ಬೆಟ್ಟ ಗುಡ್ಡಗಳಲ್ಲಿ ಅಲೆದಾಡುವ ಹಾವಾಡಿಗ
ಹೆಪ್ಪುಗಟ್ಟಿದ ಚಳಿಯಲ್ಲಿ ಸೆಡೆತು ಹೋಗಿದ್ದ
ಭಾರಿ ಹಾವೊಂದನ್ನು ನೋಡಿ, ಅದು ಸತ್ತಿದೆ ಎಂದುಕೊಂಡ
ಅದನ್ನು ಕಟ್ಟಿ ಬಾಗ್‌ದಾದ್ ನಗರಕ್ಕೆ ತಂದ
ನಗರದ ಸೋಮಾರಿಗಳೆಲ್ಲ ಅದನ್ನು ನೋಡಲು ನೆರೆದರು
ಬಿಸಿಲಿನ ಶಾಖಕ್ಕೆ ಚೇತರಿಸಿಕೊಂಡ ಸರ್ಪಕ್ಕೆ
ಶಕ್ತಿ ಮರಳಿ ಬಂದು
ನೋಡುತ್ತಿದ್ದವರನ್ನೆಲ್ಲ ನಾಶ ಮಾಡಿತು.
*
*
ಕಾಮವೆಂಬ ಸರ್ಪ ಅದು
ಸತ್ತಿದೆ ಎಂದೆಯಾ?
ಹಸಿವಿನಿಂದ ಜಡವಾಗಿ ಸೆಡೆತಿದೆ
ಫ್ಯಾರೋ ದೊರೆಯ ಹಾಗೆ
ಹೆಪ್ಪುಗಟ್ಟಿದ ನದಿಗಳನ್ನು ಹರಿಸುವ ಶಕ್ತಿ
ಅದಕ್ಕೆ ಬಂದರೆ ಆ ದೊರೆಯ ಧಿಮಾಕೂ ಅದಕ್ಕೆ ಬಂದೀತು
ಹಸಿವಿನಿಂದ ಈಗ ಸರ್ಪ ನೊಣವಾಗಿದೆಯಷ್ಟೆ
ಸಿರಿಸಂಪತ್ತು ದೊರಕಿದಾಗ ಅದು ದೈತ್ಯ
ಸೂರ್‍ಯ ದೇಶಗಳ ಬಿಸಿಲಿಗೆ ಅದನ್ನು ತರದಿರು
ಸೆಡೆತಿದ್ದಷ್ಟು ಹೊತ್ತು ಕ್ಷೇಮ
ಮಂಜಿಂದ ಅದು ಹೊರಬಿದ್ದು ಬಿಸಿಲಿಗೆ ಬಂತೊ
ನೀನೇ ಅದರ ಮೊದಲ ಬಲಿ
ಅದನ್ನು ನೀನು ಗೆಲ್ಲು
ನಿನ್ನನ್ನು ಅದು ಗೆಲ್ಲದಿರಲಿ
ಬಿಸಿಲ ಶಾಖ ಆ
ರೆಕ್ಕೆಗಳಿಗೆ ಶಕ್ತಿ ಕೊಟ್ಟು ಹಾರಿಸುತ್ತದೆ
ಪವಿತ್ರ ಯುದ್ಧದಲ್ಲಿ ಅದನ್ನು ಸೀಳು
ಅಯ್ಯೋ! ಈ ಸರ್ಪಗಳನ್ನು ಮೋಸೆಸರು ಮಾತ್ರ ಸೀಳಬಲ್ಲರು
ಈ ಕಾಳಿಂಗ ಸರ್ಪದಿಂದ ಲಕ್ಷಾಂತರ ಜನ ಸಾಯುತ್ತಾರೆ
ದಟ್ಟ ಗೊಂದಲ,
ಅವನ ಉದ್ದೇಶವೇ ಅದು
*****
