ಭಾವಜೀವಿ

ಪ್ರಕೃತಿ ಮಾತೆಯ ಮಡಿಲ ಹಸುರು ಕುಸುರಿನ ಮೃದುಲ
ತಲ್ಪದಲಿ ಹಾಯಾಗಿ ಮೈ ಚಾಚಿರೆ,
ಪಡುವಣದ ಬಾನದೇಗುಲದೆದುರು ಕಿರುಮೋಡ
ಮೌನದಲಿ ತಲೆಬಾಗಿ ಕೈ ಮುಗಿದಿರೆ,–

ಪೊಂಜೊಡರು ತೂಗಿದೊಲು ನೆಲಬಾನ ತಳ್ಕೆಯಲಿ
ನೇಸರನು ಬಿಡುಗಣ್ಣನಾಗುತಿರಲು,
ಸಿಂಗರದ ಬಂಗಾರದಂಗಾರ ಹರಡಿದೊಲು
ಹೊಂಬೆಳಕು ಹೊಡಕರಿಸಿ ಹೊಮ್ಮುತಿರಲು-

ಮನಸಿನೇಕಾಂತದಲಿ ಹಗಲುಗನಸಿನ ಸ್ವರ್ಣ
ಮಂದಿರದ ಛಾಯೆಯೊಲು ಬೆಟ್ಟ ಕಾನು; ೧೦
ಗಂಭೀರ ಗುಂಭದಲಿ ಮೈದುಂಬಿ ನಿಂತಿಹೆವು-
ಎನಿತಲ್ಪ ಜೀವಿಗಳೊ ನೀನು-ನಾನು!

ತನಿವಣ್ಣ ತಿರಿದುಂಡು ಗಿಳಿವಿಂಡು ಹಾರುತಿದೆ
ಮುಗಿಲಲ್ಲಿ ತೇಲುತಿಹ ಬಳ್ಳಿಯಂತೆ,
ಬೆಳ್ಳಕ್ಕಿ ಬಳಿವಿಡಿದು ಓರಣದಿ ಸಾಗಿಹವು
ಮಾರುಗೈಯಲಿ ಮುಗಿಲನಳೆಯುವಂತೆ!

ನೆಲದೆದೆಯ ಕಂಪುಂಡ ತಂಗಾಳಿ ಮೈದಡವಿ
ತೀಡುತಿದೆ ನಲ್ಮೆಗೈ ಹರಸುವಂತೆ,
ಲೋಕಾಭಿರಾಮದಲಿ ಹಾಡಿ ಹಾರಾಡುತಿವೆ
ಹಕ್ಕಿ ತಿರೆಯಾನಂದ ಸಾರುವಂತೆ! ೨೦

ಬಣ್ಣ ಬಣ್ಣದೊಳಿಂತು ಸಂಜೆ ರಂಜಿಸುತಿರಲು
ಬಂಜೆ ಮೆದುಳಿಗು ಬಣ್ಣವೇರುತಿಹುದು;
ಸಂತೆ ಗದ್ದಲದಲ್ಲಿ ಬಳಲಿ ಬೆಂಡಾಗಿರುವ
ಮನವು ರಸ ಸೇಚನೆಯ ಪಡೆಯುತಿಹುದು.

ಆ ಮಾತು ಈ ಮಾತು ಹಾಗಾಯ್ತು ಹೀಗಾಯ್ತು
ಏನಾಯ್ತು? – ಮನ ಬೀತು ಬಂಜರಾಯ್ತು;
ಹಗಲೆಲ್ಲ ಹೈರಾಣ, ಮಾತೆಂಬುದೇ ಮರಣ
ಅಂದಂದಿಗೇ ಮೌನ ಬೇಕಾಯಿತು.

ಕೀಟಲೆಯ ಕೋಟಲೆಗೆ ತಾಳಲಾರದ ಮನವು
ಶಾಂತಿಯರಸುತ ದಿನವು ಇಲ್ಲಿ ಬಹುದು; ೩೦
ಯುಗಯುಗಾಂತಗಳನ್ನ ಈ ಬಗೆಯ ಏಕಾಂತ-
ದೆಡೆಯಲ್ಲಿ ಮನವಾರೆ ಕಳೆಯಬಹುದು.

ಓಡುಕು ಬಾಯಿಯ ಸಿಡುಕು ಕೆಡುಕು ನುಡಿ ಮಾರ್‍ನುಡಿಯ
ತಡಕಾಟ ಪರದಾಟವೆನಿತುವರೆಗೆ?
ನನ್ನ ನಾನೇ ತಿಳಿದು, ನನ್ನೊಳಗನೇ ಹಿಳಿದು
ಎಂದು ನಾ ನಾನಾಗಿ ಬರುವನೊರೆಗೆ?

ಹುರುಳೆನಿತು ತಿರುಳನಿತು ಕಸರು ಕಡ್ಡಿಗಳೆನಿತು
ಜರಡಿ ಹಿಡಿಯಲು ತಾನೆ ತಿಳಿವುದಲ್ಲ!
ನನ್ನ ನಾನು ಅಳೆದು ಕಳೆದು ನೋಡಲು ಬೇಕು
ಎಂದು ಪೀಡಿಸದಿರುವ ದಿನವದಿಲ್ಲ. ೪೦

ಅದಕಾಗಿ ಪ್ರಕೃತಿಮಾತೆಯ ಮಡಿಲಿನಾಸರೆಗೆ
ಆಸತ್ತು ಬೇಸತ್ತು ಬಂದನಿಂದು;
ಶಾಂತಿ ಬಯಸಿ ನಿತಾಂತ ಏಕಾಂತಕೀ ನೋಂತ
ಮನಕೆಂದು ದೊರಕೀತು ಅಮೃತಬಿಂದು?

ಅಂತರಂಗದ ನಿಸ್ತರಂಗ ತಿಳಿಗೊಳದಲ್ಲಿ
ಲಲಿತಾರವಿಂದಗಳ ಮಕರಂದವು.
ಅಂತು ನೆನಹಿನ ಗಂಧದರಮನೆಯ ಹೊಕ್ಕಂದು
ಅಲ್ಲೇನು?-ಸ್ಮೃತಿಫಲದ ಮಾಕಂದವು!

ನಾಗರಿಕ ನಾಗರವು ಹುತ್ತು ಕಟ್ಟಿದ ಹಳ್ಳಿ-
ಯಲ್ಲಿ ಬಳೆದಿಹ ಪರಿಯದಾವ ಸೊಗಸು! ೫೦
ಭಾವದುನ್ಮಾದದಲಿ ಬೆರಗು ನಿಬ್ಬೆರಗಿನಲಿ
ವರುಷಗಳು ಹರುಷದಲ್ಲಿ ಕಂಡ ಕನಸು.

ಚಿಕ್ಕಂದು ಯಾರಾದರೊಂದು ಬಿರುನುಡಿಯಾಡೆ
ಕಂಬನಿ ಕಪೋಲಗಳ ತೊಯಿಸುತಿತ್ತು,
ಹುಡುಗಾಟ ನಗೆಯಾಟ ಹೊಗೆಯಾಟವಾಗುತ್ತಿರೆ
ತಾರತಮ್ಯವನರಿಯದಾಗುತ್ತಿತ್ತು.

