ನೆರಳು-ನಡುನೆರಳು-ಪಡಿನೆರಳು

ಬೆಳಿಗ್ಗೆ ನಾನು ಹೊರಗೆ ಹೋಗಬೆಕಾದರೆ ಪೂರ್ವದಿಕ್ಕಿನ ಕಡೆಗೆ ಹೊರಡುತ್ತೇನೆ; ಸಂಜೆ, ಪಶ್ಚಿಮದ ಕಡೆಗೆ. ನನಗಿಂತ ನನ್ನ ನೆರಳು ಉದ್ದವಾಗಿರುವುದನ್ನು ನೋಡಿ ನಾನು ಸಹಿಸಲಾರೆ. ಹಿಂದೆ ಅದು ಬಾಲಾಂಗಚ್ಚೆಯ ಹಾಗೆ ಬಂದರೆ ಬಂದುಕೊಳ್ಳಲಿ, ನಾನು ಬೇಡವೆನ್ನುವುದಿಲ್ಲ, ಬಾಲದ ಹಾಗಾಯಿತು. ಅದನ್ನು ಮುಂದೆ ಬಿಟ್ಟುಕೊಂಡು ಹೋಗುವುದೇನು ಚೆನ್ನು. ಅದೇನು ಸೀಮೆಯ ನಾಯಿ ಕೆಟ್ಟು ಹೋಯಿತೆ? ನಾನು ದೊಡ್ಡವನೋ ನನ್ನ ನೆರಳು ದೊಡ್ಡದೋ? ಅದನ್ನು ನಾನು ಮೆರೆಸಬೇಕೆ? ಬಾಲ್ಯದಲ್ಲಿ ಈ ಬೀದಿಯಿಂದ ಆ ಬಿದಿಯವರೆಗೂ ನನ್ನ ನೆರಳು ಲಂಬಿಸಿರುವುದನ್ನು ನೋಡಿ ನಾನೇನೋ ಆನಂದಪಟ್ಟಿರಬಹುದು. ಈಗ ಅಂಥ ಬಾಲಿಶಭಾವ ನನಗೆ ಖಂಡಿತ ಇಲ್ಲ. ಅಷ್ಟೇಕೆ, ಈಗ ನನಗೆ ಸಂಜೆ-ಬೆಳಿಗ್ಗೆ ಈ ಎರಡು ಕಾಲಗಳಿಗಿಂತ ಮಧ್ಯಾಹ್ನ ವಾಕಿಂಗ್ ಹೊರಡುವುದಕ್ಕೇ ಹೆಚ್ಚು ಇಷ್ಟ. ಏಕೆಂದರೆ ಆಗ ಈ ಪೆಡಂಭೂತ ಗುಜ್ಜಾರಿಭೂತವಾಗುತ್ತದೆ. ಆಗ ಅದು ನನ್ನ ಸಂಪೂರ್ಣ ವಶವರ್‍ತಿ. ಅದನ್ನು ಹೆಜ್ಜೆಹೆಜ್ಜೆಗೂ ತುಳಿಯುತ್ತಾ ಅಂಧಕಾಸುರನನ್ನು ಮೆಟ್ಟುವ ಶಿವನ ಉತ್‌ಕರ್ಷವನ್ನು ನಾನು ಅನುಭವಿಸಬಹುದು. ಇದೇನು ಸಾಮಾನ್ಯವಾದ ಆನಂದವೇ? ಆದರೆ ಮಧ್ಯಾಹ್ನಕ್ಕಿಂತಲೂ ಕೃಷ್ಣಪಕ್ಷದ ರಾತ್ರಿ ಇನ್ನೂ ಹೆಚ್ಚು ಚೆನ್ನು. ಆಗ ನನಗೂ ದೇವತೆಗಳಂತೆ ನೆರಳೇ ಇರುವುದಿಲ್ಲ. ಅದಕ್ಕೇ ನನಗೆ ಇರುಳನ್ನು ಕಂಡರೆ ಪ್ರೀತಿ. ತಮ್ಮ ನೆರಳಿಗೆ ತಾವಂಜಿಕೊಳ್ಳುವವರು ಅಥವಾ ಅಸಹ್ಯಪಟ್ಟುಕೊಳ್ಳುವವರು ನಿಶಾಚರರಾಗಬಯಸುವುದು ಸಹಜ. ನನಗೆ ಅಂಥ ಬಯಕೆ.

ಹೀಗೆಂದಮಾತ್ರಕ್ಕೇ ನನ್ನಲ್ಲಿ ರಾಕ್ಷಸಾಂಶ ಹೆಚ್ಚೆಂದೂ ನನಗೂ ನನ್ನ ನೆರಳಿಗೂ ಪ್ರದ್ವೇಷವೆಂದೂ ಯಾರೂ ಭಾವಿಸಿಕೊಳ್ಳಕೂಡದು. ಅದರ ದ್ವೇಷವನ್ನು ಕಟ್ಟಿಕೊಂಡು ಬದುಕುವುದಕ್ಕಾಗುತ್ತದೆಯೇ? ಆದರೆ ಎಷ್ಟೇ ಪ್ರಿಯ ವಸ್ತುವಾಗಲಿ ಅದು ಯಾವಾಗಲೂ, ನಮಗೆ ಬಿಡುವನ್ನೇ ಕೊಡದೆ, ಸುತ್ತುಮುತ್ತು ಹಿಂಬಾಲಿಸಿ ಮುಂಬಾಲಿಸಿ ಪೀಡಿಸುತ್ತಿದ್ದರೆ, ಅದರ ವಿಚಾರವಾಗಿ ನಾವು ಕೆಲವು ವೇಳೆ ಬೇಸರಪಟ್ಟುಕೊಳ್ಳುವುದು ಸಹಜತಾನೆ.

ಆದರೆ ನಿಜವಾಗಿ ಇದು ಪ್ರಿಯವಸ್ತು. ನೆರಳಿಲ್ಲದ ಮನುಷ್ಯ ಮನುಷ್ಯನೇ ಅಲ್ಲ. ಒಂದುಪಕ್ಷ ಅವನು ದೇವತೆಯಾದರೂ, ಅದು ಎಲ್ಲರೂ ಬಯಸುವಂಥ ಬದುಕಲ್ಲ. ನಾವು ಬಯಸುವುದು ಸಶರೀರ ಸ್ವರ್ಗವನ್ನ-ಅಂದರೆ ಸ್ವರ್ಗದಲ್ಲಿ ನೆರಳು ಚೆಲ್ಲುವ ಬದುಕನ್ನು-ಅಲ್ಲವೇ? ದಮಯಂತಿ ವರಿಸಿದ್ದು ಯಾರನ್ನು? ನೆರಳನ್ನು ಮೆರೆಸಿದ ನಳನನ್ನೋ-ಇಲ್ಲ ಛಾಯಾಶೂನ್ಯರಾದ ದಿಕ್ಪಾಲಕರನ್ನೋ? ಇಂಥ ಪ್ರಣಯಿಗಳನ್ನು ಒಂದುಗೂಡಿಸಿದ ಈ ಛಾಯೆಯನ್ನು ಪ್ರೀತಿಸದಿರುವುದೆಂತು?

ಈ ನೆರಳನ್ನು ನೋಡಿ ನಾನು ಸೋಜಿಗಪಡದೆಯೂ ಇಲ್ಲ. “ಎಷ್ಟೇ ಅಂಧಕಾರವಿದ್ದರೂ ಒಂದು ಅಲ್ಪ ದೀಪಶಿಖೆ ಅದನ್ನು ಹೇಗೆ ಎದುರಿಸುತ್ತದೆ ಎಂದು ಮುಂತಾದ ಉತ್‌ಪ್ರೇಕ್ಷೆಗಳ ಉದ್ಗಾರವನ್ನು ಎಷ್ಟೋ ಕವಿಗಳು ತೆಗೆದಿದ್ದಾರೆ. ಆದರೆ ಈ ಛಾಯೆಯ ದಿಟ್ಟತನವನ್ನು ಯಾರೂ ಏಕೆ ಹೊಗಳಿಲ್ಲ? ಎಷ್ಟೇ ಬೆಳಕಿರಲಿ ಇದು ಕರ್ರಗೆ ಸ್ವಲ್ಪವೂ ಸಂಕೋಚವಿಲ್ಲದೆ ಅದರೆದುರಿಗೇ ಮೆರೆಯುತ್ತದೆ ಅಲ್ಲವೆ? ಇದನ್ನು ನಿವಾರಿಸುವ ಶಕ್ತಿ ಸೂರ್‍ಯನಿಗೇ ಇಲ್ಲ ಎಂದಮೇಲೆ, ಮಿಕ್ಕ ಹುಲುಹಣತೆಗಳ ಪಾಡೇನು? ಈ ದಾರ್ಷ್ಟ್ಯವಿರುವುದರಿಂದಲೇ ಇದು ಸೂರ್‍ಯನನ್ನೇ ಗಂಡನನ್ನಾಗಿ ಮಾಡಿಕೊಂಡಿತು. ಎಂಥ ದೇದೀಪ್ಯಮಾನವಾದ ಹಗಲಿನಲ್ಲೂ ಇದು ಬಣ್ಣಗುಂದುವುದಿಲ್ಲ. ಬೆಳಕಿನ ಪ್ರಖರತೆಯೊಡನೆ ಇದಕ್ಕೆ ಯಾವಾಗಲೂ ಸ್ಪರ್ದೆ. ಅದರಿಂದ ನೊಂದವರಿಗೆ ಇದು ಆಶ್ರಯ. ಆ ಪ್ರಜಾಸರ್ಕಾರದ ಸಭೆಯಲ್ಲಿ ಇದಕ್ಕೆ ಪ್ರತಿಪಕ್ಷಸ್ಥಾನ. ಇದರ ಗಂಡುತನಕ್ಕೆ ನಾನು ನಿಜವಾಗಿ ಮರುಳುಗೊಂಡಿದ್ದೇನೆ. “ಬಿಸಿಲೆಂಬ ಹಾಲ್ಗಡಲಿನ ಗರಳವಿದು-ಈ ಛಾಯೆ-ಇದನ್ನು ಕುಡಿಯಬಲ್ಲ ದೇವತೆ ಇರುಳೊಂದೇ” ಎಂದು ಇದರ ಮಹಾತ್ಮೆಯನ್ನು ವರ್ಣಿಸುತ್ತಾ ಒಂದು ಸುಂದರ ಕವಿತೆಯನ್ನು ಯಾರಾದರೂ ಕಟ್ಟಬಾರದೇಕೆ? “ಹಣೆಯ ಬೆಳಕಿನ ನೆರಳು ಕೊರಳಗರಳ” ಎಂದು ಬೇಕಾದರೂ ಶಿವನನ್ನು ಸ್ತೋತ್ರ ಮಾಡುವ ನೆವದಲ್ಲಿ ಇದನ್ನು ಹೊಗಳಬಹುದಲ್ಲ.

