ಸಂಧ್ಯಾ ರಾಗ – ೨೦

ಗೋಪಾಲನಿಗೆ ಇಂಟgಮೀಡಿಯೇm ಪರೀಕ್ಷೆಯಲ್ಲಿ ತೇರ್ಗಡೆಯಾಗಿತ್ತು. ಅವನು ಮುಂದೆ ಮೆಸೂರಿಗೆ ಹೋಗಿ ಕಾಲೇಜು ಸೇರಬೇಕಾಗಿತ್ತು. ರಾಮಚಂದ್ರ ಉದಾರ ಮನಸ್ಸಿನಿಂದ “ಅಪ್ಲಿಕೇಷ ಹಾಕಿರು. ಸೀಟು ಎಲ್ಲಾದರೂ ತಪ್ಪಿಹೋದೀತು” ಎಂದು ಹೇಳಿದ್ದ.
ರಾಯರ ಸ್ಥಿತಿ ತೀರಾ ಕೆಡುತ್ತ ಬಂತು. ಜನಗಳ ನೆಪ್ಪೇ ಮರೆತು ಹೋಯಿತು. ಭೀಮರಾಯರೂ ಸುಂದರರಾಯರೂ ಅವರ ಹಾಸಿಗೆ ಬಿಟ್ಟು ಕದಲುತ್ತಿರಲಿಲ್ಲ. ಶಾಮಣ್ಣನವರು ತಪ್ಪದೆ ದಿನಕ್ಕೆ ಒಂದು ಗಂಟೆ ಕಾಲ ರಾಯರ ಮುಂದೆ ಭಾರತಶ್ರವಣ ಮಾಡುತ್ತಿದ್ದರು. ಶಾಮಣ್ಣನವರ ಭಾರತವನ್ನೋ, ಲಕ್ಷ್ಮಣನ ಹಾಡಿಕೆಯನ್ನೋ ಕೇಳುವಾಗ ರಾಯರ ಮುಖ ಶಾಂತವಾಗಿರುತ್ತಿತ್ತು. ಮಿಕ್ಕ ವೇಳೆಗಳಲ್ಲಿ ಸುಕ್ಕುಗೊಂಡ ತೀವ್ರವಾದ ವೇದನೆಯನ್ನು ಸೂಚಿಸುತ್ತಿತ್ತು. ಕೊರಗಿ ಕೊರಗಿ ಸಾವಿತ್ರಮ್ಮನಂತೂ ಹಂಚಿಕಡ್ಡಿಯಂತೆ ಆಗಿಬಿಟ್ಟಿದ್ದಳು. ರಾಯರಿಗೆ ಮಾತು ನಿಂತು ಎಷ್ಟೋ ದಿವಸವಾಗಿಬಿಟ್ಟಿತ್ತು. ಕಣ್ಣಿನಿಂದಲೇ ಮಲಗಿದ್ದೆಡೆಯಿಂದಲೆ ತಮ್ಮ ಇಂಗಿತವನ್ನು ಸೂಚಿಸುತ್ತಿದ್ದರು. ಶಾಮಣ್ಣನವರೂ ದಿನವೂ ದೇವರ ಪೂಜೆ ಮಾಡಿ ತೀರ್ಥೋದಕವನ್ನು ಒಂದು ಚಮಚದಷ್ಟು ರಾಯರಿಗೆ ಕುಡಿಸುತ್ತಿದ್ದರು.
ಕೊನೆಕೊನೆಗೆ ರಾಯರು ಏನೂ ತೆಗೆದುಕೊಳ್ಳಲಾಗುತ್ತಿರಲಿಲ್ಲ. ಒಂದು ತೊಟ್ಟು ಹಾಲು ಕುಡಿಸಿದರೆ ಅದು ಕೂಡಲೆ ವಾಂತಿಯಾಗಿಬಿಡುತ್ತಿತ್ತು. ರಾಯರ ಮಕ್ಕಳನ್ನು ಕರೆದು ಸುಂದರರಾಯರು
“ಇನ್ನೇನೂ ಆಸೆಯಿಲ್ಲಪ್ಪಾ. ಗಂಟೆಗಳೋ ದಿವಸಗಳೋ…”
“ಉಳಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲವೇ?”
