್ಣನ್ನು ಹೆತ್ತು ಪತಿಗೆ ಅರ್ಪಿಸಿದರು. ರಾಯರು ಮಗಳಿಗೆ ಶಾಂತಾ ಎಂದು ಹೆಸರಿಟ್ಟರು. ಸಾವಿತ್ರಮ್ಮ ತಾನು ಹಿಂದುಳಿಯಬಾರದೆಂದು ಮತ್ತೆ ಎರಡು ವರ್ಷ ಕಳೆಯಲು ಒಂದು ಗಂಡನ್ನು ಹೆತ್ತು ಪತಿಗೆ ಅರ್ಪಿಸಿದಳು. ಸಾವಿತ್ರಮ್ಮನ ಮಗನಿಗೆ ಗೋಪಾಲ ಎಂದು ಹೆಸರಿಟ್ಟರು. ರಾಯರ ಕರ್ತವ್ಯಭಾರವೂ ಹೆಚ್ಚುತ್ತಬಂತು. ಮಕ್ಕಳಿರುವ ಮನೆಯ ಸಣ್ಣಪುಟ್ಟ ಕಾಹಿಲೆ ಕಸಾಲೆಗಳು ರಾಯರ ಮನೆಯನ್ನೂ ಬಿಡಲಿಲ್ಲ. ಇವತ್ತು ರಾಮೂಗೆ ಜ್ವರ ಬಂತು; ಇವತ್ತು ಶಾಂತ ಕೆಮ್ಮುತ್ತಿದ್ದಾಳೆ; ಇವತ್ತು ಲಕ್ಷ್ಮಣ ಚಂಡಿ ಹಿಡಿದಿದ್ದಾನೆ ಎಂದು ಯಾವದಾದರೊಂದು ಇರುತ್ತಲೇ ಇದ್ದಿತು. ಒಂದು ದಿವಸ ಇದ್ದಕ್ಕಿದ್ದ ಹಾಗೆಯೇ ಗೋಪಾಲೀಗೆ ಎಳೆತ ಆರಂಭವಾಗಿಬಿಟ್ಟಿತು. ಮಗು ಕಣ್ಣುಗುಡ್ಡೆಯನ್ನು ಆಕಾಶಕ್ಕೆ ಸಿಕ್ಕಿಸಿ ಉಸಿರುಗಟ್ಟುತ್ತ ಬಂತು. ಡಾಕ್ಟರೂ ಗಾಬರಿಯಾಗಿಯೇ ಬಂದರು. ರಬ್ಬರ ಕೊಳವೆಯನ್ನು ಎದೆಯಮೇಲಿಟ್ಟು ನೋಡಿ ತಾವೂ ಕಣ್ಣುಗುಡ್ಡೆ ಸಿಕ್ಕಿಸಿ ಬಿಟ್ಟರು. ಎಲ್ಲಿಗೋ ಹೋಗಿದ್ದ ಶಾಮಣ್ಣನವರು ಈ ಹುಯಿಲು ಕೇಳಿ ಓಡಿ ಬಂದು ಮಗುವನ್ನು ನೋಡಿದರು. ಆ ಕ್ಷಣವೇ ಅಲ್ಲಿಂದ ಮಾಯವಾಗಿ ಒಂದು ಎಲೆಯ ಮೇಲೆ ಜೇನುತುಪ್ಪ ಕಲಸಿದ ಕಪ್ಪನೆಯ ಔಷಧವನ್ನು ಹಾಕಿ ತಂದು ಮಗುವಿಗೆ ನೆಕ್ಕಿಸಿದರು. ತಾಯಿತಂದೆ ನೋಡುತ್ತಿರುವಂತೆಯೇ ಹತ್ತು ಹದಿನೆದು ನಿಮಿಷಗಳಲ್ಲಿ ಎಳೆತ ಕಡಿಮೆಯಾಗುತ್ತ ಬಂತು; ಮಗು ಅಬಾಧಿತವಾಗಿ ಉಸಿರು ಹುಯ್ಯಲಾರಂಭಿಸಿತು. ಅರ್ಧ ಗಂಟೆ ಬಿಟ್ಟು ಮತ್ತೆ ಅದೇ ಔಷಧವನ್ನು ತಿನ್ನಿಸಲು ಮಗು ಸುಖವಾಗಿ ನಿದ್ರೆಹೋಯಿತು. “ಇನೇನೂ ಯೋಚನೆಯಿಲ್ಲ ಬಿಡಿ ಸ್ವಾಮಿ , ಮಗು ಜೀವ ಗಟ್ಟಿಯಾಯಿತು” ಎಂದರು. ತಮ್ಮ ಕಣ್ಣುಮುಂದೆಯೇ ಆದ ಈ ಪವಾಡವನ್ನು ನೋಡಿ ರಾಯರು ಬೆರಗಾಗುವದು ಹಾಗಿರಲಿ; ಎಂ.ಬಿ.ಬಿ.ಎ. ಮಾಡಿದ ಡಾಕ್ಟg ಕೂಡ ಬೆರಗಾದರು. “ಯಾವದರಿ ಔಷಧ ಶಾಮಣ್ಣ” ಎಂದು ಡಾಕ್ಟರು ತಮ್ಮ ವೃತ್ತಿಗಾಂಭೀರ್ಯವನ್ನು ಮರೆತು ಕೇಳಿದರು. ಶಾಮಣ್ಣ ಅದಕ್ಕೆ “ನೀವೆಲ್ಲಾ ‘ಕೆಲಸಕ್ಕೆ ಬಾರದು’ ಎಂದು ಹೇಳುತ್ತೀರಲ್ಲಾ ಸಾg. ಆ ಆಯುರ್ವೇದದ್ದು-ಚಿಲ್ರೆಔಷಧ” ಎಂದು ಮೂದಲಿಸಿಯೇ ಬಿಟ್ಟರು. ರಾಯರು ಮಧ್ಯೆ ಬಾಯಿಹಾಕಿ ಡಾಕ್ಟರಿಗೂ ಒಂದು ಸಿಹಿಮಾತು ಆಡಿ ಕಳುಹಿಸದಿದ್ದರೆ ಶಾಮಣ್ಣನಿಗೂ ಅವರಿಗೂ ಹಣಾಹಣಿ ವ್ಯಾಜ್ಯತೆ ಆರಂಭವಾಗಿಬಿಡುತ್ತಿತ್ತು. ಒಂದು ಕಡೆ ಅನುಕೂಲಸ್ಥರ ಮನೆಯ ಆರೆಕೆ, ಇನೊಂದು ಕಡೆ ಪ್ರೀತಿಯ ತಂದೆತಾಯಿಗಳ ಪೋಷಣೆ. ಎರಡೂ ಲಭಿಸಿದ ಮೇಲೆ ಮಕ್ಕಳು ಚೆನ್ನಾಗಿ ಬೆಳೆಯದೆ ಏನು ಆದಾವು?” ರಾಮಲಕ್ಷ್ಮಣರು ಸ್ಕೂಲಿಗೆ ಸೇರುವ ವಯಸ್ಸೂ ಬಂತು ಮನೆಯಲ್ಲಿ ಪಾಯಸದ ಅಡಿಗೆಮಾಡಿ, ದೇವರಿಗೆ ತುಪ್ಪದ ದೀಪ ಹಚ್ಚಿಟ್ಟು, ಅವರಿಬ್ಬರನ್ನೂ ಸ್ಕೂಲಿಗೆ ಕಳುಹಿಸಲಾರಂಭಿಸಿದರು. ಸಾವಿತ್ರಮ್ಮನ ಬಯಕೆ. ಹಾರೆಕೆ ಸಫಲವಾಗುವ ಚಿನ್ಹೆಗಳು ಮೊದಲಿನಿಂದಲೇ ಕಂಡುಬರಲಾರಂಭವಾದವು. ರಾಮಚಂದ್ರ ವರ್ಷವಾಗುತ್ತ ಆಗುತ್ತ ಮುಂದಿನ ತರಗತಿಗೆ ಸುಖವಾಗಿ ತಲುಪುತ್ತಿದ್ದನು ಲಕ್ಷ್ಮಣನ ನಡಿಗೆ ಅಷ್ಟು ನೇರವಾಗಿರಲಿಲ್ಲ. ಮೊದಲಿನಿಂದಲೂ ಅವನಿಗೆ ಲೆಕ್ಕವೆಂದರೆ ದುಃಖವೇ ಬರುತ್ತಿತ್ತು. ಪಠ್ಯಪುಸ್ತಕಗಳಲ್ಲಿನ ಕನ್ನಡ ಪದ್ಯಗಳನ್ನು ರಾಗವಾಗಿ ಹೇಳುವುದರಲ್ಲಿ ಲಕ್ಷ್ಮಣನು ಎಲ್ಲರಿಗಿಂತಲೂ ಮುಂದಾಳು; ಆದರೆ ಮಿಕ್ಕ ಪಾಠಗಳಲ್ಲಿ ಅವನ ಸ್ಥಾನ ತರಗತಿಯ ತುಟ್ಟ ತುದಿಯಲ್ಲಿ. ಕಥೆಗಳನ್ನು ಹೇಳುವುದು, ಕೇಳುವುದು; ಹಾಡುಗಳನ್ನು ಕೇಳುವುದು ಹೇಳುವುದು- ಈ ಕಡೆಗೇ ಅವನ ಲಕ್ಷ್ಯ. ರಾಯರ ಮಗ, ದೊಡ್ಡವರ ಮನೆಯ ಹುಡುಗನೆಂದು ಶಾಲೆಯ ಅಧಿಕಾರಿಗಳು ಅವನನ್ನೂ ಮೇಲಿನ ತರಗತಿಗಳಿಗೆ ಕಳುಹಿಸುತ್ತಿದ್ದರು. ರಾಮಚಂದ್ರನಲ್ಲಿ ಒಂದು ಶಿಸ್ತಿತ್ತು. ಅವನ ಕೆಲಸ ಕಾರ್ಯಗಳಲ್ಲಿ ಒಂದು ತೆರನ ವ್ಯವಸ್ಥಿತ ರೂಪವಿತ್ತು. ಪುಸ್ತಕಗಳಿಗೆ ಅಚ್ಚುಕಟ್ಟಾಗಿ ರಟ್ಟುಹಾಕಿ ಅವನು ಇಟ್ಟುಕೊಳ್ಳುತ್ತಿದ್ದ ರೀತಿ, ಮನೆಯ ಪಾಠಗಳನ್ನು ಮಿಗಿಸದೆ ಮಾಡಿ ಮುಗಿಸುತ್ತಿದ್ದ ಬಗೆ, ಪಾಠಗಳನ್ನು ಪೂರ್ವಭಾವಿಯಾಗಿ ಸಿದ್ಧ ಮಾಡಿಕೊಂಡು ಕ್ಲಿಷ್ಟಪದಗಳಿಗೆ ನಿಘಂಟುನೋಡಿ ಅರ್ಥಗಳನ್ನು ತಿಳಿದುಕೊಂಡು ಹೋಗುತ್ತಿದ್ದುದು – ಎಲ್ಲದರಲ್ಲಿಯೂ ಒಂದು ಕ್ರಮ, ಒಂದು ನಿಯಮವಿತ್ತು. ಇದರ ಜತೆಗೆ ರಾಮಚಂದ್ರನಲ್ಲಿ ಸಾಕಷ್ಟು ನುಗ್ಗುವ ಶಕ್ತಿ ಮೊದಲಿನಿಂದಲೂ ಬೆಳೆದು ಬಂದಿತ್ತು. ಇದನ್ನು ಅವನು ತನ್ನ ತಂದೆಯಿಂದ ಬಳುವಳಿಯಾಗಿ ಪಡೆದನೆಂದರೂ ತಪ್ಪಾಗದು. ಫುmಬಾ ಮೆದಾನದಲ್ಲಿ ರಾಮಚಂದ್ರನೇ ಮುಂದಾಳು. ಅವನೇ ಟೀಮಿನ ಕ್ಯಾಪ್ಟ. ಅದಿಲ್ಲದಿದ್ದರೆ ಸೆಂಟg – ಫಾರವg ಸ್ಕೌಟು ದಳದಲ್ಲಿ ಅವನೇ ಪೆಟ್ರೋ ಲೀಡg. ಡಿಬೇಟಿಂU ಸೊಸೆಟಿಯಲ್ಲಿ ಅವನೇ ಪಕ್ಷನಾಯಕ. ಕ್ಲಾಸಿನಲ್ಲಿ ಅವನೇ ಮಾನೀಟg ಇತರರಮೇಲೆ ಅಧಿಕಾರ ಮಾಡುವ ಚಪಲ, ಅನುಕೂಲಗಳು ರಾಮಚಂದ್ರನಿಗೆ ಮೊದಲಿನಿಂದಲೇ ಬಂದವು. ಸ್ಕೂಲಿನ ಸೀಮೇಸುಣ್ಣವೆಲ್ಲಾ ತರಗತಿಯ ಮಾನೀಟgಗಳ ಹತ್ತಿರವಿರುವುದರಿಂದ ರಾಮಚಂದ್ರನ ತರಗತಿಯ ಹುಡುಗರು ಅವನನ್ನು ‘ಪಡಿ’ಗಾಗಿ ಆಶ್ರಯಿಸಬೇಕಾಗಿತ್ತು. ಸ್ಕೌಟು ಟ್ರೂಪಿನ ಹುಡುಗರು ಶಾಲೆಯ ನಿತ್ಯದ ಡ್ರಿ ತರಗತಿಯಿಂದ ತಪ್ಪಿಸಿಕೊಳ್ಳಬಹುದಾಗಿತ್ತು. ಈ ಅನುಕೂಲಕ್ಕಾಗಿ ಅನೇಕ ಸೋಮಾರಿ ಹುಡುಗರು ಸ್ಕೌಟುಗಳಾಗಿ ಬಿಡುತ್ತಿದ್ದರು. ಆದರೆ ಡ್ರಿ ತಪ್ಪಿದರೆ ಸ್ಕೌಟು ಕ್ಲಾಸುಗಳಿರುತ್ತಿದ್ದವು. ಅವುಗಳಿಗೆ ಚಕ್ಕg ಹೊಡೆಯಬೇಕಾದರೆ ದಳ – ನಾಯಕನ ವಿಶ್ವಾಸಬೇಕು. ಈ ಕಾರಣದಿಂದಲೂ ಹುಡುಗರು ರಾಮಚಂದ್ರನನ್ನು ಆಶ್ರಯಿಸುತ್ತಿದ್ದರು.
ಲಕ್ಷ್ಮಣನಲ್ಲಿ ಅಣ್ಣನ ಈ ಎರಡು ಗುಣಗಳೂ ಸಂಪೂರ್ಣವಾಗಿ ಲೋಪವಾಗಿದ್ದವು. ಬುದ್ಧಿಗೆ ತೋರಿದರೆ ಎಂಟು ದಿವಸದ ಪಾಠವನ್ನು ಒಂದೇ ದಿವಸ ಸಿದ್ಧಮಾಡಿಬಿಡುವನು. ಮನಸ್ಸಿಗೆ ಬಾರದಿದ್ದರೆ ತಿಂಗಳಾದರೂ ಪುಸ್ತಕವನ್ನು ಮುಟ್ಟುತ್ತಿರಲಿಲ್ಲ. ಪುಸ್ತಕಗಳನ್ನು ಕಳೆದುಕೊಳ್ಳುವುದು, ಇದ್ದ ಪುಸ್ತಕಗಳ ಹಾಳೆಗಳನ್ನು ಕಳೆದುಕೊಳ್ಳುವುದೂ ಅವನಿಗೆ ಸಾಮಾನ್ಯವಾಗಿ ಬಿಟ್ಟಿತ್ತು. ಊಟ ಮಾಡಿ ಶಾಲೆಗೆ ಹೊರಟು ಲಕ್ಷ್ಮಣನು ನೇರವಾಗಿ ಶಾಲೆಗೆ ಬರುತ್ತಿದ್ದುದೇ ಅಪರೂಪ. ದಾರಿಯ ಹಾವಾಡಿಗನನ್ನು ಕಂಡರಾಯಿತು; ಮೋಡಿ ಮಾಡುವವರೂ, ಮಾರಿಯನ್ನು ಛಾಟಿಯಿಂದ ತಮ್ಮನ್ನೇ ಹೊಡೆದುಕೊಳ್ಳುವವರೂ, ಯಕ್ಷಿಣಿ, ಡೊಂಬರಾಟ ಆಡಿಸುವವರು, ತಂಬೂರಿಯನ್ನೋ ಏಕನಾದವನ್ನೋ ಶೃತಿಮಾಡಿಕೊಂಡು ಭಿಕ್ಷೆಗಾಗಿ ಹಾಡುವವರೂ ಯರಾದರೂ ಸಿಕ್ಕಿದರಾಯಿತು; ಅಂದಿನ ಶಾಲೆ ಪಾಠ, ಮನೆ ಮಠ ಎಲ್ಲವು ಲಕ್ಷ್ಮಣನಿಗೆ ಮರೆತೇ ಹೋಗುತ್ತಿದ್ದವು. ರಾಮಚಂದ್ರನೆಷ್ಟು ಸಂಗಪ್ರಿಯನೋ, ಲಕ್ಷ್ಮಣನಷ್ಟು ಏಕಾಂತ ಪ್ರಿಯನಾಗಿದ್ದನು. ರಾಮಚಂದ್ರ ಸುತ್ತಮುತ್ತಲೂ ಜನ ತುಂಬಿದ್ದರೇ,ಅವನ್ನು ‘ಭಲೆ ಭಲೆ’ಯೆನ್ನುತ್ತಿದ್ದರೇಅವನೊಬ್ಬ ಮನುಷ್ಯ. ಲಕ್ಷ್ಮಣನನ್ನು ಯಾರಾದರೂ ಮಾತನಾಡಿಸಿದರೆ ಸಾಕು ‘ಮುಟ್ಟಿದರೆ ಮುನಿಯಂತಾಗುತ್ತಿದ್ದನು. ಮನಸ್ಸಿನ ಭಾವನೆ,ಚಿಂತನೆಗಳನ್ನು ಪ್ರಕಟಿಸಲು ಮಾತು ಒಂದು ಸಾಧನವೆಂಬುದು ಅವನ ಮನಸ್ಸಿಗೆ ಬಾರದು. ತನ್ನಷ್ಟಕ್ಕೇ ತಾನೇ ಹಾಡಿಕೊಳ್ಳುವನು. ಊರ ಹೊರಗಿನ ಬಂಡೆಯ ಮೇಲೆ ಕುಳಿತು ಸಂಜೆಯಾಗಸದ ಬಣ್ಣಬಣ್ಣಗಳನ್ನು ನೋಡುತ್ತಾ ಮೆಮರೆಯುವನು. ಹೊಳೆಯ ತಿಳಿನೀರಿನಲ್ಲಿ ಕಾಲುಬಿಟ್ಟುಕೊಂಡು ಕುಳಿತು, ಅಲ್ಲಿನ ಮೀನುಗಳು ಸ್ನೇಹಸಲಿಗೆಗಳಿಂದ ಪರಸ್ಪರ ನನ್ನಿವಾಟವಾಡುವುದನ್ನೂ ತನ್ನ ಕಾಲನ್ನು ಕಚ್ಚುವುದನ್ನೂ ನೋಡುತ್ತ ದೇಹದ ಪರಿವೆಯನ್ನೇ ಮರೆಯುವನು. ಶಾಲೆಯಲ್ಲಂತೂ ಲಕ್ಷ್ಮಣನಿಗೆ ಸ್ನೇಹಿತರು ದೊರೆಯಲೇ ಇಲ್ಲ. ಅವನ ಸ್ನೇಹಿತರು ಅನ್ನಿಸಿಕೊಳ್ಳುತ್ತಿದ್ದವರೆಂದರೆ ಶಾಮಣ್ಣನವರೊಬ್ಬರೇ.