ಹೊಸವರುಷ

ಚೈತ್ರನ ತನಿಸೆಳಕಿನ ಸೋಂಕಿಗೆ ಮಧುಮಯವಾಗಿದೆ ಗಾಳಿ.
ಥಳಥಳಿಸಿವೆ ಗಿಡದೆಲೆ ಹುಲ್ಲೂ ಹಸುರಿನ ಕಾಂತಿಯಲಿ.
ಯಶವೆತ್ತಿಹ ದೇವತೆ ಈ ಹೊಸ ಹಸುರಿನ ರೂಪದಲಿ,
‘ಅವಿರ್’ ಹೆಸರಿನಲಿ.

“ಆವಿರ್‍ಭೈಃ ನಮೋ ದೇವತಾ….
ತಸ್ಯಾ ರೂಪೇನೇಮೇ ಹರಿತಾ ಹರಿತಾಸ್ತ್ರಜಃ”
ಈ ಪಸುರಿನ ಪಚ್ಚೆಯ ದೇವತೆಗೆ
ವಂದನೆ ವರ್‍ಷಾರಂಭದಲಿ.

ಚಳಿಗಾಲಕೊಣಗಿ ಬರಡಾದ ಗಿಡಗಂಟೆಯಲಿ
ಹುಯ್ಯಲಿಟ್ಟಿತು ಗಾಳಿ ಈಸು ದಿವಸ;
ಜೂಜುಕುದುರೆಯನೇರಿ ಓಡಿತು ಅನಿರ್‍ಬಂಧ
ಹೊಲದುದ್ದ ನಲದಗಲ ಅ ದಿಗಂತ.

ಇಂದು ವೈಶಾಖದೀ ಗಂಗೆ ತಿಳಿನೀರಿನಲಿ
ನಸುಕಿನಿಂದಲು ಎಸೆವ ನೆಳಲು-ಬೆಳಕು
ಪಾರದರ್‍ಶಕ ಜಲವ ತೂರಿ ಹೋಗುವ ದೋಣಿ
ಚಿಮುಕಿಸುವ ಮಿಂಚು-ಮಿಣುಕು.

ಆಚೆ ದಂಡೆಗೆ ವಿವಿಧ ಬಣ್ಣದಾಕಳ ಹಿಂಡು
ಅತ್ತಿತ್ತ ಅಲೆದಾಡುತಿರುವುವೆಳಹುಲ್ಲು ಹೊಸ ಚಿಗುರು ಕಂಡು.

ಗಂಡು ಹೆಣ್ಣಿಗು ಹೀಗೆ ಬಣ್ಣ ತಿರುಗುವುದುಂಟೆ?
ಕೆಲವರೆದೆ, ಬಾಹು ಕುತ್ತಿಗೆ, ಕಣ್ಣು-ಗೊಂಬೆಯಲಿ
ಕಂಡಿರುವನೊಂದೊಂದು ಮಿಂಚುಗಿರಣ;
ಅದರಿಂದ ಬೆಳಕು ಬೀಳದು ದಾರಿಗೊಂದಿನಿತು ಬಾರದೋ ಬೆಡಗು ಬಣ್ಣ.
ಬಣ್ಣದಲೆಗಳಲವರ ಮೈ ತುಂಬಿ ತುಳುಕಿಸುತ
ವರ್‍ತಿಸಲಿ ನವಿಲಿನೊಲು ತುಂಬಿ ಕಣ್ಣ.

ಹೊಳೆವ ಕನ್ನಡಿಯಂತೆ ಅರಳಿದಾಕಾಶದಲಿ
ಪೃಥ್ವಿ ಪ್ರತಿಬಿಂಬ ಮೂಡಿ,
ನಗರ ಮಧ್ಯದ ಗಗನ ಮಹಲು ಮಟ್ಟಲನೇರಿ
ಬಂದನದೊ ಚಂದ್ರ ನೋಡಿ.
ಆಗಸದ ಅಂಗಳದಿ ಚಿಕ್ಕೆ ತೂಗಾಡುತಿವೆ
ಮಿಂಚು ಹುಳ ತೊಳಗುತಿರುವಂಥ ಮೋಡಿ.

ಇಂದು ಹೊಸದಿನದಂದು
ಹೊತ್ತಿಸಿಹನಲ್ಲಿ ಅದೊ, ಆವಿರ್ ದೇವತೆ
ಪಟ್ಟಣದ ಬೋಳು ಮರಗಳ ಮೇಲು
ಹಸುರು ಮುರಿಯುವ ಲಕ್ಷ ಹೊನ್ನ ಹಣತೆ.
ಅವನು ಮುಟ್ಟಿದುದೆ ತಡ, ಬಹುರೂಪಿಣೀ ನಗರ
ಒಮ್ಮೆಲೇ ತಾಯಿಯಾಗಿ,
ಹಸಿರು ತೊಂಗಲ ನಡುವೆ ತಿರುಗುವಳು ಹಾಯಾಗಿ ಜೀವ ರಮಿಸಿ
ಆ ದೇವತೆಯೆ ಎನ್ನ ಭಾರವಾದೆದೆಯಿಂದ
ಹಿರಿದುಕೊಂಡನು ಚುಚ್ಚಿದೊಂದೊಂದೆ ಚೂಪಾದ ಗುಂಡು ಸೂಜಿ”
*****
ಶ್ರೀ ದಿನೇಶದಾಸ ಅವರ ಬಂಗಾಲಿ ಕವಿತೆ ‘ನವವರ್‍ಷ’