ನುಗ್ಗಿದರು ಮುಂದೆ: ಬಾನ ಮಿಂಚಿಗೆ ಕಡೆದ ಸಿಡಿ-
ಲಾಗಿ, ಗುರಿಯಿಟ್ಟ, ಗುಂಡು ವೈರಿಯೆದೆ ನೆಟ್ಟಗೆ
ತಾಗಿ, ಭಾರತದ ದಶದಿಕ್ಕು ಒಂದ ನಿಟ್ಟಿಗೆ
ಬಾಗಿ; ಅಟ್ಟಿದರು, ಬೆನ್ನಟ್ಟಿದರು ನಾಡಗುಡಿ
ನಡುನೆತ್ತಿಯಲಿ ಮುಡಿದು: ಹುಟ್ಟಿದುದು ಸಾರ್ಥಕ-
ವೆನಿಸಿ, ಬಿಡುಗಡೆಯ ಬಾಗಿಲಕೆ ಹಿಂದು, ಮುಸ್ಲಿಂ,
ಕ್ರೈಸ್ತ, ಪಾರ್ಸಿ ತೋರಣವಾಗಿ. ನೆತ್ತರಿನ ತಳಿ,
ಪ್ರಾಣದೂದಿನಕಡ್ಡಿ ಪರಿಮಳದ ಸ್ಮಾರಕ.
ಗುಂಡಿಯೊತ್ತಿದರೆ ಬಲ್ಬು ಇದ್ದಲ್ಲೆಲ್ಲ ಬೆಳಕು
ಝಗ್ಗೆನುವಂತೆ ನಾಡಿನುದ್ದಗಲಕ್ಕು ಅವರ
ನೆನಪು; ಕಲ್ಲು, ಕಟ್ಟಿಗೆಯಲ್ಲು ಕಿಡಿ. ಮಡಿದವರ
ಮೇಲೆ ನಕ್ಷತ್ರಮಾಲೆ; ಬಾನ ಮೌನದ ಮಿಡುಕು.
ಹುಟ್ಟು-ಸಾವಿನ ನಡುವೆ ಕವನ ಕಟ್ಟಿದ ಬದುಕು-
ಇರಲಿ ಹೆಗಲಿನ ಮೇಲೆ ಅವರಿಟ್ಟ ಬಂದೂಕು.
*****