ಶಾಮಣ್ಣನವರ ಭಾರತವಾಚನವೆಂದರೆ ಲಕ್ಷ್ಮಣನಿಗೆ ಅಚ್ಚುಮೆಚ್ಚು. ತನ್ನ ಆನಂದವನ್ನು ಬಿಚ್ಚಿ ಹೇಳುವುದಕ್ಕೂ ಅವನಿಗೆ ಸಂಕೋಚ. ಎಂದಾದರೊಂದು ದಿವಸ ಶಾಮಣ್ಣನವರ ಹಾಗೆ ಭಾರತ ಓದುವುದನ್ನು ಕಲಿಯಬೇಕೆಂದು ಆಶಿಸುತ್ತಿದ್ದನು. ಶಾಮಣ್ಣನವರ ವಾಚನರೀತಿಯನ್ನು ಅನುಕರಿಸಿ ಅದೇ ಬಗೆಯಲ್ಲಿ ತನ್ನ ಪಠ್ಯಪದ್ಯಗಳನ್ನು ಓದುವುದರ ಮೂಲಕ ತನ್ನ ಭಕ್ತಿವಿಶ್ವಾಸವನ್ನು ಪ್ರದರ್ಶಿಸುತ್ತಿದ್ದನು. ಶಾಮಣ್ಣನವರ ಹತ್ತಿರ ದೊಡ್ಡ ಆಸ್ತಿಯೊಂದಿತ್ತು; ಒಂದು ಸುಂದರವಾದ ತಂಬೂರಿ. ಅವರ ಭಾರತ ವಾಚನವನ್ನು ಕೇಳಿದ್ದ ಒಬ್ಬ ಮೆಸೂರು ವಿದ್ವಾಂಸರು ತಾವು ಉಪಯೋಗಿಸುತ್ತಿದ್ದ ಮಾಗಡಿ ತಂಬೂರಿಯನ್ನು ಸಂತೋಷದಿಂದ ದಾನಮಾಡಿದ್ದರು. ಸಂಗೀತಗಾರರ ಮನೆಯಲ್ಲಿ ಅದು ನಾಲ್ಕು ತಲೆಮಾರಿನಿಂದಲೂ ಇತ್ತು. ಅಂತಹ ವಂಶಪಾರಂಪರ್‍ಯವಾದ ಆಸ್ತಿಯನ್ನು ಸಂಗೀತ ವಿದ್ವಾಂಸರು ಸಂದೇಶ ಸಹಿತವಾಗಿಯೇ ಒಪ್ಪಿಸಿದ್ದರು. “ನಿಮ್ಮ ವಿದ್ಯೆಗೂ, ನಿಮ್ಮ ಭಾರತದ ಕವಿಗೂ ಇದುನನ್ನ ಕಾಣಿಕೆ ಶಾಮಣ್ಣನರೇ. ಏನೇ ಕಷ್ಟ ಬಂದರೂ ಇದನ್ನು ನೀವು ಮಾರಬಾರದು. ಕಾಲವೊದಗಿದಾಗ ಯೋಗ್ಯನಾದ ಶಿಷ್ಯನಿಗೆ ದಾನ ಮಾಡಿ ಇದೇ ಮಾತನ್ನು ಅವನಿಗೂ ಹೇಳಬೇಕು” ಎಂದು ಹೇಳಿ “ಮಾರುವುದಿಲ್ಲ”ಎಂದು ಶಾಮಣ್ಣನವರಿಂದ ಮಾತು ತೆಗೆದುಕೊಂಡಿದ್ದರು. ಆ ತಂಬೂರಿಯನ್ನು ನೋಡಿದರೆ ಸಾಕು ಲಕ್ಷ್ಮಣನ ಮೆ ಝುಂ ಎನ್ನುತ್ತಿತ್ತು. ಅದನ್ನು ಶೃತಿ ಮಾಡಿ ಶಾಮಣ್ಣನವರು ಮಿಡಿಯಿತೆಂದರೆ ಲಕ್ಷ್ಮಣನ ನರಗಳನ್ನು ಮಿಡಿದಂತಾಗುತ್ತಿತ್ತು. ಉದ್ವೇಗದಿಂದ ನಾಡಿಯು ಹೊಡೆದುಕೊಳ್ಳಲಾರಂಭಿಸುತ್ತಿತ್ತು. ಶಾಮಣ್ಣನವರನ್ನು ಅವರ ತಂಬೂರಿಯನ್ನು ಒಂದು ಸಲ ರಾಮಚಂದ್ರ ಅಪಹಾಸ್ಯ ಮಾಡಿದ್ದು ರಾದ್ಧಾಂತಕ್ಕೇ ಇಟ್ಟುಕೊಂಡಿತು. ಶಾಮಣ್ಣನವರನ್ನು ‘ತಂಬೂರಿ ದಾಸಯ್ಯ’ ಎಂದಂದ್ದು ತಪ್ಪಾಯಿತು ಎಂದು ರಾಮಚಂದ್ರ ಹೇಳುವ ತನಕ ಲಕ್ಷ್ಮಣ ಬಿಡಲಿಲ್ಲ. ಇಂತಹ ಸಣ್ಣಪುಟ್ಟ ಘಟನೆಗಳು ರಾಮಚಂದ್ರ ಲಕ್ಷ್ಮಣನನ್ನು ಸ್ವಲ್ಪ ದೂರ ದೂರ ಮಾಡುತ್ತಿದ್ದವು. ತಾನು ಪ್ರತಿಯೊಂದು ಪರೀಕ್ಷೆಯಲ್ಲಿಯು ತಪ್ಪದೆ ತೇರ್ಗಡೆಯಾಗುತ್ತಿದ್ದೇನೆಂದು ರಾಮಚಂದ್ರನಿಗೆ ಹೆಮ್ಮೆ, ಲಕ್ಷ್ಮಣನಿಗೆ ಅದನ್ನು ಕಂಡರೆ ಅಸೂಯೆಯಿಲ್ಲ.ಆದರೆ ತನ್ನನ್ನು ಅವಹೇಳನ ಮಾಡದಿದ್ದರೆ ಸಾಕಲ್ಲಾ ಎಂದು ಬಯಸುವನು.
