ಆರಿದ ಕುಲುಮೆ


ಈಗ ಅಂತರ ಬಿಟ್ಟು ಮಲಗುವರು, ಇಬ್ಬರದು ಹಾಸಿಗೆ ಬೇರೆ;
ಅವನ ಕೈಯೊಳಗೊಂದು ಗ್ರಂಥ, ಬಹಳ ಹೊತ್ತಿನವರೆಗು ರಾತ್ರಿಯಲ್ಲಿ ದೀಪ;
ಬಾಲ್ಯದ ಕನಸು ಕಾಣುವ ಮುಗ್ಧ ಹುಡಿಗೆಯಂತಿವಳ ಮುಖ ಚಹರೆ,
ಅಲ್ಲಿ ಗಂಡಸರೆಂಬ ಸುಳಿವಿಲ್ಲ- ಯಾವುದೋ ಒಂದು ಹೊಸ ಘಟನೆ ಸಂಭವಿಪ
ಸಮಯ ಕಾದಿರುವಂತೆ: ಇವ ತೆರೆದ ಪುಸ್ತಕದ ಪುಟವ ತಿರುವಿಲ್ಲ.
ಮೇಲೆ ಆಡುವ ನೆರಳಿನಲ್ಲಿ ಆಕೆಯ ಕಣ್ಣು, ಬೇರೆ ಸದ್ದಿಲ್ಲ.


ತೆರೆಗೆ ತೂರುತ ಬಂದ ಒಡೆದ ಹಡಗಿನ ಚೂರು: ಹೊಸತರಲಿ ಮಸೆದ ರಾಗೋದ್ವೇಗ
ಈಗೆನಿತು ಹಾಯಾಗಿಹರು. ಒಬ್ಬರೊಬ್ಬರನಿಷ್ಟು ಮುಟ್ಟಲಾರರು ಕೂಡ,
ಮುಟ್ಟಿದರು ಏನೊ ಪ್ರಾಯಶ್ಚಿತ್ತ, ಯಾವುದೋ ತಪ್ಪನೊಪ್ಪಿದ ಹಾಗೆ; ಆಗ
ಒಂದೆ ತುಸು ಭಾವ ಸಂವೇದ- ಅಥವ ಇನ್ನೂ ಗಾಢ;
ವೀತರಾಗ ಭಾವಕೋಲೈಸಿ ನಿಂತವರು ಇಡಿಯ ಜೀವನ ತೇದು
ಇದಕಾಗಿ ಹಮ್ಮಿ ಹದಗೊಂಡಿರುವ ಬದುಕು, ಎಲ್ಲ ಮದವಳಿದು.


ಅಗಲುವರು ಅಪರಿಚಿತರಂತೆಯೆ, ಹಾಗೆಯೇ ಹತ್ತಿರಕೆ ಬಂದು ಕೂಡುವರು;
ನಡುವೆ ನಿಡಿದಾಗಿರುವ ಮೌನ ಇಬ್ಬರನು ಎರಡೂ ತುದಿಗೆ ಹಿಡಿದು
ಕೊಂಡಿಹ ದಾರ; ಸುತ್ತಿ ಬಿಗಿವುದಕಲ್ಲ. ಕಾಲವೂ ಕೂಡ ನವುರು-
ಗರಿಯಂತಿರುವ ಮೃದುವಾಗಿ ಸೋಕಿಹುದು. ಮುದುಕರಾದುದು
ಅವರು ಬಲ್ಲರೆ, ಈರ್‍ವರೂ ಈ ನನ್ನ ಹಡೆದು ಹೊರೆದವರು?
ಯಾರ ರಾಗದ ಕುಲಿಮೆಯನ್ನ ಹೊರಹೊಮ್ಮಿಸಿತೊ, ಅದು ಆರಿ ತಣ್ಣಗಿಹುದು?”
*****
ಎಲಿಜಾಬೆಥ್ ಜೆನ್ನಿಂಗ್ಸ್ – ‘One Flesh’