ತಂದೆ ತುಸ ಸಿಡುಕಾಡೆ ಮಿಡುಕಾಡಿ ಮನವೆಲ್ಲ
ಮನತುಂಬ ತಾಯ ಬೆಂಬಳಿವಿಡಿಯುತ
ಸಾಂತ್ವನದಿ ಅಕ್ಕ ಅಣ್ಣಂದಿರೊಡನಾಡುತಲಿ
ಚಿಕ್ಕ ಗೆಳೆಯರ ರೆಕ್ಕೆಯಲ್ಲಿ ಸತತ. ೬೦

ಬರಬರುತ ಜನರ ಗುಂಪೆಂದೊಡನೆ ಮನವೇಕೊ
ಬಸವನಾ ಹುಳದಂತೆ ಮುದುಡುತಿತ್ತು;
ಊರ ಹೊರಗಿನ ತೋಟ-ಬೇಲಿ, ಪಾತರಗಿತ್ತಿ
ಕಾಡ ಗಿಡಗಂಟಿಗಳ ಸಂಗವಾಯ್ತು.

ಆಟ ಬಯಲಾಟದಲಿ ಕೋಲು ಕುಣಿತಗಳಲ್ಲಿ
ಹಂತಿ ತಿರುಗುತ ಸುಗ್ಗಿ ಮೊದಲಾಗಿರೆ,
ಮುಕ್ಕು ಮುಕ್ಕಿಗೆ ಬೀಸುಗಲ್ಲ ಜೊತೆಹಾಡುಗಳ
ಸುರಿಮಳೆಯು ಜನಪದದ ಪ್ರೇರಿಸುತಿರೆ,

ನಮ್ಮೂರ ಗುಡ್ಡದೋರೆಯ ಬದಿಯ ಕಿರುಹಳ್ಳ
ಸುವಿಶಾಲ ಆಲ, ಎಲೆವಳ್ಳಿ ತೋಟ ೭೦
ಈಶ್ವರನ ಗುಡಿ, ಕಲ್ಲಕಟ್ಟೆ, ಮಾದರಕೇರಿ
ಕೆಮ್ಮರಡಿ- ಏನೆಲ್ಲ ಎಂಥ ನೋಟ!

ಗುಂಡುಗಜಗವನಾಡೆ ಚಿಣ್ಣಿ ಕೋಲನು ತೂರೆ
ಮನೆಯವರ ಕಣ್ಮರೆಸಿ ಓಡಾಟವು;
ಬೆಲ್ಲವತ್ತದ ಕಾಯ ಬುಗುರಿಯಲಿ ಜಾಳಿಗೆಯ
ಸುತ್ತಿ ಬಿಚ್ಚಲು ನಾದ ಭೋ೦ಕಾರವು!

“ಬಿಟ್ಟಟ್ಟೆ ಬೆಳಗಾತು ತಟ್ಟಿಮನಿ ಹಾಳಾತು
ಹಾಳುಗೋಡೆಯ ದೆವ್ವ ಬಂದು ಬಡಿತು”-
ಕಣ್ಣು ಮುಚ್ಚಾಡುತ್ತ ಗೊಂಬೆಮದುವೆಯ ಹೂಡೆ
ಹಂಚುಹರಳುಗಳಾಗ ಹವಳ ಮುತ್ತು! ೮೦

`ತಾಂಡೆ’ ಯಿಂದಲಿ ಬರುವ ಲಂಬಾಣಿ ಹೆಂಗಸರ
ಉಡುಪು ತೊಡಪೇನವರ ಮಾತೆ ಬೇರೆ.
“ಲಂಬಾಣಿ ಗಿಲ್ ಗಿಲ್….ನಾ ಬಂದೆ ನಿಲ್‌ನಿಲ್….
ಕಟಗಿ ಹೊರಿ ಚೆಲ್ ಚೆಲ್….ಏ ಏಡಿರೆ”

ಅಣಕವಾಡನು ಕಟ್ಟಿ ಅವರ ಕುಣಿತಕೆ ಹಾಡಿ
ಆನಂದಪಟ್ಟುದನು ಮರೆಯಬಹುದೆ?
ಸುಡುಗಾಡಸಿದ್ದ ತಾನೊಂದು ಸಲ ಹೆದರಿಸುತ
ಜೋಳಿಗೆಯ ಬಾಯ್ದೆರೆಯಲತ್ತು ಕರೆದೆ.

ಜೋಳದಾ ಪಯಿರು ಹೊಡೆಹಾಯ್ದು ಹೊಂದಲೆದೂಗೆ
ಅಕ್ಕಡಿಯ ಬಳ್ಳಿಗಳು ಹುಲುಸಾಗಿರೆ, ೯೦
ಬನ್ನಿಗಿಡದಡಿಯಲ್ಲಿ ತತ್ರಾಣಿ ತಣ್ಣೀರ
ಕುಡಿದು ಬುತ್ತಿಯನುಂಡು ಸೊಂಪಾಗಿರೆ,

ಕೊಲ್ಲಾರಿ ಚಕ್ಕಡಿಗೆ ಹೂಡಿರುವ ಎತ್ತುಗಳ
ಕೊರಳ ಗೆಜ್ಜೆಯ ಸರವು ಟಿಂಟಿಣಿಸಲು
ಮೂಕೆಯಲಿ ಕುಳಿತಿರುವ ಆಳು ಲಾವಣಿ ಹಾಡೆ
ಕಿವಿಗೊಟ್ಟು ಕೇಳುವವು ಬಾನು ಬಯಲು!

ರಾಜರಾಣಿಯರ ಕತೆ ದೇವ-ದೆವ್ವಗಳ ಕತೆ
ಎಂಥವೆಂಥವೊ ನೂರು ಕತೆಯ ಕೇಳಿ
ಸೆಟ್ಟಿಕತೆ ಕಟ್ಟು ಕತೆಗೆಲ್ಲದಕು ಹೂಂಗೊಟ್ಟು
ತಲೆಯಾಡಿಸಿರೆ ಮತ್ತೆ ಕತೆಯ ಹೋಳಿ! ೧೦೦

ಚಂದ್ರ-ಚಿಕ್ಕೆಗಳಲ್ಲಿ ಮೋಡ-ಕಾಡುಗಳಲ್ಲಿ
ಬಾಲ್ಯದಿಂದಲು ಪ್ರೀತಿ ಬಲಿಯಿಸಿತ್ತು;
ಸತ್ತವರ ಕಂಡಾಗ ಮನವೆಲ್ಲ ಹೌಹಾರಿ
ಏನೇನೊ ಪ್ರಶ್ನೆಗಳ ಹೆಣೆಯುತಿತ್ತು.

ಮಳೆಯು ಬಂದರೆ ಹಿಗ್ಗಿ ಮೈ ತೊಯಿಸಿಕೊಳ್ಳುವದೆ
ನೀರಾಟವಾಡುವದೆ ಆಗ ಸೊಗಸು,
ಕಾಲುವೆಯ ನೀರಿನಲಿ ಕಾಗದದ ದೋಣಿಗಳ
ತೇಲಬಿಡೆ ಮುಳುಮುಳುಗಿ ಹೋದವೇಸು?

ನಾವು ಸಾಕಿದ ಬೆಕ್ಕು ತೀರಿಕೊಂಡಿರುವಾಗ
ಬೋರಾಡಿ ಅತ್ತಿರುವುದೆನಗೆ ನೆನಪು; ೧೧೦
ಅದನೊಯ್ದು ಹೊಲದಲ್ಲಿ ಮಣ್ಣು ಗೊಟ್ಟೈತರಲು
ಮನಸಿಗಾಯಿತು ಏಕೊ ನಸುವೆ ತಣಿಪು.

ಕಮ್ಮಾರ ಮಾನಪ್ಪ ಕೆಂಗುಲಿಮೆ ತಿದಿಯೊತ್ತೆ
ಕಬ್ಬಿಣವು ಕೆಂಗೆಂಡದಂತಾಗಿರೆ,
ಅಡಿಗಲ್ಲ ಮೇಲಿರಿಸಿ ದೊಡ್ಡ ಸುತ್ತಿಗೆ ಪೆಟ್ಟ
ಹಾಕುತಿರೆ ಸುತ್ತೆಲ್ಲ ಕಿಡಿ ಸೂಸಿರೆ,

ಅಬ್ಬಬ್ಬ ಕಬ್ಬಿಣವ ಮೇಣದಂದದಿ ಮಿದ್ದೆ
ಆಜಾನುಬಾಹುಗಿಹುದಾವ ಚದುರು?-
ಎಂದು ಅಚ್ಚರಿಗೊಂಡು ಯೋಚಿಸಿರೆ ಯಾಚನೆಯ
ದಾರಿಯಲಿ ಬರಲಿಲ್ಲ ಹರಿಕಾರರು. ೧೨೦

ಅರಲು ತುಳಿಯುತ ಮಿದ್ದಿ ಹದಗೊಳಿಪ ಕುಂಬಾರ
ಮಲ್ಲಣನ ತಿಗುರಿಯೇ ಕಮ್ಮಟವೆನೆ
ನೋಡನೋಡುತ ಗಡಿಗೆ ಮಡಕೆಗಳ ಸಾಲುಗಳು
ನಮ್ಮೂರಿಗವನದೆಯೆ ಹಂಚಿನ ಮನೆ!

ಕೆರವು ಹೊಲಿಯುವ ದೀನ ದಲಿತ ಮಾದರ ದುರುಗ
“ಮುಟ್ಟಬೇಡಿರಿ ತಂದೆ”- ಎಂಬ ನುಡಿಗೆ
ನನ್ನೆದೆಯ ಕಸವಿಸಿಯ ಹೇಳತೀರದು ಆಗ
ಬಾಲಕರಿಗೆಲ್ಲಿಯದು ಮಡಿ ಮೈಲಿಗೆ?

ದನವ ಕಾಯುವ ನಿಂಗ ಮಹಿಷವಾಹನನಾಗಿ
ಕೊಳಲನೂದುತ ಮನೆಗೆ ಹಿಂದಿರುಗಲು ೧೩೦
ಅವನ ಕಿಸೆ ತುಂಬೆಲ್ಲ ಕಾರಿಬೋರೆಯ ಹಣ್ಣು
ಇಪ್ಪಿ ಚಪ್ಪರ ಬದನೆ ಮಾಂಗಾಯ್ಗಳು.

ಕೆಲಸಿಗರ ಕೆಂಚನನು ಕಂಡರೀಗಲು ಭಯವು
ಒಡೆದ ಕನ್ನಡಿ ಮುರಿದ ಮೊಂಡುಗತ್ತಿ!
ಅವನ ಕಟಕಟಿಯಿಂದ ತಲೆಯೊಮ್ಮೆ ಪಾರಾಗೆ
ಮರುಜನ್ಮ ಪಡೆದಂತೆ ಉರಿವ ನೆತ್ತಿ!

ಹರಿವ ಹಳ್ಳದ ದಂಡೆಗಿರುವ ಮಾಸತಿ ಕಲ್ಲು
ಬಾವಿಕಟ್ಟೆಯ ಬಳಿಯ ವೀರಗಲ್ಲು
ಎಣ್ಣೆಯುಣ್ಣುತ ಪೂಜೆಗೊಳ್ಳುವುದ ಕಂಡಿದ್ದೆ
ಹೊಲದ ಬದುವಿನ ಸಣ್ಣ ಗುಂಡುಕಲ್ಲು. ೧೪೦

ಭಕ್ತಿಯೋ ಭೀತಿಯೋ ಹಳ್ಳಿಗರ ಬಾಳಿನಲಿ
ದೇವತಾರಾಧನೆಯು ಮೆರೆವುದಷ್ಟೆ?
ಅಂದಿನಿಂದಿ೦ದುವರೆಗೆನ್ನ ಮನದೊಳು ಮಾತ್ರ
ಮೂರ್ತಿಪೂಜೆಯ ಮಾತು ಅಷ್ಟಕಷ್ಟೆ.

ತಂದೆ ನಸುಕಿನೊಳೆದ್ದು ಅನುಭವಾಮೃತ ಓದೆ
ಸಕ್ಕರೆಯ ನಿದ್ದೆಯಲಿ ಸವಿಯುತಿದ್ದೆ;
ಮುಂಜಾವ ತನ್ನ ಗುಂಜಾರವದಿ ಕಿವಿತುಂಬೆ
ನಾದಲಹರಿಯ ನೂಲನೆಳೆಯುತಿದ್ದೆ.

“ಅವರವರ ಭಾವಕ್ಕೆ ಅವರವರ ಅರ್ಚನೆಗೆ
ಅವರವರಿಗೇ ದೇವ ನೀನೊಬ್ಬನೆ?” ೧೫೦
ಮುಪ್ಪಿನ ಷಡಕ್ಷರಿಯ ಅನುಭಾವದಲೆಯೊಂದು
ಜಂಗಮನ ತಂಬೂರಿಯಲ್ಲಿ ಸಸಿನೆ.

ಕೇಳಕೇಳುತ ಎದೆಯಲಾವುದೋ ಭಾವನೆಯ
ಹುಚ್ಚು ಹೊಳೆ ಹೊರಚೆಲ್ಲಿ ಮೊರೆಯುತಿತ್ತು;
ತಲ್ಲೀನವಾದ ಮನ ಚಿಂತನೆಗೆ ತೊಡಗಿರಲು
ಅಕ್ಕಪಕ್ಕದ ಜನವು ನಗುತಲಿತ್ತು.

ಸುವ್ವಿ ಬಾ ಚೆನ್ನಯ್ಯ ಸುದ್ದಿ ಬಾ ಲಿಂಗಯ್ಯ
ಸುವ್ವಿ ಬಾ ಎನ್ನುತ್ತ ಸಾರುವಯ್ಯ.
ಇರುಳಿನಲಿ ಕಂದೀಲ ಬೆಳಕಿನಲಿ ಬರುವಂತೆ
ಬಾಲ್ಯದನುಭವ ಮರಳಿ ಕರೆವುದಯ್ಯ ೧೬೦

ನಾನು ಹುಟ್ಟಿದ ಹಳ್ಳಿ ತೊರೆದು ಬೇರೂರಲ್ಲಿ
ನೆಲಸುವಾ ಸಮಯಬರೆ ಸೋತು ಹೋದೆ,
ಆ ಗೆಳೆಯರಾ ಎಳೆಯರಾನೋಟವಾಕೂಟ
ನೆನೆದು ಕಣ್ಣೀರ್ಮಿಡಿದು ಖಿನ್ನನಾದೆ.

