ವಿದ್ಯಾಭವನ

ಹತ್ತು ನಿಟ್ಟಿನ ಗಾಳಿ-ಬೆಳಕು-ಸವಿ-ಭಾವನೆಗೆ
ಸ್ವಚ್ಛಂದದಲಿ ನೂರು ಕಿಟಕಿ ಬಾಗಿಲು ತೆರೆದು;
ಭವ್ಯ ವಿದ್ಯಾಭವನ ಜ್ಞಾನ ವಿಜ್ಞಾನ, ಅದು
ಇದು- ಎಂಬುದೆಲ್ಲ ಹದವರಿತಿಲ್ಲ ಹುದುವಾಳ್ಗೆ.
ವೀರ ಅಶ್ವಾರೋಹಿ ಚೆನ್ನಮ್ಮ, ನಾಡವರ
ನುಡಿಯೊಡೆಯ ವಿಶ್ವಮಾನವ ಮೂರ್‍ತಿ ಸರ್‍ವಜ್ಞ.
ಅದೊ ಐನ್‌ಸ್ಟೀನನೇಕಾಗ್ರಚಿತ್ತ, ಗಣಿತಜ್ಞ
ಭಾಸ್ಕರಾಚಾರ್‍ಯ, ಲೀಲಾವತಿಯು- ಇಂತಹರ
ನೆನಹು ನನಕೊನೆಯೇರಿ ದ್ವಾರಶಿಲ್ಪದಿ ಚಿತ್ತ-
ವರಳುತಿರೆ, ಎತ್ತ ಹೊರಳಿದರು ನೂತನ ಸೃಷ್ಟಿ.
ನವ ಚೇತನಾಸ್ಪಂದ ರಸಭಾವ ಸಂತುಷ್ಟಿ,
ದೂರ ದೃಷ್ಟಿಗೆ ಹೊಳೆದಪಾರ ದರ್‍ಶನ ಚಿತ್ರ
ಮೂಡಿ ಮೈದಾಳಿಹುದು ಹಿರಿಬಾಳ ಹೊಂಗನಸು.
‘ಸರ್‍ವಭಾಷಾ ಸರಸ್ವತಿ’ಯೆ ಆವಿರ್‍ಭವಿಸು.”
*****
ಕರ್‍ನಾಟಕ ವಿಶ್ವವಿದ್ಯಾಲಯದ ‘ವಿದ್ಯಾಭವನ’ವನ್ನು ಕುರಿತು.