ಅರುವತ್ತರೈಸಿರಿ

ಎತ್ತರದ ನಿಲವು; ಮನದಲಿ ನೂರು ನಕ್ಷತ್ರ-
ಗಳ ವಿಲಕ್ಷಣ ಹೊಳವು. ವಿಸ್ತಾರದನುಭವದ
ಸ್ವಸ್ತಿ ಬಿತ್ತರದ ಹಣೆ; ಸುಸ್ಥಿರನೋಟ ಬಲಿದ
ಯೋಧೃವಾಣಿಯ ನಿಷ್ಠೆ. ಕೃತಿ ಮಹೋನ್ನತ ಪಾತ್ರ.
ದೊಡ್ಡ ಮಳೆ ಜಡಿದು, ನೆಲವೆಲ್ಲ ನೀರನು ಕುಡಿದು,
ಹಳ್ಳ ಹೊಳೆ ಭೋರ್‍ಗರೆದು ಕಡಲ ಕೂಡುವ ರೀತಿ.
ಬೆಳಗಾಗುವೊಳಗೆ ಬೆಳುಗೊಳದಲ್ಲಿ ಆತ್ಮರತಿ
ಗೊಮ್ಮಟನ ಕಂಡರಿಸಿದೊಲು ಜೀವ ಬಲ್ವಿಡಿದು,
ಮೂರ್‍ತಿಗೊಂಡಿಹುದು ಕರ್‍ಣಾಟ ವಿದ್ಯಾಪೀಠ:
ಕನ್ನಡ ಸರಸ್ವತಿಯ ಕಣ್ಣಾಗಿ; ಭಾರತಿಯ
ಹೃದಯ ವೀಣಾಧ್ವನಿಯ ಶ್ರುತಿಯಾಗಿ, ಸಂಸ್ಕೃತಿಯ
ಜೇನು ಹುಟ್ಟಿಗೆ ವಿಶ್ವಚೇತನದ ಹೂದೋಟ!
ಅರುವತ್ತರೈಸಿರಿಯ ಆರಳು ನಂದಾದೀಪ
ಬೆಳಗಿ ಪ್ರತಿಬಿಂಬಿಸಲಿ ವಿದ್ಯೆಯ ವಿಶ್ವರೂಪ.
*****
ಕರ್‍ನಾಟಕ ವಿಶ್ವವಿದ್ಯಾಲಯದ ಉಪಕುಲಪತಿ ಶ್ರೀ ಡಿ.ಸಿ. ಪಾವಟೆಯವರಿಗೆ ಅರುವತ್ತು ತುಂಬಿದಾಗ.