ಜೊತೆ

ಬಾನಂಗಣದಲಿ ಕಂಕಣ ಕಟ್ಟಿದೆ
ಚಂದಿರ ರೋಹಿಣಿಯರ ಬಳಸಿ,
ಕಿರುಮೋಡವು ಹೆಡೆಯಾಡಿಸಿ ನಲಿದಿದೆ
ಗಾಳಿಯ ಪುಂಗಿಯನನುಸರಿಸಿ.

ಅಲ್ಲಿಂದಿಲ್ಲಿಗೆ ಸಾವಿರ ಮಲ್ಲಿಗೆ-
ಚಿಕ್ಕೆಯ ಸೇತುವೆ ತೂಗಿಹುದು,
ಇರುಳಿನ ಹೆಜ್ಜೆಯ ಗೆಜ್ಜೆಯ ಮೆಲ್ಲುಲಿ
ಗಿರಿ ವನ ಕೊಳದಲ್ಲಿ ಸುಳಿದಿಹುದು.

ಹಿತಮಿತವಾಗಿಹ ಮಾಯಾಬಂಧನ
ಸೃಷ್ಟಿರಹಸ್ಯದ ಛಾಯೆಯಿದು-
ಮಾತಿಗೆ ನಿಲುಕದ ರಸಸಂವೇದನ
ಅತ್ತಿಂದತ್ತವ ವಿವರಿಸದು.

ಈ ಬೆಳುದಿಂಗಳ ಇಂಗಡಲಾಳದಿ
ಕಂಗಳ ಮೀನ್ಗಳ ತೆರೆಯೆ ಸಖಿ,
ಸೃಷ್ಟಿಯ ಸೌಂದರ್‍ಯೋಪಾಸನೆಯಲಿ
ನೀ ಜೊತೆಗಿರೆ ನಾ ಪರಮ ಸುಖಿ.
*****