ಇಬ್ಬರೂ ಲೋವg ಸೆಕೆಂಡರಿ ತರಗತಿಗೆ ಬಂದರು. ಶಾಲೆ ಅಧಿಕಾರಿಗಳು ರಾಮಚಂದ್ರನನ್ನು ಪರೀಕ್ಷೆಗೆ ಕಟ್ಟಿಸಿದರು. ಆ ಸೌಭಾಗ್ಯ ಲಕ್ಷ್ಮಣನಿಗೆ ದೊರೆಯಲಿಲ್ಲ. “ನೋಡಿದೆಯೋ” ಎಂದು ರಾಮು ಮೂದಲಿಸಿದಾಗ ಲಕ್ಷ್ಮಣಾ ತನ್ನ ಸಹಜ ಸರಳತೆಯಿಂದ “ಹೌದು ನೀನು ಜಾಣ,ನಿನ್ನನ್ನು ಕಟ್ಟಿಸಿದರು. ನಾನು ತಿಳಿದೇ ಇದೆ. ದಡ್ಡ, ಮಡ್ಡಿ ಸಾಂಬ್ರಾಣಿ” ಎಂದು ಉತ್ತರ ಕೊಟ್ಟಿದ್ದನು. ತಮ್ಮ ಮಗ ಮುಂದಕ್ಕೆ ಬರುತ್ತಿಲ್ಲವಲ್ಲಾ, ಎಲ್ಲದರಲ್ಲಿಯೂ ಹಿಂದುಳಿಯುತ್ತಿದ್ದಾನಲ್ಲಾ ಎಂದು ಮೀನಾಕ್ಷಮ್ಮನವರು ಮರುಗಿದರು.ಸಮಯವರಿತು ರಾಯರಿಗೆ ತಿಳಿಸಿಯೂ ತಿಳಿಸಿದರು.”ಹುಡುಗ ನಾಲ್ಕು ದಿವ್ಸ್ಸ ಆಡಿಕೊಂಡು ಇರಲಿ ಬಿಡು. ಈ ವರ್ಷವಲ್ಲದಿದ್ದರೆ ಮುಂದಿನ ವರ್ಷ ಕಟ್ಟುತ್ತಾನಂತೆ. ಏನೀಗ ಕೊಳ್ಳೆ ಹೋಗಿರುವುದು ಅವನಿಗೆ ವಯಸ್ಸು” ಎಂದು ರಾಯರು ಸಮಾಧಾನ ಹೇಳಿದ್ದರು. ಊರ ಮುಂದಿನ ಹನುಮಂತರಾಯನ ಗುಡಿಯ ಕೆಸಾಲೆ ಊರಿನ ಭಜನೆಮಂದಿರವೂ ಆಗಿತ್ತು. ಸಾಧಾರಣವಾಗಿ ಊರಿನ ಕಿರಿಯರೂ ಕೆಲವು ಹಿರಿಯರೂ ಪ್ರತಿದಿವಸವೂ ಅಲ್ಲಿ ಸೆರಿ ಭಜನೆ ಮಾಡಿ ಹೊತ್ತು ಕಳೆಯುತ್ತಿದ್ದರು. ಬೆಳಿಗ್ಗೆ ಹೊತ್ತು ಕೆಲಸವಿಲ್ಲದ ಕೆಲವು ಧಾಂಡಿಗರು ಸೇರಿ ಹುಲಿ ಮನೆಯನ್ನೋ ಚೌಕಾಬಾರವನ್ನೋ ಆಡಿಕೊಳ್ಳುತ್ತಿದ್ದರು. ಶನಿವಾರದ ಸಂಜೆಯ ಭಜನೆಯೇ ನಿಜವಾದ -ಸಾರವತ್ತಾದ ಭಜನೆ ಅಂದೇಚರುಪು ಸಿಕ್ಕುತ್ತಿದ್ದುದು. ಜನಸಂದಣಿಯೂ ಶನಿವಾರ ಹೆಚ್ಚಾಗಿಯೇ ಇರಿತ್ತಿದ್ದಿತು. ಎಲ್ಲರಿಗೂ ಒಂದೊಂದು ವಾರದ ಸರದಿ ಬರುತ್ತಿದ್ದುದರಿಂದ ಬಗೆ ಬಗೆಯ ಚರುಪುಗಳೂ ಆಗುತ್ತಿದ್ದವು. ಭಜನೆಯೂ ಸ್ವಾರಸ್ಯವಾಗುತ್ತಿತ್ತು. ರಾಮಸ್ವಾಮಿಅಯ್ಯಂಗಾರಿ ಮನೆ ಪುಳಿಯೋಗರೆ, ಕೃಷ್ಣಮೂರ್ತಿ ಮನೆ ಬಾಳೇಹಣ್ಣಿನ ರಸಾಯನ, ಶಾನುಭೋಗರ ಮನೆ ಕೋಸಂಬರಿ, ವೆಂಕಟೇಶನ ಮನೆ ಹುಳಿಯವಲಕ್ಕಿ ಹನುಮಪ್ಪನಿಗೆ ಸರಬರಾಯಿ ಆಗುತ್ತಿದ್ದವು. ಆದರೆ ಲಕ್ಷ್ಮಣನ ಚರುಪು ಎಲ್ಲಕ್ಕಿಂತಲೂ ಭರ್ಜರಿಯಾಗಿರುತ್ತಿತ್ತು. ಮಿಕ್ಕಿನವರು ರುಚಿ ನೋಡುವಷ್ಟು ಕೊಡುತ್ತಿದ್ದರೆ ಲಕ್ಷ್ಮಣನ ಸರದಿಯ ದಿವಸ ಹೊಟ್ಟೆ ತುಂಬುವಷ್ಟು ಸಿಕ್ಕುತ್ತಿತ್ತು. ಪ್ರತಿ ವಾರವೂ ಲಕ್ಷ್ಮಣನ ಚರುಪೇ ಸಿಕ್ಕಬಾರದೇ ಎಂದು ಎಲ್ಲರೂ ಬಯಸುವರು. ಆದರೆ ಭಜನೆ ಮನೆಯ ನಿಯಮ ನಿಬಂಧನೆಗಳು ಅದಕ್ಕೆ ಅವಕಾಶ ಕೊಡುತ್ತಿರಲಿಲ್ಲ.
