ಸಂಧ್ಯಾ ರಾಗ – ೧

ಹತ್ತು ಗಂಟೆ ಹೊಡೆದರೂ ಯಾರಿಗೂ ಎಚ್ಚರವಿಲ್ಲ ಗಡಿಯಾರವು ತನ್ನ ಕೆಲಸವನ್ನು ತಾನು ಮಾಡಿಕೊಂಡು ಹೋಗುತ್ತಿತ್ತು. ಗಂಟೆಗೆ, ಅರ್ಧಗಂಟೆಗೆ ಕಾಲವನ್ನು ಸೂಚಿಸಿ ಅದು ಮುಂದುವರಿಯುತ್ತಿತ್ತು. ರಾಯರಾಗಲೀ ಶಾಮಣ್ಣನಾಗಲೀ ಆ ಕಡೆಗೇ ಲಕ್ಷ್ಯ ಕೊಟ್ಟಿರಲಿಲ್ಲ. ಒಳತೊಟ್ಟಿಯಲ್ಲಿ, ಹೊಸಲಿನ ಒಂದು ಬದಿಯಲ್ಲಿ ಕುಳಿತಿದ್ದ ಗೌರಮ್ಮನವರು ಸೊಸೆಯ ಮುಖವನ್ನೊಮ್ಮೆ ನೋಡಿ ತೆಪ್ಪಗಾಗಿದ್ದರು. ಮಾಡಿದ ಅಡಿಗೆ ಆರಿ ತಂಗಳಾಗುತ್ತದಲ್ಲಾ ಎನ್ನುವ ಚಿಂತೆ ಅವರಿಗೆ. ಅತ್ತೆಗೆ ಕಾಣದಂತೆ ಕಣ್ಣೀರು ಒರೆಸುತ್ತಾ ಕುಳಿತಿದ್ದ ಮೀನಾಕ್ಷಮ್ಮನವರಿಗೆ ಅತ್ತೆಯ ಚಿಂತೆಯ ಅರಿವೇ ಆಗಲಿಲ್ಲ.

ರಾಯರ ಮನಸ್ಸು ಕುಮಾರವ್ಯಾಸ ಕವಿಯ ಭಾರತದಲ್ಲಿ ತೇಲಿಹೋಗಿತ್ತು. ಅದು ಉದ್ಯೋಗಪರ್ವದ ಕರ್ಣವೃತಾಂತ. ರಾಯರ ಅತ್ಯಂತ ಪ್ರಿಯವಾದ ಭಾರತ ಕಥಾವಿಭಾಗ. ಕರ್ಣವೃತಾಂತವನ್ನು ನೂರಾರು ಸಲ ಕೇಳಿದ್ದರು. ಒಂದೆಡೆಯಲ್ಲಿ ಕಾಣದ ಕೈ ಒಂದೆಡೆಯಲ್ಲಿ ಕಾಣುವ ಕರ್ಮದ ಕೈ-ಎರಡರ ಸಂಚಿಗೆ ಸಿಕ್ಕಿ ಕರ್ಣನು ನುಚ್ಚುನೂರಾಗುತ್ತಿದ್ದುದನ್ನು ಗಮನಿಸಿದ್ದರು. ‘ಅಯ್ಯೋ ಕರ್ಣಾ’ ಎನ್ನುವ ಉದ್ಗಾರದ ನುಡಿಗಳು ಅವರ ಬಾಯಿಂದ ಎಷ್ಟೋ ಸಾರಿ ಉರುಳಿದ್ದವು. ಕರ್ಣನ ಉಜ್ವಲ ಚರಿತ್ರೆಯು ಎಷ್ಟು ವಿಷಾದಕರ ರೀತಿಯಲ್ಲಿ ಕೊನೆಗೊಂಡಿತೋ ಅಷ್ಟು ಅಷ್ಟು ಮರುಗಿದ್ದರು,ಕುಂತಿ ತಾಯಿ.ಪಾಂಡವರ ತಾಯಿಯೂ ಹೌದು; ಕರ್ಣನ ತಾಯಿಯೂ ಹೌದು. ಕರ್ಣನಿಂದ ಶಪಥವನ್ನು ಮಾಡಿಸುತ್ತಾಳೆ: ಅದೊಡೆವರು ಮಕ್ಕಳನು ತಲೆ ಗಾದು ತೋರೆ ಕಂದ ನಿನಗೇ ನೀ ದುರಾಗ್ರಹವೊಪ್ಪುವುದೇ ಕೌರವರ ಸೇವೆಯೊಳು ಹೋದ ಬಾಣವ ಮರಳಿ ತೊಡದಿರುಮಾದು ಕಳೆ ವೆರವ…. ಮಾತೃ ಪ್ರೇಮದ ಝಂಝಾವಾತಕ್ಕೆ ಸಿಕ್ಕಿದ ಕರ್ಣ “ಹಸಾದವೆಂದನು, ಬೀಳುಕೊಂಡನು, ಬಂದನರಮನೆಗೆ….” “ಕರ್ಣಾ ನೀನು ಕೆಟ್ಟೆಯಪ್ಪಾ” ಎಂದು ರಾಯರು ಚೀರಿದರು. ಶಾಮಣ್ಣನವರು ‘ಶ್ರೀವನಿತೆಯರಸನೇ’ ಪದ್ಯವನ್ನು ಆರಂಬಿಸಿಬಿಟ್ಟರು.