ಎಲೈ ರಾಕ್ಷಸನೇ,
ಕೇಳುವಂಥವನಾಗು! :
ಇಂತಿ ಸ್ವರಾಜ್ಯದೊಳು ಬೆಂಗಳೂರೆಂಬ ನಗರ, ಆ ನಗರದಲ್ಲಿ ಸೇಂಟ್ ಮಾರ್ಕ್ಸ್ ರೋಡೆಂಬ ರೋಡು, ಆ ರೋಡಿನಲ್ಲೊಂದು ಚಾಯ್ ದುಕಾನ್, “ಚಾಯ್ ದುಕಾನ್”?! ಕೋಶೀಸ್! ಹ!ಹ!ಹ! ರಾಕ್ಷಸನೇ, ಅದು ನನಗೆ ಅವಳಿಗೆ “ಚಾಯ್ ದುಕಾನ್”…ನಿನಗೇನೇ ಇರಬಹುದು, ನಮಗೆ
ಮಾತ್ರ “ಕಾಸ್ಟ್ಲಿ” ಸ್ವರ್ಗ.
ಇಲ್ಲ ರಾಕ್ಷಸ – ನಾನು ಇದನ್ನ ಒಂದು ಪತ್ರದ ರೂಪದಲ್ಲಿ ಬರೀತಿದ್ದೀನಿ. ಆವತ್ತು ನಾವು ಮಾತಾಡ್ತಾ ಇದ್ದದ್ದು…ನಾನು ಎಷ್ಟೋ ಸಾರ್ತಿ ಬರ್ದು, ಹರ್ದು ಮಾಡಿದ್ದೀನಿ.
ಈವತ್ತು ಮತ್ತೆ ಬರೀತಿದ್ದೀನಿ. ಹೆಂಗಸಿನ ಹೃದಯ..ಥೂ! ಹೃದಯ? ಆ ಪದ ನಂಗೆ ಬೇಡ. ನೀವು ಹೇಳಿದ್ನ ಮರೆತಿದ್ದೀನಿ – ಹಾಗೇ ಏನೋ ಹೇಳಿದ ನೆನಪು. ಎರಡು ಮೂರು ವಿಷಯ…ಕನ್ಫ್ಯೂಷನ್, ರೆವರನ್ಸ್ ಇಲ್ಲ ಅನ್ನೋದು…
ಹಾ! ಒಬ್ಬಳು ಹುಡುಗಿ ಬೀದೀಲಿ ಹೋಗುವಾಗ ತನ್ನನ್ನು ತಾನು ರಕ್ಷಿಸಿಕೊಳ್ಳಕ್ಕೆ ಒಬ್ಬ ತಂದೆ ಆದ್ರೆ ಹೇಗೆ ಹೇಳ್ತಾನೆ? ಅದೇ ತಾಯಿ, ಚಿಕ್ಕಮ್ಮ, ಅಜ್ಜಿ ಆದ್ರೆ ಹೇಗೆ ಹೇಳಬಹುದು?
ಅಮ್ಮ ಮೊದಲನೆ ಬಾರಿ ನನ್ಗೆ ಹೇಳಿದ್ದು ಯಾವಾಗ ಗೊತ್ತಾ? ನಾವು ಯಾವುದೋ ಊರಿಂದ ಬಸ್ಸಲ್ಲಿ ಬರುತ್ತಿದ್ದಾಗ ಯಾವನೋ ನನ್ನನ್ನ ಮುಟ್ಟಿದ – ಅಂದ್ರೆ ನನ್ನ “ಬೂಬ್ಸ್” ಮುಟ್ಟಿದ – ನಂಗೆ ಗೊತ್ತೇ ಆಗ್ಲಿಲ್ಲ.