ತಮ್ಮ ನೆರಳಿನಿಂದ ತಾವು ವಿನೋದಗೊಳ್ಳದ ಭಾವುಕರಿಲ್ಲ ಎನ್ನಬಹುದು. ನಮ್ಮ ಜೀವನದ ಸರ್ಕಸ್ಸಿನಲ್ಲಿ ಇದು ಅಟಗುಳಿ ಕೋಡಂಗಿ, ನಾವು ರಾಜರಾದರೆ ಇದು ವಿದೂಷಕ,ನಾವು ಪಾತ್ರಗಳಾದರೆ ಇದು ಸಾರಥಿ. ನಾವು ಬಯಸಿದಾಗ ಅದು ಗೋಚರವಾಗುತ್ತದೆ; ನಾವು ಅಲಕ್ಷಿಸಿದರೆ ಅದೇನೂ ಕೊರಗುವುದಿಲ್ಲ. ಪ್ರತಿಬಿಂಬದಂತೆ ‘ನೀನೇ ನಾನು’ ಎಂದು ಎಂದಿಗೂ ಸಮಾನತೆಯ ದಾರ್ಷ್ಟ್ಯವನ್ನು ತೋರದು. ಈ ಹಾಸ್ಯರಾಜ ಕಲಾಪರಿಪೂರ್ಣನಾಗಿಯೂ ಇದ್ದಾನೆ. ತನ್ನ ಅಂಗವಿಕಾರಗಳನ್ನು ಬಹು ಮನೋಜ್ಞವಾಗಿ ಮಾಡಿ ನಮ್ಮನ್ನು ನೋಯಿಸದಂತೆ ಅಣಕಿಸುತ್ತಾನೆ, ಗಿಡ್ಡನಾಗುತ್ತಾನೆ, ಗುಜ್ಜಾರಿಯಾಗುತ್ತಾನೆ, ಭೀಮನಾಗಿ ಬೆಳೆಯುತ್ತಾನೆ, ಕಬಂಧನಂತೆ ತನ್ನ ಹೊಟ್ಟೆಯೊಳಕ್ಕೆ ತನ್ನ ತಲೆಯನ್ನು ಅಡಗಿಸಿಕೊಂಡು ವಿಕಾರನಾಗುತ್ತಾನೆ. ಈ ವಿಕಾರಗಳಲ್ಲಿ ನಮ್ಮನ್ನು ಟೀಕಿಸಿವ ಬಗೆ ಸ್ವಲ್ಪವೂ ಇಲ್ಲ. ಈ ಎಲ್ಲ ನಟನೆಗಳೂ ನಮ್ಮ ಸ್ವರೂಪಕ್ಕೆ ನಾವೇ ನಗುವಂತೆ ಮಾಡುತ್ತವೆ ಅಷ್ಟೆ. ನಮಗೆ ನಾವೆ ನಗದಿದ್ದರೆ ಈ ಬಾಳಿನಲ್ಲಿ ಉಲ್ಲಾಸವನ್ನು ಪಡೆಯುವುದೆಂತು. ಈ ವಿದೂಷಕನ ವೈದುಷ್ಯ ನಮಗೆ ಪದೇ ಪದೇ ಲಭಿಸದಿದ್ದರೆ ನಾವು ಹೇಗೆ ತಾನೆ ಗೆಲುವಾಗಿರುವುದಕ್ಕೆ ಸಾಧ್ಯ?

ನಮ್ಮ ನೆರಳಿನಲ್ಲಿ ಮತ್ತೊಂದು ಅನರ್ಘ್ಯವಾದ ಗುಣವಿದೆ. ಇದು ಬಿಂಬಸಹಚರಿ. ಈ ಸಾಹಚರ್ಯವನ್ನು ತಪ್ಪಿಸಲು ಯಾರಿಗೂ ಸಾಧ್ಯವಿಲ್ಲ. ಅದಕ್ಕೆಯೇ ಹೆಂಡತಿಯರು ಗಂಡಂದಿರನ್ನು ನೆರಳಿನಂತೆ ಅನುವರ್ತಿಸಬೇಕು ಎಂದು ಪೂರ್ವಿಕರು ಹೇಳುತ್ತಿದ್ದುದು. ಆದರೆ ಈಗ ಕಾಲ ಬದಲಾಯಿಸಿದೆ. ನೆರಳಿನಂತಿರುವ ಹೆಂಡತಿಯರು ಈಗ ಯಾರಿಗೂ ಬೇಡ; ಪ್ರತಿಬಿಂಬದಂತಿರುವ ಪ್ರೇಯಸಿ ಬೇಕು. ನೆರಳು ಪತ್ನಿ, ಪ್ರತಿಬಿಂಬ ಪ್ರೇಯಸಿ. ನೆರಳು ಚೆನ್ನೋ ಪ್ರತಿಬಿಂಬ ಚೆನ್ನೋ-ನೆರಳನ್ನು ನನ್ನಂಥವರಲ್ಲದೆ ಮಿಕ್ಕವರಾರು ಗಮನಿಸುತ್ತಾರೆ? ಪಡಿನೆಳಲನ್ನು ಗಮನಿಸದೆಯೇ ಇರುವುದು ಹೆಗೆ? ನೆರಳನ್ನು ನೀವು ಮೆಚ್ಚಬಹುದು. ಇಲ್ಲ ಅದಕ್ಕೆ ಅಸಹ್ಯಸಿಕೊಳ್ಳಬಹುದು. ಇದರಿಂದ ಅದಕ್ಕೆ ಎಗ್ಗೂ ಇಲ್ಲ ತಗ್ಗೂ ಇಲ್ಲ. ಅದು ನಿರ್ಲಿಪ್ತ, ಆದರೂ ಸದಾಸಕ್ತ. ನಿಮ್ಮ ಪ್ರತಿಬಿಂಬದ ರೀತಿಯೇ ಬೇರೆ; ನೀವು ನೆನೆದ ವೇಳೆಯಲ್ಲಿ ಅದನ್ನು ಕಾಣಲಾರಿರಿ. ಅದಕ್ಕೆ ದರ್ಪಣದ ದೌತ್ಯಬೇಕು. ನಿಮ್ಮ ವಿಷಾದ ಹರ್ಷಗಳು ಅದಕ್ಕೂ ತತ್ಟುತ್ತವೆ. ಪ್ರತಿಬಿಂಬ ನಿಮ್ಮ ವ್ಯಾಮೋಹವನ್ನೇ ಅಪೇಕ್ಷಿಸುತ್ತದೆ; ಅದಕ್ಕೆ ನಿಮ್ಮ ಪ್ರೇಮ ಸಾಲದು. ಅದಕ್ಕೆ ಮೋಹಗೊಳ್ಳದೆ ನೀವು ಅದನ್ನು ಪಡೆಯಲಾರಿರಿ. ನಿಮ್ಮ ವಿಲಾಸದ ಕುರುಹು, ಆತ್ಮಾಭಿಮಾನದ ಪ್ರತೀಕ. ನಿಮ್ಮ ಪ್ರತಿಬಿಂಬ. ನಿಮ್ಮ ಸಂಪೂರ್ಣ ಲಕ್ಷ್ಯವನ್ನು ಅದು ತನ್ನೆಡೆಗೆ ಸೆಳೆದುಕೊಳ್ಳುತ್ತದೆ. ನಿಮಗೆ ನಿಮ್ಮ ಬೆನ್ನನ್ನು ತೋರಿಕೊಡುವ ವಸ್ತು ನಮ್ಮ ನೆರಳು; ಮುಖವನ್ನು ಪ್ರತಿಬಿಂಬ. ನಿಮಗೆ ಏನು ಮೆಚ್ಚು, ಬೆನ್ನೋ ಮುಖವೋ? ವೈರಾಗ್ಯವೋ ಶೃಂಗಾರವೋ, ಭವಸಹಿಷ್ಣುತೆಯೋ ಭಾವವಿಲಾಸವೋ, ನಿತಿಶಠತೆಯೋ ರಸಿಕಜೀವನವೋ, ವೇದಾಂತವೋ, ವಿಜ್ಞಾನವೋ, ಯುವಕ ಯುವತಿಯರಿಗೆಲ್ಲಾ ಪಡಿನೆಳಲೇ ಇಷ್ಟ ಎಂದು ಹೇಳಲೇಬೇಕು. ಆದರೆ ಜೋಕೆ. ಪರಾಶ್ರಯವಿಲ್ಲದೆ ಪ್ರತಿಬಿಂಬ ಲಭಿಸುವುದಿಲ್ಲ. ಈ ವಿಷಯದಲ್ಲಿ ನೆರಳು ಇದಕ್ಕಿಂತ ಎಷ್ಟೋ ವಾಸಿ. ಅದರ ಅವಿರ್‍ಭಾವಕ್ಕೆ ನಾವು ಯಾರ ಹಂಗನ್ನೂ ಕೋರುವಹಾಗಿಲ್ಲ. ಪ್ರತಿಬಿಂಬಕ್ಕೆ ಕನ್ನಡಿ ಬೇಕು. ಅದು ನಿರ್ದುಷ್ಟವೂ ನಿಸ್ಸವಾರ್ಥವೂ ಆಗಿರಬೇಕು. “ಇದೇ ನಾನು” ಎಂಬ ವಿಷಯದಲ್ಲಿ ಜಾಗರೂಕರಾಗಿರಿ. ನಿಮಗೆ ನಿಷ್ಕೃಷ್ಟಜ್ಞಾನ ಬೇಕಾಗಿದ್ದರೆ ನಿಮ್ಮ ಕನ್ನಡಿಯ ವಿಷಯದಲ್ಲಿ ಜಾಗರೂಕರಾಗಿರಿ. ಈ ಆತ್ಮಜ್ಞಾನ ಸುಲಭವಾಗಿ ದೊರಕತಕ್ಕದ್ದಲ್ಲ. ಏಕೆಂದರೆ ಈ ವಿಜ್ಞಾನಯುಗದಲ್ಲಿ ನಮ್ಮ ವಿಚಾರ ನಮಗೆ ಸುತರಾಂ ತಿಳಿಯದು. ಈಗ ನಮ್ಮ ಮನಸ್ಸೆಲ್ಲಾ ಬಹಿರ್ಮುಖವಾಗಿದೆ. ಅದಕ್ಕೆ ಅಂತರಮುಖತೆಯೇ ಇಲ್ಲ. ನಮ್ಮ ಪ್ರತಿಬಿಂಬಕ್ಕೂ ಏಕರೂಪತೆ ಇಲ್ಲ. ಒಂದೊಂದು ಕನ್ನಡಿಯಲ್ಲಿ ಅದು ಒಂದೊಂದು ತೆರನಾಗಿ ತೋರುತ್ತದೆ. ನಾನು ನಾವೆಂದುಕೊಂಡಿರುವಷ್ಟು ಚೆಲುವಾಗಿ ಯಾವ ಕನ್ನಡಿಯೂ ತೋರದು. ನಾವು ಇನ್ನೂ ಸುಂದರ ಯುವಕರೆಂದೇ ತಿಳಿದುಕೊಂಡಿರುವಾಗ ಕನ್ನಡಿ ಇದ್ದಕ್ಕಿದ್ದ ಹಾಗೆಯೇ ಸುಕ್ಕು ಮೋರೆಯನ್ನು ತೋರಿಸುವುದುಂಟು. ಈ ವಿಚಾರದಲ್ಲೂ ನೆರಳು ಪ್ರತಿಬಿಂಬಕ್ಕಿಂತಲೂ ಮೆಲು. ಕಾಲದೊಡನೆ ಈ ಥರದ ಪಕ್ಷಪಾತ ನೆರಳಿಗೆ ಇಲ್ಲ. ಪ್ರತಿಬಿಂಬಕ್ಕೂ ಕಾಲಪುರುಷನಿಗೂ ಅತಿ ಮೈತ್ರಿ. ಇದನ್ನು ತಪ್ಪಿಸಬೇಕೆಂದೇ ಮನುಷ್ಯನ ಸತತ ಪ್ರಯತ್ನ. ಅವನು ಕನಸು ಕಾಣುವುದಕ್ಕೆ ಮೊದಲಿಟ್ಟುದು ಈ ಪ್ರಯತ್ನದಿಂದ. ಚಿತ್ರಕಲೆ ಬೆಳೆದುದು ಹೇಗೆ? ಈ ಉದ್ಯಮದ ಫಲವಾಗಿ ಅಲ್ಲವೆ? ರಾಜರು ತಮ್ಮ ಆಸ್ಥಾನಗಳಲ್ಲಿ ಕವಿಪುಂಗವರನ್ನು-ಅಂದರೆ ಶಬ್ದವರ್ಣಿಗಳನ್ನು-ಬೆಳೆಸಿ ಇಟ್ಟುಕೊಂಡಿದ್ದುದು ಬಿಂಬದಿಂದ ಪ್ರತಿಬಿಂಬವನ್ನು ಪ್ರತ್ಯೇಕಿಸುವ ಇಚ್ಛೆಯಿಂದ ಎಂದು ತೋರುವುದಿಲ್ಲವೆ? ಈ ವಿಜ್ಞಾನಯುಗದಲ್ಲಿ ಈ ವಿಚ್ಛೇದ ಸುಲಭವಾಗಿ, ಇವಕ್ಕೆ ಚಲನಚ್ಚಿತ್ರ ಮಂದಿರಗಳು ಏರ್ಪಟ್ಟಿವೆ. ಚಿತ್ರಕಾರರಿಗೂ ಕವಿಗಳಿಗೂ ಈಗ ಸಹಜವಾಗಿಯೇ ಪುರಸ್ಕಾರ ಕಡಿಮೆ: ಈಗಿನ ಕಲಾವಿಲಾಸಿಗಳಿಗೆ ಬಿಂಬಗಳಿಗಿಂತಲೂ ಪ್ರತಿಬಿಂಬಗಳಲ್ಲೇ ಹೆಚ್ಚು ಆಸಕ್ತಿ ಮತ್ತು ವಿಶ್ವಾಸ. ಅಷ್ಟೇಕೆ, ಈಗ ಪಡಿನೆಳಲುಗಳಿಂದಲೇ ಬಿಂಬಗಳಿಗೆ ಯಶಸ್ಸು, ಗೌರವ, ಶ್ರೀಮಂತಿಕೆ. ಭವ್ಯ ಭವನಗಳಲ್ಲಿ ಇವಕ್ಕೆ ಈಗ ನಮ್ಮೆಲ್ಲರ ಪೂಜೆ ಸರ್ವದಾ ಸಲ್ಲುತ್ತಿದೆ. ಈ ಪ್ರತಿಬಿಂಬ ಪ್ರೀತಿಯೇ ನಮ್ಮ ರಸಿಕತೆಯ ಮಾನವೂ ಆಗಿದೆ. ಪ್ರಾಚೀನ ಗ್ರೀಕರಲ್ಲಿ ಇಂಥ ಭವನಗಳನ್ನು ನೋಡಿದ್ದರೆ ಅವರು ಅವನ್ನು ಪ್ರೇತಭವನಗಳೆಂದು ಕರೆಯುತ್ತಿದ್ದರು. ಅವರಿಗೂ ಈ ಬಿಂಬ-ಪ್ರತಿಬಿಂಬ-ವಿಚ್ಛೇದಪ್ರಿತಿ ಇತ್ತು. ಆದರೆ ಇದನ್ನು ಸಾಧಿಸುವಷ್ಟು ವಿಜ್ಞಾನವನ್ನು ಅವರು ಬೆಳೆಸಿಕೊಳ್ಳಲಿಲ್ಲ. ಬದುಕಿರುವಾಗ ಬಿಂಬದಲ್ಲಿ ಪ್ರತಿಬಿಂಬಗಳೆಲ್ಲಾ ಐಕ್ಯವಾಗುತ್ತಾ ಇದ್ದುವೆಂದೂ ಸತ್ತಮೇಲೆ ಅವು ಪಾತಾಳ ಲೋಕದಲ್ಲಿ ಒಂದೆಡೆ ಹೋಗಿ ನೆಲೆಸುತ್ತಿದ್ದವೆಂದೂ ಅವರು ಭಾವಿಸಿಕೊಂಡಿದ್ದರು. ಆದರೆ ಈಗ ಮರ್ತ್ಯ-ಅಮರ್ತ್ಯ ಈ ಬೇದಗಳಿಲ್ಲದೆ ಅನೇಕರ ಪ್ರತಿಬಿಂಬಗಳು ತಮ್ಮ ತಮ್ಮ ಬಿಂಬಗಳ ಸಾನ್ನಿಧ್ಯವನ್ನು ತೊರೆದು, ಸ್ವೇಚ್ಛೆಯಿಂದ-ಅಲ್ಲ-ಛಾಯಾಗ್ರಾಹಿಗಳ ಛಂದೋನುಸಾರವಾಗಿ-ಸಂಚರಿಸುತ್ತಾ ಜಗತ್ತನ್ನೇ ಭ್ರಮೆಗೊಳಿಸುತ್ತಿವೆ. ಇದು ಆಶ್ಚರ್ಯಕರವಾದ ವಿಷಯವೇ ಸರಿ.

ನನ್ನ ಪ್ರತಿಬಿಂಬ ನನ್ನನ್ನು ತೊರೆದು ಹೀಗೆ ಸ್ವಚ್ಛಂದವಾಗಿ ಓಡಿಯಾಡುತ್ತಿರುವುದನ್ನು ನಾನು ಕಂಡಿದ್ದರೆ ನನಗೆ, ಪ್ರಾಚೀನ ಗ್ರೀಕರಂತೆ, ನಿಜವಾಗಿ ದಿಗಿಲಾಗುತ್ತಿತ್ತು. ಮಿಕ್ಕವರಿಗೆ ಹೇಗೋ ಕಾಣೆ, ನನಗೂ ನನ್ನ ಪ್ರತಿಬಿಂಬಕ್ಕೂ ಸ್ನೇಹ ತಪ್ಪಿಹೋಗಿದೆ-ವೈಮನಸ್ಯವೆಂದೇ ಹೇಳಬೇಕು. ನನಗೆ ಕನ್ನಡಿಯೂ ರುಚಿಸದು. ನನಗೂ ನನ್ನ ನೆರಳಿಗೂ ಇರುವ ಸಾಮರಸ್ಯ ಸೌಮನಸ್ಯ ನನಗೂ ನನ್ನ ಪಡಿನೆಳಲಿಗೂ ಇಲ್ಲ. ಹಿಂದೆ ಅದನ್ನು ನಾನು ದೃಷ್ಟಿಸುತ್ತಿದ್ದೆ. ಈ ದೃಷ್ಟಿಯುದ್ಧದಲ್ಲಿ ಅದು ಸೋಲುತ್ತಿತ್ತು, ನಾನು ಗೆಲುವಾಗುತ್ತಿದ್ದೆ. ಈಗ ಅದು ನನ್ನನ್ನೇ ದೃಷ್ಟಿಸುತ್ತದೆ. ದೃಷ್ಟಿಸುತ್ತಾ ನನ್ನ ಅಂದವನ್ನು ಕಟುವಾಗಿ ಟೀಕಿಸುತ್ತದೆ. ನಾನು ನಾಮ ಅಳಿಸುತ್ತೇನೆ, ಜುಟ್ಟನ್ನು ನೇವರಿಸುತ್ತೇನೆ, ಹುಬ್ಬನ್ನು ತಿದ್ದುತ್ತೇನೆ, ತುಟಿಯನ್ನು ಕಚ್ಚಿ ರಂಗೇರಿಸುತ್ತೇನೆ, ಹಲ್ಲು ಕಿರಿಯುತ್ತೇನೆ, ಟೋಪಿಯನ್ನು ಅತ್ತ ಇತ್ತ ತಿರುಗಿಸಿ ಇಟ್ಟುಕೊಳ್ಳುತ್ತೇನೆ, ನಗುತ್ತೇನೆ, ಹುಬ್ಬನ್ನೂ ಗಂಟಿಕ್ಕುತ್ತೇನೆ. ಎಲ್ಲ ಅದರೆ ಮೆಚ್ಚುಕೆಯ ಸಲುವಾಗಿ. ಆದರೆ ಅದು ಮೆಚ್ಚಲೊಲ್ಲದು. ಅದು ಯಜಮಾನ ನಾನು ಆಳು, ಅದು ವಿಮರ್ಶಕ ನಾನು ಕವಿ, ಅದು ಉಪಾದ್ಯ ನಾನು ಶಿಷ್ಯ. ಆತ್ಮಗೌರವವುಳ್ಳ ಯಾವ ಮನುಷ್ಯನಿಗೆ ತಾನೆ ಈ ಅವಸ್ಥೆ ಸಹ್ಯವಾದೀತು? ನನ್ನ ನೆರಳಿಗೆ ಈ ದಾರ್ಷ್ಟ್ಯ ಎಂದಿಗೂ ಬಾರದು. ಅದರ ಟೀಕೆ ಮೃದುಹಾಸವನ್ನು ತಂದೀತೆ ಹೊರತು ಕ್ರೋಧ ಜಿಗುಪ್ಸೆಗಳನ್ನು ತರುವುದಿಲ್ಲ. ಅದು ನಮ್ಮ ಕಾಲಕೆಳಗೆ ಬಿದ್ದಿರುವ ವ್ಯಕ್ತಿತ್ವವಿಲ್ಲದ ವ್ಯಕ್ತಿ. ಅದರಿಂದ ನಮಗೆ ಯಾವ ಬಾಧೆಯೂ ಇಲ್ಲ. ಪಡಿನೆಳಲ ವಿಚಾರದಲ್ಲಿ ಹೀಗೆ ಹೇಳುವಂತಿಲ್ಲ. ಅದು ಹುಟ್ಟುವುದು ನಮ್ಮ ಅಹಂಕಾರದ ಪ್ರತೀಕವಾಗಿ. ನಾವು ಕನ್ನಡಿಯನ್ನು ಬಿಸುಟಮೇಲೆ ಈ ಪ್ರತಿಬಿಂಬವೇನಾಗುತ್ತದೋ ಕಾಣೆ. ನಮ್ಮ ಬಿಂಬದೊಳಗೇ ಸೇರಿಕೊಳ್ಳುತ್ತದೋ? ಸೇರಿಕೊಂಡು ನಮ್ಮ ಹರ್ಷ, ವಿಶಾದ, ಅಹಂಮಾನ್ವಿತ, ಆತ್ಮಾನುಕಂಪ-ಇತ್ಯಾದಿ ಭಾವಗಳಿಗೆ ಕಾರಣಭೂತವಾಗುತ್ತದೋ? ಏಕೆಂದರೆ, ಕನ್ನಡಿಯನ್ನು ನೋಡಿಕೊಂಡಮೇಲೆ ತನ್ನ ಮನೋಭಾವವನ್ನು ಬದಲಾಯಿಸದ ಮನುಷ್ಯನುಂಟೇ? ಹೀಗೆ ಪ್ರತ್ಯಕ್ಷಾನುಭವದಲ್ಲಿ ಬಿಂಬೈಕ್ಯವಾದ ಪ್ರತಿಬಿಂಬ, ನಿದ್ದೆಯಲ್ಲಿ ನಿರ್ಬಂಧ ತಪ್ಪಿದಮೇಲೆ, ನಮ್ಮಿಂದ ಹೊರತು ನಮ್ಮ ಮನಸ್ಸಿನಲ್ಲಡಗಿರುವ ಮಿಕ್ಕ ವಿಷಯ ಪ್ರತೀಕಗಳ ಜೊತೆಯೊಳಗೆ ಸೇರಿಕೊಂಡು ತನ್ನದೇ ಆದ ಆಟಗಳನ್ನು ಆಡುತ್ತದೆ. ಈ ಆಟಗಳಲ್ಲಿ ತನ್ನ ಸುಖದುಃಖಗಳು ಉತ್ಕಟವಾದಾಗ ಅದನ್ನು ಸಹಿಸಿಕೊಳ್ಳುವುದಕ್ಕೆ ತಾಕತ್ತಿಲ್ಲದೆ ತಿರುಗಿ ತನ್ನ ಬಿಂಬವನ್ನು ಹೊಕ್ಕು ನಮ್ಮನ್ನು ಎಚ್ಚರಗೊಳಿಸುತ್ತದೆ. ಆರ್ತಲೋಕ ಭಗವಂತನನ್ನು ಎಚ್ಚರಿಸುವ ಹಾಗೆ. ತನ್ನ ಪ್ರತಿಬಿಂಬದ ಜ್ಞಾನವಿಲ್ಲದವನಿಗೆ ತನ್ನ ಕನಸೆಲ್ಲಿ ತನಗೆ ಬೀಳಬೇಕು? ಕನ್ನಡಿಯನ್ನು ನೋಡಿಕೊಳ್ಳದೆಯೇ ಇರುವವರನ್ನು ಬೇಕಾದರೆ ಪ್ರಶ್ನಿಸಿರಿ. ಅವರು ಕನಸು ಕಾಣುವುದುಂಟೆ, ಕಂಡರೆ, ಅವು ಎಂಥವು-ಎಂಬುದನ್ನು. ಅಂಥವರಿಗೆ ಕನಸು ಬೀಳುವುದಿಲ್ಲವೆಂದೇ ನನ್ನ ಮತ. ಅವರು ನಿಸ್ಸ್ವಪ್ನರೋ ಏನೋ. ಅಂತೂ ಪಡಿನೆಳಲುಗಳನ್ನು ನಾವು ಸಭ್ಯಗೋಷ್ಠಿಗೆ ಸೇರಿಸುವಂತಿಲ್ಲ. ಇವುಗಳ ದುರ್ವರ್ತನೆಗಳನ್ನು ನೋಡಿ, ಎಷ್ಟೋ ಅನಾಗರಿಕ ಅಸಂಖ್ಯಾತ ಸ್ತ್ರೀಪುರುಷರ ವಿಷಯದಲ್ಲಿ ಹೇಗೋ ಹಾಗೆಯೇ, ಇವು ನಮ್ಮ ಪ್ರತಿಬಿಂಬವನ್ನು ಬಿಟ್ಟು ಹೊರಗೆ ಹೊರಡದಿದ್ದರೇ ಒಳ್ಳೆಯದೆಂದು ನನಗೇನೋ ಅನ್ನಿಸಿದೆ. ಇದನ್ನು ಹೊರಕ್ಕೆ ಬಿಡದಿರುವುದೂ ಒಂದು ತೆರದ ಆತ್ಮಸಂಯಮವಲ್ಲವೆ? ಆಗ ನಿದ್ರೆಯಲ್ಲಿ ನಮಗೆ ಸುಷುಪ್ತಿ ದೊರಕುತ್ತದೆ. ಜಾಗ್ರದವಸ್ಥೆಯಲ್ಲಿ ಶಾಂತಿ. ಹಾಗೆಯೇ ಆಲೋಚಿಸಿಸುತ್ತಿದ್ದರೆ, ಈ ಪ್ರತೀಕಪ್ರೀತಿ ಅಷ್ಟು ಮೋಹವಾಗಿ ಬೆಳೆಯದಿದ್ದರೆ ನಮ್ಮಲ್ಲಿ ಇಂಥ ಮತವೈಷಮ್ಯ ಹುಟ್ಟಿ ನಮ್ಮ ದೇಶ ಇಬ್ಭಾಗವಾಗಿ ಒಡೆಯದಿರುತ್ತಿತ್ತೋ ಏನೋ ಎನ್ನಿಸುತ್ತದೆ. ಆದರೆ ಇದು ಕವಲುದಾರಿ. ಈ ದಾರಿಯಲ್ಲಿ ನಡಿಗೆ ಈಗ ಬೇಡ.

ನನಗೆ ನನ್ನ ನೆರಳುಗಳಲ್ಲಿ ಅಷ್ಟು ಮೋಹವಿಲ್ಲದಿದ್ದರೂ ಮಿಕ್ಕವರ ನೆರಳುಗಳಲ್ಲಿ ಮಮತೆ ಇದೆ. ಅವು ನನ್ನವಲ್ಲ-ಹಾಗಾದ ಮೇಲೆ ನಮಗೆ ಬಿಂಬವಾದರೇನು ಪ್ರತಿಬಿಂಬವಾದರೇನು, ಎರಡೂ ವಿಷಯಗಳೇ-ಎರಡರ ಲೀಲೆಯೂ ರುಚಿಯೇ. ನನ್ನ ಹೊರತು ಮಿಕ್ಕದ್ದೆಲ್ಲಾ ನೆರಳೇ ತಾನೇ ನನಗೆ. ಈ ಮಿಕ್ಕವರ ನೆರಳು ಪಡಿನೆರಳುಗಳಿಗಿಂತ ಅವರ ನಡುನೆರಳಲ್ಲಿ ನನಗೆ ವಿಶೇಷ ಮಮತೆ. ಬೀದಿಯಲ್ಲಿ ಜನರು ಓಡಿಯಾಡುತ್ತಿರುವಾಗ ಅವರ ನೆರಳು ನಮ್ಮ ಮನೆಯೊಳಗಿನ ಗೋಡೆಗಳ ಮೇಲೆ ಓಡಿಯಾಡುತ್ತಿರುವ ರೀತಿಗೆ ಮಾರು ಯಾರು ತಾನೆ ಮೋಹಗೊಳ್ಳುವುದಿಲ್ಲ? ಇವೇ ಅವರ ನಡುನೆರಳು. ಇವುಗಳನ್ನು ನೋಡಿ ನಲಿಯುವ ಮನಸ್ಸು ನನಗೆ ಈಗಲೂ ಉಂಟು. ನಾನು ನನ್ನ ಎಳೆತನವನ್ನು ಸಂಪಾದಿಸಿಕೊಳ್ಳುವ ಬಗೆ ಇಂಥದು. ನಿಮಗೂ ಈ ಅಪೇಕ್ಷೆ ಇದ್ದರೆ ಈ ಲೀಲೆಯನ್ನು ನಿರೀಕ್ಷಿಸಿರಿ. ಇದರ ಸಮೀಕ್ಷೆಗೂ ಒಂದು ತರದ ಸಹೃದಯಾವಸ್ಥೆ ಬೇಕು. ನಿಮಗೆ ಎಣ್ಣೆ ಮಜ್ಜನ ಮಾಡಿಕೊಳ್ಳುವ ಅಭ್ಯಾಸವಿದೆಯೆ? ಅಭ್ಯಂಜನ ಸ್ನಾನವನ್ನು ಮಾಡಿದ ನಂತರ, ಮೈಯಲ್ಲಿ ಹಬೆಯಾಡುತ್ತಿರುವಾಗ ಕಂಬಳಿಗಳನ್ನು ಹೊದೆದುಕೊಂಡು ಸ್ವಲ್ಪ ಹೊತ್ತು ಮಲಗಿಕೊಳ್ಳುವ ರಸಿಕರಿಗೆ ಮಾತ್ರ ಈ ಆನಂದ ಲಭಿಸಬೇಕಾದರೆ, ಗಾಳಿಬೀಸದಿರಲೆಂದು ಬಾಗಿಲು ಕಿಟಕಿಗಳನ್ನೆಲ್ಲಾ ಮುಚ್ಚಿರುತ್ತಾರೆ. ನೀವು ಕಣ್ಣು ಮೂಗು ಇವನ್ನು ಮಾತ್ರ ಹೊರಕ್ಕೆ ಬಿಟ್ಟುಕೊಂಡಿರುತ್ತೀರಿ. ಹಿತವಾಗಿ ಮೈ ಬೆವರಿಡುತ್ತಿದೆ. ಈಗ ಸುತ್ತಲಿನ ಗೋಡೆಗಳ ಮೇಲೆ ಈ ನೆಳಲುಗಳು