ರಾಯರ ಜೀವನವೇ ಬದಲಾಯಿಸಿಬಿಟ್ಟಿತು. ಏನೋ ಒಂದು ಮಂಕು ಕವಿದಂತಾಯಿತು. ರಾಮಾಯಣವನ್ನು ಹಿಡಿದು ಕುಳಿತರೆ ಅದೇ ಆಗುತ್ತಿತ್ತು. ಶನಿಕೆ ಪಿಕಾಸಿ ಹಿಡಿದು ತೋಟದ ಕೆಲಸಕ್ಕೆ ನಿಂತರೆ ಅದೇ, ಸಂಧ್ಯಾವಂದನೆಗೆ ಕುಳಿತರೆ ಅದೆ ಆಗುತ್ತಿತ್ತು. ಒಂದು ನೂರು ಸಲ ಮಾತನಾಡಿಸಿದರೆ ಒಂದು ಸಲ ಉತ್ತರ ಕೊಡುತ್ತಿದ್ದರು. ಅಸಂಬದ್ಧವಾದ ಉತ್ತರಗಳೇ ಹೆಚ್ಚು.
ರಾಯರ ಸ್ಥಿತಿಯನ್ನು ನೋಡಿ ಗೆಳೆಯರಿಬ್ಬರೂ ಬಹಳ ಮರುಗಿದರು. ಏನು ಮಾಡುವುದಕ್ಕೂ ದಿಕ್ಕು ತೋಚದಂತಾಯಿತು. ಊರು ಬಿಟ್ಟು ನಾಲ್ಕು ದಿವಸ ದೇಶ ಸುತ್ತಿ ಬಂದರೆ ಕೊಂಚ ಮರೆತಂತೆ ಆಗಬಹುದು ಎಂದು ರಾಯರಿಗೆ ಹೇಳಿ ನೋಡಿದರು. ತಾವು ಬೆಂಗಳೂರು ಬಿಟ್ಟು ಕದಲುವುದಿಲ್ಲವೆಂದು ಖಂಡಿತವಾಗಿ ಹೇಳಿಬಿಟ್ಟರು. ಹೊರಗೆ ಹೋಗಿ ಬಂದರೆ ಹಿಂದಣ ರೂಢಿಯಂತೆ ‘ಮೀನಾ’ ಎಂದು ಕೂಗುವರು. ಸಾವಿತ್ರಮ್ಮ ಬಂದು ಎದುರು ನಿಂತರೆ ತಮ್ಮಷ್ಟಕ್ಕೆ ತಾವೇ ಮಾತನಾಡಿಕೊಂಡು ತಲೆತಗ್ಗಿಸಿಕೊಂಡು ಕೋಣೆಯೊಳಗೆ ಹೋಗಿಬಿಡುತ್ತಿದ್ದರು.
ಮೀನಾಕ್ಷಮ್ಮ ತಮ್ಮನ್ನು ಬಿಟ್ಟು ಹೊರಟುಹೋದರೆಂಬುದು ರಾಯರ ಮನಸ್ಸಿಗೆ ಬರಲೊಲ್ಲದು. ಬೆಳಿಗ್ಗೆಯಿಂದ ಸಂಜೆಯವರೆವಿಗೂ ಮಿನಾಕ್ಷಮ್ಮನವರು ಮಾಡುತ್ತಿದ್ದುದು ಕಂಠಪಾಠ ಮಾಡಿದಂತಿತ್ತು. ಕೋಣೆಯಲ್ಲಿಯೇ ಕುಳಿತು ಗಡಿಯಾರವನ್ನು ನೋಡುತ್ತಾ
‘ಮೀನಾ ಈಗ ತುಳಸಿಕಟ್ಟೆಗೆ ಪ್ರದಕ್ಷಿಣೆ ನಮಸ್ಕಾರ ಹಾಕುತ್ತಿರಬಹುದು.’
‘ಮೀನಾ ಈಗ ರಾಮೂ ಬರುತ್ತಾನೇಂತ ತಿಂಡಿ ಮಾಡುತ್ತಿರಬಹುದು.’