ನನ್ನ ಚಿಕ್ಕಮ್ಮ ನೋಡಿ ಅಮ್ಮಂಗೆ ಅಂದಿದ್ದು “ಏನು ಎಮ್ಮೆನೇ ಇವಳು? ಯಾರು ಎಲ್ಲಿ ಮುಟ್ಟಿದ್ರೂ ಮುಟ್ಟಿಸ್ಕೋತಾಳೆ” ನನ್ನನ್ನು ಎಳೆದುಕೊಂಡು ಬರಬೇಕಾಯ್ತು. ನಂಗೆ ಅರ್ಥನೇ ಆಗ್ಲಿಲ್ಲ. ಆಚೆ ಎಲ್ಲೋ ನೋಡೋ ಭರಾಟೆಲಿ ಯಾರು ನನ್ನ ಎಲ್ಲಿ ಮುಟ್ಟಿದ್ರು ಅನ್ನೋದು ಗೊತ್ತಾಗ್ಲೂ ಇಲ್ಲ. ಯಾಕೆ ಮುಟ್ಟ ಬೇಕು? ಆಗ ನಂಗೆ ಹನ್ನೊಂದು ವರ್ಷ. ಯಾರಾದ್ರೂ ಮುಟ್ಟಬಹುದು. ನನ್ನೊಳಗಿನ ಆಗಿನ ಸ್ವರ್ಗ ಏನೆಂದು ಅರ್ಥೈಸಲೂ ಬರುತ್ತಿರಲಿಲ್ಲ. ಜಗತ್ತೆಲ್ಲಾ ಕನಸುಗಳೇ! ಅದರಲ್ಲಿ ಯಾರ ಸ್ವರ್ಗ ಏನಾದರೇನಂತೆ? ಅಹ್! ಆದರೆ ಹಾಗಿಲ್ಲ. ಜಗತ್ತು ನನ್ನ ದೇಹದ ಅಂಗಾಂಗಗಳ ಕರಾಳ ಪರಿಚಯ ಮಾಡಿಸಲೇ ಬೇಕಾಯ್ತು. ಅದರ ಅಂದ ಚಂದ ಅರ್ಥ ಮಾಡಿಕೊಳ್ಳುವ ಮೊದಲೇ ನನಗೆ ಅದರ ಪಾಠ. ಆ ಪಾಠಕ್ಕಿಂತ ಹೆಚ್ಚಿಗೆ ಯಾವುದನ್ನು ಎಷ್ಟು ಮುಚ್ಚಿಡಬೇಕು ಎಂದು “ಟೆಕ್ನಿಕ್” ಹುಡುಕೋದೇ ಆಗುತ್ತೆ. ಬೆಳೆಯುವಾಗ, ಮುಟ್ಟಾಗಿದ್ರಿಂದ ಹಿಡಿದು ನನ್ನ ದೇಹದ ಬೆಳವಣಿಗೆ, ಅದರ ಆಕರ್ಷಣೆಗಳು, ಅದರ ಅರಿವು ರೋಮಾಂಚನಗಳು ಇವನ್ನೆಲ್ಲಾ ಬಚ್ಚಿಡುವುದೇ ಆಯಿತು. ಏ! ರಾಕ್ಷಸ – ಇವೆಲ್ಲದರ ಮಧ್ಯೆ ಬದುಕಬೇಕಿತ್ತಲ್ಲ? ಇದೆಲ್ಲ ನನಗೂ ನೆನಪಿಗೆ ಬರುತ್ತಿರಲಿಲ್ಲ. ಹೀಗೇಕೆ? ಮುಟ್ಟಾಗುವುದರ ಬಗ್ಗೆ, ಎದೆ ಬೆಳೆಯುತ್ತಿರುವುದರ ಬಗ್ಗೆ ಯಾರೋ ಮಾತಾಡಿದ್ದು, ಪ್ರೊತಿಮಾ ಬೇಡಿ ಹೇಳಿದ್ದು ನೆನಪಾದಗಲೆಲ್ಲ ನಾನು ಅವನ್ನೆಲ್ಲಾ “ಮಿಸ್” ಮಾಡಿಕೊಂಡು ಬಿಟ್ಟೆ ಅನ್ಸುತ್ತೆ.
ಆವತ್ತು ಅಂದ್ರಿ – ಅಪ್ಪ ಆದ್ರೂ ಅದ್ನೇ ಹೇಳ್ತಿದ್ರು ಹಾಗೆ, ಅಂದ್ರೆ ಅಮ್ಮ ಹೇಳ್ಕೋಡೋದನ್ನೆ, ಅದೂ ಇದೂ ಅಂತ. ಸರ್, ಅಮ್ಮ ಪಿನ್ನು, ದುಪಟ್ಟ, ಕತ್ತಿ ಚಾಕು ಜೊತೆ ಕೆಟ್ಟದಾಗಿ ಜಗಳ ಆಡಲೂ ಹೇಳಿಕೊಟ್ಟಳು. ಸಮಯ ಬಿದ್ದರೆ ಹೊಡೆಯಲು, ಕೂಗಾಡಲೂ ಹೇಳಿಕೊಟ್ಟಳು. ಅಪ್ಪ..ಅಪ್ಪ, ಒಂದಿನಾನೂ ನನ್ನ ಹತ್ರ ಮಾತಾಡ್ಲಿಲ್ಲ. ಬೇರೆ ಅಪ್ಪಂದ್ರು ಮಾತಾಡ್ಬಹುದು, ಎಷ್ಟರಮಟ್ಟಿಗೆ? ಗೊತ್ತಿಲ್ಲ. ನಾನು ನಿಮ್ಮ ಹತ್ತಿರ ಥಿಯರಿ, ಅದೂ ಇದೂ ಅಂತ ಮಾತಾಡ್ಬಹುದು, ಆದ್ರೆ ಅಪ್ಪನ ಹತ್ತಿರ ಕಷ್ಟ. ಕಷ್ಟ ಅಂದ್ರೆ ನಂಗೆ ನನ್ನ ಅಪ್ಪನ ಹತ್ರ “ಇನ್ ಪರ್ಟಿಕ್ಯುಲರ್” ಮಾತಾಡಕ್ಕೆ ಇಷ್ಟ ಆಗಲ್ಲ. ಅದೇ ನನ್ನ “ಟೆರಿಟರಿ” ನ ಒಡೆದಂತೆ.
ಈ ದೇಹದ ಅರಿವು ಆದಾಗ್ಲೆಲ್ಲಾ ಏನೇನೋ ಯೋಚನೆ ಮಾಡಿದ್ದೀನಿ. ಪ್ರತಿಯೊಬ್ಬರ ದೃಷ್ಟಿ ಏನೇನೋ ಹೆಸರನ್ನು ಹೇಳಿಕೊಡುತ್ತಿತ್ತು. ತುಂಬಾ ಕೀಳರಿಮೆಯಿಂದ ಹಿಡಿದು ನನ್ನ ದೇಹವನ್ನು ನಾನೇ ಗೌರವಿಸಿ, ಪ್ರೀತಿಸಲೂ ಕಾರಣವಾಯಿತು. ಆದ್ರೆ ಒಂದು ಮಾತ್ರ ಹೇಳಬಹುದು. ಹೆಂಗಸರ “ರೆಸ್ಪಾನ್ಸ್” ಯಾವಾಗಲೂ ಬೇರೆ. ಉಹೂಂ! ಹಾಗೆ ಹೇಳಕ್ಕೆ…? ಅನ್ಸುತ್ತೆ ನಮ್ಮಮ್ಮ “ಸೈಸ್” ನ ಅಳೆದೂ, ಅಳೆದೂ ಅಳೆದ್ರೂ ಅವರು ಅಗೌವರ ಅಂತ ತೋರಿಲ್ಲ. ಈ “ಸಿಸ್ಟಮ್” ಹಾಗಿದೆ. ಈ ವ್ಯವಸ್ಥೇಲಿ, ಹೆಣ್ಣು ಇನ್ನೂ “ಆಸ್ತಿ” ಸ್ವರೂಪದಿಂದ ಆಚೆ ಬಂದಿಲ್ಲ. ಇದರಿಂದ್ಲೆ “ಅಲ್ಟಿಮೇಟ್” ಆಗಿ ಎಲ್ಲಾ ಕಳೆದು ಸೇರಿ ಅದೊಂದು ಜಾಗ “ವಜೈನ” ಮೇಲೆ ನಿಲ್ಲುತ್ತದೆ. ಅದರಿಂದ ಸ್ವಲ್ಪವಷ್ಟೇ ಮೇಲೆ “ಕ್ಲೈಟಾರಿಸ್” ಕಡೆ ಕೇಂದ್ರೀಕೃತವಾದರೆ ಎಷ್ಟೋ ವಿಷಯಗಳು ಬೇರೆಯಾದಾವು. ಈ ಕನ್ಯಾ ಸೆರೆ, ಅದನ್ನು ಒಡೆದವನಿಗೆ ಒಡೆತನ, ಉಳುವವನಿಗೆ ಭೂಮಿ – ಈ ಪಾಲಿಸಿಯಲ್ಲಿ ಹೆಂಗಸನ್ನ ಇಂದೂ ನಡೆಸಿಕೊಳ್ಳುತ್ತಾರೆ. ಅಂದ್ರೆ, ಅದರ ಮೇಲೆ ಕತೆಗಳಿ, ಕವನಗಳು, ಕಾದಂಬರಿಗಳು, ಥಿಯರಿಗಳು, ದೇವರು ಹೀಗೆ ಎಲ್ಲದನ್ನೂ ನಿಲ್ಲಿಸಿ ಇಡೀ ಹೆಂಗಸಿನ ದೇಹದ “ಸ್ಟ್ರಕ್ಚರ್” ಹಾಗೂ ಅದರ ಅಸ್ತಿತ್ವವನ್ನೇ ಹಾಳು ಮಾಡಿಬಿಡುತ್ತಾರೆ.
ನಿದ್ದೆ?
ಕನಸು?
ನಾಯಿಯ ಚರ್ಮ?
ನನ್ನ ಕೈಯ್ಯನ್ನು ಏನು
ಸೆಳೆಯುತ್ತಿದೆ?
ಮೋಡಗಳು?
ಕವಿತೆಗಿಂತ ಮೃದುವಾಗಿ
ಮುಟ್ಟಿದಾಗ ನಡುಕ
ರೋಮಾಂಚನ.
ನನ್ನ ಅಸ್ತಿತ್ವ
ನನ್ನ ಮಂಜು ಕಣ್ಣುಗಳು
ಅದರ ರೆಪ್ಪೆ
ನಾನು ಹೊತ್ತ ದೇಹ
ಅದಕ್ಕೂ ನನಗೂ
ಏನು ಸಂಬಂಧ?
ಜಗತ್ತು ಹೇಳುವುದಾದರೆ ನಾನು ಬರೀ “ಬೂಬ್ಸ್ ಮತ್ತು ವಜೈನ”. ನನಗದು ಬೇಡವೆಂದಲ್ಲ. ಆದರೆ ನಾನು ಅರ್ಥಮಾಡಿಕೊಂಡ ಹಾಗೆ ಇರಬೇಕು. ಅದು ನನ್ನ ಅಂಗವಾಗಿರಬೇಕು. ಇದರಿಂದ ಇದಾಗುತ್ತೆ, ಸೈನ್ಸ್, ಗಂಡಸರ ಡಿಸ್ಕ್ರಿಪ್ಷನ್. ಅದೂ ಹಳೆಯದು. ಶತಮಾನಗಳಷ್ಟು ಹಳೆಯದು. ಥೂ! ಬೇಡ. ಹೆಂಗಸರಿಗೆ “ಪೀನಸ್” ಇಲ್ಲ ಅನ್ನೋದು ಒಂದು ರೀತಿಯ ಕಾಂಪ್ಲೆಕ್ಸ್ ಅಂತಾ ಯಾರೋ ತತ್ವಜ್ಞ್ನಾನಿ ಹೇಳಿದರಂತೆ. ಯಾರಿಗೆ ಕಾಂಪ್ಲೆಕ್ಸ್? ಗಂಡಸರಿಗೆ ಯಾವತ್ತಿಗೂ ಸುಸ್ತಾಗದ ಅವರದ್ದೇ ಆದ ಹೋಲಿಕೆಗಳ ಪಟ್ಟಿ ಮಾಡಿ ಪುಸ್ತಕ ಬರೆಯಬಹುದು.
