ಏನಾಗಬೇಕಿಹುದೊ….

ಏನಾಗಬೇಕಿಹುದೊ ಎಲ್ಲ ಆಗಲೆ ಬೇಕು:
ಆವರೆಗು ತೂಗುವದು ಮನದ ತಕ್ಕಡಿ ಪರಡಿ.
ಅದಕಿಲ್ಲ ಕಾಣಿ, ಸಮದಂಡಿಗೆಯ ತೂಕ ಬರೆ
ತೆರಬೇಕು ತಕ್ಕ ಬೆಲೆ. ಪೇಟೆಧಾರಣಿ ಬೇರೆ.

ಕೂಡಿಸುವದು, ಕಳೆದು, ಗುಣಿಸಿ, ಭಾಗಿಸಿ ನೋಡಿ
ತೂಗಿ ಲೆಕ್ಕಾಚಾರ ಹಾಕಿ, ಯಾವುದೊ ಅಂಕಿ
ಪ್ರಶ್ನೆಗುತ್ತರಿಸುವದು, ಶೇಷವೇನೂ ಸೊನ್ನೆ.
ಆದಿಶೇಷನು ಹೊತ್ತ ಪೃಥ್ವಿ, ಬರಿ ಕೆಮ್ಮಣ್ಣೆ?

ಅಚ್ಚರಿಯ ಬಚ್ಚಿಟ್ಟು ಹುಡುಕ ಹಚ್ಚಿದೆ ಬಾಳ
ನೀಳ ಪಯಣದ ಹಾದಿ, ಬೆಟ್ಟ, ಬಂಡೆಗಳಲ್ಲಿ
ಮೇಣ ಬಸದಿ ವಿಹಾರ, ಮುಳ್ಳು ಕಂಟಿಗಳಲ್ಲಿ
ಹೂವು ಮೊಗ್ಗೆಯ ಭಾರ. ಬಯಲ ಗೋಪುರದಲ್ಲಿ
ತಾರೆ-ಬೆಳಕು-ತುಷಾರ. ಕತ್ತಲೆಗು ಕಣ್ಣುಂಟು.
ಹೊಸೆದು ಹುರಿಗೊಳ್ಳುವದು ಜೀವ ಜೀವದ ನಂಟು.
*****