ದೇವಸ್ಥಾನದ ಸಾಮಾನುಗಳಲ್ಲದೆ ಭಜನೆ ಮನೆಯ ಸಾಮಾನಾಗಿ ಒಂದು ತಂಬೂರಿ, ಒಂದು ಹಾರ್‍ಮೋನಿಯಂ, ಒಂದು ಪಿಟೀಲು, ಒಂದು ಜತೆ ತಾಳಗಳೂ ಇದ್ದವು. ಹೆಣ್ಣು ಮಕ್ಕಳ ಶಾಲೆಯ ಹಾಡಿನ ಮೇಷ್ಟ್ರೇ ಆ ಊರಿಗೆ ಸಂಗೀತ ವಿದ್ವಾಂಸರು. ಅವರೇ ಹಾರ್‍ಮೋನಿಯಂ ನುಡಿಸುತ್ತಿದ್ದರು. ಊರಿನ ತಾಫೇಗೆ ಮೃದಂಗ ನುಡಿಸುತ್ತಿದ್ದ ವೆಂಕಟಶಾಮಿಯದೇ ಮೃದಂಗವಾದನ. ರಾಮಸ್ವಾಮಿಅಯ್ಯಂಗಾರಿ, ನಾಲ್ಕು ದಿವಸ ಮೆಸೂರಿಗೆ ಹೋಗಿ ಸಂಗೀತ ಕಲಿಯುತ್ತೇನೆಂದು ‘ಚೊಟ್ಟೆ’ ಹಾಕಿ ಬಂದಿದ್ದ. ಅವನದೇ ಪಿಟೀಲು. ಇವುಗಳ ಜತೆಗೆ ಮುಖ್ಯವಾಗಿ ರಂಗದಾಸರೋ, ಶಾಮಣ್ಣನವರೋ ಹಾಡುತ್ತಿದ್ದರು. ಮಿಕ್ಕವರು ಒಂದೊಂದು ಶ್ಲೋಕವನ್ನೋ ದೇವರ ನಾಮವನ್ನೋ ಹೇಳುತ್ತಿದ್ದರು.
ಒಂದು ಶನಿವಾರ ಸಂಜೆ. ಯಥಾಪ್ರಕಾರ ಭಜನಕೂಟ ಸೇರಿತ್ತು. ಅಂದು ಲಕ್ಷ್ಮಣನ ಚರುಪಿನ ಸರದಿ. ಲಕ್ಷ್ಮಣ ಕಡಲೆಯ ಉಸಲಿ,ಮೊಸರನ್ನ ಮಾಡಿಸಿಕೊಂದು ಬಂದಿದ್ದುದು ಊರಿಗೆಲ್ಲಾ ಸಮಾಚಾರ ಹರಡಿಹೋಗಿತ್ತು.ಅರ್ದ ಊರೇ ನೆರೆದುಬಿಟ್ಟಿತ್ತು. ಜನರ ಮಧ್ಯೆ ಒಂದು ಹೊಸ ಮುಖವೂ ಸೇರಿತ್ತು. “ಈತ ಯಾರು” ಎಂದು ಒಬ್ಬನ್ನೊಬ್ಬರು ಪ್ರಶ್ನಿಸಿದರು. ಹೊಸಬನ ವಿಚಾರ ಯಾರಿಗೂ ಗೊತ್ತಿರಲಿಲ್ಲ ಗುಂಪಿನಲ್ಲಿದ್ದ ಬ ಕಂಡಕ್ಟg ಮಾತ್ರ ತುಮಕೂರಿಗೆಂದು ಹೊರಟಿದ್ದ ಈ ಮನುಷ್ಯ “ಭಾರತದ ಶಾಮಣ್ಣನವರು ಇರೋ ಹಳ್ಳಿ ಇದೇ ಏನಯ್ಯಾ ಎಂದು ಕೇಳಿ ಇಳಿದುದಾಗಿ ತಿಳಿಸಿದನು. ಶಾಮಣ್ಣನವರು ನಾಲ್ಕು ದೇವರ ನಾಮಗಳನ್ನು ಹಾಡಿದರು. ಹೊಸಬ ಸ್ವಲ್ಪ ಜಾಗಮಾಡಿಕೊಂಡು ಮುಂದೆ ಬಂದು “ಕೊಂಚ ಭಾರತ ಅಪ್ಪಣೆಯಾಗಬೇಕು”ಎಂದು ಕೇಳಿದ. ಎಲ್ಲರೂ ಹೊಸಬನನ್ನೇ ಎವೆಯಿಕ್ಕದೆ ನೋಡಿದರು. ಚಿಂದಿಬಟ್ಟೆ ಧರಿಸಿ ಕ್ಷೌರ ಸ್ನಾನ ಕಾಣದ ಮುಖ ಮೆಹೊತ್ತು ಬಂದು “ಭಾರತವನ್ನು ಓದು”ಎಂದು ಕೇಳುವವನ ದಿಟ್ಟತನವನ್ನು ಜನ ದಿಟ್ಟಿಸಿ ನೋಡಿತು. ಶಾಮಣ್ಣನವರು ಸಂತೋಷದಿಂದ ಹತ್ತು ಪದ್ಯಗಳನ್ನು ಓದಿದರು. ಹೊಸಬ ಮಧ್ಯೆ ಮಧ್ಯೆ‘ಭಲೆ-ಹೌದೋ’ ಎನ್ನುತ್ತಿದ್ದವನು ಶಾಮಣ್ಣನವರ ಓದು ಮುಗಿದಮೇಲೆ “ಭೇ ಓದ್ದೆ ನಮ್ಮಪ್ಪ. ಮೆಸೂರಿನ ಆ ಬಸಪ್ಪ ಒಬ್ಬ ಓದ್ತಿದ್ದ ನೋಡು ಇಂಗೆ” ಎಂದ. “ಯಾವ ಬಸಪ್ಪ?” ಎಂದು ಶಾಮಣ್ಣನವರು ಕೇಳಿದರು.
