ಮನೆಗೆ ಬಿದ್ದ ಬೆಂಕಿಯಲ್ಲಿ ತನ್ನ ಬೆಳ್ಳನೆ ಮಗು
ಕರ್ರಗೆ ಬೆಂದು ಹೋಗುವದ ಕಂಡ
ತಾಯಿಯೊಬ್ಬಳ ಕೂಗು
ಬೀದಿ ಬದಿ ಬಿದ್ದವನ ಮೈ ಬಣ್ಣ
ಬಣ್ಣದುರಿಗಾಯದಿಂದೆದ್ದು ಬರುವ ಚೀರು
ಸತ್ತರೂ
ಮೇಲೆ ಕೊಂಬೆಗಂಟಿರುವ ಹಸಿರು
ಗಿಳಿಗಳ ಚಿಲಿಪಿಲಿ ಪ್ರೇತರವ
ನೂರು ದೂರು
ಇವುಗಳ ಕೇವಲ ಕೇಳಿಸಿಕೊಂಡು
ಕಿವಿ ಹಿಡಿದಿದ್ದೇನಲ್ಲ
ರಕ್ತ ಕತ್ತರಿಸುವ ಚಳಿ
ಗಾಳಿ ಸಾವಿರ ಮುಖಗಳಲ್ಲಿ ಹಾಯುತ್ತಿರುವಂಥ
ಜೀವಂತ ಧೀಮಂತ ಟಾಯರುಗಳು ಸುಟ್ಟಂಥ
ಚುಕ್ಕೆ ಸೂರ್ಯ ಚಂದ್ರ ನಿತ್ಯ
ಗೋಲಿಯಾಡುವಂಥ
ಖೂನಿಗೊಂಡ ಬಂಧು
ಹೊಸೆಯುತ್ತ ಮೃತ್ಯು ಮುದ್ರೆಯೊತ್ತುತ್ತ
ಈ ಇದೇ ರಸ್ತೆಯಲ್ಲಿ
ಮತ್ತೆ ಮತ್ತದೇ ಸತ್ತ ಪಾದರಕ್ಷೆಯಲ್ಲಿ
ಗಸ್ತು ಹೊಡೆಯುತ್ತಿದ್ದೇನಲ್ಲ
ಕಣ್ಣು ಹರಿಯುವ ಪಂಜುಗಳ ಕುಕ್ಕುಕ್ಕಿ
ಅಸ್ಥಿ ಪಂಜರಗಳ ನಿತ್ಯ ಆತ್ಮಹತ್ಯೆಯನ್ನ
ಅಜ್ಜ ಹೆಂಡತಿಯ ಮಾರಿ ಸತ್ಯ ಮಾತಾಡಿದ್ದನ್ನ
ನನ್ನಲ್ಲಿಳಿಯದೆ ನೇರ
ತನ್ನ ಕಣ್ಣುಗಳಲ್ಲೆ ಆಮ್ಲೆಟ್ ಕುದಿಸುವ ಆ ಹುಡುಗಿಯನ್ನ
ಸಾಕ್ಷಿಯಿಲ್ಲದೆ ಸೋರುವೀ
ಅಸಂಖ್ಯ ನಿರ್ಜೀವ ನಲ್ಲಿಗಳನ್ನ
ಇನ್ನೂ ಹೀಗೆಯೇ ನೋಡುತ್ತಿದ್ದೇನಲ್ಲ
ಮುಚ್ಚಿಕೊಂಡ ರೆಪ್ಪೆ ಪುನಃ ಬಿಚ್ಚುತ್ತೇನಲ್ಲ
ಅದ್ದೂರಿ ವಿಧ ವಿಧ ಅಕ್ವೇರಿಯಂ ಮೀನುಗಳ
ನೆನಪ ಮಳೆಬಿಲ್ಲುಗಳ ತೊಗಲುಗೊಂಬೆಗಳ ಸರಾಗ
ಶಬ್ದಗಳಾಗಿಸಿ ಚಿನ್ಹೆಗಳ ಕುದಿಸಿ
ಸಂಪರ್ಕಕ್ಕೆ ಬಾಯ್ತೆರೆದು
ಪುಳಕ್ಕನೆ ನಾನೇ ನನ್ನ ಬಾಯಿಂದ
ಜಾರಿ ಬೀಳುತ್ತೇನಲ್ಲ
ಸೃಷ್ಟಿಗೂ ಮಾತೆನ್ನುತ್ತೇನಲ್ಲ ದೃಷ್ಟಿಗೂ ಕತೆಯೆನ್ನುತ್ತೇನಲ್ಲ
ಅಲ್ಲಿ ಮನೆಯವರೆಲ್ಲ ಅರೆ
ಹೆಣವಾಗಿ ಸೋತು ನಂದುವ ಲಾಟೀನುಗಳಡಿಗೆ
ಮಗ್ಗಿ ಮುಗಿಸುವಾಗ
ನಾನೊಬ್ಬನೇ ಇಲ್ಲಿ ಇಷ್ಟು ದೂರ ಬಂದು ಕೂತು
ಶಬ್ದವ್ಯಸನಿಯಾದೆನಲ್ಲ
*****
