ಮೃತ್ಯುವಿಗೆ

ಏಕಿನಿತು ಮೆಲ್ಲಗೆ ಕಿವಿಗೆ ಪಿಸುಗುಟ್ಟಿತಿರುವೆ
ಮೃತ್ಯು, ಓ, ನನ್ನ ಮೃತ್ಯು!
ಸಂಜೆಯಾಗುತ ಹೂವು ಬಾಡುತಿರಲು
ಕೊಟ್ಟಿಗೆಗೆ ಮರಳುತಿರೆ ದನಕರುಗಳು
ಕಳ್ಳ ಹೆಜ್ಜೆಯನಿಡುತ ಬಂದು ನನ್ನೊಡನೆ
ತಿಳಿಯದಾವುದೊ ಭಾಷೆ ನುಡಿಯುತಿರುವೆ.

ಜೋಂಪಿಸುವ ಕಲರವದ, ತಣ್ಣಗಿನ ಮುತ್ತುಗಳ
ನಿದ್ರೆಯೌಷಧಕೊಟ್ಟು ನನ್ನೊಳಿಂತು
ಪ್ರೇಮಯಾಚನೆಯಿಂದ ಒಲಿಸಿಕೊಂಬುವ ಬಗೆಯೆ
ಓ ಮೃತ್ಯು! ಬಾಳ್ವೆಯೇ ನಿನ್ನ ಹೊರತು?

ಏನು ನಮ್ಮೀ ಮದುವೆಗಿಲ್ಲವೆ ಸಮಾರಂಭ?
ಮುಡಿವುದಿಲ್ಲವೆ ಚೆಲುವ ಹೂಮಾಲೆಯನು ನೀನು
ಕಂದುಗೂದಲ ಹಳಲ ಸಿಂಗಾರಕೆ?
ನಿನ್ನ ಮುಂಗಡ ಧ್ವಜವನೆತ್ತಿ ಸಾಗುವರಿಲ್ಲೆ?
ಇರುಳೆಲ್ಲವೂ ಕೆಂಪು ದೀವಟಿಗೆ ಬೆಳಕಿನಲ್ಲಿ ಉರಿವುದಿಲ್ಲೆ?

ಮೃತ್ಯು, ಓ, ನನ್ನ ಮೃತ್ತು!
ಬಾ, ನಿನ್ನ ಶಂಖನಾದದ ನಿರಾತಂಕ ನಿರುಪಾಧಿಯಲಿ
ನಿದ್ದೆ ಪೆರಸಾರಿರುವ ರಾತ್ರಿಯಲ್ಲಿ
ತೆಗೆದುಕೊ, ತೊಡಿಸೆನಗೆ ಕೆಂಪು ಗೌಸಣಿಗೆಯನು
ಕೈ ಹಿಡಿದು ಕರೆದುಕೊ; ಎಂಥ ಚೆನ್ನಿಗನು!

ಎಲ್ಲಿ, ಬಾಗಿಲದಿ ನಿನ್ನ ಸಾರಥಿ ಸಿದ್ಧನಾಗಿರಲಿ
ಕುದುರೆಗಳು ಅತುರದಿ ಕನೆಯುತಿರಲಿ.
ಮೇಲುದವನೋಸರಿಸಿ ನೋಡೆನ್ನ ತುಂಬಿದಭಿಮಾನದಲಿ
ಮೃತ್ಯು, ಓ, ನನ್ನ ಮೃತ್ಯು!
*****
ರವೀಂದ್ರರ ‘Gardener: 81