ಇ೦ತಿ೦ತು ಈವರೆಗು ಹಳ್ಳಿ `ಬೆಳ್ಳಿ’ಯ ತೆರದಿ
ಮಮ ಚಿದಂಬರದಲ್ಲಿ ಮಿನುಗುತಿಹುದು;
ನನ್ನ ಬಾಳಿನಲೊಂದು ಮೈಲುಗಲ್ಲಾಗಿಹುದು
ನೆನೆದವರ ಮೈ ಮರೆಸಿ ಮೆರೆಯುತಿಹುದು.

ಕನ್ನಡದ ಶಾಲೆಯಲ್ಲಿ ಓದು ಮುಗಿಯುತ ಬರಲು
ಮುನ್ನಡೆವ ಹಂಬಲವು ಒಡಮೂಡಿರೆ ೧೭೦
ನಿರ್ಧಾರದುಯ್ಯಾಲೆ ಸ್ತಿಮಿತಕ್ಕೆ ಬಾರದಿರೆ
ಅಂತು ಇಂತೂ ಕೊನೆಗೆ ನಿಶ್ಚಯಿಸಿರೆ,

ಹತ್ತು ವರುಷಗಳಾಚೆ ನಮರ ಬಿಡುವ೦ದು
ಕತ್ತು ಬಿಗಿಬಿಗಿದಿತ್ತು ನೋವ ಸಹಿಸಿ,
ಅಗಲಿಕೆಯ ಅನುತಾಪ ಅನುಭವಿಸಲಸದಳವು
ಅದಕಿಂತ ಮರಣವೇ ಸ್ವಲ್ಪ ವಾಸಿ.

ಹಾಗು ಹೀಗೂ ಧಾರವಾಡಕೆನ್ನಯ ಪಯಣ
ನೀರ ತಪ್ಪಿದ ಮೀನ ತೊಳಲಿದಂತೆ
ಆವುದೋ ಹೊಸ ಜಗದ ಹೊಸ್ತಿಲಲಿ ಕಾಲಿರಿಸಿ
ನಡೆಯುತಿರೆ ದಿನಕೊಂದು ಚಂದದಂತೆ. ೧೮೦

ಬಾಳ ಸಂಪುಟದಲ್ಲಿ ಬಾಲ್ಯವೆಂಬುವದೊ೦ದು
ಅಳಿಸಲಾರದ ಮಧುರ ಭಾವಗೀತ!
ಮುಂದೆಬಹ ಅನುಭವದ ಕಹಿ ಫಲವನುಣ್ಣುತಿರೆ
ಮರುಕಳಿಸಿ ನೆನೆಯುವದೆ ನಮ್ಮ ಸ್ವಾರ್ಥ!

ವಿದ್ಯೆಯನು ಬೆಲೆಗೊಟ್ಟು ಕೊ೦ಬ ಕಾಲವಿದಯ್ಯ
ಎಲ್ಲಿ ಕಣ್ಣಿಡಲಲ್ಲಿ ಸಿರಿಯಲಾಸ್ಯ
ಬಡತನದ ಬವಣೆಯಲಿ ಬಗೆಹರಿಯಲಾರದೆಯೆ
ನಿಟ್ಟುಸಿರು ಕಂಬನಿಗಳೆನಿತಸಹ್ಯ!

ಬೆರಳ ಮಧ್ಯದ ಬಿಳಿಯ ಬತ್ತಿ ಹೊಗೆಯಿಡುತಿರಲು
ವಿವಿಧ ರೂಪದ ಸುರುಳಿ ಗಾಳಿಯಲ್ಲಿ ೧೯೦
ಕುಣಿದು ಕಣ್ಮರೆಯಾಗೆ ಗಾಳಿಯಲೆಯಲೆಯೊಡನೆ-
ಕೊನೆಗಾವ ಗುರಿಯಿಹುದೊ ಬಾಳಿನಲ್ಲಿ!

ಜಾತ್ರೆಯಲಿ ನೆರೆದ ಜನ ತೇರನೆಳೆಯುವ ಭರದಿ
ನುಗ್ಗಿರಲು ಮೈನುಗ್ಗು ಬೇರೆಯಿಲ್ಲ;
ದೂರದಲ್ಲಿಯೇ ನಿಂತು ಹಣ್ಣು ಕಾಯ್ಗಳನಿತ್ತು
ಕೈಮುಗಿವ ಜನರೆಷ್ಟು ನಮ್ಮೊಳಿಲ್ಲ?

ಕನ್ನಡ ಸರಸ್ವತಿಯ ಚೆಲು ರಥೋತ್ಸವ ಕಂಡು
ಮನದೊಳೇನೋ ಮಿಲಚಿದಂತೆ ಭಾಸ!
ಅವಳ ರಸಗಂಗೆಯಲಿ ಈಸಿ ಬಹ ಹಂಬಲದಿ
ನೋವನುಂಗುತ ಪಡೆದೆ ಮಧುಸುಹಾಸ. ೨೦೦

ಕಾವ್ಯ-ಕಲೆ-ಸಂಸ್ಕೃತಿಯ ಹೊಳಹು ತೆರೆಹೊಡೆದಂತೆ
ಭಾವಜೀವಿಯ ಮನವು ಮುಂದೋಡಿತು.
ಮೂಡಣದ ಚೆಂಬೆಳಕು ಉಷಯ ದರ್ಶನವೀಯೆ
ಎದೆಯ ಬಟ್ಟಲು ತುಂಬಿ ತುಳುಕುತಿತ್ತು.

ಸೌಂದರ್ಯ ದರ್ಶನಕೆ ದೀಪ್ತವಾಗಿಹ ಮನವು
ಪ್ರಕೃತಿಯೌಪಾಸನೆಯ ಕೈಕೊಂಡಿತು.
ಚೆಂಗುಲಾಬಿಯ ಪಕಳೆ ಅಕಳ೦ಕವಾಗಿರುವ
ಭಾವವೀಣೆಗೆ ಬೆರಳನಾಡಿಸಿತ್ತು.

ಹೊನ್ನ ರಾಶಿಯ ಸುರಿದು ಕೊಂಡುಕೊಳ್ಳಲುಹುದೆ?
ಚೆಲುವಿಕೆಯು ತಾನಲ್ಲ ಪುಣ್ ವಸ್ತು; ೨೧೦
ದೇವ ದೇವನ ತೇಜದೋಜೆ ಪೂಜೆಗೆ ಸಂದು
ಸೃಷ್ಟಿಯಲಿ ಮೈದೋರೆ ನುಡಿ “ನಮೋಸ್ತು”

ವಿಶ್ವಮುನ್ಮೀಲಿಸುವದಾವ ತೇಜಃಪುಂಜ
ಆ ಗಭಸ್ತಿಯ ಗರ್ಭಗುಡಿಯು ಲೋಕ!
ಒಳಗಣ್ಣಿನೆದುರಿನಲಿ ಮೂಡಬಹುದಾ ಬಿಂಬ
ಅದಕೆ ಶರಣಾಗಿಲು ಅದುವೆ ನಾಕ.

