ವೆಂಕಟೇಶ, ರಾಯರ ಮನೆ ಸೇರಿದ ಕೆಲವು ದಿವಸಗಳಲ್ಲಿ ಎಲ್ಲರ ಅಚ್ಚುಮೆಚ್ಚಾದನು. ಎಲ್ಲರ ಕೆಲಸದಲ್ಲಿಯೂ ನೆರವಾಗುತ್ತಿದ್ದನು. ಎಲ್ಲರ ಕಷ್ಟಸುಖಗಳನ್ನೂ ಹಚ್ಚಿಕೊಳ್ಳುತ್ತಿದ್ದನು. ರಾಯರಂತೂ ಹುಡುಗನ ಗುಣವನ್ನು ನೋಡಿ ಬೆರಗಾಗಿಬಿಟ್ಟರು. ಸುಂದರರಾಯರಲ್ಲಿ ಬಾಯತುಂಬ ವೆಂಕಟೇಶನ ಗುಣಕಥನವನ್ನು ಮಾಡಿಯೂ ಮುಗಿಸಿದ್ದರು.
ವೆಂಕಟೇಶ ರಾಮುವಿನ ಸಹಪಾಠಿಯಾಗಿದ್ದರೂ ಅವರವರಿಗೆ ಹೊಂದಿಕೆ ಬೆಳೆಯಲಿಲ್ಲ. ಲಕ್ಷ್ಮಣನ ಮೇಲೆ ವಿಶೇಷ ಪ್ರೇಮ ಹುಟ್ಟಿತು. ತನಗೆ ಅನುವು ದೊರೆತಾಗಲೆಲ್ಲಾ ಲಕ್ಷ್ಮಣನ ಜತೆಯಲ್ಲಿಯೇ ಇರತೊಡಗಿದನು. ತನ್ನ ಪಾಠದ ಹೊತ್ತನ್ನು ರಾಮುವಿನೊಂದಿಗೆ ಅವನು ಕಳೆಯಲೇಬೇಕಾಗಿತ್ತು. ಆ ಹೊತ್ತಿನಲ್ಲಿಯೂ, ಮಿಕ್ಕ ವೇಳೆಗಳಲ್ಲಿಯೂ ರಾಮುವು ವೆಂಕಟೇಶನಿಂದ ತನ್ನ ಕೆಲಸಗಳನ್ನೆಲ್ಲಾ ನಿರ್ದಾಕ್ಷಿಣ್ಯದಿಂದ ಮಾಡಿಸುತ್ತಿದ್ದನು. ಮನೆಯಲ್ಲಿ ಆಳುಗಳಿದ್ದರು. ಆದರೂ ಬೇಕಂತಲೇ ರಾಮು ವೆಂಕಟೇಶನಿಗೇ ತನ್ನೆಲ್ಲ ಕೆಲಸಗಳನ್ನು ಒಪ್ಪಿಸುತ್ತಿದ್ದನು. ರಾಮುವಿನ ಬಟ್ಟೆಬರೆಗಳನ್ನು ಒಗೆದು ಮಡಿಮಾಡಿಸಿಡುವುದಲ್ಲದೆ, ಅವನಿಗೆ ಹಾಸಿಗೆ ಹಾಕಿಕೊಡುವುದು, ಅವನ ಮೋಜುಗಳಿಗೆ ಬಣ್ಣಹಾಕಿಕೊಡುವುದು, ಶಾಲೆಗೆ ಅವನ ಪುಸ್ತಕಗಳನ್ನು ಹೊತ್ತುಕೊಂಡು ಹೋಗುವುದು ಮೊದಲಾದ ಎಲ್ಲಾ ಕೆಲಸಗಳನ್ನು ಮಾಡಬೇಕಾಗಿತ್ತು. ಸ್ವಲ್ಪ ಹೆಚ್ಚು ಕಡಿಮೆಯಾದರೆ ರಾಮುವಿನ ವಾಗ್ಬಾಣ ಪರಂಪರೆಗೆ ಸಿಕ್ಕಿ ನೋಯಬೇಕಾಗಿತ್ತು. ಕೋಪ ಬಂದಿತೆಂದರೆ ರಾಮುವಿನ ಮೆಮೇಲೆ ಪ್ರಜ್ಞೆಯೇ ತಪ್ಪುತ್ತಿತ್ತು. ಯಾರಿದ್ದಾರೆ ಯಾರಿಲ್ಲ ಎನ್ನುವುದನ್ನು ಮರೆಯುತ್ತಿದ್ದನು. ಆಳು ಲಕ್ಕನನ್ನು ಬಯ್ಯುವುದಕ್ಕೂ ಒಂದೇ ಭಾಷೆ, ವೆಂಕಟೇಶನನ್ನು ಬಯ್ಯುವುದಕ್ಕೂ ಒಂದೇ ಭಾಷೆ. ಕೋಪ ಹೆಚ್ಚಿತೆಂದರೆ ರೂಲುದೊಣ್ಣೆಯಿಂದ ಬೆನ್ನುಮೂಳೆ ಮುರಿಯುವಂತೆ ಹೊಡೆದೂ ಬಿಡುತ್ತಿದ್ದನು. ರಾಮು ರಾಯರ ಮಗ-ರಾಯರ ಹಿರಿಯ ಮಗ-ಮನೆಗೆ ಯಜಮಾನ. ಇದನ್ನು ಅವನು ಮರೆತಿರಲಿಲ್ಲ, ಮನೆಯಲ್ಲಿ ಯಾರೂ ಮರೆಯದಂತೆ ಎಚ್ಚರವಾಗಿರುತ್ತಿದ್ದನು.