ಎಂದು ಲಕ್ಷ್ಮಣ ಕೇಳಿದನು. ತಂದೆಯನ್ನು ಉಳಿಸಿಕೊಳ್ಳುವುದಕ್ಕೆ ಏನು ಬೇಕಾದರೂ ಮಾಡಲು ಸಿದ್ಧನಾಗಿದ್ದನು.
“ವೆದ್ಯರು ಡಾಕ್ಟರುಗಳ ಕೆಯಲ್ಲಿದ್ದರೆ ಏನಾದರೂ ಆಗಬಹುದಾಗಿತ್ತು. ರಾಯರಿಗೇ ಉಳಿಯುವುದು ಬೇಕಿಲ್ಲ. ಇನ್ನು ಯಾರು ಏನು ಮಾಡುವುದಕ್ಕಾಗುತ್ತದೆ?”
ಎಂದು ಸುಂದರರಾಯರು ಹೇಳಿದರು.
ಒಂದು ಸಂಜೆ. ಶಾಮಣ್ಣನವರು ಭಾರತವನ್ನು ಸಣ್ಣ ದನಿಯಲ್ಲಿ ಓದುತ್ತಿದ್ದರು. ರಾಯರು ಆಯಾಸದಿಂದ ಕಣ್ಣು ಮುಚ್ಚಿ ತೆಗೆದು ಮಾಡುತ್ತಿದ್ದರು.
“ನಿಲ್ಲಿಸಲೇ?”
ಎಂದು ಶಾಮಣ್ಣನವರು ಕೇಳಿದರು. ರಾಯರು ‘ಬೇಡ’ವೆಂದು ಸೂಚಿಸಿದರು. ಅಕ್ಷಯಪಾತ್ರೆಯ ಭಾಗವನ್ನು ಓದುತ್ತಿದ್ದರು. ದ್ರೌಪದಿ ಶ್ರೀಕೃಷ್ಣನನ್ನು ಪ್ರಾರ್ಥಿಸುವ ವಿಭಾಗ. ಶಾಮಣ್ಣನವರು ಮಾಯಾಮಾಳವಗೌಳದಿಂದ ಪೂರ್ವಿಕಲ್ಯಾಣಿಗೆ ಜಾರಿದ್ದರು. ರಾಯರಿಗೆ ನಿದ್ರೆ ಹತ್ತಿತ್ತು. ಶಾಮಣ್ಣನವರು ಭಾರತವಾಚನವನ್ನು ನಿಲ್ಲಿಸಿ ಮೆಲ್ಲನೆ ತಂಬೂರಿಯನ್ನು ಕೆಳಗಿಟ್ಟು, ರಾಯರಿಗೆ ಹೊದೆಸಿ ಹೊರಕ್ಕೆ ಬಂದರು.
ಅರ್ಧಗಂಟೆ ಕಳೆಯಿತು. ಔಷಧದ ಸರದಿ ಬಂತು. ಸಾವಿತ್ರಮ್ಮ ಔಷಧಿಯನ್ನು ಕೆಯಲ್ಲಿ ಹಿಡಿದು ಮೆಲ್ಲನೆ ರಾಯರ ಹೊದಿಕೆಯನ್ನು ತೆಗೆದಳು. ನಿದ್ರೆ ಶಾಂತವಾದ, ಗಾಢವಾದ ನಿದ್ರೆ. ಅವಳ ಎದೆ ಝಗ್ಗೆಂದಿತು. ಕೆಯಲ್ಲಿದ್ದ ಔಷಧದ ಪಾತ್ರೆ ಕಳಚಿ ಕೆಳಗೆ ಬಿತ್ತು – ಪಾತ್ರೆ ಒಡೆಯಿತು, ಸಾವಿತ್ರಮ್ಮನ ಹೃದಯವೂ ಒಡೆದು ಹೋಯಿತು.