ಅಣುಕಣದ ಸೌಂದರ್ಯ ಬರಿಮಾತ ಜಳ್ಳಲ್ಲ
ಹಿರಿದು ಕಿರಿದೆಂಬುವದು ಅಲ್ಪ ಬುದ್ಧಿ;
ಅ೦ತರಂಗದ ಶುದ್ಧಿ ಬುದ್ಧಿಗದು ಹೆದ್ದಾರಿ
ಓದುವಾದಗಳಲ್ಲಿ ಕಲಿತ ಬುದ್ದಿ! ೨೨೦

ತಾರುಣ್ಯದಾಹ್ಲಾದ ಗಾಳಿಯಲಿ ಎದೆಹಿಗ್ಗಿ
ಸುಕುಮಾರ ಸೌಂದರ್ಯ ತೆರೆಯುತಿತ್ತು.
ನಂಬುಗೆಗೆ ಇಂಬಿರದ ಮೌಢ್ಯ ಜಾಡ್ಯಗಳನ್ನು
ಜಳ್ಳು ಕಾಳುಗಳಂತೆ ತೂರುತಿತ್ತು.

ಒಳಗಿನೊಳಗಿನ ನೋವು ಸಂತಸವ ಕಬಳಿಸುತ
ಒಮ್ಮೊಮ್ಮೆ ಧೀಂಕಿಟ್ಟು ಕೊರಚಾಡಿಸೆ
ಮನೆಯ ಸಂಕಷ್ಟವೇ? ನಂಬಿದರನಿಷ್ಟವೇ?
ಒಲವಿನಿಷ್ಟವೆ?- ತಿಳಿಯದದರ ಭಾಷೆ!

ಲಾಸ್ಯಹಾಸ್ಯದ ಜೊತೆಗೆ ತಾಂಡವವು ನಡೆದಿಹುದು
ಜೀವಿ ಜೀವಿಯ ನುಂಗಿ ಬದುಕುತಿಹುದು ೨೩೦
ಇರುಳೇನು ಬೆಳದಿಂಗಳೇನು ಕಾರ್ಮೋಡದಲಿ
ಮಿಂಚು ಝಳಪಿಸಿ ಸೃಷ್ಟಿ ಸಾಗುತಿಹುದು!

ಉಳ್ಳವರ ನಿರ್ದಯದ ಕಲ್ಲುಗಾಣದ ಹೀನ
ಕೃತ್ಯದಲಿ ನಿರಿನಿಟಿಲು ಬಡವರೆದೆಯು
ಕ್ಷಾಮಡಾಮರ ಭೀಮಗದೆಯನಪ್ಪಳಿಸುತಿರೆ
ನಿತ್ರಾಣವಾಗುತಿದೆ ದಲಿತ ಜನವು.

ಅನ್ನದನ್ಯಾಯದಲಿ ಕರುಳು ಕುದಿದೇಳುತಿರೆ
ಸದೆಬಡೆಯಲುದ್ವೇಗ ಕೆರಳುತಿಹುದು
ವಿಧಿ ನಿಷೇಧದ ಕಟ್ಟು ಕಟ್ಟಳೆಯ ಹುಟ್ಟಳಿಸಿ
ಹೊಸ ಸಮಾಜವ ಕಟ್ಟಿ ತೋರಬಹುದು. ೨೪೦

ಸಂಸಾರವೆಂಬ ಹೆಣ ಬಿದ್ದಿರಲು ತಿನಬಂದ
ನಾಯ ಜಗಳವ ಕಂಡು ನಕ್ಕ ಪ್ರಭುವು,
ನಾಯ ಜಗಳವ ಕಂಡು ಹೆಣವೆದ್ದು ನಗುತಲಿಹ
ಕಟು ವಿಡಂಬಕ ರೂಪ ನಮ್ಮ ಇರವು.

ವೇದಿಕೆಯ ಪೀಠದಲಿ ಉಪದೇಶ ಪಾಂಡಿತ್ಯ-
ಡಾಂಭಿಕತೆಯೇ ನಮ್ಮನಾಳುತಿಹುದು-
ಒಬ್ಬರೊಬ್ಬರ ಕಂಡು ಗುರ್ರೆಂಬ ಮಾತ್ಸರ್ಯ
ಮೌನದೊಡಲಿಗೆ ಬೆಂಕಿಯಿಡುತಲಿಹುದು!

ಏಸೊ ಈಶರು ದಾಸರಾಗಿ ಕೈಂಕರ್ಯದಲಿ
ಜನದ ಬದುಕನು ತಿದ್ದಿ ಹಸನುಗೊಳಿಸಿ, ೨೫೦
ಮೌನ ಶರಧಿಯ ತಳದಿ ಮುತ್ತಾಗಿ ಮಲಗಿಹರು
ನಾವು ನೊರೆ ತೆರೆಗಳೋ ಜೊ೦ಡು ಪಾಚಿ!

ಹಲವೆಲ್ಲ ಹಂಬಲಿಸಿ ಹದುಳಗಾಣದ ಮನವು
ಹುದುಗಿಹುದು ತನ್ನೊಳಗೆ ಮೌನವಾಗಿ
ಸುಪ್ತ ಜ್ವಾಲಾಮುಖಿಯ ತೆರದಿ ಕೂಳ್ಕುದಿಸುತಿರೆ
ಎಂದು ಸಿಡಿದೇಳುವದೊ ಕಿಡಿಯು ತಾಗಿ!

ಇರಲಿ; ಲೋಕದ ಡೊಂಕ ತಿದ್ದುವಾಸೆಯು ಬೇಡ
ನನ್ನೊಡಲ ಬ್ರಹ್ಮಾಂಡ ನನ್ನ ಲೋಕ
ಇಂದ್ರ ಚಂದ್ರಾದಿಗಳು ಕವಿ ಕಾಮಧೇನುಗಳು
ಅನುಭಾವಿಗಳ ಸಂಗದಲ್ಲಿ ಏಕ ೨೬೦

“ಸತ್ತವರ ಸಂಗದಲಿ ಹೊತ್ತು ಹೋಗುವದೆನಗೆ”
ಎಂಬ ಕವಿ ನುಡಿ ನನ್ನ ದಿನದ ಸತ್ಯ,
“ನೀತಿ ಶಾಸ್ತ್ರದ ಗೂಢ ಪ್ರೀತಿಯಲ್ಲಿದೆ” ಎಂಬ
ಆ ಮಹಾ ಷೆಲ್ಲಿ ಕವಿ ವಾಣಿ ನಿತ್ಯ!

ನಮ್ಮ ಬಾಳಿಗೆ ಸಮ ಪ್ರೀತಿಯೇ ನೆಲಗಟ್ಟು
ಪ್ರೀತಿಯೇ ಚೌಕಟ್ಟು ಬೇರೆಯಲ್ಲ:
ಪ್ರೇಮಕಾಗಿಯೆ ನವೆವ ಸತ್ಯಕಾಮರು ನಾವು
ಸತ್ಯವಾನ್ ಸಾವಿತ್ರಿಯಲ್ಲದಿಲ್ಲ!

ಸ್ವಾರ್ಥವಿರದಿಹ ಪ್ರೇಮ ನಿಸ್ಸೀಮದಾರಾಮ
ಹೋಮಾಗ್ನಿ ಯಂತಿಹುದು ಪ್ರೇಮಾಗ್ನಿಯು; ೨೬೦
ಪತನ ಹೊಂದುವ ಆ ಪತಂಗದಂತಿದೆ ಕಾಮ
ಪ್ರೇಮಚಿನ್ನವ ಸುಡುವ ದಿವ್ಯಾಗ್ನಿಯು!

ಚೆಲುವೆ ಗುಣವತಿಯಾಗೆ ಪ್ರೇಮ ಸಾಕ್ಷಾತ್ಕಾರ
ಹೃದಯದೊಲವೇ ಪರಂಜ್ಯೋತಿಯಯ್ಯ!
ಗುಣವಿರದ ಬರಿ ರೂಪ ಬಿಸಿಲು ನಂಜಿನ ತಾಪ
ಮನಸೆಳೆವ ವಿಷಕನ್ನೆ ಮಾಟ ಹೇಯ.

ಹೆಣ್ಣ ರೂಪವ ಕಂಡು ಕಣ್ಣು ಮಂಜಾಗುವದು
ಬುದ್ದಿ ಮಂಕಾಗುವದು ಸಹಜವೇನೊ!
ಸೌಂದರ್ಯಯೋಗಿಯೊಲು ಕಾಮವಾಸನೆ ತ್ಯಜಿಸಿ
ನೋಡುತಿರೆ ಬೇರೊಂದು ಹೊಳೆಯದೇನು? ೨೮೦

ನಿಚ್ಚಳದ ನೋಟದಲಿ ಅಚ್ಚಳಿಯದಂತಿರುವ
ಸಚ್ಚಿದಾನಂದವೂ ಚೆಲುವಿಗಿಹುದು;
ಚೆಲುವಿನಾರಾಧನೆಗೆ ನಿಜ ಕಲೋಪಾಸನೆಗೆ
ದರ್ಶನ ವಿಶುದ್ದಿಯೇ ಮೂಲವಿಹುದು.

ಇಲ್ಲಿ ಭಾವನೆ ಮೊದಲು ಬುದ್ಧಿಯದರಡಿಯಾಳು
ಮೊದಲ ನೋಟಕೆ ರತಿಯು ಸೌದಾಮಿನಿ!
ಪ್ರೇಮಿಗಳ ಹೃದಯಾಂತರಾಳದಲಿ ಮೌನದಲಿ
ಗುಪ್ತಗಾಮಿನಿ ಪ್ರೇಮ ಮಂದಾಕಿನಿ.

ಹೆಣ್ಣು ಮನುಕುಲದೊಂದು ಪುಣ್ಯದಾ ಬನದಲ್ಲಿ
ಕಕುಲಾತಿಯರಳಿಸಿದ ಮಧುರ ಹೂವು! ೨೯೦
ಎದೆಯ ಹೊಂಬಟ್ಟಲಲಿ ಪ್ರೇಮ ಪೀಯೂಷವಿರೆ
ಓರ್ಕುಡಿತೆಯನು ಕುಡಿದರಿಲ್ಲ ಸಾವು!

ಅಂಥ ತಿಳಿಯೊಲವಿಂಗೆ ಬಾಯಾರಿ ಕುಳಿತಿರಲು
ಮೋಡಗಳ ಕರುಮಾಡದಿಂದಳೊರ್ವ
ಯಕ್ಷಕನ್ಯೆಯು ಇಂದ್ರಚಾಪವನು ಕರಗಿಸುತ
ಹನಿಯಾಗಿ ಸುರಿಸಿದಳು ಓ ಅಪೂರ್ವ!

ಸರಳತೆಯು ಸೌಜನ್ಯ ಮುಗ್ಧತೆಯು ಮಾಧುರಿ
ಅವಳ ಚೆಲುಮೊಗದಲ್ಲಿ ಗುಡಿಗಟ್ಇಟರೆ,
ಜಗದಣ್ಪು ನುಣ್ಪುಗಳು ನವನವ ವಿಲಾಸಗಳು
ಕೇಂದ್ರ ಬಿಂದುವಿನಂತೆ ಮನಮುಟ್ಟರೆ, ೩೦೦

ಕುಸುಮ ಕೋಮಲೆ ಲಲಿತೆ ಸುರಲೋಕ ಸುಂದರಿಯು!
ಚೈತ್ಯಾಕ್ಷಿ ಕಣ್ದೆರೆಯೆ ಅರುಣೋದಯ!
ಒಂದೆ ಚಣದಲಿ ತಟಿಲ್ಲತೆ ತೆರಂಬೊಳೆವಂತೆ
ಆನಂದದೂರ್ಮಿಯಲಿ ಕರುಣೋದಯ!

ಅವಳ ನಗೆಮಲ್ಲಿಗೆಯ ಮಕರಂದದೌತಣಕೆ
ಕಣ್ಗೊಂಬಿಯೊಗುಮಿಗುವ ವಿಸ್ಫುರಣಕೆ,
ಕೊರಳು ಕೋಗಿಲೆಯಂತೆ ಸುರಿವ ಜೇನಿಂಚರಕೆ
ಮಂತ್ರಮುಗ್ಧನ ಮಾಡೆ ಚಿನ್ಮಾತೃಕೆ!

ಆದರಾವುದೊ ತೆರೆಯು ಜೊತೆಬಾಳನಗಲಿಸಲು
ರೂಢಿ ರಾಕ್ಷಸ ಮಿಂಚುಗೈಯ ಚಾಚೆ, ೩೧೦
ಮನವು ತಬ್ಬಿಬ್ಬಾಗಿ ಚೈತನ್ಯವಡಗಿರಲು-
ಈ ಸಮಾಜವೊ ನಿಂತ ನೀರು ಕೊಳಚೆ!

ಬೆಳದಿಂಗಳಿರುಳಲ್ಲಿ ರಾತ್ರಿರಾಣಿಯ ಹೂವು
ನಾಲ್ಲೆಸೆಗು ಅಚ್ಚ ಸೌಸವ ಬೀರಿರೆ,
ಅವಳ ಧ್ಯಾನದಲಿರುಳು ಹಗಲಾಗಿ ಹಗಲೊಂದು
ಇರುಳಾಗಿ ಮರುಳಾಗಿ ತೊಳಲುತ್ತಿರೆ,

ಕಾದಲೆಯ ಮುಖಬಿಂಬ ಮೋಡದಲ್ಲಡಗಿರಲು
ಮತ್ತ ಮಧುಪನ ಚಿತ್ರವತ್ತಿ ಹಣ್ಣು!
ಸಂಜೆ ಮುಗಿಲಿನ ರಂಗು ಭಂಗಿಯಲ್ಲಿ ಕಂಡಂತೆ
ಹಕ್ಕಿ ಹಾಡಿಗೆ ತೆರೆವೆ ಕಿವಿಯು ಕಣ್ಣು! ೩೨೦

ಪ್ರೇಮವೆಂಬುವ ಆರದಾರತಿಯ ಹಿಡಿದಿರುವ
ಚಿಕ್ಕೆಗಳ ಬಳಗದಲಿ ಕಾಂಬೆನೇನು?
ಸಪ್ತರ೦ಗದ ಬಿಲ್ಲು ಸುಪ್ತವಾಗಿರುತಿರುವ
ಪ್ರೇಮಕುದ್ದೀಪನಂಗೈವುದೇನು!

