ಸಂಧ್ಯಾ ರಾಗ – ೧೦

ವೆಂಕಟೇಶ ಇಂಟೆgಮೀಡಿಯೇm ಕ್ಲಾಸಿಗೆ ಬರುವಷ್ಟರಲ್ಲಿ ಅವನಿಗೆ ಸಾಕಾಗಿ ಹೋಯಿತು. ರಾಮು ಅವನು ಇಬ್ಬರೂ ಕಟ್ಟಿದರು. ರಾಮುವಿಗೆ ತೇರ್ಗಡೆಯಾಯಿತು, ವೆಂಕಟೇಶ ಡುಬುಕಿ ಹೊಡೆದ ಮಾರನೆ ವರ್ಷ ಕಟ್ಟಿದ, ಆಗಲೂ ಹಾಗೆಯೇ ಆಯಿತು. “ಇನ್ನೊಂದು ವರ್ಷ ನೋಡುವುದು. ತೇರ್ಗಡೆಯಾದರೆ ಮುಂದೆ ಓದುವುದು. ಇಲ್ಲದಿದ್ದರೆ ಸ್ಕೂಲಿಗೆ ದೊಡ್ಡ ನಮಸ್ಕಾರ ಹಾಕಿ ಬಿಡುವುದು” ಎಂದು ನಿರ್ಣಯಿಸಿಕೊಂಡ. ಆ ವರ್ಷ ರಾಮು ಡಿಗ್ರಿ ಪರೀಕ್ಷೆಗೆ ಕಟ್ಟಿದ. ಯಥಾಪ್ರಕಾರ ರಾಮು ತೇರ್ಗಡೆಯಾದ, ವೆಂಕಟೇಶ ನಿಂತಲ್ಲಿಯೇ ನಿಂತ. “ಬಿಟ್ಟಿ ಕೂಳು ಸಿಕ್ಕತ್ತೇಂತ ಷೋಕಿ ಮಾಡುತ್ತಾ ಇದ್ದರೆ ವಿದ್ಯೆ ಬರುತ್ತದೆಯೇ? ಎಂದು ರಾಮು ಮೂದಲಿಸದೆ ಬಿಡಲೇ ಇಲ್ಲ. ಮುಂದೆ ರಾಮು ಪುಣೆಗೆ ಹೋಗಿ ಎ.ಎ.ಬಿ. ಓದುವುದೆಂದು ನಿಶ್ಚಯವಾಯಿತು. ಮೀನಾಕ್ಷಮ್ಮನವರ ಮನಸ್ಸಿನಲ್ಲಿ ಒಂದು ದೊಡ್ಡ ಚಿಂತೆ. ಗಂಡನಿಗೆ ಆ ವಿಷಯ ಎಷ್ಟು ಸಲ ಹೇಳಿದರೂ ಅವರು ಕಿವಿಯ ಮೇಲೇ ಹಾಕಿಕೊಳ್ಳುತ್ತಿರಲಿಲ್ಲ. ಶಾಂತನಿಗೆ ಹದಿನಾರು ತುಂಬುತ್ತ ಬಂದಿದ್ದರೂ ಅವಳ ಮದುವೆಯ ಏರ್ಪಾಟನ್ನೇ ರಾಯರು ಯೋಚಿಸಿರಲಿಲ್ಲ. ಮೀನಾಕ್ಷಮ್ಮನವರು ಪ್ರಸ್ತಾಪವನ್ನೆತ್ತಿದ್ದರೆ “ನೀನು ನಿಶ್ಚಿಂತಳಾಗಿರು. ನಾನು ಎಲ್ಲಾ ವ್ಯವಸ್ಥೇನೂ ಮಾಡಿದ್ದೇನೆ” ಎಂದು ಹೇಳಿ ಮುಗಿಸುತ್ತಿದ್ದರು. ಶಾಮಣ್ಣನವರಿಗೆ ತಿಳಿಸಿ ರಾಯರಿಗೆ ಹೇಳಿಸಿ ನೋಡಿದರು. ಅವರಿಗೂ ಅದೇ ಉತ್ತರ ಬಂತು. ಮೀನಾಕ್ಷಮ್ಮನವರು ಒಂದು ದಿವಸ ಚಂಡಿ ಹಿಡಿದು ಬಿಟ್ಟರು.

“ಇದೇನೂಂದ್ರೆ ಹೀಗೆ ಮಾಡ್ತೀರಿ. ಶಾಂತನಿಗೆ ಹದಿನಾರು ತುಂಬೋ ಹೊತ್ತು ಬಂತು. ಇನ್ನೂ ಮದುವೆಯನ್ನು ಮುಂದೆ ತಳ್ಳುತ್ತಾ ಹೋದರೆ ಹೇಗಾಗತ್ತೆ. ಜನಾ ಈಗಲೇ ಆಡಿಕೊಳ್ಳೋದಿಕ್ಕೆ ಆರಂಭಿಸಿದ್ದಾರೆ.” “ಆಡಿಕೊಂಡರೆ ಆಡಿಕೊಳ್ಳಲಿ ಬಿಡು. ನಮ್ಮ ಮಗೂ ಯೋಗಕ್ಷೇಮಕ್ಕೆ ಕಂಡವರು ಹೊಣೆಯೇ? ಹುಡುಗಿ ಬೆಳೆದಿದ್ದಾಳೆ ಎಂದು ಕುರುಡನಿಗೋ ಕುಂಟನಿಗೋ ಕಟ್ಟೋದಿಕ್ಕಾಗುತ್ತದೆಯೇ? ಸರಿಯಾದ ವರ ಸಿಕ್ಕಿದ ಕೂಡಲೆ ಲಗ್ನ ಮಾಡೋಣ.” “ನೀವು ವರನನ್ನು ಹುಡುಕದೇನೇ ಇದ್ದರೆ ಸಿಕ್ಕೋ ಬಗೆ ಹೇಗೆ ಹೇಳಿ. ಇನ್ನೂ ರಾಮು ಮದುವೆ ಆಗಬೇಕು – ವೆಂಕಟೇಶನದು ಆಗಬೇಕು. ಶಾಂತನದೇ ಮುಗಿಸದೆ ಸುಮ್ಮನೆ ಕುಳಿತಿದ್ದರೆ…” “ನನ್ನ ಏನು ಮಾಡೂಂತೀ?”
“ಎದ್ದು ಸ್ವಲ್ಪ ಚಟುವಟಿಕೆಯಿಂದ ಓಡಾಡಿ ಒಂದು ಗಂಡು ಗೊತ್ತು ಮಾಡಿ ಅನ್ನುತ್ತೇನೆ.” “ಹಿಂದಿನ ಅನುಭವ ಮರೆತೆಯೇನು?” “ಸರಿ ಊರೆಲ್ಲಾ ಹಾಗೆಯೇ ಇರುತ್ತದೆಯೇ?” ಹಿಂದಿನ ಅನುಭವವಾಗಿ ಮೂರು ವರ್ಷವಾಗಿತ್ತು. ರಾಯರು ತಮ್ಮ ಕಡೆಯವರೊಬ್ಬರಲ್ಲಿ ಪ್ರಸ್ತಾಪ ಮಾಡಿದ್ದರು. ಹುಡುಗ ಆಗತಾನೆ ಬಿ.ಎ.ಸಿ. ಮೊದಲನೆಯ ಕ್ಲಾಸಿನಲ್ಲಿ ತೇರ್ಗಡೆಯಾಗಿದ್ದ. ಲಕ್ಷಣವಾಗಿದ್ದ ವಿದ್ಯಾವಂತನಾಗಿದ್ದ ಎಂದು ರಾಯರು ಸ್ವಯಂ ಅವನನ್ನು ಕರೆಸಿ, ಮಾತನಾಡಿ ಒಪ್ಪಿಗೆಯನ್ನು ಪಡೆದಿದ್ದರು. ಆದರೆ ಹುಡುಗ ಒಂದು ಮಾತು ಹೇಳಿದ್ದ. “ನಮ್ಮ ತಂದೆ – ತಾಯಿ ಒಪ್ಪಬೇಕು. ಅವರು ಒಪ್ಪಿದರೆ ಆಗಬಹುದು” ಎಂದು. ರಾಯರು ತಾವೇ ಖರ್ಚುಕೊಟ್ಟು ತಂದೆ – ತಾಯಿಗಳನ್ನು