ಎಡ, ಬಲ; ಬಲ, ಎಡ:
ಕವಾತು ನಡಸುವ ಅಪ್ರಬದ್ದ ಬುದ್ಧಿಗೆ ಬೆಂಕಿ
ಯಿಕ್ಕ; ತಕ್ಕಡಿಯ ಪಡಿಯಲ್ಲಿ
ಪಡಿಮೂಡಿ ಮುಳ್ಳಿನೇಕಾಗ್ರದಲಿ ಕೃತಾರ್ಥ
ವಾಗುವೀ ಕಣ್ಣ ಕುತ್ಸಿತದ ಅಂಧ ಶ್ರದ್ಧೆ
ಈಗಲ್ಲ.
ಸತ್ತ ಸಂಪ್ರದಾಯದ ಗೊಡ್ಡೆ,
ನೋಡು ಎಡಗಣ್ಣಿಂದ:
ಇಪ್ಪತ್ತನೆಯ ಶತಮಾನ, ಕೃತಕೋಪಗ್ರಹದ ಯಾನ,
ಮಿದುಳು ಕೆರೆಯಲು ಕೂಡ ಎಲ್ಲಿ ವ್ಯವಧಾನ? ||೧೦||
ಜಿಗಿದು ಮುಟ್ಟಬೇಕಿದೆ ದಿನಕ್ಕೊಂದು ಶತಮಾನ,
ಅದಕ್ಕಾಗಿ ಈ ವಾಮಮಾರ್ಗ ಸಂವರಣ.
ಲಕ್ವಾ ಹೊಡೆದು ಹಾಳಾಗಿ ಹೋಗ ಈ ಬಲ, ಬಲದ ಭಾಗ,
ಈ ಬಲ ಪಕ್ಷ; ಹಿಡಿದು ಎಡಮುರಿ ಶಂಖ
ಊದು; ಅಕ್ಷೌಹಿಣಿಗಳೆಲ್ಲ ಬಲ
ತಿರುಗಲಿ ಎಡಕ್ಕೆ, ಇನ್ನೂ ಎಡಕ್ಕೆ; ಎಡಚ ವಾಹಿನಿ ಎಡವಿ
ದುಡುಕಿ, ಗುಡಿ ಮಹಲು ಮಠ ಮುಳುಗಿ, ನೆಲಸಮವಾಗಿ,
ಇಪ್ಪತ್ತರಲ್ಲೆ ಇಪ್ಪತ್ತೈದನೆಯ ಶತಮಾನ
ಬಂದು, ಆಹಾ, ಬಂಧು,
ನಾನೊಂದು ಸ್ಪೋಟ್ನಿಕ್ಕು, ನೀನು ಇನ್ನೊಂದು;
ಸುತ್ತೋಣ ನೆಲದ ಎಡಗಡೆ ಪಟ್ಟು ಹಿಡಿದು; || ೨೦ ||
ದಕ್ಷಿಣದ ಪಂತಿ ಕುಳಿತವರ ಅಪಸವ್ಯಕ್ಕೆ
ಬೀಜಾಣು ಶಸ್ತತೊಡು ಸವ್ಯಸಾಚಿ;
ಬಲಗಿವಿಗೆ ಎಸೆ ಸಮಾಜವಾದ ತೊಣಚಿ.
ನಡುವಿನವರಿಗೆ ಮಂಕುಬೂದಿಯೆರಚಿ.
ಎತ್ತಿ ಬಲಗಾಲ ಮಡಚಿಡು, – ಅಯ್ಯ, ಥತ್, ಹಾಳಾಗ, –
ಇದು ಇಲ್ಲದಿದ್ದರೇನಿತ್ತು ಕೊರತೆ?
ಅಂದಾದುಂದಿ ಪ್ರಕೃತಿಗೇ ಬೇಕು ಶಸ್ತಚಿಕಿತ್ಸೆ:
ಬಲ ತೊಡೆದು ಬಲ ಬೆಳೆವ ವಾಮ ವಿಜ್ಞಾನಿಗಳ ದೀಕ್ಷೆ
ಬಲಕ್ಕೆ ವಾಲದ ಹಾಗೆ ಪ್ರತಿನಿಮಿಷದ ನಿರೀಕ್ಷೆ; || ೩೦ ||
ಎಡ ಬೀಜವಾಖ್ಯ ಪಾರಾಯಣ ಪರೀಕ್ಷೆ.
ಈಗ ಎಡಗಾಲ ಮೇಲೆ ನಿಲ್ಲು; ನಿಲ್ಲುವುದ ಕಲಿ;
ಕುಂಟು, ಎಡಗಾಲಿಂದ ಕುಂಟು, ಬಂಟ;
ಪ್ರಗತಿ ಪಥದಲ್ಲಿ ರಾಕೆಟ್ಟುಗತಿ ಕುದುರಿಸು.
ಅಸಾಧ್ಯ? ನಿಜ. ಸಾಧ್ಯವೆಂದೇ ಬಗೆ, ಬಗೆದು ಬಾಷಣ ಬಿಗಿ;
ಎಷ್ಟು ಬಿಗಿದರೆ ಅಷ್ಟು ಬಿಗಿ ನಿನ್ನ ದಿರಿಸು.
ಮುಖ್ಯ ಬೇಕಾದ್ದು ಎಡಗೈಗೆ ದೊರೆವ ಫಿರಂಗಿ
ಕಾಡ ತೂಸು:
ಈ ವಾಮಾಚಾರವೆಲ್ಲ ಮರೆಮಾಚು ಬುರಕಿ.
ಅಯ್ಯಾ, ಬದುಕು ತ್ರಾಸಿನ ತೂಕ: || ೪೦ ||
ಬೆಣ್ಣೆ ತೂಗಿದ ಕೋತಿ ಮರದ ಮೇಲಿರುವಾಗ್ಗೆ
ಕೆಲ ಬಲಗಳಿಂದ ಬೆಕ್ಕುಗಳ ಲಗ್ಗೆ;
ನುಂಗಿದ್ದ ಬಲ ಹೊಟ್ಟೆಯೊಳಗೆ ವಾತಾಪಿ.
ಕೊನೆಯುಸಿರು ಬಿಟ್ಟರೂ ಎಷ್ಟಕ್ಕೆ ಮಾಫಿ?
ಹುಟ್ಟು ಸಾವುಗಳ, ಹಗಲಿರುಳ, ಋತುಗಳ ಸೂಳು;
ದಕ್ಷಿಣೋತ್ತರ ಆಯನಗಳ ಚಕ್ರದುರುಳು; || ೪೭ ||
ಎಡಬಲದ ಪಾಳಿ ತಿರುವಿಹದ ಸಾರೋಟು
*****
ಅಕ್ಟೋಬರ್ -೧೯೬೩