ಮಲಗುವ ಮೊದಲು ರಾಮು ಒಂದು ಗ್ಲಾಸು ಹಾಲು ಕುಡಿಯುವ ಪದ್ದತಿಯಿತ್ತು. ಎಲ್ಲರ ಊಟ ಮುಗಿದ ಮೇಲೆ ಎಲೆ ಎತ್ತಿ ಹಾಕಿ, ತಟ್ಟೆಗಳನ್ನು ತೊಳೆದಿಟ್ಟು, ಎಂಜಲು ಗೋಮೆಯಮಾಡಿ ರಾಮುವಿಗೆ ಹಾಲನ್ನು ತೆಗೆದುಕೊಂಡು ಹೊಗಿ ಕೊಟ್ಟು ತಾನು ಮಲಗುವ ವಾಡಿಕೆ, ಒಂದು ದಿವಸ ಇದ್ದಕ್ಕಿದ್ದ ಹಾಗೆ ರಾಮು ರಂಪ ತೆಗೆದುಬಿಟ್ಟ. ತನಗೆ ಕಳುಹಿಸಿದ ಹಾಲನ್ನು ವೆಂಕಟೇಶ ಕುಡಿದು ತಂದು ಕೊಟ್ಟ ಎಂಬ ಆಪಾದನೆಯನ್ನು ಹೂಡಿಬಿಟ್ಟು ‘ಹೋ’ ಎಂದು ಗಟ್ಟಿಯಾಗಿ ಅರಚಲು ಆರಂಭಿಸಿದ. ಸಾವಿತ್ರಮ್ಮ ಸಮಾಧಾನ ಹೇಳಿದರು. ರಾಮು ಜಗ್ಗಲಿಲ್ಲ. ತಾಯಿಯನ್ನೂ ಅಲ್ಲಗಳೆದು ಮಾತನಾಡಿಬಿಟ್ಟ. ಮೀನಾಕ್ಷಮ್ಮ ಇದನ್ನು ನೋಡಲಾರದೆ
“ಹೀಗೆಲ್ಲಾ ಆಡಬಾರದಪ್ಪಾ ರಾಮೂ. ನೀನು ದೊಡ್ಡ ಹುಡುಗ ವೆಂಕಟೇಶ ಏನು ಮಗುವೇ? ಅವನೆಂದಿಗೂ ಹಾಗೆ ಮಾಡುವವನಲ್ಲ” ಎಂದು ಹೇಳಿದರು. ರಾಮು ಕೆಣಕಿದ ಫಣಿಯಂತೆ ರೇಗಿ ಬುಸುಗುಟ್ಟುತ್ತಾ
“ಸಾಕು- ನೀನು ಬಾಯಿಮುಚ್ಚು ದೊಡ್ಡಮ್ಮ. ತಿರುಕೆ-ಮಕ್ಕಳೇ ನಿಮಗೆ ಹೆಚ್ಚು, ಅವರು ಹೇಳಿದ್ದು ಸತ್ಯ, ನಾನು ಹೇಳಿದ್ದು ಸುಳ್ಳು ತಾಯೀಗೇ ಇಲ್ಲದ ವಾಂಛಲ್ಯ ನಿಮಗೆಲ್ಲಿಂದ ಬರಬೇಕು.”
