ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ
ಇಬ್ರಾಹಿಂ ಸರದಾರ ಸಿಂಹಾಸನದ ಮೇಲಿದ್ದ
ಸೂರಿನ ಮೇಲೆ ಎಂಥದೋ ಸದ್ದು, ಕೂಗಾಟ
ಅರಮನೆ ಚಾವಣಿ ಮೇಲೆ ಭಾರಿ ಹೆಜ್ಜೆ
ಇಬ್ರಾಹಿಂನ ಸ್ವಗತ; ಯಾರದೊ ಇಂಥ ಭಾರಿ ಹೆಜ್ಜೆ?
ಕಿಟಕಿಯಾಚೆಗೆ ತಲೆ ಹಾಕಿ ಕೂಗಿದ-ಯಾರಲ್ಲಿ?
ಮಾನವ ಹೆಜ್ಜೆಯಲ್ಲ ಇದು, ಗಂಧರ್ವರದೆ ಇರಬೇಕು
ಕಂಗೆಟ್ಟ ಕಾವಲುಗಾರರು ಓಡಿ ಬಂದು ತಲೆ ತಗ್ಗಿಸಿದರು
ಈಗ ನಾವು ಹುಡುಕ ಹೊರಡುತ್ತೇವೆ ಎಂದರು
ಏನನ್ನು ಎಂದ ದೊರೆ ಇಬ್ರಾಹಿಂ
ನಮ್ಮ ಒಂಟೆಗಳನ್ನು-ಎಂದರು
ದೊರೆ ಹೇಳಿದ-ಯಾರಾದರೂ ಮನೆಮಾಳಿಗೆ ಮೇಲೆ ಒಂಟೆ ಹುಡುಕುತ್ತಾರೆಯೇ?
ಅವರು ಉತ್ತರಿಸಿದರು “ದೊರೆ, ನಮಗೆ ನಿಮ್ಮದೇ ಮಾದರಿ
ಸಿಂಹಾಸನದ ಮೇಲೆ ಕೂತು ನೀವು ದೇವರ ಜತೆಗೆ
ಐಕ್ಯಕ್ಕಾಗಿ ಹಂಬಲಿಸುತ್ತೀರಲ್ಲ ಹಾಗೆ”
ಅದೇ ಕಡೆಯ ಮಾತು
ಅಲ್ಲಿಂದಾಚೆಗೆ ಇಬ್ರಾಹಿಂನನ್ನು ಯಾರೂ ನೋಡಲಿಲ್ಲ
ಗಂಧರ್ವರು ಕಣ್ಣಿಗೆ ಕಾಣುವುದಿಲ್ಲ
ಅವನ ದಿವ್ಯ ಸತ್ವ ಜತೆಗಿದ್ದವರಿಗೆ ಕಾಣದೆ ಹೋಗಿತ್ತು
ಪರಿಚಿತರ, ಅಪರಿಚಿತರ ಕಣ್ಣಿಂದ ಮರೆಯಾದದ್ದೆ ತಡ
ಅವನ ಕೀರ್ತಿಯ ಗದ್ದಲ ಎಲ್ಲ ಕಡೆಗೆ ಹಬ್ಬಿತು
ಕಾಪ್ ಪರ್ವತಕ್ಕೆ ಹಾರುವ ಪ್ರತಿ ಹಕ್ಕಿಯೂ
ಪಕ್ಷಿ ಸಂಕುಲಕ್ಕೆ ಕೀರ್ತಿ ತರುತ್ತದೆ
*****