ಸವರ್ಣವಾಗಿ ಓಡಿಯಾಡುತ್ತಿರುತ್ತವೆ, ಮರ್ತ್ಯರಿಗೂ ದೇವತೆಗಳಿಗೂ ನಡುವೆ ಇರುವ ಯಕ್ಷ ಯಕ್ಷಿಣಿಯರಂತೆ. ಇವುಗಳ ಸತತ ಚಲನ ನಿಮ್ಮ ಮನಸ್ಸನ್ನು ಆಕರ್ಷಿಸದೇ ಬಿಡದು. ಈಗ ನಿಮ್ಮ ಕಲ್ಪನೆ ಎಚ್ಚರಗೊಳ್ಳುತ್ತದೆ, ಪ್ರತಿಭೆಗೆ ರೆಕ್ಕೆ ಮೂಡಿಬರುತ್ತದೆ. ಲೋಕದ ಗತ ಇತಿಹಾಸವನ್ನೆಲ್ಲಾ ಈ ನೆಳಲುಗಳು ಮೂರ್ತೀಕರಿಸುವಂತೆ ನಿಮಗೆ ತೋರದಿರದು. ಅವುಗಳು ನಟಿಸುವ ಕತೆ ಅನಂತ. ನಿಮ್ಮ ಲಘುವೂ, ಭಾವದೀಪ್ತವೂ, ರಸಾರ್ದ್ರವೂ ಆದ ಮನಸ್ಸು ಅನೇಕ ತರದ ಹಿನ್ನೆಲೆಯ ಸಂಗೀತವನ್ನು ಅವುಗಳ ನಟನೆಗೆ ಬಾರಿಸುತ್ತದೆ. ಅದು ಗಾನ, ನಾಟ್ಯ, ಅದು ಕತೆ. ನಿಮ್ಮ ಪ್ರತಿಭೆಯ ಅನೇಕ ಹೊಳಹುಗಳನ್ನು ನೀವು ಈ ನೆಳನಿನಾಟದಲ್ಲಿ ಕಾಣುತ್ತೀರಿ. ಈ ಆಟಗಳ ಮುಂದೆ ವ್ಯಾಸ ವಾಲ್ಮೀಕಿಗಳ ಕವಿತೆಯೂ ಒಂದು ಬಣ್ಣ ಮಂಕು. ಈ ಕೃತಿಗಳಲ್ಲಿ ನೀವು ದೋಷಗಳನ್ನೇ ಕಾಣಲಾರಿರಿ. ನೀವು ನೆನೆದ ರೂಪಕ ಅಲ್ಲಿ ನಡೆಯುತ್ತದೆ ಎಂದಮೇಲೆ ರಸತುಷ್ಟಿಗೇನು ಕೊರತೆ. ಆದರೆ ಕಾಲು ಅಥವಾ ಹೆಚ್ಚೆಂದರೆ ಅರ್ಧಗಂಟೆಗಳಿಗಿಂತ ಹೆಚ್ಚಾಗಿ ಈ ಭೋಗ ನಿಮಗೆ ಲಭಿಸುವುದಿಲ್ಲ. ಪುಣ್ಯಚ್ಯುತರು ಸ್ವರ್ಗಲೋಕದಿಂದ ಮರ್ತ್ಯಲೋಕಕ್ಕೆ ಬೀಳುವಂತೆ ನೀವು ಈ ಸ್ವಪ್ನಲೋಕದಿಂದ ವ್ಯವಹಾರ ಲೋಕಕ್ಕೆ ಬೀಳುತ್ತೀರಿ. ಹಿರಿಯರು ಗದ್ದರಿಸುತ್ತಾರೆ. ನೀವು ಕಂಬಳಿಗಳನ್ನೊದ್ದು ಊಟಕ್ಕೇಳಬೇಕಾಗುತ್ತದೆ.

ಆದರೆ ಇದರಷ್ಟಲ್ಲವಾದರೂ, ಇದಕ್ಕೆ ಒಂದು ಕೈ-ಒಂದೇಕೈ-ಹಿಂದಾದ ಪ್ರತಿಬಿಂಬಾನಂದವನ್ನು ನೀವು ಹೊಂದಬೇಕಾದರೆ, ಚಲಚ್ಚಿತ್ರಮಂದಿರಕ್ಕೆ ಹೋಗಬೇಡಿರಿ. ನನ್ನೊಂದಿಗೆ ಕಣಿವೆಯಿಳಿದು ನಮ್ಮೂರ ಕೆರೆಯ ಹತ್ತಿರಕ್ಕೆ ಬನ್ನಿರಿ. ನನ್ನ ಹಾಗೆ ನಿಮ್ಮ ನೆರಳನ್ನೇ ನೀವು ತುಳಿದುಕೊಂಡು ಬಮ್ದರೂ ಅಡ್ಡಿಯಿಲ್ಲ. ಏರಿಯ ಮೇಲಿನ ಮಂಟಪದ ಹತ್ತಿರ ಕುಳಿತುಕೊಳ್ಳಿರಿ. ನೀರಿನ ಹರಹಿನಲ್ಲಿ ಬಿದ್ದಿರುವ ಮಲೆಯ ನೆರಳನ್ನು ನಿರೀಕ್ಷಿಸಿರಿ. ಜಲದೊಳಗೆ ಕಾಣುವುದು ಮಲೆಯ ಪ್ರಕೃತಿ ಮಾತ್ರವಲ್ಲ, ಅದೊಂದು ಕಲಾಸೃಷ್ಟಿ. ಈ ಛಾಯೆ ಮೂಲವಸ್ತುವಿಗಿಂತ ಮನೋಹರವಾಗಿದೆ. ಇದರ ಧರ್ಮ ಬೇರೆ ಅದರ ಧರ್ಮ ಬೇರೆ. ಅದು ಅಚಲ-ಇದು ಮಧುಮತ್ತ ಚಮ್ಚಲ. ಅದರ ಬಂಡೆಗಳೂ ಶಿಖರಗಳೂ ಶುಷ್ಕರೂಕ್ಷ. ಇದರಲ್ಲಿ ಅವು ರಸಾರ್ದ್ರಲಲಿತ ರಂಗನ್ನು ಪಡೆದು, ಮೇಲೆ ವಿಚಿತ್ರವಸನವನ್ನು ಧರಿಸಿರುವಂತೆ ತೋರುತ್ತದೆ. ಅದರ ಬಂಡೆಗಳ ಸಂದಿಗಳಲ್ಲಿ ಬೆಳೆದಿರುವ ಗಿಡಗುಲ್ಮಗಳು ಇಲ್ಲಿ ಕಲ್ಲಿನ ಮೇಲೆ ಹಬಿರುವ ಹಸಿರು ಪಾಚೆಯಂತೆಯೂ ದಾಂಗುಡಿಯಿಡುತ್ತಿರುವ ಬಳ್ಳಿಗಳಂತೆಯೂ ಮೆರೆಯುತ್ತಿವೆ. ಎದುರು ದಡದಲ್ಲಿರುವ ಶುಷ್ಕ ಅಶ್ವಥವೃಕ್ಷವಂತೂ ಜಲದಲ್ಲಿ ತನ್ನ ಮುಪ್ಪನ್ನೇ ಕಳೆದುಕೊಂಡು ರಸವತ್ತಾಗಿ ಮರಳ ಯೌವನವನ್ನು ಪಡೆದಂತೆ ಕಂಗೊಳಿಸುತ್ತಿದೆ. ಅದರ ತಾಳಿನಲ್ಲಿ ನಮಗೆ ಎದ್ದು ಕಾಣುವ ದೊಡ್ಡ ಪೊಟರೆ ಈ ಪ್ರತಿಬಿಂಬದಲ್ಲಿ ಕಾಣುವುದಿಲ್ಲ. ಈ ಮರವನ್ನೂ ಅದರ ನೆರಳನ್ನೂ ನೋಡುತ್ತಿದ್ದರೆ ಮುಪ್ಪನ್ನು ನೀಗಿ ಮರಳಿ ಯೌವನವನ್ನು ತನ್ನ ಮಗನಿಂದ ಪಡೆದುಕೊಂಡ ಯಯಾತಿಯ ಕತೆ ನೆನಪಿಗೆ ಬರುತ್ತದೆ. ಊರ್ಧ್ವಮೂಲ-ಅಧಶ್ಯಾಖವಾದ ಇಂಥ ಯಾವುದೋ ಒಂದು ದೊಡ್ಡ ಮರವನ್ನು ನೋಡಿಯೇ ಉಪವಿಷದ್ ಪರತ್ತತ್ವವನ್ನು ಈ ಉಪಮೆಯಿಂದ ಬಣ್ಣಿಸಿದರೋ‌ಏನೋ. ಇಲ್ಲಿನ ದೇಶವೂ ಅನಿಯಮಿತ. ಹತ್ತಿರ ದೂರ ಮೇಲೆ ಕೆಳಗೆ ಎಂಬ ನಿಯಮವು ಇಲ್ಲಿ ಪಲ್ಲಟವಾಗಿದೆ. ಇದರ ಹೊರಗಿನ ಪ್ರಪಂಚಕ್ಕೆ ಅವಿಚಾಲ್ಯವಾದ ಋತದ ಬಂಧವುಂಟು; ಇಲ್ಲಿನ ಪ್ರತಿಬಿಂಬಿತ ಮಸ್ತುಮಾತ್ರ ಸ್ವತಂತ್ರ, ತನ್ನದೇ ಆದ ಒಂದು ನಿಯಮಕ್ಕೆ ಮಾತ್ರ ಬದ್ಧ ,ಇದೇ ಒಂದು ಬೇರೆ ಪ್ರಪಂಚ. ಈ ಮಲೆ ನೀರಿನ ಮೇಲೆ ಮೈನಾಕದಂತೆ ತೇಲಿದರೂ ತೇಲೀತೇ. ಮಲೆಯ ಗುಡಿಯ ಗೋಪುರ, ಇಗೋ, ಆ ದಡದಿಂದ ಈ ದಡಕ್ಕೂ ಹೇಗೆ ಬೆಳೆದು ಬರುತ್ತಿದೆ! ಈಗ ಇದು ಮಹತ್-ಸಮುದ್ರ ಲಂಘನಮಾಡುವ ಆಂಜನೇಯನಂತೆ. ಇನ್ನೊಂದು ಕ್ಷಣದಲ್ಲಿ ಇದು ಎದುರು ದಡದಲ್ಲಿ ಅಡಗುವಷ್ಟು ಕಿರಿದು-ರಾವಣನ ಅಂತಃಪುರದಲ್ಲಿ ಸುಳಿದಾಡಿದ ಕಪಿಯಂತೆ. ಅರಳಿ ಮರದ ಚಿಗುರು ರೆಂಬೆ ಈ ಗೋಪುರವನ್ನು ಈಗ ನೇವರಿಸುತ್ತಿದೆ. ಇದರ ಸ್ಪರ್ಷಕ್ಕೆ ರೋಮಾಂಚನಗೊಂಡಂತೆ ಗೋಪುರದ ಮೈ ವಲಿತವಾಗುತ್ತಿದೆ. ಈಗ ಮಲೆಯ ನೆರಳು ಕೆರೆಯ ಚಂಚಲ ತರಂಗಗಳಲ್ಲಿ ಹರಡಿ ಸ್ಪಷ್ಟಾಸ್ಪಷ್ಟವಾಗಿ ಅದು ಇದೆಯೋ ಇಲ್ಲವೋ ಎನ್ನುವಮಟ್ಟಿಗಾಗಿದೆ. ಈಗ ಜಲಕ್ಕೆ ತನ್ನ ವ್ಯಾಖ್ಯಾನದಲ್ಲೇ ಇಷ್ಟ, ಕಥಾವ್ಯಕ್ತಿಗಳಲ್ಲಿ ಅನಾಸಕ್ತಿ. ಕೊಂಚ ಹೊತ್ತಿನಮೇಲೆ, ಕೆರೆ ತನ್ನ ಜಲತ್ವಾಂಕಾರವನ್ನು ಅಡಗಿಸಿಕೊಂಡು ಪ್ರಶಾಂತವಾದ ಮೆಲೆ ತಿಳಿನೀರಿನಲ್ಲಿ ಈ ಬಿಂಬಗಳು ಪುನಃಮೂಡಿ ತಮ್ಮ ಆಟವನ್ನು ಮುಂದುವರೆಸುತ್ತವೆ. ಈ ಬಿಂಬ ಪ್ರತಿಬಿಂಬಗಳನ್ನು ನೋಡುತ್ತಾ ನಾವು ಕಾವ್ಯಶಾಸ್ತ್ರದ ಮರ್ಮಗಳನ್ನೆಲ್ಲಾ ತಿಳಿದುಕೊಳ್ಳಬಹುದು. ಆ ಶಾಸ್ತ್ರ ಇಂಥ ಛಾಯಾ ಲೀಲೆಗಳನ್ನೇ ಕುರಿತದ್ದು. ಈ ಛಾಯೆಗಳು ತರ್ಕಬದ್ಧವಲ್ಲ. ರಾವಣನಿಗೆ ಹೇಗೆ ಹತ್ತು ತಲೆಗಳಿದ್ದವು, ರಾಮ ಹೇಗೆ ಸಮುದ್ರಕ್ಕೆ ಸೇತುವೆಯನ್ನು ಕಟ್ಟಿದ, ಹನುಮಂತ ಹೇಗೆ ಕಡಲನ್ನು ನೆಗೆದ, ಕಪಿಗಳಿಗೂ ರಾಜ್ಯಭಾರಕ್ಕೂ ಏನು ಸಂಬಂಧ, ಶಕುಂತಳೆಯನ್ನು ಮೇನಕೆ ಹೇಗೆ ಹೊತ್ತುಕೊಂಡು ಹೋದಳು, ಊರ್ವಶಿ ಲತೆ ಆದದ್ದು ಹೇಗೆ, ಗಾಳಿ ಬೆಳಕು ಇತ್ಯಾದಿಗಳಿಂದ ಪಾಂಡವರ ಉತ್ಪತ್ತಿ ಹೇಗಾಯಿತು-ಹೀಗೆ ವಾದಮಾಡುವವರನ್ನು ಕವಿಯ ಮಾನಸಸರಸ್ಸು ನಗುತ್ತದೆ. ಇತ್ಯಾದಿ ಅಸಂಭಾವ್ಯಗಳೇ ಅದು ಜೀವಂತವಾಗಿರುವ ರೀತಿಯನ್ನೂ ಅದರ ಭಾವತರಂಗ ವಿನ್ಯಾಸ ವೈಖರಿಯನ್ನೂ ದ್ಯೋತನ ಮಾಡುತ್ತವೆ. ಸತ್‌ಕಾವ್ಯಗಳು ತರ್ಕವನ್ನೂ ಭವದ ಋತವನ್ನೂ ಅಲಕ್ಷಿಸಿರುವುದರಿಂದಲೇ ಅದರ ಋತವಾದ ಮೃತ್ಯುವನ್ನೂ ಜಯಿಸಿವೆ.

ಆದರೆ, ಮಲೆ ಇಲ್ಲದೆ ಕೆರೆ ಏನುತಾನೆ ಮಾಡಬಲ್ಲಿದು? ಕೆರೆಯ ಭಾವ ಸತ್ತ ಮೇಲೆ. ಅದನ್ನು ಪಡಿನೆಳಲುಗಳು ಸದಾ ತಮಗೆ ತೋರಿದ ರೀತಿಯಲ್ಲಿ ಧ್ವನಿಸುತ್ತಿರುತ್ತವೆ. ಇವುಗಳ ಈ ತೋರಿಕೆಗೆ ನಾವು ಮೋಹಗೊಂಡು ಮೂಲ ವಸ್ತುವನ್ನೇ ನಿರ್ಲಕ್ಷಿಸುತ್ತೇವೆ. ಈ ಪ್ರಕೃತಿಯ ಪ್ರೀತಿ ಭವದಲ್ಲಿ ಆಸಕ್ತರಾದವರಿಗೆ ಮಾತ್ರ. ವಿರಾಗಿಗಳಿಗೆ ಇವುಗಳ ಹಂಬಲವಿಲ್ಲ. ಅಷ್ಟೇಕೆ ಇವುಗಳ ಹಂಬಲವನ್ನು ಬಿಟ್ಟ ಹೊರತು ವೈರಾಗ್ಯ ಸಿದ್ಧಿಸುವುದಿಲ್ಲ. ನಿಮ್ಮ ನೆರಳು (ಅದು ಎಂಥದ್ದೇ ಆಗಲಿ) ನಿಮಗೆ ಆಗದಿದ್ದರೆ, ಆಗ ನೀವು ಸನ್ಯಾಸಿಗಳಾಗುವುದಕ್ಕೆ ತಕ್ಕವರು. ಅದಕ್ಕೋಸ್ಕರವೇ ಅಲ್ಲವೇ ದರ್ಪಣ ಗ್ರಹಣವನ್ನು ಯತಿಗಳಿಗೆ ನಿಶೇಧಿಸಿರುವುದು. ಹಾಗೆಯೇ, ಅದಕ್ಕೋಸ್ಕರವೇ ಕಾವ್ಯಾಲಾಪಾಂಶ್ಚ ವರ್‍ಚಯೇತ್ ಎಂಬ ನಿಷೇಧವೂ ಉಂಟು ಅವರಿಗೆ ಬೇಕಾದುದು ಬಿಂಬದ ಸಾಕ್ಷಾತ್ ಜ್ಞಾನ; ಅಸ್ಥಿರವೂ, ಕ್ಷಣಿಕವೂ, ಅಸಂಖ್ಯಾತರೂಪವೂ ಆದ ಪ್ರತಿಬಿಂಬದ ಅನಿಶ್ಚಿತ ಜ್ಞಾನವಲ್ಲ. ಬರಿ ಪ್ರತಿಬಿಂಬದ ನಿರೀಕ್ಷಣೆಯಿಂದಲೇ ಬಿಂಬದ ನಿಜಸ್ವರೂಪ ತಿಳಿಯುತ್ತದೆ ಎನ್ನುವುದು ಹೆಚ್ಚಿನ ಮಾತು ನಾವು ಯಾವುದನ್ನು ವಸ್ತು ಎನ್ನುತ್ತೇವೆಯೋ, ಅವರು ಅದನ್ನು ಪಡಿನೆಳಲು ಎನ್ನುತ್ತಾರೆ. ನಮಗೆ ಭವವೇ ಸತ್ಯ. ಅವರಿಗೋ ಅದೊಂದು ತರದ ಛಾಯಾಲೀಲೆ. ನಮಗೂ ಅವರಿಗೂ ಇರುವ ವ್ಯತ್ಯಾಸ ಇಲ್ಲಿ. ಭಗವಂತನು ತನ್ನ ವಿಲಾಸಕ್ಕೆಂದು ಎತ್ತಿಕೊಂಡಿರುವ ಮಾಯಾಮುಕುರದಲ್ಲಿ ಆತನ ಅಹಂಕಾರ ತ್ತ್ವವು ಪ್ರತಿಬಿಂಬಿಸುವ ರಸಪ್ರತೀಕಗಳಿಗೆ ಇತಿ ಇಲ್ಲ ಮಿತಿ ಇಲ್ಲ, ಎಂದು ಅವರ ಭಾವನೆ. ಅವುಗಳ ಮುಖ ಅನಂತ, ಕ್ರಿಯೆ ಅನಂತ. ರಾಘವಾಂಕನ ಈ ವರ್ಣನೆಯನ್ನು ನೋಡಿ:

“ಹಲವು ದೆಸೆದೆಶೆಯೊಳಿಡಿದಿಡಿದ ವದನಂಗಳೊಳು
ಕೆಲವುಬ್ಬಿ ಬಿಬ್ಬಿಡುವ ಕೆಲವು ಮಾಣದೆ ನಗುವ
ಕೆಲವು ಗಜರುವ ಕೆಲವು ಗರ್ಜಿಸುವ ಕೆಲವಗಿವ ಕೆಲವುರಿವ ಕೆಲವಾರುವ|
ಕೆಲವು ಹಾಡುವ ಕೆಲವು ಹುಂಕರಿಸಿ ಕಣ್ದೆರೆವ
ಕೆಲವು ಕರುಣಿಸುವ ಕೆಲವಾನಂದದಿಂದಿಪ್ಪ
ಕೆಲವು ನಿಜದಿಂದಿಪ್ಪ ನಾನಾರಸಂ ತಳೆದನತಿಭಯಂಕರರೂಪನು.-”
ಇದು ಮೂಲವಸ್ತುವಿನ ವರ್ಣನೆಯಲ್ಲ. ಕ್ಷುಬ್ಧ ಭವಜಲಧಿಯಲ್ಲಿ ಆಡುವ ಆತನ ರಸಪ್ರತೀಕಗಳ ವರ್ಣನೆ-ನಮ್ಮ ವರ್ಣನೆ. ಮೂಲ ವಸ್ತುವಿನ ನಿಜ ಸ್ಥಿತಿ ನಮಗೆ ಗೊತ್ತಿಲ್ಲ; ಗೊತ್ತಿಲ್ಲದೆಯೂ ಇಲ್ಲ. ಏಕೆಂದರೆ ಅವನೇ ನಾವು, ನಾವು ನಾವಲ್ಲ. ನಿಮ್ಮ ಭಾವಕ್ಕೆ ತಕ್ಕಂತೆ ನಿಮ್ಮ ರೂಪವೂ ಕ್ಷಣೇ ಕ್ಷಣೇ ಬದಲಾಯಿಸುತ್ತಾ ನಿಮ್ಮಿಂದ ವಿಛಿತಿಯನ್ನು ಅದೆಂತೋ ಪಡೆದು ಓಡಿಯಾಡುತ್ತಿದ್ದರೆ, ಅವೂ ನೀವೂ ಒಂದೇ ಎಂದು ನಿಮ್ಮ ವಿನಾ ಅವಕ್ಕೆ ಗೊತ್ತಾಗುತ್ತದೆಯೇ? ನಿಮ್ಮ ಒಂದು ಭಾವವನ್ನು ತೋರುವ ಚಹರೆ ನಿಮ್ಮ ಮತ್ತೊಂದು ಭಾವದ ಚಹರೆಯನ್ನು ನೀನು ಬೇರೆ ತಾನು ಬೇರೆ ಎಂದು ಮೂದಲಿಸುತ್ತಾ ಕಾದಾಡುವುದಕ್ಕೂ ಪ್ರಾರಂಭಿಸಿದರೆ, ಅಯ್ಯೋ ಭ್ರಮೆಯೇ ಎಂದು ನೀವು ನಗದೆ ಮತ್ತೇನು ಮಾಡುತ್ತೀರಿ? ಅವು ಒಂದಕ್ಕೊಂದು ಕಾದಿಯ್ಯಾಡಿ ಮಡಿದರೂ ನಿಮಗೇನು ನೋವೇ, ಚ್ಯುತಿಯೇ? ನಮಗೂ ಭಗವಂತನಿಗೂ ಇರುವ ಸಂಬಂಧ ಇಂಥದು. ನಮ್ಮ ಯಾವ ವರ್ತನೆಗಳೂ ಅವನನ್ನು ತಟ್ಟವು. ಸ್ವಪ್ನ ಬಿಂಬಗಳಂತೆ ನಮ್ಮ ಸ್ಥಿತಿಯೂ ಕೂಡ ಒಂದು ತರದ ಭಾವಾಭಾವದ ಸ್ಥಿತಿ. ಇದೇ ನಿಜವೆಂದು ನಮಗೆ ಭ್ರಮೆ. ಇದು ನಿಜವೋ ಸುಳ್ಳೋ-ಅಂತೂ ಭಗವಂತನ ಲೀಲಾ ಪ್ರತೀಕಗಳು ನಾವು. ದೇವತೆಗಳೋ, ಅಪ್ಸರೆಯರೋ, ಗಂಧರ್ವರೋ ದೇವತೇಜಸ್ಸಿನ ನಡುನೆರಳೇ ಇವರು? ಹಾಗಲ್ಲದಿದ್ದರೆ ನಮಗೇಕೆ ಇವರ ವಿಷಯದಲ್ಲಿ ಅಷ್ಟೊಂದು ಮೋಹ? ಜ್ಞಾನಿಗಳಿಗೆ ಅಂದರೆ ಸದಾ ಎಚ್ಚೆತ್ತಿರುವವರಿಗೆ-ಇಂಥ ಮೋಹ ಯಾವುದೂ ಇಲ್ಲ. ಈ ಜ್ಞಾನಿಗಳಾರು? “ಜ್ಞಾನೀತ್ವಾತ್ಮೈವ” ಎಂದು ಭಗವಂತನೇ ಹೇಳಿದಾನಲ್ಲ. ಅಂದರೆ, ಇವರು ಬಿಂಬದೊಡನೆ ಸೇರಿಹೋಗಿರುವ ಪ್ರತಿಬಿಂಬಗಳೋ ಏನೋ. ಹೀಗೆ ಜ್ಞಾನಿಗಳಾಗುವುದೂ ಇವರ ಕೈಯಲ್ಲಿದೆಯೇ-ಅದೂ ಭಗವಂತನ ಇಚ್ಛೆ-ಅವನು ಮಾಯಾದರ್ಪಣವಿಮುಖನಾದಾಗ ತಾನೇ ಇವರು ಜ್ಞಾನಿಗಳು. ಸಾಧುಸಂತರ ಮತ ಹೀಗೆ. ಇವರಾರು? ಇವರು ಭಗವಂತನ ತೇಜಸ್ಸಿನ ಮುಂದೆ ಆತನ ಅಹಂಕಾರ ಚೆಲ್ಲುವ ನೆರಳೋ?-ಭಗವದನುಚರರಲ್ಲವೇ ಸಾಧುಗಳು. ಕಂಡೂ ಕಾಣದಂತಿರುವ ಇವರಿಂದ ಯಾರಿಗೆ ಬಾಧೆ? ನೆರಳಿನಂತೆ ಇವರೂ ನಿರ್ಲಿಪ್ತರಲ್ಲವೆ, ನಿರ್ಭಯರಲ್ಲವೆ? ಅಚ್ಚೆದ್ಯ, ಅದಾಹ್ಯ, ಅಕ್ಲೇದ್ಯ, ಅಶೋಷ್ಯ, ಈ ವಿಶೇಷಣಗಳು ನೆರಳಿಗೆ ಅನ್ವಯಿಸುವಂತೆ ಇವರಿಗೂ ಅನ್ವಯಿಸುತ್ತದೆ. ಭಾವ ಭಾವಕ್ಕೆ ಬಿಂಬ ಬದಲಾಯಿಸಬಹುದು., ನೆರಳು ಮಾತ್ರ ನೆರಳೇ. ಅದರಂತೆಯೇ ಭಗವಂತನು ಏನಾದರೂ ಆಗಲಿ ಯಾವ ಅವತಾರವನ್ನು ಬೇಕಾದರೂ ತಾಳಲಿ, ರಾಮನಾಗಲಿ, ಕೃಷ್ಣನಾಗಲಿ, ಅಲ್ಲನಾಗಲಿ-ಎಲ್ಲನಾಗಲಿ ಈ ಸಂತರಿಗೆ ಎಲ್ಲವೂ ಒಂದೇ. “ನೀನೇ ನಾನು” ಎಂಬ ದಾರ್ಷ್ಟ್ಯವಂತೂ ಇವರಿಗೆ ಇಲ್ಲವೇ ಇಲ್ಲ. “ನಿನ್ನಿಂದ ನಾನು, ನೀನಿಲ್ಲದೆ ನಾನಿಲ್ಲ, ನಾನಿಲ್ಲದಿದ್ದರೂ ನೀನು ಮಾತ್ರ ಉಂಟು” ಹೀಗೆ ಇಲ್ಲಿ ಇವರ ವರ್ತನೆ. ಭಗವಂತನಿಗೆ ನೆರಳು ಚೆಲ್ಲುವ ರೂಢಿ ಇದ್ದರೆ, ಆ ನೆರಳೇ ಇವರು ಎನ್ನಬೇಕು.

ಇದೆಲ್ಲಾ ಏನೋ ಬಹಳ ವೇದಾಂತಕ್ಕಿಟ್ಟುಕೊಂಡಿತು. ಈ ಸೃಷ್ಟಿಯಲ್ಲಿ ನಾನು ಯಾರು ಎಂಬ ಸಂದೇಹ ಮಾತ್ರ ನಿವಾರಣೆಯಾಗದೆ ಇನ್ನೂ ಉಳಿದಿದೆ. ನಾನು ನೆಳಲೇ, ಪಡಿನೆಳಲೇ, ಇಲ್ಲ ಮೂಲವಸ್ತುವೇಯೋ-ಇಲ್ಲ ಏನೂ ಅಲ್ಲವೋ? ಹೇಳಬಲ್ಲಿರಾ? ಯಾವುದೂ ಅಲ್ಲ ಎನ್ನುವುದಕ್ಕೂ ನನಗೆ ಮನಸ್ಸಿಲ್ಲ. ನಾನು ನೆರಳಿನಷ್ಟು ವಿನೀತನಲ್ಲ, ಭಕ್ತನಲ್ಲ. ಪಡಿನೆಳಲೆಂದುಕೊಳ್ಳುವಷ್ಟು ಧಾರ್ಷ್ಟ್ಯವೂ ಇಲ್ಲ. ಅಲ್ಲದೇ ನಾನು ಅಷ್ಟು ಅಸ್ವತಂತ್ರನೇ. ಒಂದು ಪಕ್ಷ ನಾನೇ ದೇವರಾಗಿರಬಹುದೇ? ಹೀಗೆ ಮೆರೆಯುವುದಕ್ಕೆ ನನಗೇನೋ ಆಸೆಯುದ್ದರೂ, ನೀವು ಅವಕಾಶ ಕೊಡಬೇಕಲ್ಲ. ನಾನು ಯಾವುದೂ ಅಲ್ಲ-ಅಭಾವವೆಂಬ ಪದಾರ್ಥ ಎಂದು ಹೇಗೆ ಹೇಳಿಕೊಳ್ಳಲಿ. ನಿಮ್ಮನ್ನು ಇಂಥ ಪ್ರಶ್ನೆಗಳು ಎಂದಾದರೂ ಬಾಧಿಸಿವೆಯೇ? ನಿಮಗೆ ಭಗವಂತನಲ್ಲಿ ನಂಬಿಕೆ ಇದೆಯೇ? ಜಗತ್ತೆಲ್ಲಾ ಮಿಥ್ಯೆಯೆಂದೂ ಸುಖ ದುಃಖಾದಿ ಭಾವಗಳೆಲ್ಲಾ ಭ್ರಮೆಯೆಂದೂ, ಅವಕ್ಕೂ ನಿಮ್ಮಾತ್ಮಕ್ಕೂ ಏನೂ ಸಂಬಂಧವಿಲ್ಲವೆಂದೂ ಮುಕ್ತಿಯೇ ಪರಮ ಸೌಖ್ಯವೆಂದೂ, ನೀವು ಭಾವಿಸಿಕೊಂಡಿರುವಿರಾ? ಅವನೊಡನೆ ಸೇರಬೇಕೆಂಬ ಹಂಬಲವುಂಟೆ? ಹಾಗಾದರೆ, ನೀವು ರೂಪಪ್ರಿಯರೋ ನಾಮಪ್ರಿಯರೋ-ಎಂದರೆ ಪ್ರತೀಕ ಪ್ರಿಯರೋ ಛಾಯಾ ಪ್ರಿಯರೋ? ಪ್ರತೀಕಪ್ರಿಯರಾದರೆ, ದೇವಮಂದಿರಗಳಿಗೆ ಹೋಗಿ ಉಪಾಸನೆಯಿಂದ ಬಿಂಬಭಾವೈಕ್ಯವನ್ನು ಪಡೆಯಿರಿ. ಛಾಯಾಪ್ರಿಯರಾದರೆ ಮಸೀದಿಗಳಿಗೆ ಹೋಗಿ ಅದರ ಸಚ್ಛಾಯೆಗಳಲ್ಲಿ ನಮಾಜು ಮಾಡಿರಿ. ಇಲ್ಲವಾದರೆ ಸಾಧು ಸಂತರನ್ನಾಶ್ರಯಿಸಿ ನಾಮ ಸಂಕೀರ್ತನದಲ್ಲಿ ಮಗ್ನರಾಗಿ ಭಕ್ತಿಯ ಶ್ಯಾಮಲಾವರಣದಲ್ಲಿ ಅಹಂಕಾರ ವಿಮುಕ್ತರಾಗಿರಿ. ನಿಮಗೆ ಎರಡರಲ್ಲೂ ಮೋಹವಿಲ್ಲ, ನನಗೆ ಗೊತ್ತು. ನಿಮಗೆ ಜ್ಞಾನಿಗಳಾಗಬೇಕೆಂಬಾಸೆ. ನಿಮಗೆ ದೇವರಿದ್ದಾನೆಯೋ ಇಲ್ಲವೋ ಎಂಬ ಚರ್ಚೆಯ ಹವ್ಯಾಸವೇ ಬೇಡ. ‘ಜ್ಞಾನಾನ್ಮೌನಂ’ ಎಂಬಂತೆ ನಿಮಗೆ ಈ ವಿಚಾರದಲ್ಲಿ ಮೌನವೇ ಇಷ್ಟ. ಇದರಲ್ಲಿ ನಿಮ್ಮ ಜಾಣತನವಿದೆ. ನೀವು ಬಯಸುವ ಸಿದ್ಧಿ ನಾಸ್ತಿಕ್ಯಸಿದ್ಧಿ. ಆದರೆ ಈ ಸಿದ್ಧಿ ನೀವು ತಿಳಿದುಕೊಂಡಿರುವಷ್ಟು ಸುಲಭವಾಗಿ ನಿಮಗೆ ದೊರಕದು. ನಾಮರೂಪಾತ್ಮಕವಾದ ಈ ಪ್ರಪಂಚದ ವಿಜ್ಞಾನ ನಿಮ್ಮನ್ನು “ಇದರಲ್ಲಿ ಏನೂ ಇಲ್ಲ-ಇದು ಎಲ್ಲೆಲ್ಲೂ ಟೊಳ್ಳು” ಎಂಬ ಜ್ಞಾನಕ್ಕೆ ಇನ್ನೂ ಮುಟ್ಟಿಸಿಲ್ಲ. ನೀವು ಅಭಾವದ ನಿಲುಗಡೆಯನ್ನು ಇನ್ನೂ ತಲುಪಿಲ್ಲ. ಅದನ್ನು ತಲುಪಿದಾತ ಒಬ್ಬನೇ ನಾಸ್ತಿಕ. ಆತ ವಿರಕ್ತ, ಶಾಂತ, ಕರುಣಾಮಯ ಬುದ್ಧ. ನೀವು ಬುದ್ಧನಂತಹ ನಾಸ್ತಿಕರೆ? ನಾನಂತೂ ಅಲ್ಲ. ನನಗೆ ಭಗವಂತನೇ ಶರಣ್ಯ. ನಾನು ಆತನ ಪ್ರತೀಕಗಳನ್ನು ಆಶ್ರಯಿಸುತ್ತೇನೆ. ಸಾಧುಸಂತರನ್ನೂ ಸೇವಿಸುತ್ತೇನೆ, ನಾನು ಸಂಕೀರ್ತನೆಯನ್ನೂ ಮಾಡುತ್ತೇನೆ. ಸದ್ಯಕ್ಕೆ ಮಸೀದಿಗೆ ಹೋಗುವ ಬಯಕೆ ಇಲ್ಲ-ಅಷ್ಟೆ.

ಇದನ್ನು ಕುರಿತು ಯೋಚಿಸುತ್ತಿರುವಾಗ ನನಗೆ ಒಂದಂಶ ಹೊಳೆಯುತ್ತದೆ. ಭಗವಂತನಿಗೇ ತನ್ನ ನೆರಳನ್ನು ಕಂಡರೆ ನನ್ನ ಹಾಗೆ ಒಮ್ಮೊಮ್ಮೆ ಅಸಹ್ಯ ಹುಟ್ಟಿಬಿಟ್ಟರೆ ಏನು ಗತಿ ಎಂದು. ಅವನಿಗೆ ಈ ಜೀವನಜಡಢಿಯಲ್ಲಿ ತನ್ನ ಪಡಿನೆಳಲನ್ನು ಆಡಿಸಿ ನೋಡಿಕೊಳ್ಳುವ ಆಸಕ್ತಿ ಇರುವವರೆಗೂ ಋಷಿಗಳು ತಪಸ್ಸು ಮಾಡಬಹುದು, ಜ್ಞಾನಿಗಳು ದರ್ಶನಗಳನ್ನು ಕಾಣಬಹುದು, ಕವಿಗಳು ಭವದ ಪಡಿನೆಳಲನ್ನು ತಮ್ಮ ಕಾವ್ಯಗಳಲ್ಲಿ ಆಡಿಸಬಹುದು, ಗೆಲ್ಲುವವರು ಕೊಲ್ಲಬಹುದು, ಸೋಲುವವರು ಬೀಳಬಹುದು, ಮತವಳರು ತಾವು ಹೆಚ್ಚು ತಾವು ಹೆಚ್ಚೆಂದು ಸ್ಪರ್ಧಿಸಬಹುದು. ಅಂತೂ ಎಲ್ಲರೂ ಹಾ ಎಂದುಕೊಂಡೋ ಹಾ ಹಾ ಎಂದುಕೊಂಡೋ ಇರಬಹುದು. ಆತ ಪ್ರತಿಬಿಂಬ ವಿಮುಖನಾದರೋ ತನ್ನ ಅಹಂಕಾರವನ್ನು ಅಡಗಿಸಿಕೊಂಡು ಯೋಗ ನಿದ್ರೆಗೆ ತೆರಳಿ ಛಾಯಾ ವಿಮುಕ್ತನಾದರೋ? ಈಗಿನ ಪರಿಸ್ಥಿತಿ ಈ ವಿಮುಖತೆಯನ್ನು ಸೂಚಿಸುತ್ತಿದೆಯೇ ಹೇಗೆ?

ಈ ಪ್ರಬಂಧ ಬೆಳೆಯಿತು. ಈ ಚಿತ್ತಛಾಯೆಯನ್ನು ನಾನು ಇನ್ನು ಬೆಳೆಯಗೊಡಬಾರದು. ಈಗ ಲೇಖನಿಯನ್ನು ಬಿಸುಟು ಹೊರಟುಹೋಗುವುದೊಳ್ಳೆಯದು. ಹೊರಗೆ ಇರುಳು ಮನೋಹರವಾಗಿದೆ. ಈ ಇರುಳೂ ಸಹ ಒಂದು ಛಾಯೆಯೇ ಇರಬಹುದೋ? ನಿಜವಾಗಿ, ಸೂರ್ಯ ನಮ್ಮ ಕಾಲಿನ ಕೆಳಗೆ ಭೂಮಿಯ ಅತ್ತಕಡೆ ಹೊಳೆಯುತ್ತಿರುವಾಗ ಭೂಮಿ ತನ್ನ ಹಿಂದೆ ನಮ್ಮ ಕಡೆಗೆ ಎಸೆಯುತ್ತಿರುವ ಮಹತ್ತಾದ ನೆರಳಲ್ಲವೆ ಈ ಇರುಳೆಂಬ ಪದಾರ್ಥ? ಈ ಪ್ರಚ್ಛಾಯೆ ಎಷ್ಟೊಂದು ಜನವನ್ನು ಮೋಹಗೊಳಿಸಿದೆ, ಮೋಸಪಡಿಸಿದೆ; ಇದನ್ನು ದೇವತೆ ಎಂದವರೆಷ್ಟು ಜನ. ವೇದದ ಋಷಿಗಳಿಂದ ವಾಲ್ಮೀಕಿಯವರೆಗೆ ಇದನ್ನು ನುತಿಸಿರುವರೆಷ್ಟು ಮಂದಿ. ಆದರೆ ಇದು ಬರಿಯ ನೆರಳು. ಅದಕ್ಕೆಯೇ ಇದು ನಮ್ಮ ನೆರಳನ್ನೆಲ್ಲಾ ನುಂಗಲು ಸಮರ್ಥವಾಯಿತು. ಇದರಂಚಿನ ತಾರೆಗಳು ಎಷ್ಟು ರಮ್ಯವಾಗಿವೆ! ಇವುಗಳನ್ನು ನಮಗೆ ತೋರಿಸಿಕೊಡಬೇಕೆಂದೇ ಸೂರ್ಯ ಈ ನೆರಳಿನ “ಟಾರ್ಚ್”ನ್ನು ಅಂತರಿಕ್ಷಕ್ಕೆ ಈ ರೀತಿ ಎಸೆದಿದಾನೋ? ಈಗ ನಾನೂ ಈ ಸ್ಥಿರಾಸ್ನಿಗ್ಧಚ್ಛಾಯೆಯಲ್ಲಿ ನನ್ನಾತ್ಮ ನನ್ನ ಅಹಂಕಾರದ ಮೂಲಕ ಚೆಲ್ಲುವ ಎಲ್ಲಾ ತರದ ನೆರಳುಗಳಿಂದಲೂ ಬಿಡುಗಡೆಯನ್ನು ಪಡೆದು ಸುಖಿಯಾಗಿದ್ದೇನೆ ಇಹದಕ್ಲ್ಲೆ ದೇವತೆಗಳಾಗಬೇಕಾದರೆ ಎಂದರೆ ಛಾಯಾಮುಕ್ತರಾಗಬೇಕಾದರೆ ನಮಗೆ ಇದಕ್ಕಿಂತ ಬೇರೆಯ ಉಪಾಯವಿದೆಯೇ?
ಈ ಅಭಾವವೆಂಬ ಪದಾರ್ಥ ಎಷ್ಟೊಂದು ಸದ್‌ಭಾವಪೂರಿತವಾಗಿದೆ.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