ಲೋಕ ಕಾಮದ ಒಲೆ

ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ

ಲೋಕ ಕಾಮವೆಂಬ ನೀರೊಲೆಯೊಳಗೆ
ಋಜತ್ವವೆಂಬ ಕಟ್ಟಿಗೆ ಉರಿಯುತ್ತದೆ
ಋಜತ್ವ ಹುಟ್ಟುವುದೆ ನೀರೊಲೆಯ ಬೂದಿಯಲ್ಲಿ
ನೀರೊಲೆಯಲ್ಲೇ ಅದರ ಶುಭ್ರತೆಯ ಹುಟ್ಟು

ಒಲೆಗೆ ಸಗಣಿ ಹೊರುವ ಜನ ಶ್ರೀಮಂತರು
ಒಲೆಯ ಜ್ವಾಲೆ ಹೊತ್ತಿದಾಗ ಧಗಧಗಿಸುತ್ತದೆ
ಶ್ರೀಮಂತ ಹೃದಯದಲ್ಲಿ ಹೊತ್ತಿ ದುರಾಸೆ, ದೇವಸ್ಥುತಿ
ಆಗ ನೀರೊಲೆ ಉರಿದು ಬೆಚ್ಚಗಿನ ಸುಖ

ಈ ಲೋಕ ಕಾಮದ ಹಾಗೆ ಜೀವ ಕಾಮ
ನೂರು ದುರಾಶಾಗ್ರಸ್ಥ ಬಾಯಿಂದ ಹಾತೊರೆದು ಕರೆಯುತ್ತವೆ
ಈ ಚಿನ್ನ ಕೂಡಾ ಕೊಳೆತು ನಾರುವ ಸಗಣಿ
ಆದರೇನಂತೆ? ಸಗಣಿಯಂತೆ ಇದು ಬೆಂಕಿ ಉರಿಸುತ್ತದೆ

ಸದಾ ಬಚ್ಚಲಲ್ಲೇ ಬಿದ್ದು ನಿರ್ಮಲತೆಯನ್ನೆ ಕಾಣದವನಿಗೆ
ಸುಗಂಧವೇ ವಾಕರಿಕೆ ತರಿಸುತ್ತದೆ
*****