ಎಂದು ಧಿಕ್ಕರಿಸಿ ಮಾತನಾಡಿಬಿಟ್ಟ. ಮೀನಾಕ್ಷಮ್ಮನವರು ಕಣ್ಣಿನಲ್ಲಿ ನೀರು ತಂದುಕೊಂಡು ಒಳಗೆ ಹೊರಟುಹೋದರು. ಸಾವಿತ್ರಮ್ಮ ಅಕ್ಕನನ್ನು ಹಿಂಬಾಲಿಸಿ ಸಮಾಧಾನ ಹೇಳಿದಳು. ಮೀನಾಕ್ಷಮ್ಮನಿಗೆ ಮನಸ್ಸು ನೊಂದಿತ್ತು.”ತಾವು ಎಂದೂ ಯಾವಬಗೆಯಲ್ಲಿಯೂ ಭೇದವನ್ನೆಣಿಸದಿರುವಾಗ ರಾಮು ಇಂತಹ ಮಾತನ್ನಾಡಿಬಿಟ್ಟನಲ್ಲ” ಎಂದು ಮಮ್ಮಲ ಮರುಗಿದರು.
ಮೀನಾಕ್ಷಮ್ಮನವರನ್ನು ರಾಮು ಅಂದದ್ದು ವೆಂಕಟೇಶನಿಗೆ ತುಂಬ ಯಾತನೆಯನ್ನುಂಟುಮಾಡಿತು. ತನ್ನ ಪರ ವಕೀಲಿ ಮಾಡಿದುದರಿಂದ ಅವರಿಗೆ ತಿರಸ್ಕಾರವುಂಟಾಯಿತಲ್ಲಾ ಎಂದು ಪರಿತಾಪಪಟ್ಟನು. ಮೀನಾಕ್ಷಮ್ಮನವರಿಗೆ ರಾಮುವಾಡಿದ ಮಾತು ಮತ್ತೆ ಮತ್ತೆ ಕಿವಿಯ ಮೇಲೆಬಿದ್ದಂತಾಗಿ ಕರುಳು ಕೊರೆಯುತ್ತಿತ್ತು.
“ನೀನೇ ಹೇಳು ಸಾವಿತ್ರು. ನಾನು ಯಾವಾಗಲಾದರೂ ರಾಮು ವಿಷಯದಲ್ಲಿ ಭೇದವನ್ನೆಣಿಸಿದ್ದೇನೆಯೇ?”
“ಹೋಗಲಿ ಬಿಡು ಅಕ್ಕಾ. ಅವನ ಮಾತೇನು. ಎಂದಿಗೂ ಒಂದೇ ಆಯಿತು ಅವನ ಬುದ್ಧಿ. ದೊಡ್ಡೋರು ಚಿಕ್ಕೋರು, ಸಾಕ್ದೋರು ಸಲಹಿದೋರು ಅನ್ನುವ ತಾರತಮ್ಯ ಕೂಡಾ ಇಲ್ಲ” ಎಂದು ಸಾವಿತ್ರಮ್ಮ ಸಮಾಧಾನ ಹೇಳಿದಳು.
ವೆಂಕಟೇಶ ಎದುರಿಗೆ ಬಂದು ನಿಂತು. ಸಣ್ಣದನಿಯಲ್ಲಿ
“ಅಮ್ಮಾ” ಎಂದ
ಮೀನಾಕ್ಷಮ್ಮ ಕತ್ತೆತ್ತಿ ನೋಡಿದರು.
“ಒಂದು ಮಾತು ಹೇಳೋಣಾಂತ ಬಂದೆ. ಅಪ್ಪಣೆಯಾದರೆ ಹೇಳುತ್ತೇನೆ.”
ಹೇಳಪ್ಪಾ. ಸಂಕೋಚವೇತಕ್ಕೆ?”
“ಇವತ್ತು ನನ್ನಿಂದ ನೀವು ಸಣ್ಣಮಾತು ಕೇಳುವ ಹಾಗಾಯಿತು. ಹೆತ್ತ ತಾಯಿಗಿಂತಲೂ ಹೆಚ್ಚಾಗಿ ಕಾಪಾಡುತ್ತಾ ಇದ್ದೀರಿ. ನನಗೆ ಅಷ್ಟೇ ಲಭ್ಯ ಎಂದು ಕಾಣುತ್ತೆ. ಅಪ್ಪಣೆಯಾದರೆ ನಾಳೆ ಹೊರಟುಹೋಗುತ್ತೇನೆ.”