ಕರೆಸಿಕೊಂಡರು. ಅವರಿಗೆ ರಾಜೋಪಚಾರವಾಯಿತು. ತಂದೆ – ತಾಯಿ ಹೆಣ್ಣನ್ನು ಸಾಕಷ್ಟು ಪರೀಕ್ಷೆ ಮಾಡಿದ್ದೂ ಆಯಿತು. ಹಾಡಿಸಿ ನೋಡಿದರು, ಓದಿಸಿ ನೋಡಿದರು, ಸೂಜಿದಾರಕೊಟ್ಟು ಪೋಣಿಸಿನೋಡಿ ಕಣ್ಣು ಚೆನ್ನಾಗಿದೆಯೆಂದು ಧೆರ್ಯಮಾಡಿಕೊಂಡರು. ಪಾಪ! ವರನ ತಂದೆ ಮೊದಲೇ ಒಪ್ಪಿಗೆ ಕೊಟ್ಟುಬಿಟ್ಟರು. ವರನ ತಾಯಿ “ಆಗಲಿ. ಯೋಚನೆ ಮಾಡಿ ಊರಿನಿಂದ ಕಾಗದ ಬರೆಯುತ್ತೇವೆ. ಕೊಡೋದು ತೆಗೆದುಕೊಳ್ಳೋದು ಹೇಳಿದ್ದರೆ ಆಗಿತ್ತು” ಎಂದರು. “ನಾಲ್ಕು ಸೇರು ಭಂಗಾರ ಇಡುತ್ತೇವೆ. ವರನಿಗೆ ಕೊಡಬೇಕಾದ ಬೆಳ್ಳಿತಟ್ಟೆ, ಚಂಬು ಲೋಟ ಉದ್ಧರಣೆ, ಚಿನ್ನದ ಉಂಗುರ, ಬಟ್ಟೆಬರೆ ಎಲ್ಲಾ ಕೊಡುತ್ತೇವೆ. ಕೊಡೋದು ಬಿಡೋದು ನಿಮ್ಮ ಇಷ್ಟ. ನಿಮ್ಮ ಸೊಸೆಗೆ ನೀವು ಬೇಕಾದ್ದು ಕೊಡಬಹುದು.” ಎಂದು ಮೀನಾಕ್ಷಮ್ಮನವರು ಹೇಳಿದ್ದರು. ಉಪಚಾರವೆಲ್ಲಾ ಮಾಡಿಕೊಂಡು, ಔತಣದೂಟವನ್ನೂ ಹೊಡೆದು, ರಾಯರ ಖರ್ಚಿನಲ್ಲಿ ‘ಟ್ಯಾಕ್ಸಿ’ ಮಾಡಿಕೊಂಡು ಊರೆಲ್ಲಾ ಸುತ್ತಿ ಕೊನೆಗೆ ತಮ್ಮ ಊರು ತಲುಪಿದ ಮೇಲೆ “ನಮ್ಮ ಹುಡುಗ ಪ್ರೌಢವಿದ್ಯಾಭ್ಯಾಸಕ್ಕಾಗಿ ಇಂಗ್ಲೆಂಡಿಗೆ ಹೋಗಬೇಕೆಂದಿದ್ದಾನೆ. ನೀವು ಅದಕ್ಕೆ ೧೦,೦೦೦ ರೂ.ಗಳನ್ನು ಕೊಡುವುದಾದರೆ ನಿಮ್ಮ ಸಂಬಂಧ ಬೆಳೆಸಲು ಅಡ್ಡಿಯಿಲ್ಲ. ವರನಿಗೂ ವಧುವಿಗೂ ಕೊಡುವುದರಲ್ಲಿ ಯಾವದನ್ನೂ ಕಡಿಮೆ ಮಾಡಲಾಗದು.” ಎಂದು ಕಾಗದ ಬರೆದುಬಿಟ್ಟರು. ರಾಯರು ರೇಗಿ ಅಂದಿನಿಂದ ‘ವರನ್ವೇಷಣೆ’ಯನ್ನೇ ಬಿಟ್ಟುಬಿಟ್ಟಿದ್ದರು. ಶಾಂತನಿಗೆ ಗಂಡು ಗೊತ್ತಾಗುವ ತನಕ ವರಾನ್ವೇಷಣೆಯು ತಪ್ಪಿದ್ದಲ್ಲ. ಮೀನಾಕ್ಷಮ್ಮನವರ ಒತ್ತಡವೂ ಹೆಚ್ಚಾಯಿತು. “ಗಂಡು ಗೊತ್ತಾಗದೇ ಇದ್ದರೆ ನಾನಿಷ್ಟು ನಿಶ್ಚಿಂತೆಯಿಂದ ಇರುತ್ತಿದ್ದೆನೇನೇ ಮೀನಾ!” ಎಂದರು ರಾಯರು. “ಯಾರೂಂದ್ರೆ ಹೇಳಾದರೂ ಹೇಳಬಾರದೇ?” “ನಾನು ಹೇಳಿದರೆ ನೀನು ಒಪ್ಪುತ್ತೀಯೋ? ಮತ್ತೆ ಅವರಿವರ ಕಾಲು ಹಿಡಿಯೋದಕ್ಕೆ ಕಳುಹಿಸುತ್ತೀಯೋ?” “ಏನು ಮಾಡಿದರೂ ನಮ್ಮ ಮಗಳಿಗೋಸ್ಕರವೇ ಅಲ್ಲವೇಂದ್ರೆ, ಹೇಳಿ. ಅದು ಯಾವ ವರ?” “ಮನೆಯಲ್ಲಿ ಬೆಣ್ಣೆಯಿಟ್ಟುಕೊಂಡು ತುಪ್ಪಕ್ಕೆ ಸಾಲಕ್ಕೆ ಹೋದರು ಅಂದ ಹಾಗಾಯಿತಲ್ಲೇ ನಮ್ಮ ವಿಚಾರ. ನಮ್ಮ ವೆಂಕಟೇಶ ಏನಾಗಿದ್ದಾನೆ?” “ಅಯ್ಯೋ. ನನಗೂ ಆ ಯೋಚನೆ ಹಿಂದೆ ಬಂತೂಂದ್ರೆ. ನಾನು ಹೇಳೋದನ್ನೇ ಮರೆತೆ. ದಿವ್ಯವಾದ ಹುಡುಗ. ನನಗಂತೂ ತುಂಬ ಒಪ್ಪಿಗೆ. ಅವನನ್ನು ಕೇಳಿ ನೋಡಿದ್ದೀರಾ?” “ಅವನು ಒಪ್ಪಬಹುದು.” “ಅವನ ಕಡೆಯವರೋ? ಹಿಂದೆ ಆದ ಹಾಗೆ ಆದರೋ?” “ಆ ಭಯವೇನೂ ಇಲ್ಲ. ನಾನು ಸುಂದರರಾಯರಲ್ಲಿ ಪ್ರಸ್ತಾಪಮಾಡಿದೆ. ಅವರು ನಂಜುಂಡಯ್ಯನನ್ನು ಕರೆಸಿ ನನ್ನ‌ಎದುರಿಗೇ ಹೇಳಿದರು. ಆತನೂ ಸಂತೋಷವಾಗಿ ಒಪ್ಪಿದ. ಇನ್ನು ಹುಡುಗನನ್ನು ಒಪ್ಪಿಸೋದು ನಿನ್ನ ಭಾರ.” “ಅಲ್ಲಾಂದ್ರೆ. ಇಷ್ಟು ಮಾಡಿದವರು ನನಗೆ ಒಂದೂ ಹೇಳಲೇ ಬೇಡವೇ? ನೀವು ಈಚೆಗೆ ಬಹಳ ಕೆಟ್ಟುಹೋದಿರೀಂದ್ರೆ. ತಡೀರಿ. ಭೀಮರಾಯರೂ ಸುಂದರರಾಯರೂ ಬರಲಿ ನಿಮಗೆ ಮಂಗಳಾರತಿ ಮಾಡಿಸುತ್ತೇನೆ.” ಎಂದು ನಕ್ಕರು. ರಾಯರೂ ನಕ್ಕರು. ಅಂದೇ ರಾತ್ರಿ ಊಟಮಾಡಿ ವೆಂಕಟೇಶ, ಲಕ್ಷ್ಮಣ ಇಬ್ಬರೂ ಲಕ್ಷ್ಮಣನ ಕೋಣೆಯಲ್ಲಿ ಓದುತ್ತಾ ಕುಳಿತಿದ್ದರು. ಮೀನಾಕ್ಷಮ್ಮನವರು ಮೆಲ್ಲನೆ ಪ್ರವೇಶಿಸಿ “ಓದುತ್ತಾಯಿದ್ದೀರೋ?” “ಬನ್ನಿ ತಾಯಿ.” ಎಂದು ಎದ್ದು ವೆಂಕಟೇಶ ಚಾಪೆಯನ್ನು ಹಾಸಿದ. ಮೀನಾಕ್ಷಮ್ಮನವರು ಕುಳಿತುಕೊಂಡು “ನೀನೂ ಕುಳಿತುಕೋ ವೆಂಕಟೇಶೂ. ನಿನ್ನಲ್ಲೇ ಒಂದು ಮಾತು ಆಡಬೇಕಾಗಿತ್ತು, ಬಂದೆ.” “ಹೇಳಿ ತಾಯಿ.” “ನನ್ನದೊಂದು ಕೋರಿಕೆಯಿದೆಯಪ್ಪಾ. ನೀನು ದೊಡ್ಡ ಮನಸ್ಸು ಮಾಡಿ ನಡೆಸಿಕೊಡಬೇಕು.” “ತಾಯಿ, ನೀವು ಹೀಗೆ ಮಾತನಾಡಬಾರದು. ನನಗೆ ಅದರಿಂದ ಅಶ್ರೇಯಸ್ಸು. ಕೋರಿಕೆಯೆಂದು ಏತಕ್ಕನ್ನುವಿರಮ್ಮಾ, ಆಜ್ಞೆಯೆನ್ನಿ.” “ವೆಂಕಟೇಶೂ, ನೀನು ಇದುವರೆವಿಗೂ ಹಾಗೇ ನಡೆದುಕೊಂಡು ಬಂದಿದ್ದೀ. ನಮ್ಮ ರಾಮು, ಲಚ್ಚಿ, ಗೋಪೂ ಬೇರೆಯಲ್ಲ, ನೀನು ಬೇರೆಯಲ್ಲ; ಮುಂದೆಯೂ ಹಾಗೆ ಇರಬೇಕೂಂತ ನನ್ನ ಅಭಿಲಾಷೆಯಪ್ಪಾ.” “ಅದರಲ್ಲಿ ಸಂಶಯವೇ ಇಲ್ಲಮ್ಮಾ. ವೆಂಕಟೇಶೂ ನನಗೆ ನಿಜವಾದ ಅಣ್ಣನ ಹಾಗಿದ್ದಾನೆ. ಹೇಳಬೇಕಾದದ್ದನ್ನು ಹೇಳಮ್ಮಾ.” ಎಂದು ಲಕ್ಷ್ಮಣನೂ ಸೇರಿಸಿದ. “ನೋಡು ವೆಂಕಟೇಶೂ. ಶಾಂತನಿಗೆ ಹದಿನಾರು ತುಂಬುತ್ತ ಬಂತು. ಈ ವರ್ಷ ಮದುವೆ ಮಾಡಬೇಕೂಂತ ನಿಶ್ಚಯಿಸಿದ್ದೇವೆ. ನೀನು ಒಪ್ಪುವುದಾದರೆ ನಿನಗೆ ಕೊಟ್ಟು ಲಗ್ನ ನೆರವೇರಿಸಬೇಕೆಂದು ಉದ್ದೇಶವಿದೆಯಪ್ಪಾ.” ಲಕ್ಷ್ಮಣನೂ ಚಕಿತನಾದನು. ತಾಯಿಯವರೂ ಇದನ್ನು ಹೇಳಿಯಾರು ಎಂದು ಅವನು ನಿರೀಕ್ಷಿಸಲಿಲ್ಲ. ಅವನ ಎದೆಯು ಉದ್ವೇಗದಿಂದ ಹೊಡೆದುಕೊಳ್ಳಲಾರಂಭಿಸಿತು. ವೆಂಕಟೇಶೂ ಏನು