ಮುಕ್ಕಿ ಮೊಗೆಯುವ ಕಾಲ!

ಮುಕ್ಕಿಮೊಗೆಯುವ ಕಾಲ! ಮೊಂಡಗೊಳಿಸುವೆ ಸಿಂಹ
ಪಂಜಗಳ; ನಿನ್ನಿಂದ ತನ್ನ ಮಕ್ಕಳ ತಾನೆ
ನುಂಗುತಿಹುದೀ ಭೂಮಿ. ಉಗ್ರವ್ಯಾಘ್ರನ ಹರಿತ
ಹಲ್ಲು ಕಿತ್ತೆಸೆವೆ. ಪುರಾತನ ಪಕ್ಷಿ ಫೀನಿಕ್ಸ್
ತನ್ನ ರಕ್ತದಿ ಬೂದಿ, ನಿನ್ನ ಪುಟಿಗಾಲಿನಲಿ
ಹರ್‍ಷ-ದುಃಖದ ಋತು. ನೀನೊ, ನಿನ್ನೀ ಜಗವೊ
ಬೇಕಾದ್ದು ಮಾಡು. ಬಾಡುವುದೆಲ್ಲ ಮಾಧುರ್‍ಯ.
ಆದರೊಂದನು ಮಾತ್ರ ಮಾಡದಿರು, ನಿನಗಾಣೆ.
ಚಣದ ಚಾಣಗಳಿಂದ ಕೆಡಿಸದಿರು ಕುಡಿ ಹುಬ್ಬು,
ಹಳೆಯ ಲೇಖನಿಗೆರೆಯ ಹಣೆಗೆ ಮೂಡಿಸಬೇಡ.
ಬಿಟ್ಟುಬಿಡು ಎನಿತು ಕೊಂಕಿಸದಂತೆ ಇನಿಯಳನು
ಮುಂಬರುವ ಜನಕಿದೇ ಚೆಲುವು ಮಾದರಿಯಾಗಿ.

ನಿನ್ನ ಕೈ ತೋರಿಸದೆ ಬಿಡುವೆಯ ಮುದಿಯ, ಇರಲಿ
ನನ್ನ ಕವಿತೆಯೊಳಾಕೆ ಚಿರಯುವತಿ, ನೆನಪಿರಲಿ.
*****
ಷೇಕ್ಸ್‌ಪಿಯರನ ಸಾನಟ್ ನಂ.೧೯