“ಅಸಿ- ಬಸಪ್ಪನ್ನ ಕಾಣ್ಯಾ ನಾಟಕ-ಗೀಟಕ ಬರ್‍ದವ್ನೆ ನೋಡು ಕವಿ ಬಸಪ್ಪಶಾಸ್ತ-ಅವ್ನಯ್ಯಾ!”
ಶಾಮಣ್ಣನವರು ಕಣ್ಣುಮುಚ್ಚಿ ಕೆಮುಗಿದರು.
ಆ ಮಹಾನುಭಾವ ಎಲ್ಲಿ, ನಾನೆಲ್ಲಿ; ಅವರ ಹೆಸರು ಓದ್ತೀನಪ್ಪಾ, ಭಾರತದ ತಿರುಳು ಕಂಡವರು ಬಸಪ್ಪಶಾಸ್ತಿಗಳು!” ಎಂದರು. ಹಾಡು, ಶ್ಲೋಕಗಳು ಮೊದಲಾದವು. ಕನ್ನಡ, ತೆಲುಗು, ತಮಿಳುಭಾಷೆಗಳಲ್ಲೆಲ್ಲಾ ಮೆರೆದುಹೋದವು. ಲಕ್ಷ್ಮಣನ ಸರದಿ ಬಂತು ಕಾಂಭೋಜಿ ರಾಗದಲ್ಲಿ ಪುರಂದರ ದಾಸರ ‘ಈ ಪರಿಯ ಸೊಬಗಾವ’ ಕೀರ್ತನೆಯನ್ನು ಆರಂಭಿಸಿದರು. ಗ್ರಾಮಫೋ ರಿಕಾರ್ಡಿನಲ್ಲಿ ಕೇಳಿ ಪಾಠಮಾಡಿದ ಕೀರ್ತನೆ. ಅದರ ಪ್ರಯೋಗಕ್ಕೆ ಇದೇ ಉತ್ತಮ ಸ್ಥಳವೆಂದು ಲಕ್ಷ್ಮಣನ ಹಾಡಲು ಮೊದಲಿಟ್ಟನು. ಲಕ್ಷ್ಮಣ ಪಲ್ಲವಿಯನ್ನು ಮುಗಿಸುವುದೇ ತಡ. ಹೊಸಬ “ಸ್ವಲ್ಪ ತಡೀ ಮಗಾ. ಎಲ್ಲಿ ಆ ತಂಬೂರಿ ಇಂಗೆ ಕೊಡಿ” ಎಂದು ತಂಬೂರಿಯನ್ನು ತೆಗೆದುಕೊಂಡು ಶೃತಿಮಾಡಿ ‘ಊ-‘ಆಡು’ ಲಕ್ಷ್ಮಣ ಹಾಡು ಮುಗಿಸುವ ಹೊತ್ತಿಗೆ ಹೊಸಬನ ಕೆ ನಿಂತುಹೋಗಿತ್ತು. ತಂಬೂರಿಗೆ ಆತುಕೊಂಡು ಒಂದೇ ಸವನೆ ಕಂಬನಿ ಸುರಿಸುತ್ತ ಕುಳಿತು ಬಿಟ್ಟನು. ಹಾಡು ಮುಗಿಸಲು ಎಲ್ಲರೂ ಚಕಿತರಾಗಿ ಹೊಸಬನನ್ನು ನೋಡಿದರು. ಕಣ್ಣುಗಳನ್ನು ಒರಸಿಕೊಳ್ಳುತ್ತಾ ಹೊಸಬ ತಂಬೂರಿಯನ್ನು ಮತ್ತೆ ಶ್ರುತಿ ಮಾಡಿ ತಾನು ಹಾಡಲು ಮೊದಲಿಟ್ಟನು. ಆಲಾಪನೆಯ ಮೊದಲನೆಯ ಆವರ್ತವನ್ನು ಅವನು ಹಾಡುವುದೇ ತಡ ಎಲ್ಲರಿಗೂ ಹೂಸಬನ ವಿದ್ಯೆಯ ಪರಿಚಯವಾಯಿತು. ವಾದ್ಯಗಾರರು ವಾದ್ಯಗಳನ್ನು ಕೆಳಗಿಟ್ಟು ಚಿತ್ರದ ಗೊಂಬೆಗಳಂತೆ ಕೇಳುತ್ತ ಕುಳಿತರು. ಪೂರ್ವಿ ಕಲ್ಯಾಣಿಯಲ್ಲಿ ತ್ಯಾಗರಾಜರ ‘ಪರಾಮುಖಮೇಲರಾ’ ಹಾಡಿದ್ದಾಯಿತು. ಖರಹರಪ್ರಿಯದಲ್ಲಿ ‘ರಾಮಾ ನೀಯೆಡ’ ಹಾಡಿದ್ದಾಯಿತು. ರಾಗಮಾಲಿಕೆಯಲ್ಲಿ ಪುರಂದರ ದಾಸರ ‘ಹೇಗೆ ಮೆಚ್ಚಿಸಲಿ, ಹೇಗೆ ಅರ್ಚಿಸಲಿ’ ಹಾಡಿ ನಿಲ್ಲಿಸಿದನು. ಎಲ್ಲರ ಕಣ್ಣುಗಳಲ್ಲಿಯೂ ಆನಂದ ಜಲಬಿಂದುವಾಗಿ ಮೂಡಿತ್ತು. ಲಕ್ಷ್ಮಣ ಹೊಸಬನ ಎರಡು ಪಾದಗಳನ್ನೂ ಹಿಡಿದು ನಮಸ್ಕರಿಸಿದನು. ಹೊಸಬ ಪ್ರೀತಿಯಿಂದ ಲಕ್ಷ್ಮಣನನ್ನು ಅಪ್ಪಿ “ಮಗಾ, ಚೆಂದಾಕಿ ಶಾರದಮ್ನೋರ ಸೇವೆ ಮಾಡು. ನಿನ್ನ ವಾಣೀಲಿ ತಾಯಿ ಬೀಜಾಕ್ಷರ ಬರೆದವ್ಳೆ. ನಾನೂ ಸಂಗೀತಾ ಕಲಿಯೋಕೆ ಒಂದು ಜೀವಾನ ತೇದಿದ್ದೀನಿ. ಅದರ ಓನಾಮ ಕೂಡ ನಂಗೆ ಗೊತ್ತಾಗಿಲ್ಲ. ನೀನು ಕಲಿಯೋಕೆ ಉಟ್ಟಿರೋ ಗುರು. ನೀನು ಎಂದಾದರೂ ದೊಡ್ಡೋನಾದಾಗ ಮುಳುಬಾಗಿಲ ಚೆನ್ನಪ್ಪ ಏಳಿದ ಮಾತು ಇದೂಂತ ಜ್ಞಾಪಿಸ್ಕೊ” ಎಂದು ಹೇಳಿ ಧಡಧಡನೆ ಹೊರಟು ಹೋದನು. ಮತ್ತೆ ಯಾರಿಗೂ ಅವನ ದರ್ಶನವಾಗಲಿ, ಪತ್ತೆಯಾಗಲಿ ಸಿಕ್ಕಲಿಲ್ಲ, ಚರುಪಿನ ತನಕ ಲಕ್ಷ್ಮಣ ಅಲ್ಲಿ ನಿಲ್ಲಲಿಲ್ಲ. ಮನೆ ತಲುಪಿ ಯಾರಿಗೂ ಕಾಣಿಸಿಕೊಳ್ಳದಂತೆ ಹಾಸಿಗೆ ಮೇಲೆ ಮಲಗಿದನು.