ಮೀನಾಕ್ಷಮ್ಮ, ಸಾವಿತ್ರಮ್ಮ ಇಬ್ಬರೂ ಗಾಬರಿಗೊಂಡರು.
ಸಾವಿತ್ರಮ್ಮನೇ
ಹಾಗೆಲ್ಲಾ ಅನ್ನಬಾರದು ವೆಂಕಟೇಶೂ, ಅವನೂ ಹುಡುಗ. ವಿವೇಕವಿಲ್ಲದೆ ಒಂದು ಮಾತು ಆಡಿದಾಂತ ಇಷ್ಟೊಂದು ಮನಸ್ಸಿಗೆ ಹಚ್ಚಿಕೊಳ್ಳಬಾರದು. ನಿನ್ನ ಪಾಡಿಗೆ ನೀನು ಓದಿಕೊಂಡು ಇರಪ್ಪಾ. ನಾಳೆಯಿಂದ ಅವನ ಕೆಲಸ ಅವನೇ ಮಾಡಿಕೊಳ್ಳಲಿ. ನೀನು ತೆಪ್ಪಗೆ ಲಕ್ಷ್ಮಣನ ಜತೆ ಇರು.”
“ಹಾಗೇ ಮಾಡು ವೆಂಕಟೇಶೂ, ಮನೆಗಿನೆ ಬಿಟ್ಟು ಹೋಗಬೇಡಪ್ಪಾ. ಮಕ್ಕಳೂ ಅಂದರೆ ಹೊಟ್ಟೆಯಲ್ಲಿ ಹುಟ್ಟಿದವರೇ ಮಕ್ಕಳೇನೋ, ವೆಂಕಟೇಶೂ- ನೀನೂ ನಮ್ಮ ಮಗನೇ ಕಣಪ್ಪಾ. ಇದು ಯಾರದೋ ಮನೆ ಅನ್ನೋ ಭಾವನೆ ಬಿಟ್ಟುಬಿಡು. ಗೋಪಾಲಿ ನೋಡು, ಲಚ್ಚಿ ನೋಡು, ಶಾಂತನ್ನನೋಡು- ಎಲ್ಲರೂ ಹೇಗೆ ನಿನಗೆ ಹೊಂದಿಕೊಂಡಿದ್ದಾರೆ!”
ಎಂದು ಸಮಾಧಾನ ಹೇಳಿದರು. ವೆಂಕಟೇಶ ನಿರುತ್ತರನಾದ.
ವೆಂಕಟೇಶನ ವಿಚಾರದಲ್ಲಿ ಸಾವಿತ್ರಮ್ಮನವರು ಮಾಡಿದ ಹೊಸ ವ್ಯವಸ್ಥೆ ಕೇಳಿ ರಾಮುವಿನ ಹೊಟ್ಟೆ ಉರಿದುಹೋಯಿತು. ವೆಂಕಟೇಶನ ಸೇವೆ ತಪ್ಪಿದ ದುಃಖವೊಂದು ಕಡೆ, ತಾನು ಮಾಡುತ್ತಿದ್ದ ಅಧಿಕಾರ ಹೋದ ಸಂಕಟವೊಂದು ಕಡೆ. ಅವಕಾಶ ಸಿಕ್ಕಿದಾಗಲೆಲ್ಲಾ ವೆಂಕಟೇಶನನ್ನು ನೋಯಿಸುವ ಯಾವದಾದರೂ ಸಣ್ಣ ಪುಟ್ಟ ಮಾತುಗಳನ್ನಾಡಿ ತೃಪ್ತಿಪಟ್ಟುಕೊಳ್ಳುತ್ತಿದ್ದನು.
ಒಂದು ದಿನ ರಾಯರೂ, ಹುಡುಗರೂ ಎಲ್ಲರೂ ಒಟ್ಟಿಗೆ ಊಟಕ್ಕೆ ಕುಳಿತಿದ್ದರು. ಮೀನಾಕ್ಷಮ್ಮನವರು ಬಡಿಸುವುದಕ್ಕೆ ನಿಂತರೆ ಅನ್ನಪೂರ್ಣಾದೇವಿಯೇ ನಿಂತತೆ ಸರಿ. ಒಂದೂಟ ಮಾಡುವವರ ಕೆಯಲ್ಲಿ ಮೂರು ಊಟವನ್ನು ಗಿಟ್ಟಿಸುತ್ತಿದ್ದರು. ವೆಂಕಟೇಶನಿಗೆ ಎರಡನೆಯ ಸಲ ಅನ್ನ ಬಲವಂತ ಮಾಡಿದಾಗ
“ಬೇಡಮ್ಮಾ- ಹಸಿವಿಲ್ಲ” ಎಂದನು.
