ಕಾಲ ನಿಲ್ಲುವುದಿಲ್ಲ

ಈ ಕಾಲನೆಂಬುವ ಪ್ರಾಣಿ
ಕೈಗೆ ಸಿಕ್ಕರೆ ಚೆನ್ನಾಗಿ ಥಳಿಸಬೇಕೆಂದಿದ್ದೆ;
ಎಲ್ಲೊ ತಲೆಮರೆಸಿಕೊಂಡು ಓಡಾಡುತಿದ್ದಾನೆ.
ಆಕಾಶದಲ್ಲಿ ಮಿಂಚಿ,
ಭೂಕಂಪದಲ್ಲಿ ಗದಗದ ನಡುಗಿ,
ಜ್ವಾಲಾಮುಖಿಯೊಳಗೆ ಸಿಡಿದು ನುಚ್ಚುನೂರಾಗಿ,
ನದಿನದಿಯ ಗರ್‍ಭವ ಹೊಕ್ಕು, ಮಹಾಪೂರದಲಿ ಹೊರಬಂದು
ನಮ್ಮೆದೆಯಲ್ಲಿ ತುಡಿವ ತಬಲವಾಗಿದ್ದಾನೆ.
ಹಿಡಿಯಿರೋ ಅವನ……..
ಗಡಿಯಾರದಲ್ಲವನ ಹಿಡಿದು ಗಾಣವಾಡಿಸಲು
ಹೆಣಗಿದ್ದೇವೆ.
ಹೊತ್ತು ಬಂದಾಗ ಕತ್ತೆಯ ಕಾಲು ಹಿಡಿದು
ಒದೆಸಿಕೊಂಡಿದ್ದೇವೆ.
ತುಡಿವೆದೆಗೆ ಕಿವಿಗೊಟ್ಟು, ಮಿಡಿವ ನಾಡಿಯ
ಹಿಡಿದು ನೋಡಿದ್ದೇವೆ;
ಒಳಹೊರಗೆ ಉಸಿರು ಆಡುತ್ತಿದೆ ನಿರಾಯಾಸ.
‘ಬಯಲು ಆಲಯದೊಳಗೋ? ಆಲಯವು ಬಯಲೊಳಗೋ?’
ಕೊನೆಗೊಮ್ಮೆ ಅವನೇ ಎಲ್ಲ ಬಗೆಹರಿಸುತ್ತಾನೆ,
ಯಾರಿಗೂ ಅವಸರವಿಲ್ಲ ತಾನೆ?
ಈ ಕುದುರೆಯೇರಿ, ಲಗಾಮು ಬಿಗಿ ಹಿಡಿದು
ಸವಾರಿ ಮಾಡುವುದಷ್ಟು ಸುಲಭವಲ್ಲ.
ನಮ್ಮದೆಯ ಮೇಲೆಯೇ ಕಾಲಿಟ್ಟು ಓಡಿಹೋಗುವುದ
ನಾವೆಷ್ಟು ಸಲ ಅನುಭವಿಸಿಲ್ಲ?
ಸಕೆಂಡು, ಮಿನಿಟು, ತಾಸುಗಳ ಹಾಸು-ಹೊಕ್ಕಿನಲಿ
ಅಲ್ಲೊಂದು ಇಲ್ಲೊಂದು ಬಣ್ಣದ ನೂಲು
ಬೆತ್ತಲೆ ಬದುಕ ಸುತ್ತಿ ತೋರಿಸುತ್ತಿದೆ ಡೌಲು.
ಹೆಜ್ಜೆಯಿಟ್ಟಲ್ಲೆಲ್ಲ ಜೋಲಿಹಿಡಿದಿದೆ ಮಣ್ಣು
ಧುಮುಕುತಿದೆ ನೀರು,
ಮೈಸುತ್ತಿ ಒಳಹೊಕ್ಕು ನೋಡಿದೆ ಗಾಳಿ,
ಹದ್ದು ಮೀರಿದೆ ಬಯಲು-
ಬೆಳಕು-ಕತ್ತಲೆ ಕುಂಡದಲ್ಲಿ ಮುಳುಗೇಳುತಿಹೆವು ದಿನವೊಂದಕ್ಕು
ನಿದ್ದೆ ತಿಳಿದೆದ್ದಾಗ ಭೂಮಿಯಾಕಾಶಕ್ಕೆ ದೊಡ್ಡ ಬಿರುಕು.