ಮದರಂಗಿಯುಗುರಿನಲಿ ಸಾರುಗಿ ಬಾರಿಸುತ
ಬೋರಂಗಿ ಚಿತ್ರಾಂಗಿ ಭೋರಿಡುತಿರೆ
ವಿಸ್ಕೃತಿಯ ಕಡಲಲ್ಲಿ ರಾಗಾನುರಾಗಗಳ
ತೆರೆ ಎದ್ದು ತೆರೆ ಬಿದ್ದು ಹೊಯ್ಯಾಡಿರೆ,

ಸುಳಿಗಾಳಿಯೊಡನೊಮ್ಮೆ ಸಂದೇಶ ಕಳಿಸುವೆನೆ
ಚಂದ್ರಕಿರಣಗಳಲ್ಲಿ ಓಲೆ ಬಹವೆ? ೩೩೦
ಹೂ-ಪಕಳೆಯಲಿ ಹೊಳೆವ ಮಂಜುಹನಿ ಮಣಿಮಾಲೆ
ಕೊರಳ ಕ೦ಠಿಕೆಯಿಂದ ಜಗುಳಿರುವವೆ?

ಮರೆಯಲಾಗದ ಚಿರಸುಧಾಕರೆಯು ಎನ್ನೆದೆಯ
ಒಲವನೆಂತೋ ಏನೋ ಕೆರಳಿಸಿದಳು!
ನಾನು ಕವಿಯೆಂಬುದನು ನನಗೆ ತೋರಿಸಿಕೊಟ್ಟು
ಮೌನವೀಣೆಯನಿಂತು ಮಿಡಿಸುತಿಹಳು.

ಸಖ್ಯವಿಲ್ಲದ ಜೀವ ಲಕ್ಷವಿಲ್ಲದ ಬಾಣ;
ಜೊತೆಯಿಲ್ಲದಾ ಬಾಳ ಗೋಳರಿದೆನು;
ಸನ್ಮತಿ ಸುವಾಸಿನಿಯ ಪ್ರೇಮ ಸೀಮಂತಿನಿಯ
ಜೊತೆ ಬೇಕು ಬೇಕೆಂದು ಆಲ್ಪರಿದೆನು. ೩೪೦

ನನ್ನ ಬಗೆಗೇ ನಾನು ಚಿಂತೆ-ಚಿತೆಯೇರುತ್ತ
ಒಳಗೊಳಗೆ ಕುದಿಕುದಿದು ಹಣ್ಣಾಗಿರೆ,
ಪರರೆದುರು ಎದೆಯಳಲ ತೋಡಿಕೊಳ್ಳುವ ವೃತ್ತಿ
ಇರದೆ ಇರಲಾರದೆಯೆ ಸಣ್ಣಾಗಿರೆ

ಏಕಾಂತವಾಸದಲಿ ಏಕಾಕಿ ಜೀವಕ್ಕೆ
ಏಕತಾರಿಯು ದೊರೆಯಲೆನಿತು ಹರುಷ!
ಕಾವ್ಯದೌಪಾಸನೆಯಲಂತು ಒಂದಾಗಿರಲು
ರಸಗಂಗೆಯಲಿ ತೇಲೆ ವರುಷ ವರುಷ

ಮಧುರಯಾತನೆಯಲ್ಲಿ ಕಾಲಯಾಪನೆಗೈಯೆ
ಬಂತು ಗೆಳೆತನ ಪುಣ್ಯ ಪಾಕದಂತೆ ೩೫೦
ಹೇಗೊ ಹೇಗೋ ಹೆಗಲುಗೊಟ್ಟು ಬಂದಿರೆ ಗೆಳೆಯ-
ರೊಂದೆ ಕೊಂಬೆಯ ಹಲವು ಹೂಗಳಂತೆ!

ಮೋಟುಮರ ಚಿಗುರೊಡೆದು ಫಲಫಲಿಸಿತೆನ್ನುವೊಲು
ಗೆಳೆತನವು ರಸಧಾರೆ ಧಾರೆಯಾಗಿ
ಸುರಿದು ಸಂಜೀವನವನಿತ್ತು ಚೇತನೆಗೊಳಿಸಿ
ರೂಪಿಸಿರೆ ನಾನಾದೆ ಸಖ್ಯಯೋಗಿ!

ಜಾನಪದ ಕವಿಯೊರ್ವ ದೇಸಿ ಚೆಲುವನು ನೀಡೆ
ದೊಡ್ಡ ಮನಸಿನ ಮಹಾದೇವನಂತೆ,
ಕತೆಗಾರನಿನ್ನೊರ್ವ ಕೆಚ್ಚೆದೆಯ ಕಲಿತನವ-
ನೂಡಿಸಲು ಮೈ ಕೊಡವಿ ಮೇಲಕೆದ್ದೆ! ೩೬೦

ಕಲ್ಪನೆಯ ಕಲ್ಪಗಳ ಪದ್ಮಸೇತುವೆ ರಚಿಸಿ
ಮಗುದೊಬ್ಬ ದಯೆಯ ಹೂಮಳೆಗರೆದಿರೆ.
ಆವರೂಪದಲೇನೊ ಕಾವ್ಯಪೂರ್ಣೆಯು ಮತ್ತೆ
ಮನವನಿಮ್ಮೈಗೊಳಿಸಿ ಹಾಡಿಸುತಿರೆ,

ನನ್ನ ದುಃಖವ ತನ್ನ ದುಃಖದಲಿ ಸಮನಿರಿಸಿ
ನನ್ನ೦ತರ೦ಗದಲಿ ನಿಜವ ನಿಲಿಸಿ,
ತಂಗಿಯೋರ್ವಳು ಪರಮ ಕಾರುಣ್ಯದಾನಿಯು
ಒಡಹುಟ್ಟಿಗಿಂತಲೂ ಮಿಗಿಲಾಗಿಸಿ,

ನಿರ್ಮಲಾಂತಃಕರಣಕೆನ್ನಮತಿಯನುಗೊಳಿಸಿ
ಸಂತವಿಸೆ, ಶ್ರದ್ದೆಯಲಿ ತಲೆಬಾಗಿದೆ! ೩೭೦
ಭಾವಶುದ್ಧಿಯ ಪಡೆದು ಬಳಗ ಬಳ್ಳಿಯ ತೆರದಿ
ಹಬ್ಬುತಿರೆ ನೂರೆಂಟು ನೋವ ಮರೆದೆ!

ಮಾತರಿವ, ಕವಿ, ರಸಿಕ, ಗಾಯಕರ ಮೇಳದಲಿ
ಮಾತು ಗೀತದ ರೂಪ ಪಡೆಯುತಿಹುದು;
ಮುಂಜಾವಿನಲಿ ನೂರು ಹಕ್ಕಿಗಳ ತರತರದ
ಸ್ವರದಲ್ಲಿ ಏಕತೆಯು ಮೂಡುತಿಹುದು.

ಜ್ಞಾನ ಸಿಂಧುವಿನೆದುರು ಮೌನವಾಗಿಯೆ ನಿಂದು
ಕಡೆಹಾಯಿಸುವರಾರು-ಕಾಣೆನೆಂದೆ;
ಸರ್ವಸಮಭಾವದಲಿ ಕಿರುದೋಣಿಯನ್ನೇರಿ
ಯಾನಗೈದೆವು ಕಡಲಿನಗಲಕಂದೆ! ೩೮೦

ಗೆಳೆಯರೊಲವಿನೊಳಿಂತು ಆಕಾಶ ಗಂಗೆಯಲಿ
ಮಿಂದು ಬಾನುದ್ದಕೂ ಈಸಬಹುದು,
ಅಂಬರದಿ ತುಂಬಿರುವ ಗಂಭೀರ ನಾದವನು
ಇಂಬುಕಯ್ಯುತ ಬಾಳ ಜಯಿಸಬಹುದು!