“ಅಯ್ಯೋ ನನ್ನ ಸ್ವಾಮಿ!”
ಎಂದು ಚೀರಿ ಬಿದ್ದುಬಿಟ್ಟಳು. ರಾಯರ ಪ್ರಾಣಪಕ್ಷಿ ಪೂರ್ವಿಯ ಸಂಧ್ಯಾಸಂಭ್ರಮದೊಂದಿಗೆ ಹಾರಿಹೋಗಿತ್ತು.

ಹನ್ನೆರಡು ದಿವಸಗಳೂ ಸಾಂಗವಾಗಿ ಕರ್ಮವಿಧಿಗಳೆಲ್ಲಾ ನಡೆದವು. ಹನ್ನೆರಡನೆಯ ದಿವಸವೇ ವೆಕುಂಠ ಸಮಾರಾಧನೆ. ಅದೂ ಮುಗಿಯಿತು. ಹಳ್ಳಿಯಿಂದ ಬಂದಿದ್ದ ಶಾಮಭಟ್ಟರು ಅವತ್ತೇ ಹೊರಟುಬಿಟ್ಟರು. ಶಾಮಣ್ಣನವರ ಊಟ ಮುಗಿಯುವ ಹೊತ್ತಿಗೆ ಸಂಜೆಯಾಗಿತ್ತು. ರಾಮಚಂದ್ರ ಹೊರಗಿನ ವೆರಾಂಡಾದಲ್ಲಿ ಒಂದು ಪತ್ರಿಕೆಯನ್ನೋದುತ್ತ ಕುಳಿತಿದ್ದ. ಶಾಮಣ್ಣನವರು ಕೆಯಲ್ಲಿ ಒಂದು ಗಂಟು, ಒಂದು ತಂಬೂರಿ, ಒಂದು ಪುಸ್ತಕ ಹಿಡಿದು ಬಂದು ಮುಂದೆ ನಿಂತರು.
“ಏನು ಶಾಮಣ್ಣನವರೇ, ಎಲ್ಲಿಗೆ ಹೊರಟುಬಿಟ್ಟಿರಿ?”
ಎಂದು ರಾಮಚಂದ್ರ ಕೇಳಿದ.
“ಈ ಸಾವು ಸಂಚಯದ ಸಮಯಗಳಲ್ಲಿ ಹೋಗುವವರು ‘ಹೋಗಿ ಬರುತ್ತೇನೆ’ ಎಂದು ಹೇಳಬಾರದಂತೆ. ಆದರೆ ನಾನು ಮನೆಯವನೇ ಆಗಿದ್ದೆ. ತಮ್ಮ ಅಪ್ಪಣೆ ಪಡೆದು ಹೋಗೋಣಾಂತ ಬಂದೆ.”
“ಅಂದರೆ, ಎಲ್ಲಾದರೂ ಹೋಗಿ ಮತ್ತೆ ಬರುತ್ತಿರೋ ಅಥವಾ ಬರುವುದೇ ಇಲ್ಲವೋ ಹೇಗೆ?”
“ಬರುವ ಸಂಭವವಿಲ್ಲ. ಇಷ್ಟು ದಿವಸ ಅನ್ನ ಬಟ್ಟೆ ಕೊಟ್ಟು ಕಾಪಾಡಿದಿರಿ. ನನ್ನ ಋಣಾನುಬಂಧವೂ ತೀರಿತು. ಅಪ್ಪಣೆಯಾಗಬೇಕು.”
ಶಾಮಣ್ಣನವರು ಹೋಗುವುದು ರಾಮಚಂದ್ರನಿಗೆ ಸ್ವಲ್ಪವೂ ಇಷ್ಟವಿಲ್ಲ – ಆದರೆ ಅವನು ನಿಲ್ಲುವುದಕ್ಕೆ ಒಪ್ಪುವ ಹಾಗಿರಲಿಲ್ಲ.