ಸದಾ ಅದೇ ಸೂರ್‍ಯಚಂದ್ರರ ಸುಪರಿಚಿತ ಮೋರೆ,
ನಮ್ಮಂತೆಯೇ ಅವರಿಗೂ ತಿರುಗುವದೊಂದೆ ಹೋರೆ.
ಆದರೂ ಆಗೀಗ ಈಚೆಯ ದಡಕ್ಕು ಹಾಯುವದು ಬೆಳಕಿನ ತೆರೆ.
ಒಡಮುರಿದೆದ್ದು ನಾಲ್ಕೂ ಕಡೆಗೆ ಕೈ ಚಾಚಿ
ನಿಂತಲ್ಲೆ ಬೇರು ಬಿಟ್ಟಿವೆ ವೃಕ್ಷ
[ಅಗೆದು ನೋಡಲೆ ಬೇಕೆ?].
ಹರಡಿಕೊಂಡಿದೆ ಹಸಿರು ಸಂಸಾರ
ನಮಗು ಅದಕೂ ನಿತ್ಯ ಹೊಕ್ಕು ಬಳಕೆ.
ಆರು ಋತುಗಳು ಬಂದು ಆರೈಕೆ ಮಾಡುವವು
ಯಾವುದೋ ಹಾರೈಕೆ ಎದೆಯೊಳಿಟ್ಟು;
ತತ್ತಿಯೊಡೆದು ರೆಕ್ಕೆ ಬಲಿತಾಗ ಹಾರುವವು ಗೂಡು ಬಿಟ್ಟು,
ದೂರದಲ್ಲಿಯೆ ಸಾಲು ನಿಂತ ಪರ್‍ವತ ಶಿಖರ
ಆಗಿಲ್ಲ ಭೂಮಿಗೆ ಭಾರ.
ತೇಲುತಿವೆ ಅಂತರಾಳದಲಿ ನೂರು ಗೋಲ.
ಸೋತು ತಲೆಬಾಗಿಲ್ಲ ಆಕಾಶ,
ಮೂಲೆ ಹಿಡಿದು ತೂಕಡಿಸಿಲ್ಲ ಗಾಳಿ,
ಒಳಗು ಹೊರಗೂ ಹರಿದು ಸ್ವಚ್ಛವಾಗಿದೆ ನೀರು
ಅಣೆಕಟ್ಟೆಗೂ ಕೆಳಗ ಆರುಪಾರು.
ಎತ್ತಿನ ಬಂಡಿಯಿಳಿದು, ಬಸ್ಸಿನ ದಾರಿ ಕಾಯ್ದು, ಕಾರಿನಲಿ ತೂರಿ,
ಹಡಗ ಬಿಟ್ಟು ವಿಮಾನದಲಿ ಹಾರಿ
ಗೋಲಗಳ ಮೇಲೆ ದಾಳಿ ಮಾಡಿದ್ದೇವೆ.
ಮೈಕಿನಲಿ ಕೊಕ್ಕೊಕ್ಕೋ ಕೂಗಿ, ತುರಾಯಿ ಕುಣಿಸಿ
ಬೆಳಗಾಯಿತೆಂದು ಭ್ರಮಿಸಿದ್ದೇವೆ.
ಹೊಸದಾಗಿ ಹೂಡಿದ ಮೂಡಲ ಹೋರಿ ಮುಸುಗರೆದು
ಅಡ್ಡಾದಿಡ್ಡಿ ಜಗ್ಗುತಿದೆ,
ಜೊತೆಗಿರುವ ಸಾದು ಎತ್ತಿನ ಕೂಡ ಕಾದಾಟ.
ಹೌದು, ನಾವೆಲ್ಲ ಹೊಸಬರೆ;
ಅಜ್ಜ ಮುತ್ತಜ್ಜರಿಗೆ ಮಂಗಳಾರತಿ ಮಾಡಿ
ಕೈಯಲ್ಲಿ ಗಂಟೆ ಹಿಡಿದಿದ್ದೇವೆ.
ನೈವೇದ್ಯಕ್ಕೆ ಪಾಕವೇ ಸಿದ್ಧವಾಗಿಲ್ಲ, ಆಗಲೇ
ಪ್ರಸಾದ ಹಂಚಿದ್ದೇವೆ.
ಎದುರಿಗಿದ್ದದ್ದೆಲ್ಲ ಅದಲು-ಬದಲು ಕಂಚೀಬದಲು
ಹುಡುಕುತ್ತಿದ್ದೇವೆ ಕಣ್ಮುಚ್ಚಿ: ಇವರ ಬಿಟ್ಟವರಾರು?

ದಿನವು ಬಿಸಿ ಬಿಸಿ ಅನ್ನ ದೇಹಕ್ಕೆ ಹಿತ.
ಮುಂಜಾವದಡಿಗೆ ಸಂಜೆಗಾಗಲೇ ತಂಗೂಳು.
ಹಳಸಿದನ್ನವ ನಾಯಿ ಕೂಡ ಮೂಸುವದಿಲ್ಲ. ಅದೆ
ಅಕ್ಕಿ, ಜೋಳ, ಗೋದಿಗಳಿಂದ ವಿಧವಿಧದ ಪಕ್ವಾನ್ನ
ಗಮಗಮಿಸುವದು. ಉಪ್ಪು, ಕಾರ, ಹುಳಿ, ಸಿಹಿ
ತಕ್ಕಷ್ಟು, ಬದಲಾವಣೆಯೇ ಬಾಳಿನೊಗ್ಗರಣೆ.
ಬಾಡಿಸಿಕೊಳ್ಳಲೆಂದೆ ಉಪ್ಪಿನಕಾಯಿ.
[ಕದ ತಿನ್ನುವವಗೆ ಹಪ್ಪಳ ಈಡೆ?]
ಮಿತಿಮೀರಿದರೆ ಎಂಥ ಸುಗ್ರಾಸವೂ ಅಜೀರ್‍ಣ.
ಕುದಿಯುವುದು, ಮಿದಿಯುವುದು, ಹೊಂದಿ
ಹದಗೊಳ್ಳುವದು: ಬದುಕಿನಲಿ ಎಲ್ಲರಿಗು ತೆರೆದ ದಾರಿ.
ಶ್ರುತಿಗೂಡಿದಾಗ ಹೊಮ್ಮುವುದು ಹಾಡಿನ ಲಹರಿ
ಗಾಳಿಯ ಬೆನ್ನಮೇಲೆ ಮೋಡದ ಸವಾರಿ.

