ವಿನೂತನ ಕವಿಯ ಕೈಫಿಯತ್ತು

“ಏನೋ ಚಂದ್ರ ಪೆಂಗ
ನಾಚ್ಕೆ ಇಲ್ವೆ ನಿಂಗೆ!”
ಹೀಗೆ ಸಿಕ್ಕಾಬಟ್ಟೆ ಬೆಳುದಿಂಗಳನು ಚೆಲ್ಲಿ
ಹಾಳು ಮಾಡಿ, ಹತ್ತೀಬಿತ್ತುವದು ಸರಿಯಲ್ಲ.
ಅದನೆಲ್ಲ ಸಂಗ್ರಹಿಸಿ, ಭಟ್ಟೀ ಇಳಿಸಿ, ಗೊಟ್ಟಾ ಹಾಕು!
ಅಜೀರ್‍ಣವಾಗಿ ಹೊಟ್ಟೆ ಝಾಡಿಸಿದರೂ ಚಿಂತೆಯಿಲ್ಲ
ನಾವು ಕುಡಿಯಲು ತಯಾರು.
ನಿನ್ನ ಬೆಳಕೇನೊ ತಂಪಾಗಿ, ಸೊಂಪಾಗಿ ಹಿತವಾಗಿರಬಹುದು
(ಹಾಗೆಂದು ಹೇಳುತ್ತಾರೆ ಮುಗ್ಧರು).
ಆದರೆ, ಮಟಮಟ ಮಧ್ಯಾಹ್ನದ ಸೂರ್‍ಯನಂತೆ
ನಮ್ಮ ಕಣ್ ಕುಕ್ಕಿಸಿಲ್ಲ;
ಒಮ್ಮೆಯಾದರೂ ತಲೆಯನಾಸ್ಫೋಟಿಸಿಲ್ಲ;
ಮೇಲಾಗಿ ನಿನ್ನಲ್ಲಿ ಬೆಳವಣಿಗೆಯೇ ಇಲ್ಲ.
(ಇದ್ದರೂ ಇರಬಹುದು ಒಂದು ಪಕ್ಷ.)
ಬೆಳಬೆಳದು ತಳ ವಿತಳ ಪಾತಾಳವನ್ನು ಕಲಕಿ ಕಾಲಾಡಿಸಿಲ್ಲ.
ನೋಡಿಲ್ಲಿ; ಎಷ್ಟು ಬೆಳೆಸಿದ್ದೇವೆ-
ನಮ್ಮ ತಲೆ.
(ಇಂದಿನ ಪರಿಸ್ಥಿತಿಯಲ್ಲಿ ಇದೇ ಶ್ರೇಷ್ಠ ಕಲೆ.)
ಭಾವಕೋಶದ ಮಾತೇಕೆ?
ಅದಕೆ ಟಾಚಣಿ ಚುಚ್ಚಿ ಚುಚ್ಚಿ ಪಿನ್‌ಕುಶನ್ ಮಾಡಿ
ಎದೆಯ ಮೇಜಿನ ಮೂಲೆಯಲ್ಲಿ
ಇಟ್ಟಿದ್ದೇವೆ.
ನಿನ್ನ ಸುತ್ತಲೂ ಒಂದೇ ನಮೂನೆಯ, ಅದೇ
ಮಿಣಮಿಣಕು ಚಿಕ್ಕೆಗಳ ಥಕ್ಕಥೈ;
ವಿವಿಧ ಪ್ರತಿಮೆಗಳ ಬಾವುಟವನೆತ್ತಿ ಹಿಡಿದಿದೆ
ರಂಗುರಂಗಿನ ನಮ್ಮ ಬುಶ್‍ಕೋಟು ತೊಟ್ಟ ಮೈ.
ನೀ ತಯಾರಿಸಿದ್ದು ಸ್ಪೆಶಲ್ ಮಸಾಲೆ ದೋಸೆಯಲ್ಲ.
(ನಮ್ಮ ದೋಸೆಗೆ ಮಾತ್ರ ತೂತಿಲ್ಲ;
ಸಂಪ್ರದಾಯದ ಗಾದೆಮಾತಿಗೆ ನಾವು ಬೆಲೆ ಕೊಡುವುದಿಲ್ಲ)
ಅಥವಾ ಗಮಗಮಿಸುವ ಆಮ್ಲೆಟ್ ಅಲ್ಲ –
ಬರಿಯ ಕೆನೆಮೊಸರಿನ ಬಿಳಿಜೋಳದ ರೊಟ್ಟಿ
(ಅದನ್ನು ತಿನ್ನಲು ಹಳ್ಳಿಯ ಮುಕ್ಕರೇ ಗಟ್ಟಿ.
ಹೊಸ ರುಚಿ ಬೆಳೆಸಿಕೊಂಡ ನಮಗೆ ಅದೆಲ್ಲ ಲೊಳಲೊಟ್ಟೆ.)

