ತೆಕ್ಕೆಯೊಳು ತಕ್ಕೈಸಿ, ತೆನೆತೆನೆ ಹಿಡಿದು ಹಿಗ್ಗಿ
ನೆಟ್ಟಗೆ ಮೇಟಿ ಸುತ್ತ ಹಂತಿಯ ಕಟ್ಟಿ, ಹಾಡಿ
ಬೆಳುದಿಂಗಳಿಗೆ, ತಿಕ್ಕಿಮುಕ್ಕಿ ಥಂಡಿಗೆ ತೀಡಿ,
ಪ್ರಾಣವಾಯುವಿನಲ್ಲಿ ತೂರಿ, ನೆತ್ತರು ನುಗ್ಗಿ
ಬಾಂದು-ಬದುವನು ಮೀರಿ, ಹೊಕ್ಕು ಹೊರಬಂದು ಒಕ್ಕಿ
ಖಂಡುಗ ರಾಶಿ, ಕೊಲ್ಲಾರಿ ಬಂಡಿಯಲಿ ಹೂಡಿ
ಮೂಡಲ ಹೋರಿ, ಕತ್ತಲೆಗೆ ಪಂಜು ಹಿಡಿದಾಡಿ
ಕಹಳೆಯನೆತ್ತಿ ಉದ್ರಿ, ಬಾನ ಮುಟ್ಟಿತು ಸುಗ್ಗಿ.
ಕರಣಂಗಳ ಕಣ ಬಣಬಣ, ಹೊಲವೆಲ್ಲ ಹಕ್ಕಲು.
ಹಕ್ಕಿ-ಪಕ್ಕಿ ಗೂಡಿಗೆ ಸೇರಿ ಬರಿಗಾಳಿ ಬಯಲು.
ಚಿಕ್ಕೆಗಳ ಸೊಕ್ಕಿಳಿದು ಶೂನ್ಯವಾಯಿತು ಮುಗಿಲು.
ಮೂಲೆಯಲಿ ಮಲಗಿತು ಕುನ್ನಿ: ಹಗೆ ತುಂಬ ಕಾಳು.
ಕಾಲಕಾಲಕ್ಕೆ ಮಳೆ ಬಂದು ಬೆಳೆ ಕಂಗೊಳಿಸೆ
ಅಂಗಾಂಗದಲ್ಲಿ ಸುಗ್ಗಿ: ಋತು ಕೊಟ್ಟ ಭಾಷೆ.
*****
