ಕಾಣಿಕೆ

ಎಣಿಸದಿದ್ದರು ಕಾಲ ಉರುಳುವದು. ಚಿಕ್ಕೆಗಳ
ಗಣಿಸದಿದ್ದರು ಬೆಳಕು ತುಡಿಯುವುದು. ತಂತಾನೆ
ನೆಲದಾಳದಲ್ಲಿ ಹದಗೊಂಡ ಬೀಜದ ಮೊಳಕೆ
ಮಣ್ಣ ಬೀರಿದೇಳುವದು; ಚೈತ್ರ ವೈಶಾಖಗಳ
ಸೂತ್ರವಾಡಿಸಿದಂತೆ ಚಿಗುರುವುದು ಮೋಟುಮರ.
ಹೊಳೆಯ ದಾಟಿದ ಮೇಲೆ ಕೊಳೆಯ ತೊಳೆವವರಾರು?
ಈಜಿದರೆ ಈಜುವದು ಹರಿವ ನೀರಿನ ಎದುರು.
ಮೋಜಲ್ಲ, -ಸೋಜಿಗದ ಬದುಕು-ಗಾಜುಗೋಪುರ.
ಸೂಜಿಯ ಮೊನೆಗೆ ದಾರಿಬಿಡು, ದಾರವಾಡುವದು
ಹೂವಿನ ಕಸೂತಿ; ಮಾವು ತಳಿತರೆ ಕೋಗಿಲೆಯ
ಕುಕಿಲು ಸಾರ್‍ಥಕ, ನೆಲಕುದುರಿ ಬಿದ್ದ ಹಣ್ಣೆಲೆಯ
ಮಣ್ಣು ಗೊಬ್ಬರಮಾಡಿ ತನ್ನೊಳಗೆ ರುಬ್ಬುವದು.
ಹೂವು-ಹಣ್ಣೂ ಗಿಡದ ಎಡೆಬಿಡದ ಕಾಣಿಕೆ.
ಸಾವು-ನೋವೂ ನಮ್ಮ ದಿನದ ಹೊಂದಾಣಿಕೆ.
*****