“ಹಳ್ಳಿಯ ಲೆಕ್ಕ – ಪತ್ರ ಎಲ್ಲಾ ಅಣಿಮಾಡಿ ತಮ್ಮ ಮೇಜಿನ ಮೇಲೆ ಇಟ್ಟಿದ್ದೀನಿ. ನೋಡಿಕೊಳ್ಳಬೇಕು.”
“ಇರುವುದಕ್ಕೆ ಸಾಧ್ಯವೇ ಇಲ್ಲವೇ ಶಾಮಣ್ಣನವರೇ?”
“ಇಲ್ಲ – ಕ್ಷಮಿಸಬೇಕು”
ಎಂದು ಹೇಳಿ ಹೊರಟು ಬಿಟ್ಟರು. ಮನೆಯನ್ನು ಬಿಟ್ಟು ತಾವು ಹೊರಟುಹೋಗುವ ಸುದ್ದಿಯನ್ನು ಹಿಂದಿನ ರಾತ್ರಿಯೇ ಲಕ್ಷ್ಮಣನಿಗೆ ತಿಳಿಸಿದ್ದರು. ಲಕ್ಷ್ಮಣನೂ ಹೇಳಿ ನೋಡಿದ್ದ. ಶಾಮಣ್ಣನವರು ಮನಸ್ಸು ಗಟ್ಟಿಮಾಡಿ ಬಿಟ್ಟಿದ್ದರು.
“ಎಲ್ಲಿಗೆ ಹೋಗುತ್ತೀರಿ ಶಾಮಣ್ಣನವರೇ?”
“ಇನ್ನೂನಿಶ್ಚಯಿಸಿಲ್ಲ. ನಾಲ್ಕು ದಿವಸ ಶೃಂಗೇರಿಗೆ ಹೋಗಿ ಗುರುಗಳ ಸೇವೆ ಮಾಡಿಕೊಂಡು ಮುಂದೆ ಹೋಗೋಣಾಂತ ಇದ್ದೀನಿ. ಕೆಯಲ್ಲಿ ತಂಬೂರಿಯಿದೆ. ಕಂಕುಳಲ್ಲಿ ಜೋಳಿಗೆಯಿದೆ, ಕಂಠದಲ್ಲಿ ಕುಮಾರವ್ಯಾಸ ಇದ್ದಾನೆ.”
“…ಹೌದು… ದೇಶ ವಿಶಾಲವಾಗಿದೆ. ಸರ್ವಜ್ಞ ಹೇಳುವ ಹಾಗೆ
ಕರದಿ ಕಪ್ಪರವುಂಟು ಹಿರಿದೊಂದು ನಾಡುಂಟು
ಹರನೆಂಬ ದೆವ ನಮಗುಂಟು ತಿರಿವಂ
ಸಿರಿವಂತರಾರು? ಸರ್ವಜ್ಞ ||”

“ಸರಿಯಾದ ಮಾತು. ಮುಂದೆ ನೀನು ಏನು ಮಾಡುತ್ತಿ?”
“ಅದೇ ದೊಡ್ಡ ಸಮಸ್ಯೆ. ನಾನೂ ನಿಮ್ಮ ಮೇಲ್ಪಂಕ್ತಿಯನ್ನನುಸರಿಸಬೇಕಾಗುತ್ತದೆಂದು ಕಾಣುತ್ತದೆ. ನೀವು ಹೊರಟುಹೋದಮೇಲೆ ಈ ‘ರಾಮರಾಜ್ಯ’ದಲ್ಲಿ ಒಬ್ಬನೇ ಇರುವುದು ಹೇಗೆ ಎಂದು ಯೋಚನೆ ಹತ್ತಿದೆ.’
