ವರ್ಣ ಸುಶೋಭಿತ ಜಮಖಾನೆಯನ್ನು ನೇಯುವ ವ್ಯಕ್ತಿಯ ಭಾಗ್ಯ ಕಗ್ಗತ್ತಲಿನ ನೂಲಿನಿಂದ ಹಾಸುಹೊಕ್ಕಾಗಿರುವುದು ವಿಧಿ ನಿಯಮವೆ? *****
ವರ್ಗ: ಹನಿಗವನ
ಸಹವಾಸ ಮಹಿಮೆ
ಸಜ್ಜನನಿದ್ದರೆ ಖೂಳರ ಕೆಳೆಯಲಿ ಅವನುದ್ಧಾರವದೆಲ್ಲಿ? ಚಂದನ ಸೇರಿರೆ ಸೌದೆಯ ಹೊರೆಯಲಿ ಒಲೆಗದು ಉರಿಯುವ ಕೊಳ್ಳಿ. ಭವಿಗಳ ಮೇಲಿರೆ ಅನುಭಾವಿಯ ಕೃಪೆ ಕಳ್ಳಿಯೂ ಮಲ್ಲಿಗೆ ಬಳ್ಳಿ. ಚಂದ್ರನ ಕಿರಣದ ನೆರವೊಂದಿದ್ದರೆ ಕೊಚ್ಚೆಯ ಜಲವೂ ಬೆಳ್ಳಿ. *****
ನುಡಿಯ ಏಳಿಗೆ
ವರ್ಷವಿಡೀ ಚಾಟಿಯ ಏಟಿನ, ದುಡಿತದ ಎತ್ತಿಗೆ ಸಂಕ್ರಾಂತಿಯ ದಿನ ಆಹ! ಎಂತಹ ಸಿಂಗಾರ; ಜ್ಞಾಪಿಸುವುದು ನನಗೀ ದೃಶ್ಯ, ನವೆಂಬರ್ ಒಂದರ ಸರಕಾರದ ಸಿರಿಗನ್ನಡದುದ್ಧಾರ. *****
ಅಕಾಲಿಕ ನೆರವು
ಕಾರ್ಯಸಾಧನೆಯಾದ ಮೇಲೆ ಚಾಚಿದ ಅಭಯ ಹಸ್ತ, ಗಾಢ ನಿದ್ದೆಯೊಳಗಿರುವವನನೆಬ್ಬಿಸಿ ನಿದ್ದೆ ಗುಳಿಗೆ ನೀಡಿದ ಹಾಗೆ ವ್ಯರ್ಥ. *****