ಇಷ್ಟು ಇಷ್ಟೆಂದೇಕೆ?

ಇಷ್ಟು ಇಷ್ಟೆಂದೇಕೆ ಕಟ್ಟೆ ಕಟ್ಟುವೆ ಮರೀ
ಇದ್ದದ್ದು ಅರಿಯುವಾ ಜತೆಗೆ ಇಲ್ಲದ್ದೂ ಸರಿ

ನೀನು ಇಷ್ಟೆಂದದ್ದು ಅವನಿಗಷ್ಟಾದೀತು
ನಿನಗೆ ಇಶ್ಶಿಯಾದ್ದವಗೆ ಇಷ್ಟ
ನಿನ್ನ ಕಣ್ಣಿನ ಸೂಜಿ ತುದಿಯಷ್ಟು ತೂತೊಳಗೆ
ಜಗ ಹೊಕ್ಕು ಬರುವದು ಬಹಳೇ ಕಷ್ಟ

ನಿನಗೆ ಬರಿ ಮಣ್ಣು; ಇದ್ದೀತು ಯಾವುದೋ ಬೀಜಕ್ಕೆ
ಕಾದ ಕುಡಿ ಕಣ್ಣು
ನಿನಗೆ ಬರೀ ಬೇರು; ಇದ್ದೀತು ನಾಳೆಗೆಂದು ಅದುಮಿಟ್ಟ
ವಂಶವೃಕ್ಷದ ತೇರು
ನಿನಗೆ ಬಿಂದುವಾದದ್ದೇ ಮತ್ತ್ಯಾರಿಗೋ ರೇಖೆ
ನಿನ್ನ ಕಣ್ಣು ಮುಗಿಯುವಲ್ಲೇ ದೃಶ್ಯ ಮುಗಿಯಬೇಕೆ

ನಿನ್ನ ಬೆರಳ ಸಂದಿಯಿಂದ
ತೂರಿ ಹೋದ ಕಳ್ಳಹವೆಗೆ
ಎಲ್ಲ ಪುಪ್ಪಸದೊಳಗು ಉಂಟು ಸ್ವಾಗತ
ನಿನ್ನ ಮೂಗು ಅರಿತುಕೊಂಡ
ಪರಿಮಳದ ವರ್‍ತಮಾನ
ಬೇರೆ ಎಷ್ಟೋ ಹೊರಳೆಗಳಿಗೆ ಭೂತ ದುರ್‍ನಾತ

ರಕ್ಕಸರ ಕಂಡು ನೀನು ಕೂಗಿಕೊಂಡರೆ ಹೇಗೆ
ನಿನ್ನ ಸ್ವಂತ ನೆರಳಿನಿಂದೂ ಹುಲ್ಲು ಬಾಡಿದೆ
ಬೆಳಕು ಬೇಕು ಎಂದು ನೀ ರಾತ್ರಿ ಹಟಾ ಹಿಡಿದರೆ
ಪೃಥ್ವಿಯ ಆ ಇನ್ನೊಂದು ಅರ್‍ಧ ಎಂಥ ಪಾಪ

ನಿನಗೆ ಕಂಡ ನಿನ್ನ ಹಸಿರು ನನಗೆ ಕಂಡ ನನ್ನ ಹಸಿರು
ಕಂಡ ಹಸಿರು ಇಟ್ಟ ಹೆಸರು ಒಂದೇ ಅಥವಾ ಬೇರೆ?
ರಾಶಿ ಕನ್ನಡಿಗಳ ಬಾವಿಯಲ್ಲಿ ಬಿದ್ದು ಸತ್ತ
ಶಿಶುವೊಂದರ ಹೆಣ ಒಂದೆ ನೂರೆ?
ನೀನು ಕೇಂದ್ರ ಸುತ್ತ ಪೃಥ್ವಿ ಎಂದು ನೀನು ನಿಂತರೇ
ಪೃಥ್ವಿ ಕೇಂದ್ರ ನೀನು ಗಸ್ತಿ ಎನ್ನುತ್ತದೆ ಶಾಸ್ತ್ರ
ಶಾಸ್ತ್ರಕೂಡ ತನ್ನದು ಎಂದುಬಿಟ್ಟರೆ ನೀನು
ಬೇರೆ ಶಾಸ್ತ್ರಿ ಹೂಡುತಾನೆ ತನ್ನ ಹಕ್ಕಿನಸ್ತ್ರ

ನನಗೆ ಈಗ ನೀ ಮರಿ ಮತ್ಯಾರಿಗೋ ನಾ ನರಿ
ಒಬ್ಬನಿಗೆ ಅಕ್ಕಿಯೇ ಮತ್ತೊಬ್ಬನಿಗೆ ಚುರಮುರಿ
ಉಡುಪುಗಳ ಹಿಡಿದು ನೀ ಅಳೆಯುತ್ತ ಹೊರಟರೆ
ಬಟ್ಟೆಗಳ ಒಳಗೆಲ್ಲರು ಬತ್ತಲೆಯೇ ಸರಿ

ಈ ಪೆಂಡ್ಯುಲಂದಲ್ಲಿ ಮಡಚಿ ಕೂತಿವೆ ಎಷ್ಟೋ
ಭೂತ ಕ್ಷಣ ಭಾವೀ ಭೀತ ಕ್ಷಣ
ಸವೆದ ಶಬ್ದಗಳ ಬೋಳು ತಲೆಗಟ್ಟಿಗೆ
ಜಾರಿ ಜಾರಿ ತೂಗುತ್ತಿವೆ ನನ್ನ ನಿನ್ನ ಹೆಣ

ಹೀಗೆ ಹಾಗೆಂದೇಕೆ ಕಟ್ಟೆ ಕಟ್ಟುವೆ ಮರೀ
ದಂಡೆಯುಸುಕಿನ ಗೂಡು ನೂರು ಪರಿ
ಕಣ್ಣಲ್ಲಿ ಕಣ್ಣಿಡದ ಜಂಗುಳಿಯ ನಡುವಲ್ಲಿ
ಪ್ರತಿಪಾದಕ್ಕೂ ತನ್ನ ಗುರುತೇ ಗುರಿ

ನೆನಪುಗಳ ನೆಲದಲ್ಲಿ ಕನಸುಗಳ ಕಸಬರಿಗೆ
ಹಿಡಿದು ಹೊರಟರೆ ದಾರಿ ಬರಿದೋ ಬರಿದು
ನನ್ನ ಬೊಗಳೆ ಸಾಕೀಗ ನೀನಿನ್ನು ಶುರು ಮಾಡು
ನಿನ್ನ ಹೆಜ್ಜೆಗೆ ಸಂದ ನೆಲದ ಕುರಿತು
*****