ಮತ್ತದೇ ಥಿಯರಿ, ಹೆಂಗಸು ದೈಹಿಕವಾಗಿ ಮತ್ತು ಬೇರೆ ಬೇರೆ ಕಾರಣಗಳಿಗೆ ವೀಕ್ ಅಂತ ಹೇಳಲಿಕ್ಕೂ ಇಷ್ಟ ಇಲ್ಲ. ಜೈ ಜೈ ಅಂತಾ ನಾವು ಹೆಂಗಸರೇ ಎಲ್ಲಾ ಮಾಡಬಹುದು ಅಂತನೂ ಹೇಳಲ್ಲ. ಅಥವ ಗಂಡಸರು ನಮಗೆ “ಡೆಫಿನಿಷನ್ಸ್” ಕೋಡೋದು ನಿಲ್ಲಿಸಿ ಅಂತನೂ ಹೇಳಲ್ಲ. ಹಾ! ಎಷ್ಟೋ ಸಾರಿ ಅನ್ಸಿದೆ, ಅನ್ಸಿದೆ ಏನು, ಮಾಡಿಯೂ ಇದ್ದೀನಿ. ಅವರು ಬ್ರಾ ಸೈಜು ಹೇಳಿದ್ರೆ, ನಾನು ಎರಡಿಂಚು, ಮೂರಿಂಚು ಅಂತಾ ಮಾತಾಡಿದ್ದೀನಿ. ನನ್ನ ಧ್ಯೇಯ ಇದಲ್ಲ.
ನಾನೇನಾದ್ರೂ ಒಂದು ದಿವ್ಸನಾದ್ರೂ ನನಗೆ ಬೇಕಾದ ಹಾಗೆ ಯಾವುದೇ ರೀತಿಯ ಭಯ “ಇನ್‌ಸೆಕ್ಯೂರಿಟಿ” ಇಲ್ಲದೆ ರಸ್ತೆಯಲ್ಲಿ ನಡೆದಾಡೋ ದಿನಕ್ಕಾಗಿ ಕಾಯ್ತೀನಿ.
ನಾ ಹೇಳ್ತಿರೋದು ಕೇಳು ರಾಕ್ಷಸ, ನನ್ನ ಪಾಡಿಗೆ ನಾನು ನಡೆಯುವಾಗ…ನನ್ನ ಪಕ್ಕ ಲೈಂಗಿಕ ಕಾರ್ಮಿಕರೇ ಇರಲಿ, ಅದು “ಧಂದೆ”ಯ ಬೀದಿಯಾಗಿರಲಿ ಅಕ್ಕಪಕ್ಕದಲ್ಲಿ ಹೋಗುವವರು ನಮ್ಮ “ಕನ್ಸೆಂಟ್” ಇದೆಯೋ ಇಲ್ಲವೋ ಅನ್ನುವುದನ್ನು ಗೌರವಿಸಿದ ದಿವಸ ಈ ನರಳಾಟ ಇರಲ್ಲ.