‘ಮೀನಾ ಈಗ ಜಯ ಪದ್ಮರ ಕೆಯಲ್ಲಿ ಹಾಡೂ ಹಸೆ ಹೇಳಿಸುತ್ತ ಹೂವು ಪೋಣಿಸುತ್ತಿರಬಹುದು’
ಎಂದು ಯೋಚಿಸಿ ‘ಮೀನಾ’ ಎಂದುಕೊಂಡು ತುಳಿಸೀಕಟ್ಟೆಯ ಬಳಿಗೋ ಅಡಿಗೆಯ ಮನೆಗೋ ಓಡುವರು. ಮೀನಾ ಇರುತ್ತಿರಲಿಲ್ಲ. ನಿರಾಶೆಯಿಂದ ತಮ್ಮ ಕೋಣೆಯನ್ನು ಸೇರಿ ದುಃಖದಲ್ಲಿ ಮೆಮರೆಯುತ್ತಿದ್ದರು. ನಿಂತರೆ, ಕುಳಿತರೆ ಎದುರಿಗೆ ಮೀನಾಕ್ಷಮ್ಮ ಬಂದು ನಿಂತಂತಾಗುತ್ತಿತ್ತು. ಅವರ ಮೃದು ನಗೆ, ಸಹಜ ಗಾಂಭೀರ್ಯ, ಉದಾತ್ತ ನಡವಳಿಕೆಗಳು ಕಣ್ಣಿಗೆ ಕಟ್ಟಿದಂತಾಗುತ್ತಿದ್ದವು. ಸಾವಿತ್ರಿಯನ್ನು ತಂದು ತಮಗೆ ಮದುವೆ ಮಾಡಿದುದು- ತಮ್ಮ ಕಿವಿಯ ಆಭರಣವನ್ನು ತೆಗೆದು ಸಾವಿತ್ರಿಗೆ ಇಡುತ್ತಿದ್ದುದು-ಸಾವಿತ್ರಿಗೆ ನೀರೆರೆದು ಹೆರಳುಹಾಕಿ ಅಲಂಕರಿಸಿ ತಮ್ಮ ಬಳಿಗೆ ಕಳುಹಿಸುತ್ತಿದ್ದುದು- ರಾಮುವಿನ ಎಲ್ಲ ರೋಷದೋಷಗಳನ್ನೂ ಸಹಿಸುತ್ತಿದ್ದುದು-ಮನೆಯ ಆಳುಕಾಳುಗಳು, ಅಶ್ರಿತರು ಎಲ್ಲರ ವಿಚಾರದಲ್ಲಿಯೂ ಅವರು ತೋರುತ್ತಿದ್ದ ಮರುಕ. ರಾಯರ ಸ್ಮೃತಿಯನ್ನು ಕೆದಕುತ್ತಿದ್ದವು. ನಿದ್ರಿಸುತ್ತಿದ್ದಂತೆ ಗಾಬರಿಯಾಗಿ ‘ಮೀನಾ-ಮೀನಾ’ ಎಂದು ಎದ್ದು ಮನೆಯಲ್ಲೆಲ್ಲಾ ಓಡಾಡುವರು. ಒಂದು ದಿವಸ ಹೊಸಲು ಎಡವಿ ಬಿದ್ದು ಹಣೆಯನ್ನು ಒಡೆದು ಕೊಂಡಿದ್ದರು.
ರಾಯರ ಸ್ಥಿತಿ ಮನೆಯಲ್ಲಿ ಎಲ್ಲರಿಗೂ ತುಂಬ ಆತಂಕಕ್ಕೆ ಕಾರಣವಾಯಿತು. ಶಾಮಣ್ಣನವರು
“ಪತಿವ್ರತೆಯರ ಕಥೆ ಹೇಳುತ್ತಾರೆ. ನಮ್ಮ ರಾಯರಂತಹ ಸತೀವ್ರತರ ಕಥೆಯೇತಕ್ಕೆ ಹೇಳುವುದಿಲ್ಲವೋ?”