ನಾಂದೀ ಪದ್ಯಗಳು ಮುಗಿದವು. ಶಾಮಣ್ಣನವರು ಕಾವ್ಯವನ್ನು ಮುಚ್ಚಿ ಕಣ್ಣಿಗೊತ್ತಿಕೊಂಡರು. ರಾಯರು ಕಣ್ಣ ನೀರನ್ನು ನಿವಾರಿಸಿಕೊಳ್ಳುತ್ತಾ ನೆಶ್ಯದ ಡಬ್ಬಿಗೆ ಕೆ ಹಾಕಿದರು. ಮಾತನ್ನಾರಂಭಿಸಲು ಯಾರಿಗೂ ಧೆರ್ಯವಿಲ್ಲ. ಅಲ್ಲಿ ಇನ್ನೂ ಕುಂತಿ, ಕರ್ಣ,ಕೃಷ್ಣರು ಇದ್ದಂತೆ ಭಾಸವಾಗಿತ್ತು. ಗೌರಮ್ಮನವರು ಮೆಲ್ಲನೆ “ಮಗೂ, ಹತ್ತು ಹೊಡೆಯಿತಲ್ಲಪ್ಪಾ, ಮಂಗಳಾರತಿ ಮಾಡುತ್ತೀಯಾ?” ಎಂದರು. ರಾಯರಿಗೆ ಆಗ ಎಚ್ಚರ. ‘ಆಗಲಮ್ಮಾ’ ಎಂದು ಎದ್ದರು. ಕೆಕಾಲು ಮುಖ ತೊಳೆದುಕೊಂಡು, ಆಚಮನವನ್ನು ಮುಗಿಸಿ ಬರುವ ಹೊತ್ತಿಗೆ ಪೂಜಾದ್ರವ್ಯಗಳು ಸಿದ್ದಪಡಿಸಲ್ಪಟ್ಟಿದ್ದವು. ತಮ್ಮ ಇಷ್ಟ ಡೇವರು ಮತ್ತು ಕುಲದೇವರುಗಳನ್ನು ಇರಿಸಿದ್ದ ಮಂದಾಸನದ ಮುಂದೆ ನಿಂತು ಕರ್ಪೂರಾರತಿ ಹಚ್ಚಿದ್ದ ಹರಿವಾಣವನ್ನು ಹಿಡಿದು ಗಂಭೀರವಾದ ಧ್ವನಿಯಲ್ಲಿ ತದೇಕಚಿತ್ತರಾಗಿ ಹಾಡಿದರು.

ಜ್ಯೋತಿ ಬೆಳಗುತಿದೆ ನಿತ್ಯಾನಂದ ಜ್ಯೋತಿ ಬೆಳಗುತಿದೆ || ತರಣಿ ಚಂದ್ರಾನಲ ತಾರೆ ಮಿಂಚುಗಳೆಂಬ
ಪರಿಪರಿ ಬೆಳಕಿನ ಬಳಗವಾನೊಳಗೊಂಡು ||
ರಂಗುಗೆಡದೆ ಮಲಸಂಗವಿಲ್ಲದೆ ವಿವಿ
ಧಾಂಗದೊಳಾಡುವ ಮಂಗಳಾತ್ಮಕ ಪೂರ್ಣ ||
ಅಂಕೆಗೆ ಸಿಲುಕದ ಸಂಕರವೆನಿಸದ
ಶಂಕರ ಗುರುವೆಂಬಾತಂಕವಿಲ್ಲದೆ ಪರಂಜ್ಯೋತಿ||

ಅಲ್ಲಿ ನಿಂತಿದ್ದ ಮನೆಯವರೆಲ್ಲರ ಮೆಯಲ್ಲಿಯೂ ವಿದ್ಯುತ್ಪ್ರಭೆ ಮೂಡಿದಂತಾಯಿತು. ರಾಯರದು ಮೊದಲೇ ಗಂಭೀರವಾದ ಆಕಾರ. ಸುಪುಷ್ಟವಾಗಿ ಬೆಳೆದ ಅಂಗಾಂಗಗಳು. ದೊಡ್ಡಸ್ತಿಕೆಯನ್ನು ಎತ್ತಿತೋರುವ ನಡತೆ ಸಹಜವಾದ ಉದಾತ್ತ ಗಂಭೀರವನ್ನು ಮನಸ್ಸಿನ ಮೇಲೆ ಮುದ್ರೆಯೊತ್ತುವಂತಹ ಮಾತುಕತೆ. ರಾಯರು ಉಟ್ಟಿದ್ದ ಕೇಸರಿ ಪೀತಾಂಬರವೂ, ಹಣೆಯಲ್ಲಿ ಧರಿಸಿದ್ದ ತ್ರಪುಂಡ್ರವೂ ಅವರ ವ್ಯಕ್ತಿತ್ವವನ್ನು ಬಿಡಿಸಿ ತೋರಿಸುತ್ತಿದ್ದವು- ಗಂಟೆ ಹತ್ತಾಗಲೀ ಹನ್ನೊಂದಾಗಲೀ ತಾನೇ ಮಂಗಳಾರತಿ ಮಾಡಿದಲ್ಲದೆ ರಾಯರು ಊಟಕ್ಕೆ ಏಳುತ್ತಿರಲಿಲ್ಲ. ಸಂಜೆ ಸಂಗೀತವೋ ಭಾರತವೋ ಶ್ರವಣವಾಗಲೇ ಬೇಕು. ಅನಂತರ ಮಂಗಳಾರತಿ ಮಾಡಿ ಮೃಷ್ಟಾನ್ನಭೋಜನ ಮಾಡಿ ರಾಯರು ವಶ್ರಾಂತಿಗೆ ತೆರಳುತ್ತಿದ್ದರು. ರಾಯರ ಹೆಸರು ಶ್ರೀನಿವಾಸರಾಯರು. ಶ್ರೀನಿವಾಸನ ಜೊತೆಗೆ ಹಳ್ಳಿಯ ಜನಕ್ಕೆ ಅವರು ರಾಯರಾಗಿದ್ದರು. ಅವರ ಹೆಸರು ಶ್ರೀನಿವಾಸಮೂರ್ತಿ, ಶ್ರೀನಿವಾಯ್ಯ ಎಂದಿದ್ದರೂ ಜನರು ರಾಯರು ಎಂಬ ಗೌರವಾರ್ಥಕ ಹೆಸರಿನಿಂದ ಅವರನ್ನು ಕರೆಯುತ್ತಿದ್ದರು. ರಾಯರಿಗೆ ಹಿರಿಯರು ಮಾಡಿದ ಆಸ್ತಿ ಬಹಳವಾಗಿತ್ತು. ಜೊತೆಗೆ ತಾವೂ ಅಷ್ಟು ಸೇರಿಸಿದ್ದರು. ರಯಾರ ಹಿರಿಯರು ಅಷ್ಟು ಆಸ್ತಿಯನ್ನು ಹೇಗೆ ಸಂಪಾದಿಸಿದರೋ ಹಾಗೇ ರಾಯರೂ ಸಂಪಾದಿಸಬಹುದಾಗಿತ್ತು. ಆದರೆ ನ್ಯಾಯ ಮಾರ್ಗದ ಒಂದು ಮೆರೆಯನ್ನು ಹಾಕಿಕೊಂಡು ತಮ್ಮ ಸಂಪಾದನೆಯನ್ನು ಕುಗ್ಗಿಸಿಕೊಂಡಿದ್ದರು. ಕಾಗದ ಪತ್ರಗಳಿಲ್ಲದೆ, ಬಾಯಿ ಮಾತಿನ ಮೇಲೆ ಸಾವಿರಾರು ರೂಪಾಯಿಗಳ ಸಾಲವನ್ನಿತ್ತು ಕಳೆದುಕೊಂಡಿದ್ದರು. ಸಣ್ಣ ಪುಟ್ಟ ಮಾತುಗಳನ್ನು ಆಡಿದೆನೆಂಬ ಕೋಪದಿಂದ ಕೆಂಪೇಗೌಡನ ಎರಡು ಸಾವಿರ ರೂಪಾಯಿನ ಪತ್ರವನ್ನು ಚಿಂದಿ ಚಿಂದಿಯಾಗಿ ಹರಿದು ಅವನ ತಲೆಯ ಮೇಲೆ ಹಾಕಿ ಕಳೂಹಿಸಿದ್ದರು. ಸಣ್ಣನಡತೆ,ಸಣ್ಣಮಾತು, ಸಣ್ಣಮನಸ್ಸುಗಳನ್ನು ಕಂಡರೆ ಉರಿದುರಿದು ಬೀಳುವ ಸ್ವಭಾವ. ಹಿಂದೆ ದೇಶಕ್ಕೆಲ್ಲಾ ದೊಡ್ಡ ಬರ ಬಂದಾಗ ಹೊಸಹಳ್ಳಿಗೂ ಬಂತು. ಜನ ಕಂಗಾಲಾದರು. ಕುಡಿಯುವುದಕ್ಕೆ ನೀರಿಲ್ಲ; ತಿನ್ನುವುದಕ್ಕೆ ಒಂದು ಹಿಡಿ ರಾಗಿ ಇಲ್ಲ. ಸಮಯ ನೋಡಿ ಪಟೇಲ, ಗೌಡರೂ ಒಂದಾಗಿ ಇದ್ದ ಬಿದ್ದುದನ್ನೆಲ್ಲಾ ಅಡ್ಡಾದಿಡ್ಡಿ ಬೆಲೆಗೆ ಮಾರುತ್ತ ಬಂದರು. ಈ ಅನ್ಯಾಯ ನೊಡೀ ನೊಡೀ ರಾಯರಿಗೂ ಸಾಕಾಯಿತು. ಪಟೇಲನ್ನ ಗೌಡರನ್ನ ಕರೆಸಿ ಬುದ್ಧಿ ಹೇಳಿದರು. “ಊರಿನ ಮರ್‍ಯಾದೆ ಕಡೆ ಲಕ್ಷ್ಯ ಇಡಿ.ಈ ರಕ್ತ ಕಾಣಿಕೆಯಿಂದ ನಿಮ್ಮ ಮನೆ ಊರ್ಜಿತವಾಗಲ್ಲ, ಜನ ಬಹಳ ಕೆಟ್ಟು ಹೋಗ್ತಾರೆ, ಊರು ಹಾಳಾಗಿ ಹೋಗುತ್ತೆ”ಎಂದು ವಿವೇಕ ಹೇಳಿದರು. ಧನಪಿಶಾಚಿ ಹಿಡಿದಿದ್ದ ಪಟೇಲ,ಗೌಡರಿಗೆ ಕಿವುಡು ಮುಚ್ಚಿಕೊಂಡಿತ್ತು.ರಾಯರು ಯೋಚನೆಮಾಡಿದರು. ತಮ್ಮ ಹತ್ತಿರ ೨೦-೨೩ ಖಂಡುಗ ದವಸಾ ಇತ್ತು. ಊರಿನವರನ್ನೆಲ್ಲ ಮಾರನೆಯ ದವಸ ಚಾವಡಿ ಮುಂದೆ ಕರೆಸಿ, ಮನೆಗಿಷ್ಟೂಂತ ಭತ್ಯ ಅಳೆದುಬಿಟ್ಟರು. ಅಂದಿನಿಂದ ರಾಯರೂ ಅಂದರೆ ಊರಿನ ದೇವರು. ಅವರ ಮಾತು ಅಂದರೆ ವೇದವಾಕ್ಯ.ಸಾಮಾನ್ಯವಾಗಿ ಯಾರು ಏನನೇ ಕೇಳಲಿ ರಾಯರು ಇಲಾ ಎಂದು ಅನ್ನುತ್ತಿರಲಿಲ್ಲ. ಕರ್ಣನ ಮೇಲೆ ತಮಗಿದ್ದ ಭಕ್ತಿಪ್ರೀತಿಗಳಿಂದಲೋ-ಏನೋ? ಒಂದು ಸಲ ದೇವಸ್ಥಾನದ ಬೀದಿ ಲಕ್ಷ್ಮಣಾಚಾರ್ರ ಮನೇಲಿ ಲಗ್ನವಾಯಿತು. ಬೀಗರ ಕಡೆಯವರು ಊರನ್ನು ಬಳಸಿ ಬಂದು ರಾಯರತೋಟದ ತೆಂಗಿನ ಗಿಡಗಳ ಮೇಲೆ ಕಣ್ಣು ಹಾಕಿದ್ದರು. ಲಕ್ಷ್ಮಣಾಚಾರ್ರು ಸೂಕ್ಷ್ಮವಾಗಿ ವಿಚಾರವನ್ನು ರಾಯರ ಕಿವಿಗೆ ಮುಟ್ಟಿಸಿದರು.