ಒಮ್ಮೆ ನಾನು ನನ್ನ ಸ್ನೇಹಿತೆ, ಅವಳು ಲೈಂಗಿಕ ಕಾರ್ಮಿಕಳು ರಸ್ತೆಯಲ್ಲಿ ನಿಂತಿದ್ದಾಗ ನನ್ನ ದೃಷ್ಟಿಗೂ ಅವಳ ದೃಷ್ಟಿಗೂ ಏನೂ ವ್ಯತ್ಯಾಸ ಇಲ್ಲ ಅನ್ನಿಸಿತು. ನಾನು ಚೆಂದವನ್ನು ಹೇಗೆ ಅಪ್ರಿಷಿಯೇಟ್ ಮಾಡ್ತಿದ್ದೆನೋ, ಅವಳೂ ಹಾಗೇ ಮಾಡ್ತಾ ಇದ್ಲು. ಮತ್ತೆ ಅವಳಿಗೆ “ಧಂದ” ಮಾಡಲಿಕ್ಕೆ ಕಸ್ಟಮರ್ ಹತ್ತಿರ ಬಂದಾಗ ಮಾತ್ರ ಚಿತ್ರ ಬದಲಾಯಿತು. ಅವಳ ಪಾಡಿಗೆ ಅವಳು ಹೋದಳು, ನನ್ನ ಪಾಡಿಗೆ ನಾನು ಬಂದೆ. ಅಪ್ರಿಸಿಯೇಷನ್ ನಲ್ಲಿ ಏನೂ ತೊಂದರೆ ಇಲ್ಲ. ಆದರೆ, ಅದೇ ಕಟ್ಟಳೆ, ಅದೇ ರೂಢಿ ಅಂದ್ರೆ ಹೇಗೆ?
ಪ್ರೊಟೆಕ್ಷನ್ ಮಾಡುವ ವಿಧಾನಗಳು ಮುಖ್ಯವಲ್ಲ ರಾಕ್ಷಸ. ನಾವು ಹೆಂಗಸರಿಗೆ “ಪ್ರೊಟೆಕ್ಷನ್” ಒಂದು “ಇನ್ವಾಲಂಟರಿ ಆಕ್ಷನ್” ಆಗಿ ಬಂದು ಬಿಟ್ಟಿದೆ. ಅದನ್ನ ನಾವೆಂದೂ ಬೇಕು ಅಂತ ಹೇಳಿರಲಿಲ್ಲ. ನನ್ನ ಹಕ್ಕು, ನಾನು ಯಾವುದೇ ಹಿಂಸೆ ಇಲ್ಲದೆ ರಸ್ತೇಲಿ ಮನೇಳಿ ಇರಬಹುದು ಅನ್ನೋದು ಬೇಕು. ಆದರೆ ನಾನು ಹೊಸ ಹೊಸ “ಪ್ರೊಟೆಕ್ಷನ್ ಟೆಕ್ನಿಕ್ಸ್” ನ ಹುಡುಕೋದ್ರಲ್ಲೇ ಸತ್ತು ಹೋಗ್ತೀವಿ.
ಅಹಹಹಾ! ಎಂಥಾ ಹೋಲಿಕೆಗಳು! ಭೂಮಿ, ಪ್ರಕೃತಿ – ಹೆಂಗಸು. ಒಂದು ಬೀಜದ ಕಾರಣಕ್ಕಾಗಿ ಇಷ್ಟೆಲ್ಲ. ಅದನ್ನಲ್ಲ ನಾನು ವಿರೋಧಿಸುತ್ತಿರುವುದು, ನನ್ನ ಸಿಟ್ಟು ಇವುಗಳ ಹಿಂದಿರುವ “ನಡವಳಿಕೆ” ಗಳ ಬಗ್ಗೆ.
ನಾನು ಪ್ರಕೃತಿಯೋ, ನಾಯಿಯೋ, ಜೀತದಾಳೋ ಅಥವಾ ಸಿಸ್ಟಮ್‌ನಲ್ಲಿ ಸಿಗುವ ಸೆಕ್ಯುರಿಟಿಯೇ ಸರ್ವಸ್ವ ಎಂದು ತಿಳಿದು ಬದುಕುವವಳೋ, ಮೋಡವೋ, ಬೆಂಕಿಯೋ, ಇನ್ನೂ ಏನೇನು ಹಾಳು ಮೂಳೋ ಅದನ್ನು ನಾನೇ ತೀರ್ಮಾನಿಸಲು “ಸ್ಪೇಸ್” ಬೇಕು. ಬರೀ “ಸ್ಪೇಸ್” ಅಲ್ಲ, “ಇಂಟಲೆಕ್ಚುವಲ್ ಸ್ಪೇಸ್” ಕೂಡ. ಏಕೆಮ್ದರೆ ನನ್ನ ಯೋಚನ್ಗಳ ಧಾಟಿಯೂ ನನಗೆ ಗೊತ್ತಿಲ್ಲದೇನೆ, ವಿಚಾರಿಸದೇನೆ ಅವುಗಳನ್ನೇ ಅವಲಂಬಿಸಿರುತ್ತದೆ.