ಎಂದು ಭೀಮರಾಯರನ್ನೊಮ್ಮೆ ಕೇಳಿದರು. ಭೀಮರಾಯರು ಅದಕ್ಕೆ ಉತ್ತರವಾಗಿ
“ಆ ಕಾಲದಲ್ಲಿ ರಾಯರಂತಹ ಸತೀವ್ರತರು ಇರಲಿಲ್ಲಾಂತ ಕಾಣುತ್ತದೆ” ಎಂದು ಮರುತ್ತರ ಕೊಟ್ಟಿದ್ದರು.
ರಾಯರಿಗೆ ಮನೋರೋಗವು ಪ್ರಬಲವಾಗಿ ಹಿಡಿದು ಬಿಟ್ಟಿತು. ಅವರಿಗೆ ಮೀನಾಕ್ಷಮ್ಮನವರ ಹೆಸರು, ಚರಿತ್ರೆ, ರೂಪಗಳನ್ನು ಬಿಟ್ಟು ಬೇರೊಂದೂ ಬೇಡವಾದವು. ಯಾರಾದರೂ ಮೀನಾಕ್ಷಮ್ಮನವರ ಸುದ್ದಿ ಹೇಳುತ್ತಿದ್ದರೆ ಕೇಳುವರು. ಬೇರೆ ವಿಷಯ ತೆಗೆದರೆ ಆಮೆಯಂತೆ ತಮ್ಮ ಚಿಪ್ಪಿನ ಒಳಗೆ ಸೇರಿಕೊಂಡು ಬಿಡುತ್ತಿದ್ದರು. ಗೃಹಕೃತ್ಯದಾಡಳಿತವೆಲ್ಲಾ ರಾಮಚಂದ್ರನೇ ನಿರ್ವಹಿಸಬೇಕಾಯಿತು. ಎಂದಿನಂತೆ ಶಾಮಣ್ಣನವರೇ ಕೆಲಸಕಾರ್ಯಗಳನ್ನು ನೋಡಿಕೊಂಡು ಹೋಗುತ್ತಿದ್ದರು. ಹಣಕಾಸಿನ ಆಡಳಿತ ಮಾತ್ರ ರಾಮಚಂದ್ರನ ಪಾಲಿಗೆ ಬಂತು.
ಮೀನಾಕ್ಷಮ್ಮನವರು ತೀರಿಕೊಂಡ ಮೇಲೆ ಸಾವಿತ್ರಮ್ಮ ಸಾಮಾನ್ಯವಾಗಿ ಯಾವದಕ್ಕೂ ಬರುತ್ತಲೇ ಇರಲಿಲ್ಲ. ಗಂಡನ ಸ್ಥಿತಿಯೂ ಹೀಗೇ ವಿಪರೀತಕ್ಕಿಟ್ಟುಕೊಂಡ ಮೇಲಂತೂ ಗಂಡನ ಸೇವೆ, ಪೂಜೆಪುರಸ್ಕಾರಗಳು ಬಿಟ್ಟು ಅವಳಿಗೆ ಬೇರೆಯೇನೂ ಬೇಕಾಗುತ್ತಿರಲಿಲ್ಲ. ಮೊದಲು ಅಡಿಗೆಯ ಕೆಲಸವನ್ನೆಲ್ಲಾ ತಾನೇ ನೋಡಿಕೊಂಡು ಹೋಗುತ್ತಿದ್ದಳು. ಈಗ ಅದು ಶಾಂತಾ, ಜಯ, ಪದ್ಮರನ್ನು ಸೇರಿತು. ಅವರು ತಮ್ಮಲ್ಲಿಯೇ ಒಂದು ಒಪ್ಪಂದಮಾಡಿಕೊಂಡು ಒಂದೊಂದು ದಿವಸದ ಅಡಿಗೆ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದರು. ರಾಮಚಂದ್ರನ ಕೆಗೆ ಅಧಿಕಾರ ಬಂದದ್ದು ‘ಮಿಣಚಂಭಟ್ಟನ ಪ್ರಾಣಕ್ಕೆ ಬಂತು’ ಎನ್ನುವಂತೆ ಆಗುತ್ತಾ ಬಂತು. ಹಾಲು ತೆಗೆದುಕೊಳ್ಳುವುದು ಕಡಿಮೆಯಾಯಿತು. ಪ್ರತಿದಿನವೂ ರಾತ್ರಿ ಲಕ್ಷ್ಮಣನಿಗೂ ವೆಂಕಟೇಶನಿಗೂ ಕುಡಿಯುವುದಕ್ಕೆ ಹಾಲು ಕೊಡುವ ಪದ್ಧತಿಯಿತ್ತು. ಅದು ನಿಂತುಹೋಯಿತು. ತರಕಾರಿ ಒಪ್ಪೋತ್ತೇ ಸಾಕೆಂದು ಹೊಸ ಯಜಮಾನರು ಆಜ್ಞೆ ಮಾಡಿಬಿಟ್ಟರು. ದೀಪದ ಖರ್ಚು ಬಹಳವಾಗುತ್ತಿದೆಯೆಂದು ರಾತ್ರಿ ೧೦ ಘಂಟೆಯಾಗುತ್ತಲೂ ಮೇನ್ ಸ್ವಿಚ್ (ಒಚಿiಟಿ sತಿiಣಛಿh) ಆರಿಸಿಬಿಡುವುದೂ ಆರಂಭವಾಯಿತು. ರಾತ್ರಿ ಲಹರಿ ಬಂದಾಗ ಲಕ್ಷ್ಮಣ ಅಭ್ಯಾಸಮಾಡಿಕೊಳ್ಳುವ ಪದ್ಧತಿಯಿತ್ತು. ಗೋಪಾಲ ಸಾಮಾನ್ಯವಾಗಿ ತನ್ನ ಬರವಣಿಗೆಯನ್ನೆಲ್ಲಾ ರಾತ್ರಿಯೇ ಮಾಡುತ್ತಿದ್ದನು. ಅವರಿಬ್ಬರೂ ಪ್ರಭಾಕರ ಕಂದೀಲುಗಳನ್ನು ತಂದಿಟ್ಟುಕೊಂಡು ತಮ್ಮ ಅಭ್ಯಾಸಗಳನ್ನು ಮುಂದೆ ಸಾಗಿಸಬೇಕಾಯಿತು.
ಒಂದು ದಿವಸ ರಾಮಚಂದ್ರನ ಕೃಪಾಕಟಾಕ್ಷ ರಾಯರ ಮನೆಗೆ ವಾರಕ್ಕೂ ಭಿಕ್ಷಕ್ಕೂ ಬರುತ್ತಿದ್ದ ಹುಡುಗರ ಮೇಲೆ ಬಿತ್ತು. ಹುಡುಗರೂ ತನ್ನ ಪಂಕ್ತಿಯಲ್ಲೇ ಊಟಕ್ಕೆ ಕುಳಿತಿದ್ದರು. ಅವತ್ತು ಪದ್ಮನ ಅಡಿಗೆ ಸರದಿ. ಶಾಂತಾ, ಜಯ ಇಬ್ಬರು ಬಡಿಸುತ್ತಿದ್ದರು.
‘ಈ ಭಿಕಾರಿಗಳಿಗೆಲ್ಲಾ ನನ್ನ ಹೆಂಡತಿ ಅಡಿಗೆ ಮಾಡಿ ಹಾಕುವದೆಂದರೇನು?”
ಎನ್ನುವ ಯೋಚನೆ ಹೊಳೆಯಿತು. ಊಟ ಮುಗಿಸುವುದರೊಳಗಾಗಿಯೇ ಅವಸರ.
“ನಾಳೆಯಿಂದ ನೀವು ಯಾರು ಇಲ್ಲಿ ಊಟಕ್ಕೆ ಬರಬೇಡಿರಯ್ಯ. ನಮ್ಮಲ್ಲಿ ಅನುಕೂಲವಾಗುವುದಿಲ್ಲ.”
ಎಂದು ಹೇಳಿಬಿಟ್ಟನು. ಹುಡುಗರು ಎದ್ದು ಕೆತೊಳೆದುಕೊಂಡು ಹೊರಟು ಹೋದರು. ಮತ್ತೆ ರಾಯರ ಮನೆಯ ಬಳಿ ಸುಳಿಯಲಿಲ್ಲ. ಸಾವಿತ್ರಮ್ಮನವರು ಸುದ್ದಿಕೇಳಿ ಬಹಳ ದುಃಖಪಟ್ಟರು. ಮಗನು ಸಮಾಧಾನವಾಗಿ ಎಲೆಯಡಿಕೆ ಹಾಕಿಕೊಳ್ಳುತ್ತಿದ್ದಾಗ ಅವನ ಬಳಿ ಬಂದು
“ಇದೇನಪ್ಪಾ ರಾಮಣ್ಣಾ, ಹೀಗೆ ಮಾಡಿಬಿಟ್ಟೆ?”
“ಏನು ಮಾಡಿದೆನಮ್ಮ?”
“ಆ ಬಡಹುಡುಗರನ್ನೆಲ್ಲಾ ಅಟ್ಟಿಬಿಟ್ಟೆಯಂತಲ್ಲಾ?”
“ಮನೆಯಲ್ಲಿ ‘ಅಣ್ಣಾವಂಟಿಗಾರರ ಗುಂಪು ಹೆಚ್ಚಾಯಿತು. ಇದರಿಂದ ಮನೆಗೆ ಖರ್ಚು ತಪ್ಪಲಿಲ್ಲ, ಅವರಿಗೆ ವಿದ್ಯೆ ಬರಲಿಲ್ಲ, ಸ್ವಲ್ಪ ಕಷ್ಟಪಟ್ಟು ಸ್ವಾವಲಂಬನ ಕಲಿತುಕೊಳ್ಳಲಿ ಎಂದು ಹಾಗೆ ಹೇಳಿದೆನಮ್ಮ. ಅವರ ಒಳ್ಳೆಯದಕ್ಕೆ ನಾನು ಹಾಗೆ ಮಾಡಿದ್ದು.”
“ಖರ್ಚುಯೇನು ಬಂತಪ್ಪಾ, ಹತ್ತುಜನ ಊಟಮಾಡುವ ಮನೆಯಲ್ಲಿ ನಾಲ್ಕು ಜನ ಓದೋ ಹುಡುಗರು ಊಟಮಾಡಿದರೆ ಆಗುತ್ತಿದ್ದುದೇನು ನಷ್ಟ? ದೇವರು ಯಾವದಕ್ಕೆ ಕಡಿಮೆ ಮಾಡಿದ್ದಾನೆ, ಅವರ ಮನೆ ಯಾವಾಗಲೂ ಅನ್ನದಾನಕ್ಕೆ ಪ್ರಸಿದ್ಧವಾದದ್ದು, ನೀನು ಹೀಗೆ ಮಾಡುವುದು ಚೆನ್ನಲ್ಲಪ್ಪ.”
“ಹಾಗಾದರೆ ನೀನೇ ನಡೆಸಮ್ಮಾ- ಇದೆಲ್ಲಾ ಶಾಮಣ್ಣ ಲಕ್ಷ್ಮಣರ ಪಿತೂರಿಯೆಂದು ಕಾಣುತ್ತದೆ”
ಎಂದು ತಾಯಿಯ ಮುಂದೆ ಬೀಗದ ಗೊಂಚಲನ್ನು ಎಸೆದನು. ಸಾವಿತ್ರಮ್ಮ ಬೀಗದ ಗೊಂಚಲನ್ನು ಅವನ ಮೇಜಿನ ಮೇಲಿಟ್ಟು
“ರಾಮೂ, ಇದೇ ಮೊದಲು ಇದೇ ಕೊನೆ ನಿನಗೆ ಇನ್ನು ಮೇಲೆ ಏನೂ ಹೇಳಲ್ಲಪ್ಪಾ. ನಾನು ಮಾಡಿದ್ದು ತಪ್ಪಾಯಿತು ಕ್ಷಮಿಸು. ಹೇಗೂ ನೀನು ಮನೆ ಯಜಮಾನ, ನಿನಗೆ ಹೇಗೆ ಸಂತೋಷವೋ ಹಾಗೇ ಮಾಡು”
ಎಂದು ಹೇಳಿ ಅಲ್ಲಿ ನಿಲ್ಲದೆ ಹೊರಟು ಹೋದಳು. ರಾಮು ತಾಯಿಯ ಮೇಲಿನ ಕೋಪವನ್ನು ಹೆಂಡತಿಯ ಮೇಲೆ ತೀರಿಸಿಕೊಂಡು, ಪದ್ಮನನ್ನು ಹಿಡಿದು ಚೆನ್ನಾಗಿ ಬಡಿದು, ಅವಸವಸರವಾಗಿ ಅಂಗಿ ರುಮಾಲುಗಳನ್ನು ಧರಿಸಿ ಕೋರ್ಟಿಗೆ ನಡೆದನು.