ನಿದ್ದೆ ಹತ್ತದು. ಹೊಟ್ಟೆಯಲ್ಲಿ ಏನೋ ತಳಮಳ. ಚೆನ್ನಪ್ಪನ ರೂಪ-ಧ್ವನಿ-ಹಾಡುಗಳು-ಹೆಸರು ಅವನ ಕಿವಿಯಲ್ಲಿ ನರನರಗಳಲ್ಲಿ ಚಿತ್ತದಲ್ಲಿ ಝೇಂಕರಿಸುತ್ತಿದ್ದವು. “ತಾಯಿ ಬೀಜಾಕ್ಷರ ಬರೆದವ್ಳೆ. ನೀನು ಕಲಿಯೊಕೆ ಉಟ್ಟಿಲ್ಲ-ಕಲ್ಸೋಕೆ” ಪ್ರತಿಯೊಂದು ಮಾತು ಚುಚ್ಚಿ ಚುಚ್ಚಿ ಲಕ್ಷ್ಮಣನ ಮನಸ್ಸಿನಲ್ಲಿ ಅಚ್ಚೊತ್ತುತ್ತಿದ್ದವು. ಚೆನ್ನಪ್ಪನ ಪೂರ್ವಿಕಲ್ಯಾಣಿಯಂತೂ ಹುಚ್ಚೇ ಹಿಡಿಸಿಬಿಟ್ಟಿತು. “ನಾನು ಅವರ ಹಾಗೆ ಪೂರ್ವಿಕಲ್ಯಾಣಿಯನ್ನು ಹಾಡಬಲ್ಲೆನಾದರೆ” ಎಂದು ಅಂದುಕೊಳ್ಳುವನು. ಚೆನ್ನಪ್ಪ ಹಾಡಿದ ಮೂರು ರಾಗಗಳಲ್ಲಿ ಪೂರ್ವಿ ತನ್ನ ಮೇಲೇತಕ್ಕೆ ಹೆಚ್ಚು ಪರಿಣಾಮವನ್ನುಂಟುಮಾಡಿತೆಂದು ಯೋಚಿಸುವವನು. ಅಲ್ಲಿ ಅವನಿಗೆ ತಿಳಿಯಹೇಳುವವರಿಲ್ಲ ದಾರಿತೋರಿಸುವವರಿಲ್ಲ. ಶಾಮಣ್ಣನವರು ಶಾಸ್ತೋಕ್ತವಾಗಿ ಸಂಗೀತ ಕಲಿತವರಲ್ಲ. ಅವರಿಗಿದ್ದ ಜ್ಞಾನವಾದರೂ ಅಭಿರುಚಿಯ ಬಲದಲ್ಲಿ ಕೇಳಿಕೆಯಿಂದ ಬಂದದ್ದು.
ಪೂರ್ವಿ ಒಂದೇ ಸಮನೆ ಲಕ್ಷ್ಮಣನ ಕಿವಿಯಲ್ಲಿ ಗುಂಂiiಗುಟ್ಟಲಾರಂಭಿಸಿತು. ಅದರ ಒಂದೊಂದು ಗತಿ, ಗಮಕಗಳು ಅವನ ಬಾಯಲ್ಲಿ ಹೊರಡುತ್ತಿದ್ದವು. ಸಂಗೀತ ಮೇಷ್ಟ್ರ ಬಾಯಲ್ಲಿ ಒಂದೆರಡು ಸಲ ಅದೇರಾಗ, ಅದೇ ಕೀರ್ತನೆಯನ್ನು ಹಾಡಿಸಿ ಕೇಳಿದನು. ಅವರ ಬಳಿಯಲ್ಲಿ ಗ್ರಾಮಫೋ ರಿಕಾರ್ಡುಗಳ ಕಂತೆಯಿಂದ ಪೂರ್ವಿಕಲ್ಯಾಣಿ ರಾಗದ ರಿಕಾರ್ಡುಗಳನ್ನೆಲ್ಲಾ ಮತ್ತೆ ಮತ್ತೆ ಕೇಳಿದನು. ಎಲ್ಲವೂ ಅವನ ಅಶಾಂತಿಯನ್ನೂ ಅತೃಪ್ತಿಯನ್ನೂ ಹೆಚ್ಚಿಸಿದವು. ಎಲ್ಲವೂ ‘ಬೇಕು ಬೇಕು’ ಎನಿಸುತ್ತಲೇ ಇದ್ದವು. ಚೆನ್ನಪ್ಪನ ಬಾಯಲ್ಲಿ ಕೇಳಿದ ರಾಗ ಇದೆಯೋ ಎಂದು ಅನುಮಾನಪಡುವಷ್ಟು ಅಂತರ ಕಂಡುಬರುತ್ತಿತ್ತು. ‘ಚೆನ್ನಪ್ಪನವರನ್ನು ಮತ್ತೊಮ್ಮೆ ಕಾಣಬಲ್ಲೆನಾದರೆ…’ ಎಂದುಕೊಳ್ಳುವನು. ದಿನಗಳು ತಳ್ಳಿದವು. ತಿಂಗಳುಗಳು ಕಳೆದವು. ಮಿಂಚಿನಂತೆ ಸುಳಿದ ಲಕ್ಷ್ಮಣನ ಮನಸ್ಸನ್ನು ಅಲ್ಲೋಲ ಕಲ್ಲೋಲಮಾಡಿ ಹೋದ ಹೊಸಬ ಕಾಣಬರಲಿಲ್ಲ.
*****
ಮುಂದುವರೆಯುವುದು
