ಗಿಡುಗಕ್ಕೆ ದಾರಿ ತಪ್ಪಿ ಗೊಬೆಗಳ ಪಾಳು ಪ್ರದೇಶಕ್ಕೆ ಬಂತು
ಗೂಬೆಗಳಿಗೆ ಗಾಬರಿ
ತಮ್ಮ ಗೂಡು ಕೆಡಹಲು ಗಿಡುಗ ಬಂದಿದೆ ಎಂದು
ಗಿಡುಗವನ್ನು ಕೊಲ್ಲಲು ಸುತ್ತುವರಿದವು
ಗಿಡುಗ ತನಗೆ ಅಂಥ ಉದ್ದೇಶವೇ ಇಲ್ಲ ಎಂದು ಹೇಳಿತು
ತನ್ನ ನಿಜನಿವಾಸ ದೊರೆಯ ಮುಂಗೈ ಮೇಲೆ ಮಾತ್ರ ಎಂದಿತು
ಅಂಥ ಜಾಗ ಬಿಟ್ಟು ಈ ಕೊಳಕು ಪಾಳು ಬೇಕೆ ತನಗೆ?
ತನಗೆ ಹಾನಿಯಾದರೆ ದೊರೆ ಬಂದು ಈ ಪಾಳನ್ನು
ಪೂರ್‍ಣ ನಾಶಮಾಡುತ್ತಾನೆ ಎಂದೂ ಹೇಳಿತು
ಹೊರ ರೂಪ ನೋಡಿ ಮೋಸ ಹೋಗದಿರಿ
ನಾನು ನೋಡಲು ದೊರೆಯಂತಿಲ್ಲ ನಿಜ
ಆದರೆ ದೊರೆಯ ಬೆಳಕು ತನ್ನಲ್ಲಿ ಪ್ರತಿಫಲಿಸಿದೆ
ಗಿಡದೊಳಗೆ ನೀರು ಒಂದಾಗುವ ಹಾಗೆ
ನಾನು ದೊರೆಯ ಪಾದ ಧೂಳು ನಿಜ
ನೀವು ನನ್ನಂತೆ ಆದರೆ ದೊರೆಯ ಶಕ್ತಿ ಕೂಡಾ ನಿಮ್ಮದು
*
*
ಹೊರ ರೂಪಿಂದ ಹುಚ್ಚಾದವರು ಕೂಡಾ ಅಲ್ಲಾನನ್ನ ಕಂಡರು
ಆತ್ಮ ದೇಹದೊಳಗೆ ವಿಲೀನವಾಗಿದೆ ಎಂದು ಕಂಡರು
ಆತ್ಮ ದೇಹದಂತಿಲ್ಲ ರೂಪಿನಲ್ಲಿ
ಕಣ್ಣಿನ ಬೆಳಕು ಕೊಬ್ಬಿನ ಜತೆಗೆ ಬೆರೆತಿದೆ
ಹೃದಯದ ಬೆಳಕು ರಕ್ತದ ಜತೆಗೆ ಬೆರೆತಿದೆ
ಮೂತ್ರಪಿಂಡದಲ್ಲಿ ಸಂತೋಷವಿದೆ
ಕರುಳಲ್ಲಿ ನೋವಿದೆ
ತಲೆಯ ಮಿದುಳಲ್ಲಿ ವಿಚಾರದ ದೀಪವಿದೆ
ಮೂಗಿನ ಹೊಳ್ಳೆಗಳಲ್ಲಿ ವಾಸನೆಯಿದೆ
ನಾಲಗೆಯಲ್ಲಿ ಮಾತು, ಮಜ್ಜೆಯಲ್ಲಿ ಮಿಲನದ ತುಡಿತವಿದೆ
ಈ ನೆಂಟಿಗೆ ಕಾರಣವುಂಟು
ವಿಶ್ವಾತ್ಮಕ್ಕೆ ಜೀವಾತ್ಮದ ಜತೆಗೆ ಸಖ್ಯವುಂಟು
*****