ರಾಮಚಂದ್ರನ ಯಜಮಾನಿಕೆಯ ಶಖೆ ಮನೆಯಲ್ಲಿ ಎಲ್ಲರಿಗೂ ತಗುಲತೊಡಗಿತು. ಹಳೆಯ ತಂಬೂರಿ, ಅಗ್ಗಕ್ಕೆ ಸಿಕ್ಕಿತೆಂದು ಇಪ್ಪತ್ತು ರೂಪಾಯಿಗಳನ್ನಿತ್ತು ಶಾಮಣ್ಣನವರು ಒಂದು ತಂಬೂರಿಯನ್ನು ಕೊಂಡು ತಂದಿದ್ದರು. ಅದಕ್ಕೆ ಕುದುರೆ, ತಂತಿಗಳಿರಲಿಲ್ಲ. ಅದಕ್ಕೂ ಖರ್ಚು ಮಾಡಿ ತಂಬೂರಿಯನ್ನು ಸಿದ್ಧಮಾಡುತ್ತಿದ್ದರು. ಶಾಮಣ್ಣನವರ ಈ ಹೊಸ ವ್ಯಾಪಾರವನ್ನು ನೋಡಿ ವೆಂಕಟೇಶ
“ಇದೇನು ಶಾಮಣ್ಣನವರೇ, ತಂಬೂರಿ ತಂದುಕೊಂಡಿದ್ದೀರಲ್ಲಾ ಕುಮಾರವ್ಯಾಸನನ್ನು ಜೀರ್ಣೋದ್ಧಾರ ಮಾಡುತ್ತೀರೋ?”
“ನನ್ನೇ ಜೀರ್ಣೋದ್ಧಾರ ಮಾಡಿಕೊಳ್ಳುತ್ತೇನಪ್ಪಾ. ಈ ಹೊಸ ಆಡಳಿತದಲ್ಲಿ ನನಗೂ ಇವತ್ತಲ್ಲ ನಾಳೆ ಅಪ್ಪಣೆ ಚೀಟಿ ಸಿಗುತ್ತೇಂತ ಗೊತ್ತು.”
“ಎಲ್ಲಾದರೂ ಉಂಟೆ? ನಿಮ್ಮನ್ನ…ಇಷ್ಟುದಿವಸ ರಾಯರ ಮನೆಗೆ ಜೀವ ತೇದಿದ್ದೀರಿ…”
“ವೆಂಕಟೇಶೂ… ನಾನೊಬ್ಬನೇ ಅಲ್ಲ. ನೀನೂ ಸೇರುತ್ತೀ. ನಿನ್ನ ಜತೆಗೆ ಲಕ್ಷ್ಮಣನೂ ಸೇರುತ್ತಾನೆ. ಎಲ್ಲಾ ಸ್ವಲ್ಪ ಈಗಿನಿಂದಲೇ ಜೋಕೆಯಿಂದಿರಿ.”
“ಹಾಗೇ ಆಗಲಿ.”
“ಒಂದು ಮಾತು. ನೀನು ಮುಂದಕ್ಕೆ ಏನು ಯೋಚನೆ ಮಾಡಿಕೊಂಡಿದ್ದೀ?”