ಅದೇ ಸಂಜೆ ರಯರೇ ಸ್ವತಃ ಬೀಗರ ಕಡೆಯವರನ್ನೆಲ್ಲ ಕಟ್ಟಿಕೊಂಡು ತೋಟಕ್ಕೆ ಹೋಗಿ ೨೦೦-೨೫೦ ಎಳೆನೀರು ಕಾಯಿಗಳನ್ನು ಕೀಳಿಸಿ ಸ್ವಂತ ಖರ್ಚಿನಿಂದ ನಿಂಬೆಯಹಣ್ಣು, ಕಲ್ಲುಸಕ್ಕರೆಗಳ ಸರಬರಾಯಿ ಮಾಡಿ ಲಕ್ಷ್ಮಣಾಚಾರ್ರ ಬೀಗರನ್ನು ತೃಪ್ತಿಪಡಿಸಿದರು. ರಾಯರ ಮನಸ್ಸು ಅವರ ಮನೆ, ಅವರ ಹಳ್ಳಿಗಳಿಗೆ ಮಾತ್ರ ಅಡಕವಾಗದೆ ವಿಶ್ವವ್ಯಾಪಿಯಾಗಿದ್ದುದೇ ಅವರ ಔದಾರ್ಯದ ರಹಸ್ಯವಾಗಿತ್ತು. ದೇವರ ಹತ್ತಿರ ಯಾಚನೆಗೆ ಹೋದರೆ ಅವನಾದರೂ ಒಂದೊಂದು ಸಲ ಏನೂ ಕೊಡದೆ ಹಿಂದಕ್ಕೆ ಅಟ್ಟಬಹುದು, ರಾಯರ ಹತ್ತಿರ ಹೋದರೆ ಯಾರೂ ಬರಿಗೆಲಿ ಬರುವಹಾಗಿಲ್ಲ ಎಂದು ಜನ ಧಾರಳವಾಗಿ ಅಂದುಕೊಳ್ಳುತ್ತಿದ್ದರು.

ರಾಯರಿಗೆ ಮಕ್ಕಳನ್ನು ಕಂಡರೆ ಬಹಳ ಪ್ರೇಮ. ಕಬ್ಬಿನ ಕಾಲ ಬಂತು ಅಂದರೆ ಊರಿನ ಮಕ್ಕಳಿಗೆ ಹಬ್ಬ.ಜಗಲಿಯ ಮೇಲೆ ೨-೩ ಕಟ್ಟು ಕಬ್ಬನ್ನು ಇಟ್ಟುಕೊಂಡು ರಾಯರೇ ಹಂಚುವುದಕ್ಕೆ ಕೂಡುತ್ತಿದ್ದರು.

ಶಾಮಣ್ಣನವರೂ ಹಾಗೆಯೇ ಬಂದು ಸೇರಿದ್ದು. ಅವರು ಹೊಸ ಹಳ್ಳಿಯವರಲ್ಲ. ಕೃಷ್ಣರಾಜಪೇಟೆ ಅವರ ಸ್ಥಳ. ಊರಿನಲ್ಲಿ ಪ್ಲೇಗು ಬಂದಾಗ ಶಾಮಣ್ಣನವರ ಮನೆ ತೊಳೆದು ಹೋಯಿತು. ಅವರ ಹೆಂಡತಿ ಮಗ ಇಬ್ಬರೂ ಪ್ಲೇUಮಾರಿಯ ಬಾಯಿಗೆ ಬಲಿಯಾದರು. ಅಂದಿನಿಂದ ಒಂದು ಬಗೆಯ ವಿರಕ್ತಿ ಹುಟ್ಟಿ ಶಾಮಣ್ಣನವರು ಊರು ಬಿಟ್ಟು ಅಲೆಯಲಾರಂಭಿಸಿದರು. ಅವರಿಗೆ ಭಾರತ ಓದುವ ಹವ್ಯಾಸವೂ ಮೊದಲಿನಿಂದಲೂ ಇತ್ತು. ಈಗ ಒದಗಿದ ವಿಪತ್ತನ್ನು ಮರೆಯಲು ಭಾರತಪಠನವನ್ನೇ ಹೆಚ್ಚು ಊರ್ಜಿತ ಪಡಿಸುವುದಕ್ಕಾರಂಭಿಸಿದರು. ’ಓದಿ ಓದಿ’ ಎಂದು ಜನ ಕೇಳುವುದೂ ಹೆಚ್ಚಾಯಿತು. ಕೆಲವು ವರ್ಷಗಳಲ್ಲಿ ಶಾಮಣ್ಣವರ ಕೀರ್ತಿ ಎಲ್ಲಾ ಕಡೆಗೂ ಪಸರಿಸಿತು. ತಮ್ಮ ಸಂಚಾರದಲ್ಲಿ ಒಂದು ಸಲ ಶಾಮಣ್ಣನವರು ಹೊಸಹಳ್ಳಿಗೆ ಬಂದಾಗ ರಾಯರು ಅವರನ್ನು ತಮ್ಮ ಮನೆಯಲ್ಲಿಯೇ ಇಟ್ಟುಕೊಂಡು ಭಾರತ ಓದಿಸಿ ಬೇಕಾದಷ್ಟು ಮರ್ಯಾದೆಮಾಡಿದರು. ಮರ್ಯಾದೆಗಿಂತಲೂ ಹೆಚ್ಚಾಗಿ ರಾಯರ ಅಂತಃಕರಣ ಶಾಮಣ್ಣನವರ ಮನಸ್ಸಿಗೆ ಬಹಳ ಬಂತು. ಶಾಮಣ್ಣನವರು ಹೊರಡುವ ಏರ್ಪಾಡು ಮಾಡಿದಾಗ ರಾಯರು “ಏಕೆ ಅಲ್ಲಿ ಇಲ್ಲಿ ಹೋಗಬೇಕು ತೆಪ್ಪಗೆ ಇಲ್ಲೇ ಇದ್ದುಬಿಡು ಶಾಮಣ್ಣ. ನನಗೂ ನಿತ್ಯಾ ಭಾರತಪಾರಾಯಣ ಮಾಡಬೇಕೆನ್ನುವ ಆಶೆಯಿದೆ” ಎಂದು ಉಪಚಾರವಾಗಿ ಆಹ್ವಾನವನ್ನು ನೀಡಿದರು. ತಾಯಿ ಗೌರಮ್ಮನವರು ಶಾಮಣ್ಣನವರನ್ನು ಪ್ರಾರ್ಥಿಸಿದರು. ಈ ಜನರ ಸರಳತೆ, ಹೃದಯವೆಶಾಲ್ಯಗಳನ್ನು ಕಂಡಿದ್ದ ಶಾಮಣ್ಣನವರು ಕಟ್ಟಿದ ಗಂಟು ಮೂಟೆಗಳನ್ನು ಬಿಚ್ಚಿ ಅಲ್ಲೇ ನಿಂತುಬಿಟ್ಟರು. ಅಂದಿನಿಂದ ರಾಯರ ಮನೆಯೇ ಅವರ ಮನೆಯಾಯಿತು. ಸುಮ್ಮನೆ ಉಂಡಾಡಿಗ ಭಟ್ಟನಾಗಿರಬಾರದೆಂದು ಶಾಮಣ್ಣನವರು ರಾಯರ ಜಮೀನಿನ ಉಸ್ತುವಾರಿ, ಲೆಕ್ಕಪತ್ರಗಳನ್ನು ನೋಡುವುದು ಮನೆಯ ವ್ಯವಸ್ಥೆಗಳನ್ನು ನೋಡಿಕೊಳ್ಳುವುದು ಮುಂತಾದ ಕೆಲಸಗಳನ್ನು ತಾವಾಗಿ ಹಚ್ಚಿಕೊಂಡು ತಮ್ಮ ಉಪಯುಕ್ತತೆಯನ್ನು ಹೆಚ್ಚಿಸಿಕೊಂಡರು. ಎಲ್ಲ ಸಂಪತ್ತು, ಸೌಭಾಗ್ಯ, ಅನುಕೂಲಳಾದ ಮಡದಿ, ದೇವರೆಂದು ಪೂಜಿಸುವ ಜನರಿದ್ದರೂ ರಾಯರಿಗೂ ಅವರ ಹೆಂಡತಿಗೂ ತಾಯಿಗೂ ಒಂದೇ ಚಿಂತೆ: ಮಕ್ಕಳಿಲ್ಲದ ಚಿಂತೆ. ಈ ನಂದನವನದಲ್ಲಿ ಬೆಳದಿಂಗಳು ಮೂಡಲಿಲ್ಲವಲ್ಲ ಎಂಬ ಕೊರತೆ. ತಮ್ಮ ಕೆಲಸ ಕಾರ್ಯಗಳಲ್ಲಿ ಆ ದುಃಖವನ್ನು ರಾಯರು ಅಲ್ಪಸ್ವಲ್ಪ ಮರೆಯಲು ಸಾಧ್ಯವಾಗಿತ್ತು. ಆದರೆ ಅತ್ತೆ ಸೊಸೆಯರಿಬ್ಬರಿಗೂ ಈ ಚಿಂತೆ ಎಡಬಿಡದೆ ಕಾಡುತ್ತಿತ್ತು. ಪೂಜೆ, ವ್ರತ, ಯಾತ್ರೆ, ಸೇವೆಗಳಂತೂ ಒಂದೇ ಸಮನೆ ನಡದೇ ಇದ್ದವು. ಯಾರು ಏನು ಹೇಳಿದರೂ ತಪ್ಪದೇ ಅನನ್ಯಭಕ್ತಿಯಿಂದ ಮಾಡುತ್ತಿದ್ದರು. ವಿದುರಾಶ್ವತ್ಥದ ಯಾತ್ರೆಯಂತೂ ಮೇಲಿಂದ ಮೇಲೆ ಆಗುತ್ತಲೇ ಇತ್ತು. ಘಾಟಿ ಸುಬ್ರಮಣ್ಯನಿಗೆ ಚಿನ್ನದ ನಾಗಪ್ಪನನ್ನು ಕಾಣಿಕೆಯಾಗಿ ಅರ್ಪಿಸಿದ್ದರು. ತಿರುಪತಿ ವೆಂಕಟಾಚಲಪತಿಗೆ ಮುಡುಪು ಕಟ್ಟಿಟ್ಟಿದ್ದಾಯಿತು. ಬಾಲಸುಬ್ರಹ್ಮಣ್ಯನ ಸೇವೆಯಂದು ಊರಿನ ಹುಡುಗರಿಗೆ ಕಡುಬು ಕಜ್ಜಾಯಗಳನ್ನು ಅವರು ಸಾಕು ಸಾಕೆನ್ನುವಷ್ಟು ಹಂಚಿದ್ದಾಯಿತು. ಈ ಎಲ್ಲ ವ್ರತ, ಪೂಜೆ, ಉಪವಾಸಗಳು ಮೀನಾಕ್ಷಮ್ಮನವರನ್ನು ದಿನ ದಿನಕ್ಕೆ ಕೃಶ ಮಾಡುತ್ತ ಅವರ ನಿರಾಶೆಯನ್ನು ಹೆಚ್ಚಿಸುತ್ತಾ ಬಂದವು. “ಇಲ್ಲ ಅತ್ತೆ, ನಾನು ನಿರ್ಭಾಗ್ಯೆ. ನನಗೆ ಮಕ್ಕಳೆಲ್ಲಿಂದ ಆಗಬೇಕು ಹೇಳಿ” ಎಂದನ್ನುವರು “ಹಾಗನ್ನಬಾರದು ಕಣಮ್ಮಾ, ನೀನು ಈ ಮನೆ ಮಂಗಳಗೌರಿ. ನಿನ್ನ ನಡತೆ, ನಿನ್ನ ಪಾತಿವ್ರತ್ಯವೇ ನಿನ್ನ ಕಾಪಾಡುತ್ತವೆ. ಏಳು ಏಳು ಜನ್ಮದ ಪುಣ್ಯ ಮಾಡಿ ನಮ್ಮ ಸೀನೂ ನಿನ್ನ ಕೆ ಹಿಡಿದ ಕಣೇ ತಾಯಿ, ನೊಂದುಕೊಳ್ಳಬೇಡಮ್ಮಾ” ಎಂದು ಗೌರತ್ತೆ ಸಮಾಧಾನ ಹೇಳುವರು. ಗೌರತ್ತೆ ತಮ್ಮ ಸೊಸೆಯ ಮೇಲೆ ಅನುಪಮವಾದ ಪ್ರೇಮಗೌರವಗಳನ್ನು ಇಟ್ಟಿದ್ದರು. ಅವರನ್ನು ನೋಡಿದವರು ತಾಯಿಮಗಳೆಂದು ಭಾವಿಸುತ್ತಿದ್ದರಲ್ಲದೆ ಅತ್ತೆ ಸೊಸೆಯರೆಂದು ಭಾವಿಸಲಾಗುತ್ತಿರಲಿಲ್ಲ. ಈ ಗೌರವಕ್ಕೆ ಮೀನಾಕ್ಷಮ್ಮ ಎಲ್ಲಾ ರೀತಿಯಲ್ಲಿಯೂ ಅರ್ಹತೆಯನ್ನು ಪಡೆದಿದ್ದರು. ಅತ್ತೆಯ ಮೇಲೆ ’ಕೋಗಿಭರ್‍ತಿ’ ಮಾಡುವುದೇ ತಮ್ಮ ಕೆಲಸವೆಂದು ಅವರು ತಿಳಿದಿರಲಿಲ್ಲ. ಅತ್ತೆಯನ್ನು ಅವರ ಪೂಜೆ, ವ್ರತ, ನಮಸ್ಕಾರಾದಿಗಳಿಗೆ ಬಿಟ್ಟು ಮನೆಯ ವಿಶಿಷ್ಟ ಕೆಲಸಕಾರ್ಯಗಳನ್ನು ತಾವೇ ನಿರ್ವಹಿಸಿಕೊಂಡು ಹೋಗುತ್ತಿದ್ದರು. ದಣಿವನ್ನು ತೋರಗೊಡುತ್ತಿರಲಿಲ್ಲ. ಬೇಸರವನ್ನು ಕಾಣಿಸುತ್ತಿರಲಿಲ್ಲ. ಊರಿನ ಜನಕ್ಕೆ ರಾಯರು ಹೇಗೆ ಸಾಕ್ಷಾv ನಾರಾಯಣನಾಗಿದ್ದರೋ ಹಾಗೆ ಮೀನಾಕ್ಷಮ್ಮನವರು ಲಕ್ಷ್ಮಿಯಾಗಿದ್ದರು. ಊರಿನಲ್ಲಿ ಯಾರಿಗೆ ಯಾವ ದುಃಖ ಬಂದರೂ ಮೀನಾಕ್ಷಮ್ಮನವರಲ್ಲಿ ಬಂದು ತೋಡಿಕೊಳ್ಳಬೇಕು. ಗಂಡ-ಹೆಂಡಿರು, ಅತ್ತೆ-ಸೊಸೆಯರು, ಅಣ್ಣ-ತಮ್ಮಂದಿರು ವ್ಯಾಜ್ಯಕಾದರೆ ಅದನ್ನು ಪರಿಹರಿಸುವ ನ್ಯಾಯಸ್ಥಾನವೆಂದರೆ ಮೀನಾಕ್ಷಮ್ಮನವರ ಸನ್ನಿಧಿ.

ಅವರ ಒಂದು ಮಾತು ಎಷ್ಟೋ ಪ್ರಬಲ ಸಮಸ್ಯಗಳನ್ನು ಪರಿಹರಿಸುತ್ತಿತ್ತು. ಊರಿಗೆ ಊರೇ ಗೌರವದಿಂದ ಅವರನ್ನು ’ಅಮ್ಮ’ ಎಂದು ಕರೆಯುತ್ತಿದ್ದಿತು. ಮೀನಾಕ್ಷಮ್ಮ ಸೇವೆಗೆ ನಿಲ್ಲುತ್ತಿದ್ದರು. ಮನೆಯವರು ನಾಚಿ ಹೇಸುತ್ತಿದ್ದ ಶೌಚಶುದ್ಧಿ ಕೆಲಸವನ್ನು ಕೂಡ ಹಿಂದು ಮುಂದು ನೋಡದೆ ಮಾಡಿಬಿಡುತ್ತಿದ್ದರು. ಊರಿನ ಹೆಣ್ಣುಮಕ್ಕಳು ಒಂದು ಒಡವೆ ಮಾಡಿಸಬೇಕಾದರೆ ಒಂದು ವಸ್ತು ಕೊಳ್ಳಬೇಕಾದರೆ ಮೀನಾಕ್ಷಮ್ಮನವರು ಬರಬೇಕು. ಊರಿನ ಜನ, ಜೀವನ ಮೀನಾಕ್ಷಮ್ಮನವರ ಬಾಳಿನ ಹಾಸುಹೊಕ್ಕಾಗಿ ಹೊಂದಿಕೊಂಡಿದ್ದವು. ಗುಣದಲ್ಲಿ ಮೀನಾಕ್ಷಮ್ಮ ಹೇಗೆ ಗಂಡನಿಗೆ ತಕ್ಕ ಹೆಂಡತಿಯಾಗಿದ್ದರೋ ರೂಪದಲ್ಲಿಯೂ ಹಾಗೆಯೇ ಇದ್ದರು. ಸುಂದರವಾದ ಬಟ್ಟಮುಖ. ನಸು ನೀಳವಾದ ಮೂಗು. ವಿಶಾಲವಾದ ಹಣೆ. ಆ ಹಣೆಗೆ ಒಪ್ಪುವಂತೆ ದೊಡ್ಡದಾದ ಅಡ್ಡ ಕುಂಕುಮ. ಕಿವಿಯಲ್ಲಿ ವಜ್ರದ ಓಲೆ, ಮೂಗಿನಲ್ಲಿ ವಜ್ರದ ಮೂಗುಬಟ್ಟುಗಳನ್ನುಳಿದು ಮತ್ತೆ ಯಾವ ಹೆಚ್ಚು ಬೆಲೆಯ ಆಭರಣಗಳನ್ನೂ ಅವರು ಧರಿಸುತ್ತಿರಲಿಲ್ಲ. ಸೌಮ್ಯವಾದ ಸಾಧಾರಣ ಸೀರೆ ಕುಪ್ಪಸಗಳಲ್ಲಿಯೇ ತೃಪ್ತರಾಗುತ್ತಿದ್ದರು. ಯಾರಾದರೂ “ಏನು ತಾಯಿ, ದೇವರು ಯಾವುದಕ್ಕೆ ಕಡಿಮೆ ಮಾಡಿದ್ದಾನೆ? ಒಂದು ದಿವಸ ಒಂದು ಭಾರಿ ಸೀರೆ ಉಡುವುದಿಲ್ಲವಲ್ಲಾ!” ಎಂದು ಪ್ರಶ್ನಿಸಿದರೆ ಹಣೆಯ ಕುಂಕುಮವನ್ನು ತೋರಿ, “ನನ್ನ ಭಾರಿ ಸೀರೆ ಕುಪ್ಪಸವೆಲ್ಲಾ ಇಲ್ಲಿದೆ ನೋಡಿ”ಎಂದು ಹೇಳುತ್ತಿದ್ದರು. ಮಕ್ಕಳಿಲ್ಲದ ಕೊರಗು ಮೀನಾಕ್ಷಮ್ಮನವರನ್ನು ಎಡಬಿಡದೆ ಕಾಡುತ್ತಿತ್ತು. ತಮ್ಮಿಂದ ರಾಯರ ಮನೆಗೆ ಉತ್ತರಾಧಿಕಾರಿಯಿಲ್ಲದಂತಾಯಿತಲ್ಲಾ ಎಂಬ ಕೊರಗು ಹೆಚ್ಚಾಯಿತು. ಒಂದು ದಿನ ಸಂಜೆ ಅತ್ತೆ-ಸೊಸೆಯರಿಬ್ಬರೂ ತೊಟ್ಟಿಯಲ್ಲಿ ಹೂಬತ್ತಿಗಳನ್ನು ಹೊಸೆಯುತ್ತಾ ಹರಟೆ ಕೊಚ್ಚುತ್ತ ಕುಳಿತ್ತಿದ್ದರು. ಮಾತು ಅದು ಇದೂ ಆಗಿ ಕೊನೆಗೆ ಮಾರ್ಕಂಡೇಯನ ಕಥೆಗೆ ಬಂತು. ಅತ್ತೆಯವರು ಮಕ್ಕಳಿಲ್ಲದ ದುಃಖ ಮೃಕಂಡು, ಮರುದ್ವತಿಯರನ್ನು ಹೇಗೆ ಗೋಳಾಡಿಸಿತೆಂಬುದನ್ನು ಪ್ರಸ್ತಾಪಿಸಿದರು. ಮಕ್ಕಳಿಲ್ಲದವರಿಗೆ ಮುಂದಿನ ಲೋಕದಲ್ಲಿ ಗತಿಯೇ ಇರುವುದಿಲ್ಲ ಎಂದು ಬಾಯಿ ತಪ್ಪಿ ನುಡಿದುಬಿಟ್ಟರು. ಆ ಮಾತು ಮೀನಾಕ್ಷಮ್ಮನವರ ಹೃದಯದಲ್ಲಿ ಶಲ್ಯದಂತೆ ನೆಟ್ಟಿತು. ಈ ಮೊದಲೇ ಕೆಲವು ದಿವಸಗಳಿಂದ ತಾವು ಮಾಡುತ್ತಿದ್ದ ಯೋಚನೆಯನ್ನು ಸೂಚಿಸಲು ತಕ್ಕ ಸಮಯವು ದೊರೆಯಿತೆಂದುಕೊಂಡರು. “ಒಂದು ಮಾತು ಅತ್ತೆಮ್ಮನವರೇ, ನೀವು ಹೇಳು ಅಂದರೆ ಹೇಳುತ್ತೇನೆ.” “ಹೇಳೇ ತಾಯಿ, ಅದಕ್ಕೆ ಯಾಕಿಷ್ಠು ಸಂಕೋಚ.” “ಅದನ್ನು ಮಾತು ಅನ್ನುವುದಕ್ಕಿಂತ ಕೋರಿಕೆ ಅನ್ನಬಹುದು. ನಿಮ್ಮಲ್ಲಿ ಒಂದು ಕೋರಿಕೆ ಇದೆ. ನಡೆಸಿಕೊಡುತ್ತೇನೆಂದರೆ ಹೇಳುತ್ತೇನೆ.” “ನಿನಗೆ ನಡೆಸಿಕೊಡುವಂತಹ ಶಕ್ತಿ ನನ್ನಲ್ಲಿ ಏನಿದೆಯೇ ತಾಯೀ, ಊರಿನ ಎಲ್ಲಾರ ಕೋರಿಕೇನೂ ನಡೆಸೋಳು ನೀನು ಇರುವಾಗ. ಆಗಲಿ ಹೇಳು.” “ಖಂಡಿತ ತಾನೆ. ಮಾತು ತೆಗೆದು ಹಾಕಬಾರದು.” “ಇಲ್ಲಾ ಹೇಳು.” “ನೋಡಿ. ನನಗೆ ವಯಸ್ಸೂ ಆಗುತ್ತಾ ಬಂತು.