ಹೇಳುವನೋ? ಒಲ್ಲೆನೆಂದರೆ… ಇಂದಿನ ಮೆತ್ರಿಯೂ ಮುಗಿದುಹೋಗುವುದಲ್ಲಾ! ವೆಂಕಟೇಶ ಸ್ವಲ್ಪ ಹೊತ್ತು ಯೋಚಿಸಿ “ರಾಯರು ಏನಂದರು ತಾಯಿ?” “ಸಂತೋಷವಾಗಿ ಒಪ್ಪಿದರಪ್ಪಾ. ಈ ಸೂಚನೆ ಬಂದದ್ದೇ ಅವರಿಂದ.” “ಅಮ್ಮಾ. ನನಗೆ ದೊಡ್ಡವರು ಹಿರಿಯರು ಎಲ್ಲಾ ನೀವೆ. ನೀವು ಹೇಗೆ ನಿಶ್ಚಯಿಸಿದರೆ ಹಾಗೆ ನಾನು ಸಂತೋಷದಿಂದ ಒಪ್ಪುತ್ತೇನೆ. ನಿಮ್ಮ ಸಂಬಂಧಕ್ಕಿಂತಲೂ ಹೆಚ್ಚಿನ ಸೌಭಾಗ್ಯ ನಾನೇನು ಕೋರಲಿ?” ಎಂದು ಹೇಳಿದ. ಮೀನಾಕ್ಷಮ್ಮ ಲಕ್ಷ್ಮಣ ಇಬ್ಬರ ಕಣ್ಣುಗಳಲ್ಲಿ ಆನಂದಬಾಷ್ಪಗಳುದುರಿದವು. “ನೂರು ವರ್ಷ ಬಾಳು ಕಂದಾ!” ಎಂದು ಮೀನಾಕ್ಷಮ್ಮನವರು ಹರಸಿದರು. ವೆಂಕಟೇಶ ಲಕ್ಷ್ಮಣನ ಕಡೆ ತಿರುಗಿ “ಆದರೆ… ಒಂದು ಷರತ್ತಪ್ಪಾ.” “ಏನಪ್ಪಾ ಷರತ್ತು? ಹೊಸದಾಗಿ ಏನೋ ಹುಟ್ಟಿಹಾಕಿದೆಯಲ್ಲಾ, ಅಮ್ಮಾ ಎದ್ದುಹೋಗೋದಕ್ಕೇ ಕಾದಿದ್ದೆಯೋ ಹೇಳು.” “ನನ್ನ ಮದುವೆಯಲ್ಲಿ ನೀನು ಹಾಡುವ ಹಾಗಿದ್ದರೆ ನಾನು ಒಪ್ಪುತ್ತೇನೆ.” ಲಕ್ಷ್ಮಣನನಿಗೆ ಸ್ವಲ್ಪ ಕಷ್ಟಕ್ಕೆ ಬಂದಿತು. “ಹಾಡುತ್ತೇನೆ ಮದುವೆ ಮನೆಯಲ್ಲಿ ಬೇಡ ವೆಂಕೂ. ನೀನು ಶಾಂತಾ ಕುಳಿತುಕೊಳ್ಳಿ. ದಿನಾ ಹಾಡುತ್ತೇನಪ್ಪಾ. ಸರಿಯೇ?” “ಉಹೂ, ಅದೆಲ್ಲಾ ಆಗೋದಿಲ್ಲಾ. ಮದುವೆ ಮನೆ ಕಛೇರಿ ನಿನ್ನದೇ ಆಗಬೇಕು. ನನ್ನ ಭಾವ ಎಂತಹ ವಿದ್ವಾಂಸ ಎಂದು ಎಲ್ಲರಿಗೂ ಗೊತ್ತಾಗಲಯ್ಯಾ. ಅದರಿಂದ ನನಗೂ ಒಂದು ಪ್ರತಿಷ್ಠೆ ಬರುತ್ತೆ!” “ಆಗಲಪ್ಪಾ. ಹಾಡುತ್ತೇನೆ.” ಎಂದು ಲಕ್ಷ್ಮಣ ಒಪ್ಪಿಗೆಯನ್ನಿತ್ತನು.
*****
ಮುಂದುವರೆಯುವುದು