“ಯಾವದಾದರೂ ಲೈಫ್ ಇಷ್ಯೂರೆನ್ಸ್ (ಐiಜಿe Iಟಿsuಡಿಚಿಟಿಛಿe) ಕಂಪೆನಿಗೆ ಏಜಂಟಾಗಿ ಕೆಲಸ ಮಾಡೋಣಾಂತಿದ್ದೀನಿ. ಸದ್ಯಕ್ಕೆ ಸರ್ಕಾರದ ವಿಮಾ ಕಂಪೆನಿಗೆ ಬರೆದುಕೊಂಡಿದ್ದೇನೆ. ಭೀಮರಾಯರೂ ಸುಂದರರಾಯರೂ ಸಹಾಯ ಮಾಡುತ್ತೇವೆ ಎಂದು ಹೇಳಿದ್ದಾರೆ.”
“ಏನಾದರೂ ಮಾಡಪ್ಪಾ. ನಿನ್ನ ಕಾಲಮೇಲೆ ನೀನು ನಿಂತುಕೊಳ್ಳುವ ಏರ್ಪಾಟು ಮಾಡಿಕೋ. ಕಾಲ ಹೇಗೆ ಹೋಗಿ ಹೇಗೆ ಬರುತ್ತದೆಯೋ?”
“ನಿಜ ಶಾಮಣ್ಣನವರೇ. ನನ್ನದೇನೋ ಹೇಗೋ ಆಗತ್ತೆ. ನನಗೆ ಲಕ್ಷ್ಮಣನದೇ ಯೋಚನೆ.”
“ಅವನು ಸಂಪಾದನೆ ಕಡೆ ಲಕ್ಷ್ಯ ಕೊಡಲ್ಲ ವೆಂಕಟೇಶೂ. ಇಲ್ಲದಿದ್ದರೇನು ಘನವಾದ ೩-೪ ಪಾಠಗಳು ಈ ಕ್ಷಣ ಸಿಕ್ಕತ್ತೆ. ಅವನ ಲೆಕ್ಕಾಚಾರವೇ ಬೇರೆ. ಸಮಾಜದವರು ಪ್ರತಿವರ್ಷವೂ ಕಛೇರಿಗೆ ಕರೆಯುತ್ತಲೇ ಇದ್ದಾರೆ.
ತಾನು ದಕ್ಷಿಣ ದೇಶಕ್ಕೆ ಹೋಗಿ ಅಲ್ಲಿ ಜಯಭೇರಿ ಹೊಡೆದು ಬಂದ ಹೊರತೂ ಸಮಾಜದಲ್ಲಿ ಕಛೇರಿ ಮಾಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿಬಿಟ್ಟ. ಅನಂತಾಚಾರ್ಯರ ಹತ್ತಿರ ಕಲಿತದ್ದು ಮುಗಿದಿದೆ. ದಕ್ಷಿಣಕ್ಕೆ ಹೋಗಿ ನಾಯನಾಪಿಳ್ಳೆಗಳ ಹತ್ತಿರ ಒಂದೆರಡು ವರ್ಷ ಇದ್ದು ಬರಬೇಕೂಂತ ಅವರ ಆಶೆ. ತಂದೆಯ ಸ್ಥಿತಿ ನೋಡಿ ಅವನ ಬಾಯಿ ಕಟ್ಟಿಹೋಗಿವೆ. ಒಳಗೆ ಕೊರಗುತ್ತಾ ಇದ್ದಾನಪ್ಪಾ.”
“ಅಣ್ಣನಿಗೆ ಧನಪಿಶಾಚಿ. ತಮ್ಮನಿಗೆ ಸಂಗೀತ ಪಿಶಾಚಿ ಹಿಡಿದುಬಿಟ್ಟಿದೆ. ನಮ್ಮಮನೆಯಲ್ಲಿ ಒಬ್ಬಬ್ಬರಿಗೆ ಒಂದೊಂದು ಪಿಶಾಚಿ ಹಿಡಿದಿದೆಯೆಂದು ಕಾಣುತ್ತದೆ.”
“ಹಿಡಿಯಲಪ್ಪ ಹಿಡಿಯಲಿ. ಆದರೆ ಪಿಶಾಚಿ ಹಿಡಿದೋರು ಇತರರನ್ನು ಹಿಡಿಯದಿದ್ದರೆ ಸಾಕು”
ಎಂದು ಶಾಮಣ್ಣನವರು ನಗುತ್ತಾ ನುಡಿದರು.
*****
ಮುಂದುವರೆಯುವುದು