ಇನ್ನೇನು ಮಕ್ಕಳು ಆಗುವ ಸಂಭವ ಕಡಿಮೆ. ನನಗೆ ಆ ಪುಣ್ಯ ಇಲ್ಲ.” “ಯಾರು ಹೇಳೋದುಕ್ಕಾಗುತ್ತಮ್ಮಾ. ನಿನಗೇನು ಮಹಾ ವಯಸ್ಸಾಗಿರೋದು. ವೆಶಾಖಕ್ಕೆ ೩೫ ತುಂಬುತ್ತೆ. ಅದೊಂದು ಮಹಾ ವಯಸ್ಸೇ.” “ನನ್ನಿಂದ ವಂಶ ನಿಲ್ಲಬಾರದು. ಈ ಚಿಂತೆ ಅವರನ್ನೂ ಹೇಗೆ ಕಾಡ್ತಾಯಿದೆ ಅನ್ನೋದು ನಿಮಗೆ ಗೊತ್ತು.” “ಹೌದು ಅದಕ್ಕೇನು ಮಾಡೋದಿಕ್ಕಾಗತ್ತೆ. ನಮಗೆ ಇಷ್ಟೇ ಲಭ್ಯ. ಕರ್ಮಕ್ಕೆ ಯಾರು ಹೊಣೆ ಹೇಳು. ಮುಖ್ಯ, ದೇವರು ಕಣ್ಣು ಬಿಟ್ಟು ನೋಡಬೇಕು. ನೀನು ಈ ಚಿಂತೆ ಬಿಡು ಮೀನಾ.” “ನನ್ನ ಕೋರಿಕೆ ಇಷ್ಟೇ ಅತ್ತೆಮ್ಮನವರೇ. ನೀವು – ಹೇಗಾದರೂ ಮಾಡಿ ಅವರನ್ನು ಒಪ್ಪಿಸಿ, ಬೇರೆ ಮದುವೆ ಮಾಡಬೇಕು.ಇಷ್ಟು ನನಗೋಸ್ಕರ ನಡೆಸಿಕೊಡಬೇಕು.” “ಹಾ! ಬೇರೆ ಮದುವೆಯೇ? ಚೆನ್ನಾಯ್ತು” ಎಂದರು. ಮೀನಾಕ್ಷಮ್ಮನವರು ಈ ಕೋರಿಕೆಯನ್ನು ಮಾಡುವರೆಂದು ಗೌರಮ್ಮನವರು ಕನಸಿನಲ್ಲಿಯೂ ಎಣಿಸಿರಲ್ಲಿಲ್ಲ. ಕೋರಿಕೆ ಕೇಳಿ ಮುದುಕಿಯ ಕಣ್ಣಲ್ಲಿ ನೀರೋರಿತು. “ಮೀನಾ, ನೀನು ಹೆಣ್ಣಲ್ಲ ಕಣೇ ತಾಯಿ. ಸಾಕ್ಷಾv ದೇವತೆ ನಮ್ಮ ಪುಣ್ಯ ದೊಡ್ಡದು. ನಮ್ಮ ಮನೆ ಸೇರಿದೆ. ಏನು ಮನಸ್ಸು ನಿನ್ನದು ಗಂಡನ ಶ್ರೇಯಸ್ಸಿಗೋಸ್ಕರ ನಿನ್ನ ಶ್ರೇಯಸ್ಸನ್ನು ಮರೆತುಬಿಡುತ್ತೀಯಲ್ಲೇ ತಾಯಿ.” “ಅಮ್ಮಾ, ಅವರ ಶ್ರೇಯಸ್ಸನ್ನು ಬಿಟ್ಟು ಬೇರೆ ಶ್ರೇಯಸ್ಸು ನನಗೆ ಯಾವದಿದೆ. ಇಷ್ಟು ನೀವು ನಡೆಸಿಕೊಡಬೇಕು.” “ಉಂಟೇ ಮೀನಾ. ಈ ಮನೆಗೆ ಯಜಮಾನತಿ ನೀನು. ನನಗೆ ಇರೋದೂ ಎರಡು ಕಣ್ಣು. ಒಂದು ಸೀನು, ಇನ್ನೊಂದು ನೀನು. ಮೂರನೆಯದನ್ನು ಎಲ್ಲಿಂದತರಲಿ. ಸೀನುವಾದರೂ ಇದಕ್ಕೆ ಒಪ್ಪುತ್ತಾನೆಯೇ?” “ಅವರನ್ನು ಒಪ್ಪಿಸುವ ಭಾರ ನಿನ್ನದು.” “ಯೋಚನೆ ಮಾಡು ಮೀನಾ. ದುಡುಕಬಾರದು.” “ಇನ್ನೇನು ಯೋಚನೆಗೆ ಕಾರಣವಿಲ್ಲ ಅತ್ತೆಮ್ಮನವರೇ. ನೀವು ಮದುವೆಯೊಂದು ಮಾಡಿಸಿ. ಮಿಕ್ಕದ್ದನ್ನು ನಾನು ನೋಡಿಕೊಳ್ಳುತ್ತೇನೆ ಬರುವವಳು ನನ್ನ ತಂಗಿಯಾಗುತ್ತಾಳೆಯೇ ವಿನಾ ಸವತಿಯಾಗಲ್ಲ. ಆ ಪುಣ್ಯಾತ್ಗಿತ್ತಿಯ ಧರ್ಮದಿಂದಲಾದರೂ ಮನೆಗೊಬ್ಬ ಮಗನಾದರೆ ಸಾಕು. ಗೌರತ್ತೆಗೆ ಮಾತು ತೋರದಾಯಿತು. ಹೂಬತ್ತಿಯ ಬುಟ್ಟಿಯನ್ನು ತೆಗೆದುಕೊಂಡು ಅಡಿಗೆಯ ಮನೆಗೆ ಹೊರಟುಹೋದರು. ಮೀನಾಕ್ಷಮ್ಮ ನಿಶ್ಚಿಂತೆಯ ಶಾಂತಿಯನ್ನು ತಾಳಿದರು.
*****
ಮುಂದುವರೆಯುವುದು

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