ದಿನಗಳೆಲ್ಲವು ನನ್ನ ದಾರಿ ಗಾಬರಿಸಿಗೊಳಿಸಿ
ಸೋಮಾರಿ ಧೂಳಿಯನ್ನೊಟ್ಟಬಹುದು;
ಆದರೂ ಒಂದು ದಿನ ನನ್ನೊಳಗೆ ಹುದುಗಿರುವ
ಜೀವಾಳವನು ನಾನು ಕಾಣಲಿಹುದು.
ಜೀವನದ ಆಳದಲ್ಲಡಗಿದಾನಂದವನು
ನಾನೊಮ್ಮೆ ಕಡೆಮುಟ್ಟಿ ನೋಡಲಿಹುದು.
ಸುಳುಹು-ಹೊಳವುಗಳಲ್ಲಿ ನಾನದನು ಕಂಡಿರುವೆ,
ನನ್ನ ಮೇಲದರುಸಿರು ಹಾಸಿ ಬೀಸಿ
ಹರಿದಾಡಿಹುದು,- ನನ್ನ ಯೋಚನೆಗಳನ್ನು ಇನಿತು
ಸಮಯ ಪರಿಮಳದಿಂದ ತುಂಬಿ ಸೂಸಿ.
ಬೆಳಕು ಪರದೆಯ ಹಿಂದೆ ನನ್ನನುಳಿದಿರುವ ಆ
ಆನಂದವನು ಒಮ್ಮೆ ಕಾಣಲಿರುವೆ;
ನಿಲ್ಲುವೆನು ಅಲ್ಲಿ, ಹೊರಸೂಸುವೇಕಾಂತದಲಿ
ಸಕಲ ವಸ್ತುಗಳೆಲ್ಲ ಸೃಷ್ಟಿಕರ್‍ತನ ಕೂಡ
ಒಂದಾಗಿ ತೋರುವಲ್ಲಿ.
*****
ರವೀಂದ್ರರ ‘Fruit-Gathering’: XXI