“ಯೋಚಿಸಬೇಡ ಲಚ್ಚಣ್ಣಾ. ಸತ್ಯ, ಧರ್ಮ ನೀನು ಬಿಟ್ಟಿಲ್ಲ. ಸತ್ಯ-ಧರ್ಮಗಳೇ ನಿನ್ನ ಕಾಪಾಡುತ್ತವೆ. ಒಂದಲ್ಲ ಒಂದು ದಿವಸ ನಿಮ್ಮಣ್ಣನೂ ನಿನ್ನ ಪ್ರತಿಭೆಯ ಪ್ರಭಾವ ಕಾಣುತ್ತಾನೆ.”
“ನಾನು ಅದನ್ನ ಬಯಸಲ್ಲ ಶಾಮಣ್ಣನವರೇ. ಇತರರಿಗೆ ಹಿಂಸೆ ಮಾಡದೆ ಅವನ ಪಾಡಿಗೆ ಅವನು ಸುಖವಾಗಿದ್ದರೆ ಸಾಕು. ನೀವೇ ನೋಡುತ್ತಿದ್ದೀರಲ್ಲಾ. ಅವನಿಗಾದರೂ ಸುಖವಿದೆಯೇ? ಮನಸ್ಸು ಯಾವಾಗಲೂ ಕಿರಿಕಿರಿ, ಯಾವಾಗಲೂ ಒಂದಲ್ಲ ಒಂದಕ್ಕೆ ಅಸಂತುಷ್ಟಿ. ಮನಸ್ಸಿಗೆ ಪೋಷಣೆಯಾಗದೆ ದೇಹ ಬೆಳೆಯುತ್ತದೆ. ಅವನ ಸ್ಥಿತಿ ನೋಡಿದರೆ ನನಗಾದರೂ ದುಃಖವಾಗುವುದಿಲ್ಲವೇ?”
“ಅಪ್ಪ, ನಿನ್ನ ದಾರಿ ಬೇರೆ; ಅವನ ದಾರಿ ಬೇರೆ. ಎರಡೂ ಸೇರುವ ಸಂಭವವಿಲ್ಲ. ನೀನು ಮೇಲಕ್ಕೆ ಹೋಗುವುದಕ್ಕೆ ಆಸೆ ಪಡುತ್ತೀ; ಅವನುಮುಂದೆ ಹೋಗುವುದಕ್ಕೆ ಆಶೆಪಡುತ್ತಾನೆ- ಏನಾದರೂ ಬಡ ಶಾಮಣ್ಣನನ್ನು ಮರೆಯಬೇಡ. ನನಗೆ ಲಭ್ಯವಿದ್ದರೆ ಮತ್ತೆ ನಿನ್ನ ನೋಡುತ್ತೇನೆ”
ಎಂದು ಸಮಾಧಾನ ಹೇಳಿದರು. ಲಕ್ಷ್ಮಣನಿಗೆ ಎಲ್ಲ ಕಡೆಯಿಂದಲೂ ಶೂನ್ಯತೆ ಕವಿದಂತಾಯಿತು. ಮನಸ್ಸಿಗೆ ಯಾವರೀತಿಯಲ್ಲಿಯೂ ಶಾಂತಿಯಿಲ್ಲ. ದಕ್ಷಿಣಕ್ಕೆ ಹೋಗಿ ವಿದ್ಯಾಭ್ಯಾಸವನ್ನು ಮುಂದುವರೆಸುವ ಆಸೆ ಕನಸಾಗಿ ಉಳಿಯುವ ಸಂಭವವೇ ಹೆಚ್ಚಾಯಿತು. ‘ಮನೆಯೂ ಇನ್ನು ಮೇಲೆ ನನ್ನ ಭಾಗಕ್ಕೆ ದೂರವಾಗುವುದೋ’ ಎಂದು ಒಂದೇ ಸಮನೆ ಯೋಚಿಸುವನು.
*****
ಮುಂದುವರೆಯುವುದು