ಅಲ್ಲಿ ಎಲ್ಲದಕ್ಕೂ ಇನ್‌ಶೂರೆನ್ಸ್ ಸೌಲಭ್ಯವುಂಟು
ಹಲ್ಲು ಮೊಲೆ ಮೂಗು ಕೈಕಾಲುಗಳಿಗು.
ಆರೋಗ್ಯಕ್ಕೆ ಕಾರಿಗೆ ಮನೆಗೆ ನೌಕರಿಗೆ
ಆಸ್ಪತ್ರೆಗೆ ಆಕಾಶಯಾನಕ್ಕೆ ಮತ್ತು ಡಾಕ್ಟರಿಗೆ.
ಆ ಜನರ ಅನ್ವೇಷಣಾ ಬುದ್ಧಿ ಅತಿ ಪ್ರಚಂಡ
ಮೈಕಡಿದರೆ ಅದಕ್ಕೊಂದು ಕ್ರೀಮು,
ಹೊಕ್ಕಳನು ಶುದ್ಧಿಮಾಡುವುದಕ್ಕೆ ನೈಲಾನುಬ್ರಶ್ಶು.
ಯೋಗಾಸನಕ್ಕೆ ಕುರ್ಚಿ, ಬಿಸಿಲ ಪ್ರಕೋಪಕ್ಕೆ ಮುಲಾಮು.
ಕಳ್ಳರು ಮನೆಗೆ ನುಗ್ಗಿದರೆ ಪೋಲೀಸರಿಗೆ ಬೆಲ್ಲು
ಪ್ರತಿಯೊಬ್ಬ ತರುಣಿಗೂ ಅಪಾಯ ತಪ್ಪಿಸುವ ಪಿಲ್ಲು.
ಇಡೀ ಅಮೆರಿಕವೇ ಒಂದು ಸೂಪರ್ಮಾರ್ಕೆಟ್ಟು
ಪ್ರತಿಯೊಬ್ಬನಿಗು ಇಷ್ಟು ಡಾಲರ್ ಎಂದು ಬೆಲೆಯುಂಟು.
ತಮ್ಮನ್ನೆ ಮಾರಿಕೊಂಡವರಿಗೂ
ಸ್ವತಂತ್ರರೆನ್ನುವ ಭಾವ ದೊರೆವುದುಂಟು.
ಎಂಥ ದುಡಿಮೆಯೇ ಇರಲಿ ಅಲ್ಲಿ ಕೀಳಲ್ಲ.
ಮುಖದೆದುರೇ ಪ್ರದರ್ಶಿಸುವ ಗೋಗೋ ಹುಡುಗಿಯರು
ಕ್ಯಾಬರೇ ಹುಡುಗಿಯರು, ಬಾರುಗಳಲ್ಲಿ
ರಾತ್ರಿ ವ್ಯಾಪಾರಕ್ಕೆ ಕಾಯುವವರು, ಎಲ್ಲರೂ ದುಡಿಮೆಯವರು.
ಅಲ್ಲಿ ಸ್ವಾತಂತ್ರ್ಯಕ್ಕೆ ಮೇರೆ ಇಲ್ಲ.
ಎಷ್ಟು ಗಂಡುಗಳ ಜೊತೆ ಮಲಗಿದ್ದೆವೆನ್ನುತ್ತ
ಲೆಕ್ಕ ಇಟ್ಟಿರುವ ಮಹಿಳೆಯರಿಗೂ ಅಲ್ಲಿ ಸ್ವಾತಂತ್ರ್ಯವುಂಟು.
ಗಂಡ ಊರಿಂದ ಬರುವತನಕವೂ
ಜೋತೆಗಾಗಿ ಜಹಿರಾತು ಕೊಡುವರುಂಟು.
ಸಿನಿಮಾದಲ್ಲಿ ಎಲ್ಲವನ್ನೂ ಬಿಚ್ಚಿ ತೋರಿಸುವುದುಂಟು,
ಸಂಸಾರಸುಖವನ್ನು ಮೂವಿಕ್ಯಾಮರದಲ್ಲಿ ಹಿಡಿದಿಡುವರುಂಟು.
*****
೩೦-ಜನವರಿ-೧೯೮೧