ನೋಡುವ ಕಣ್ಣುಗಳು ಎಲ್ಲವನ್ನೂ “ಸಮ್ಮರೈಸ್” ಮಾಡಿ “ಜಡ್ಜ್‌ಮೆಂಟ್” ಕೊಡೋದು ನನಗೆ ಬೇಡ. ಸೈಜು, ಶೇಪು, ಆಕಾರ, ವಿಕಾರಗಳ ಅರಿವು ನನಗೇ ಬಿಡಿ. ನಾನೇ ತೀರ್ಮಾನಿಸುತ್ತೇನೆ.
ಅವಳ ಬೆನ್ನಿಗೆ
ಕಿವಿಕೊಟ್ಟು
ಮೋಡಗಳ ಉಸಿರನ್ನು
ಉಸಿರ ಬಿಸುಪನ್ನು ನೋಡಿದೆ.
ನಾಲಿಗೆ ಚಾಚಿ
ಮಳೆ ಹನಿ ಹಿಡಿದಾಗ
ಪ್ರಕೃತಿ ನನ್ನ ದೇಹದಲ್ಲಿರಲಿಲ್ಲ.
ಕೊಚ್ಚೆ ರಾಡಿಯಲ್ಲಿ
ಬೀದಿ ಹುಡುಗರ ಜೊತೆ
ಕುಣಿದಾಗ
ಅವರ ಕೈಬೆರಳ
ಬೆವರ ವಾಸನೆ
ನನ್ನ ಕಿವಿಗೆ ಕೇಳಿಸಿತು.
ಮುಟ್ಟಿನಲ್ಲಿ
ಹೊಟ್ಟೆ ಹಿಡಿದು ನರಳಾಡುವಾಗ
ಇರುವ ಎಲ್ಲಾ ಮರಗಳನ್ನೂ
ಕಣ್ಣಿನಾಲೇ ಸುಟ್ಟು
ಬೂದಿ ಮಾಡಿದೆ.
ನನ್ನ ಕಣ್ಣುಗಳ ಅಂದ
ನನಗೇ ಗೊತ್ತು
ನಿನ್ನ ಬಾಯಿಂದ ಕೇಳಿದಾಗ
ಅದರ ಬೆಳಕು
ಕಂದೀತು
ಎಂಬ ಭಯ
ಏನು ಪ್ರಕೃತಿ? ಏನು ಪುರುಷ?
ನಾನು ನನ್ನಲ್ಲೇ ಜಗತ್ತನ್ನು ಕಾಣುವವಳು,
ಒಮ್ಮೊಮ್ಮೆ ಎಲ್ಲವನ್ನೂ ಕಳೆಕುಕೊಂಡು
ರಸ್ತೆಯಲ್ಲಿ ನಗ್ನಳಾಗಿ ನಿಂತು
ಭಿಕ್ಷೆ ಬೇಡುವವಳು.
ಇದಕ್ಕೆ ಕೆಟ್ಟ ಹೆಸರು ಬೇಡ.
ನನಗೆ ನನ್ನ “ಅಸ್ತಿತ್ವ”ದ
ಅರಿವು
ಮಾಡಿಸಬೇಡ
ನಿಂತಲ್ಲು ನಿಂತು ಹರಿಯುವವಳು
ನಾನು ಭೂಮಿಯೂ ಅಲ್ಲ
ತಾಯಿಯೂ ಅಲ್ಲ.