ನನಗೂ ಹಸಿವಿಲ್ಲ” ಎಂದು ಲಕ್ಷ್ಮಣನೂ ಅಂದನು “ಇದೇನ್ರೋ ಹೀಗೆ ಮಾಡುತ್ತೀರಿ. ಇವತ್ತು ಮಧ್ಯಾನ್ಹ ತಿಂಡಿ ಕೂಡಾ ಇಲ್ಲ. ಹೀಗೆ ಅರೆಹೊಟ್ಟೆ ಊಟಮಾಡಿದರೆ ರಾತ್ರಿ ಹೊತ್ತಿನಲ್ಲಿ ಹಸಿವು ಹತ್ತಿಕೊಳ್ಳುತ್ತದೆ ನೋಡಿ” ಎಂದು ಮೀನಾಕ್ಷಮ್ಮ ಉಪಚರಿಸಿದರು. ಎಲೆಯ ಮುಂದೆ ಕುಳಿತಿದ್ದ ರಾಮು ಈ ಅವಕಾಶವನ್ನು ತೆಗೆದುಕೊಂಡು
“ಹಸಿವು ಹೇಗಾಗಬೇಕು. ಗಂಟು ಗಂಟು ಕೋಡುಬಳೆ, ಕಾಯಿ, ಹುರಿಟ್ಟು, ಹುರಿಗಾಳು ಇರುವಾಗ. ಇಬ್ಬರು ರಾಯರೂ ಚೆನ್ನಾಗಿ ಹೊಡೆದು ಬಂದಿದ್ದಾರೆ.”ಎಂದಂದ. ರಾಯರು ಸುಮ್ಮನಿರದೆ “ಏಕೆ, ನಿನಗೆ ಕೊಡಲಿಲ್ಲವೇನೋ ಪಾಪ. ಅದಕ್ಕೇ ಚಾಡಿ ಹೇಳೋದಿಕ್ಕೆ ಹೊರಟೆ” ಎಂದು ಮೂದಲಿಸಿದರು. ರಾಮು ಮುಖ ತಗ್ಗಿಸಿ ಮುಂದಿನ ಊಟವನ್ನು ಸಾಗಿಸಿದ. ರಾಯರು ವೆಂಕಟೇಶನ ಕಡೆ ತಿರುಗಿ
“ಕೋಡಬಳೆ ಹುರಿಗಾಳು ಅಷ್ಟೊಂದಿದ್ದರೆ ನನಗಿಷ್ಟು ಕೊಡಯ್ಯಾ” ಎಂದರು. ವೆಂಕಟೇಶನಿಗೆ ಏನು ಹೇಳಬೇಕೋ ತೋರದಾಯಿತು, ರಾಯರ ಸೌಜನ್ಯ ಹೊಸದಲ್ಲ. ಆದರೆ ಅವರು ಆಡುತ್ತಿದ್ದ ಪ್ರತಿ ಮಾತಿನಲ್ಲಿಯೂ ಸೌಜನ್ಯದ ಹೊಸ ಹೊಸ ಕಳೆಗಳು ಹೊರಸೂಸುತ್ತಿದ್ದವು.
“ಬಡವರ ಮನೇದು – ಎಣ್ಣೆದು – ದೊಡ್ಡವರ ತನಕ ಬರೋದಲ್ಲ” ಎಂದು ಬಹಳ ಕಷ್ಟದಿಂದ ಹೇಳಿ ಮುಗಿಸಿದನು. ರಾಯರು ಊಟ ಮುಗಿದ ಕೂಡಲೆ ವೆಂಕಟೇಶನ ಎಣ್ಣೆ ಕೋಡಬಳೆ, ಸೀದ ಹುರಿಗಾಳು ತರಿಸಿ ರುಚಿ ನೋಡಿ “ಭೇ! ಸೊಗಸಾಗಿದೆಯಯ್ಯಾ” ಎಂದು ಹೇಳದೆ ಬಿಡಲೇ ಇಲ್ಲ.
*****
ಮುಂದುವರೆಯುವುದು
ಸಂಧ್ಯಾ ರಾಗ – ೯