ಅಯ್ಯ, ಚಂದ್ರಾಮ ಚೆಲುವ
ತಿಂಗಳಿಗೊಮ್ಮೆ ಮೈತುಂಬಿಕೊಂಡು, ದುಂಡಾಗಿ
ಗಲ್ಲ ಉಬ್ಬಿಸಿಕೊಂಡು ಬಂದರೂ ನಾವು ನೋಡುವದಿಲ್ಲ.
(ನಮಗೆ ಹೊಟ್ಟೆಕಿಚ್ಚು.)
ಕದ ಹಾಕಿ, ಕಿಟಕಿ ಮುಚ್ಚಿ, ನಾವ ಹುಟ್ಟಿಸಿಕೊಂಡ ಚಿಂತೆಗಳ
ಕಂತೆ ಬಿಚ್ಚಿ ಹಾಯಾಗಿ ಮಲಗುತ್ತೇವೆ.
ಬೇಕಾದರೆ ನೂರು ಕ್ಯಾಂಡಲ್ ಬಲ್ಬು ಹಾಕಿ
ಗುಂಡಿಯೊತ್ತುತ್ತೇವೆ;
ಬಂದು ಬಡಿಯುವ ನೂರು ಪತಂಗಗಳ ಬಾಲ್ ಡಾನ್ಸು
ನೋಡಿ ಛಾನ್ಸು ಹೊಡೆಯುತ್ತೇವೆ.
ಕಾಜಿನ ಕಿಟಕಿಯಲ್ಲಿಣಿಕಿ ಮುಗುಳುನಕ್ಕರೆ ನೀನು
ಕರಿ ಪರದೆಯೆಳೆದು ಕೈ ತೊಳೆದುಕೊಳ್ಳುತ್ತೇವೆ.
ಆಕಾಶನೌಕೆಯ ಕಳಿಸಿ
ನಿನ್ನ ಷೋಡಶ ಕಲೆಗಳ ಛಾಯಾಚಿತ್ರ ತೆಗೆದು
ದೊಡ್ಡದು ಮಾಡಿ
ಪತ್ರಿಕೆಯ ಮುಖಪುಟದಲ್ಲಿ ಪ್ರಕಟಿಸುತ್ತೇವೆ.
ಆಗಲಾದರು ನಿನ್ನ ಬಣ್ಣ ಹೊರಬೀಳುವದು
ಯುಗಯುಗಗಳಿಂದ ತಂಗುಳಾಗಿದೆ ನಿನ್ನ ಬೆಳುದಿಂಗಳು.

ಅವರಿವರು ಯಾತ ಹೊಡೆದು ತೋಟವ ಮಾಡಿ
ಹಣ್ಣು ಹಂಪಲು-ಹೂವು ಬೆಳೆದು ಕೊಟ್ಟಿರಬಹುದು.
ನಮ್ಮಂತೆ ಬದುಕಿನ ಬಾವಿಯಾಳಕ್ಕಿಳಿದು
ಜೊಂಡು ಪಾಚಿಯ ಕಂಡು ಉಂಡವರೆಷ್ಟು ಮಂದಿ?
ಆಕಾಶದಲ್ಲಿ ಮೇಲೆ ಮೇಲೆ ತೇಲುತ್ತಿರುವ ನೀನು
ನಮ್ಮ ಬಾವಿದಂಡೆಗೆ ಹಣಿಕಿ ಹಾಕಬೇಡ:
ಅನುಭವಕೆ ತೆಕ್ಕೆಬಡಿದು, ಗುದುಮುರಿಗೆ ಹಾಕಿ, ಕಚ್ಚಾಡಿ
ಕೆಸರು ರಾಡಿಯ ಹಿಡಿಸಿ, ತಳಕಿಳಿದು
ಮೇಲೆ ಗುಳ್ಳೆಗಳ ಬಿಡುವದಿದ್ದರೆ ಮಾತ್ರ ಬಾ.
ನಮಗೆ ಬೇಕಿಲ್ಲವೋ ಆ ದೂರಲೋಕದ ಅತೀಂದ್ರಿಯ ದೃಶ್ಯ-
ನಮಗೆ ಹಿತ: ಇಲ್ಲೆ ಈ ಬಾವಿಯ ತಲಸ್ಪರ್‍ಶ.
ಹೋಗು, ನಮ್ಮಂತ ಸದಾ ಅಸ್ವಸ್ಥನಾಗು
ಬೇನೆಯಿರದಿದ್ದರೂ ನರಳು:
(ಅದೇ ವಾಸ್ತವದ ಬಾಳು.)
ಕೃಷ್ಣ ಪಕ್ಷದ ಕತ್ತಲಲಿ ಮುಳುಗು ತಲೆಕೆಳಗು.

ನಮ್ಮ ಕುದುರೆಗೆ ಕಣ್ಣು ಪಟ್ಟಿಯ ಬಿಗಿದು
ಹುಲ್ಲುಗಾವಲದ ಹಸುರು ಕನಸುಗಳನಲ್ಲ ಎಲ್ಲಿಯೋ ಹುಗಿದು
ನೋಡು: ಹೇಗೆ ಹೊರಟಿದ್ದೇವೆ: ಆಸ್ಪತ್ರೆಗೆ.
ಗ್ರಹಣ ಹಿಡಿದರೆ ಅದರಲ್ಲೆ ಒದ್ದಾಡುವದೆ ಒಳಿತು;
(ಇದು ನಮ್ಮ ಅನುಭವದ ಮಾತು)
ಹೊರಬಂದು ಬೆಳುದಿಂಗಳನ್ನು ಚೆಲ್ಲುವ ಗೋಜಿಗೆ ಮರ್‍ಯೋ ಹೋಗಬೇಡ
ಚಂದಪ್ಪ, ಎಂದೆಂದಿಗೂ ಚೆಲುವಿನ ಹೆಸರು ಎತ್ತಬೇಡ.
*****