ಗುಡುಗಿರಲಿ, ಮಿಂಚರಲಿ, ಮುಂಗಾರಿಗಾರು ಕಾತರಿಸಿಲ್ಲ?
ಉರಿವ ಬೇಸಗೆ ಚಿಗುರು ಚಿಣ್ಣರನ್ನು ಎತ್ತಿ ಆಡಿಸಿಲ್ಲ?
ಥಂಡಿಯ ಮುಸುಗಿನಲ್ಲಿ ಬೆಚ್ಚಗೆ ಕನಸು ಕಂಡಿಲ್ಲ?
ಬೆಂಗಾಡಿನಂಗಾಗದಲ್ಲು ತುಂಗಭದ್ರೆಯು ತುಂಬಿ ಹರಿದಿಲ್ಲ?

ವರ್‍ತನೆಯ ನರ್‍ತನಕೆ ಪರಿವರ್‍ತನೆಯ ಸೊಬಗು.
ಕಂದ, ವೃತ್ತಗಳ ಝರಿ ತೊರೆಯ ನಡುವೆ
ಹಸುರಿಗೆ ಗದ್ಯದುದ್ಯಾನ;
ಹದಿನೆಂಟು ಬಣ್ಣನೆಯ ಹುಲ್ಲು ಗದ್ದೆಯ ನಡುವೆ
ಚಂಪುವಿನ ತಂಪುಕೊಳ.
ನಿಬ್ಬಣಕೆ ಹೊರಟಂತೆ ಹಾಡುಗಬ್ಬಗಳ ಕೊಲ್ಲಾರಿ ಬಂಡಿ.
ಭಾವ-ಗೀತ ಒಪ್ಪಿದರೆ ಚೆಂದ ವಧೂವರ ಜೋಡಿ.
ಒಲೆ ಹೂಡಿದ ಮೇಲೆ ಅದರ ಬಿಸಿ ತಾಗುವದು
ಕುದ್ದು ಹಣ್ಣಾಗುವದು ನೂರು ಅನುಭವದ ನವ್ಯಪಾಕ.
ಬಗಲಗಸೆ ಅಂಗಿಯಿಂದ ಬುಶ್‌ಕೋಟಿನವರೆಗೂ
ತೊಟ್ಟು ಕಳಚಿದ್ದೇವೆ.
ಮಾಡಿ ಉಂಡಿದ್ದೇವೆ ನಮನಮಗೆ ಸೇರಿದ ಅಡಿಗೆ.
ಇರಬಹುದು ಇದರಲ್ಲಿ ಕೆಲಭಾಗ ಜೀವನಸತ್ವ ಕಡಿಮೆ.
ಇದ್ದ ಶಕ್ತಿಯಲಿ ತುಸು ದೂರ ನಡೆದಿದ್ದೇವೆ.
ರೂಢಿಯಾಗಿದೆ ಒಬ್ಬೊಬ್ಬರಿಗು ಒಂದೊಂದು ಬಗೆಯ ನಡಿಗೆ.
ಮುಖ್ಯ ಬೇಕಾದದ್ದು ಜೀವಂತ ಗತಿ, ಹೊಸ ನೆತ್ತರಿನ ಕೊಡುಗೆ.

ಕಾಲ ನಿಲ್ಲುವದಿಲ್ಲ; ನಾವು ಕೂಡುವದಿಲ್ಲ.
ಮಳೆಬಂದರೂ ಕಾಮನಬಿಲ್ಲು ಮೂಡುವದೆಂಬ ನಿಯಮವಿಲ್ಲ.
ಹಗಲಿರುಳ ಗಾಲಿಯಲಿ ಸೋಲು-ಗೆಲುವಿನ ಕೀಲು ಭದ್ರ.
ಪಂದ್ಯಾಟದಲ್ಲಿ ಯಾರೂ ಹೆಸರು ಕೊಡಬಹುದು
ನಿಂತವರಿಗೂ ಉಂಟು ನೋಡಿ ಸಂತಸ ಪಡುವ ಭಾಗ್ಯ.
ಗೆದ್ದವರಿಗಿದ್ದೆಯಿದೆ ಬೆಳ್ಳಿಯ ಢಾಲು.
ಸೋತವರ ಸೊತ್ತು
ಗೆದ್ದವರನಳೆವ ಜಗದೆಲ್ಲ ಅನುಭವದ ಪಾಲು.
*****