ನಕ್ಕಾಗ ಪ್ರಪಂಚವ ಕೈಯ್ಯಲ್ಲಿ
ಹಿಡಿದಿರುತ್ತೇನೆ
ಕಣ್ಣಿಗೆ ಕಾಣಿಸಿದಷ್ಟನ್ನು
ಹಿಡಿಯಲು ಹಾರುತ್ತೇನೆ
ನನ್ನ ಆಕಾಶ
ನನಗಿರಲಿ ಬಿಡು.
ಕೆಲವು ಸಾರ್ತಿ ಅನ್ಸುತ್ತೆ, ಈ ಜಗತ್ತಿಗೆ ಬುದ್ಧಿನೇ ಇಲ್ಲ ಅಂತ. ಒಂದು ಕುಟುಂಬ, ಮನೆತನ, ಮಾನ-ಮರ್ಯಾದೆ ಎಲ್ಲ ಬರೀ ಒಬ್ಬ ಹೆಂಗಸಿನ “ಯೋನಿ” ಮೇಲೆ ನಿಂತಿದೆಯಾ? ಅಷ್ಟೇನಾ ಮಾನ ಮರ್ಯಾದೆ ಅಂದ್ರೆ? ಒಂದು ಛೇದ? ಅಲ್ಲಿ ನನ್ನ ಮೇಲೆ ಜಬರ್ದಸ್ತಿ ಆಗ್ತಿದ್ದಾಗ ನನ್ನನ್ನು ಕಾಡಿದ್ದು ಮಾನ ಮರ್ಯಾದೆ ಅಲ್ಲ. ನನ್ನ ದೇಹದ ಮೇಲಿನ ನನ್ನ “ಕಂಟ್ರೋಲ್, ಇಂಟೆಗ್ರಿಟಿ” ಕಾಡಿದುವು.ಅಲ್ಲಿ ಮಾನ ಮರ್ಯಾದೆಗೆ ಜಾಗವೇ ಇಲ್ಲ ಬಿಡು ರಾಕ್ಷಸ. ಚರ್ಮ, ಟಿಷ್ಯುಗಳು,
ಸೆಲ್ಲ್ಸ್, ಲಿಂಗಗಳು ಅದರ ಮೇಲೆ ನನ್ನ ಒಪ್ಪಿಗೆ ಇಲ್ಲದೆ, ನಾನು ಸಂತೋಷಪಡದಂತಹ ಯಾವುದೇ “ಟ್ರೀಟ್‌ಮೆಂಟ್” ನನಗೆ ಸರಿ ಬರುವುದಿಲ್ಲ. ಮನೆತನದ ಮಾನಮರ್ಯಾದೆ ಅದು ಹೇಗೆ ಆಗಲು ಸಾಧ್ಯ? ಅದು ಒಬ್ಬ ಗಂಡಸಿನ ಒಂದು ವ್ಯವಸ್ಥೆಯ “ಆಸ್ತಿ ಭಾಗ”ವಾದಾಗ ಮಾತ್ರ.
ಸಾರಿ, ನಿಮಗೆಲ್ಲ ಅದು ಆಸ್ತಿ ಆಗೋದು ತಪ್ಪು ಅಂದಾಗ ಇನ್ನೊಂದು ಎಕ್ಸ್‌ಟ್ರೀಮೇ ಕಾಣೋದು. ಅಂದ್ರೆ ಬೀದಿ ಪಾಲು, ನಾಯಿ ಮುಟ್ಟಿದ ಕೊಡ, ಹಾಗೆ ಹೀಗೆ ಎಲ್ಲ! ನನ್ನ ದೇಹ ನನಗೂ ಆಸ್ತಿಯಲ್ವಾ? ಮನಸ್ಸು, ಬುದ್ಧಿ, ಕೈಕೆಲಸ ಮಾರಿ ಬದುಕೋ ಹಾಗೆ…ಈಗ ಮನಸ್ಸಿಗೆ ನಾವೇನು ಕಡಿಗೆ ಗೌರವ ಕೊಡ್ತೀವಾ? ಯಾಕೋ ತುಂಬಾ ಕೊರೀತಾ ಇದ್ದೀನಲ್ವಾ ರಾಕ್ಷಸ?
*****