ದುಃಖದುಗುಡಗಳನ್ನು ಮಿಕ್ಕು ಮೀರಲುಬಹುದು
ದರ್ಪಸರ್ಪದ ವಿಷವ ಹಿಳಿಯಬಹುದು,
ಬಂಧುಭಾವದೊಳಿಂತು ಒಂದುಗೂಡುತ ಬಾಳ
ಆನಂದದರಮನೆಯ ಗೈಯಬಹುದು!

ಬಹುದು-ಗಿಹುದೇನಯ್ಯ ಅಹುದಾದರಹುದೆನ್ನು
ಕಂಡುಂಡ ಮಾತನ್ನೆ ನಿರವಿಸಿರುವೆ; ೩೯೦
ನೂರು ಜಂಜಾಟಗಳು ಹೆಡೆಮುರಿಗೆ ಕಟ್ಟಿದರು
ಗೆಳೆತನವೆ ಬಾ ಬಾರೆ ಎಂದುಸುರುವೆ!

ಧಾರವಾಡದ ನೆಲದ ಗುಣವೇನೊ ಋಣವೇನೊ!
ಕವಿಗಾಳಿ ಸವಿಗಾಳಿ ತೀಡುತಿಹುದು.
ಧಾರವಾಡದ ತಾಯ ಮಡಿಲಲ್ಲಿ ಮೊರೆಯಿಟ್ಟ
ದತ್ತವಾಣಿಗೆ ಎದೆಯು ಕೋಡುತಿಹುದು.

ಜನದ ಪರಿಯಂತಿರಲಿ; ನೆಲದಾಯ ಕಾರಣ್ಯ
ಹಸಿರು ಸಾಮ್ರಾಜ್ಯದಲ್ಲಿ ಕುಸುಮಿಸಿಹುದು;
ಕಂಡ ಕಣ್ಮನಗಳಲಿ ರಸಭಾವ ಸಂಚಾರ!
ಕಿರುವಕ್ಕಳೂ ಕವಿಗಳಾಗಬಹುದು! ೪೦೦

ಮಳೆಬಂದು ನಿಂದಾಗ ಬನದೇವಿ ಮಿಂದಾಗ
ತಂಬೆಲರ ತಂದಾಗ ಸವಿಯಬೇಕು.
ಸೋನೆವಳೆ ಸುರಿವಂದು ನೀರ್ವೊನಲು ಹರಿವಂದು
ಬಿಸಿಲು ಮಳೆಯಂದವನು ಕಾಣಬೇಕು.

ಹೂಬಿಸಿಲು ಹೊಂಬಿಸಿಲು ಚೆಂಬಿಸಿಲು ಚುಂಬಿಸಲು
ಎದೆಯನ್ನೆ ತುಂಬಿಸಲು ಬಿಂಬಿಸುತಿರೆ,
ಅಚ್ಚ ಬಂಗಾರವನೆ ಮೋಡಗಳು ಹುಡಿ ಮಾಡಿ
ಸುರಿಸಿ ಸಿಂಗರಿಸಿದವೊ ಎನುವಂತಿರೆ!

ಗಿಡಬಳ್ಳಿ ಚಿಗುರಿಡಲು ಹೋಗರೇರಿ ಹೂಬಿಡಲು
ನತ್ತಿಡಲು ಮುತ್ತಿಡಲು ತುಂಬಿ ಬಹವು; ೪೧೦
ಕೋಗಿಲೆಯ ಪಂಚಮದ ಇಂಚರವನಿಮ್ಮಡಿಸಿ
ಹಿಗ್ಗಿನಲಿ ಹಾಡುವದು ಕವಿಬಳಗವು!

ಕಾಲೇಜಿನಟ್ಟದಲಿ ನಿಂತು ನಾಲ್ದೆಸೆಗಳಲಿ
ಸೃಷ್ಟಿ ರಮಣೀಯತೆಯ ಕಂಡಿರುವೆನು
ಕ್ಷಿತಿಜದಂಚಿನ ಮಿಸುನಿ ರೇಖೆ-ವಿನ್ಯಾಸವನು
ಬೆಟ್ಟಕಾನಿನ ಬೆಡಗ ಸೆರೆವಿಡಿದೆನು.

ವಾಯವ್ಯದೆಡೆಯಿಂದ ಕಂದರದ ಮರೆಯಿಂದ
ತೂರಿ ಬಹ ರೈಲು ಕಾಳಾಹಿಯಂತೆ!
ಶಾಂತನಿದ್ರೆಯಲಿರುವ ಹಸುರು ಬಯಲಿಂದೊಮ್ಮೆ
ಸಿಳ್ಳು ಹೊಡೆವುದು ಮಾಯಕಾರನಂತೆ! ೪೨೦

ಬಂದಿರುವ ಬರಲಿರುವ ಸಂಕಷ್ಟವೆಣಿಸುವರೆ?
ನುರಿವೋಗು ಸ್ಥಿರವಾಗು ಸವ್ಯಸಾಚಿ!
ಅಳ್ಳಿರಿವ ಕೊಳ್ಳಿದೆವ್ವಗಳೆಂದು ಅಂಜುವರೆ
ನಿನ್ನಾತ್ಮಕೆಚ್ಚಿನೆದುರಾವ ಭೀತಿ?

ಎಲ್ಲಿ ಒಳಿತಿನ ಶಕ್ತಿ ವ್ಯಕ್ತಿಯಲ್ಲಿ ಅಡಗಿಹುದೊ
ಎಲ್ಲಿ ವಿಶ್ವಪ್ರೇಮ ಚಿರ ಉದಾರ,
ಅಲ್ಲಿ ಭಾವಂದೀವಿ ಮನದೀವಿ ನಮನವಿಡು
ಅದುವೆ ಬೆಳತಿಗೆಗಣ್ಣ ಜಾಳಂಧರ!

ಬಾನಿನಂಗಣದಲ್ಲಿ ಎನಿತು ಕಾಲದವರೆಗೆ
ಗರಿಗೆದರಿ ಹಾರೀತು ಹಾರೀತವು? ೪೭೦
ಹಕ್ಕೆಯರಸುತ ಮತ್ತೆ ಬಿಕ್ಕಿ ಬಳಲುತ ಬಂದು
ಅಕ್ಕರೆಯ ಪಾನಕವ ಗುಟುಕಿಸುವವು.

ಆಕಾಶಗಂಗೆಯಲಿ ಮಿಂದು ಇಂಚರಗೈವ
ಗಾನವಕ್ಕಿಯ ಹುರುಳನರಿಯಲಿಲ್ಲ!
ಸಕಲ ಜೀವರುಗಳಿಗೆ ಮಂಗಲವ ಪಾಡುತಿಹ
ಸದ್ಭಾನಕಿನಿತು ದಯದೋರಲಿಲ್ಲ.

ಎತ್ತೆತ್ತ ಹಾರಿದರು ಅತ್ತತ್ತ ಬೆಂಬತ್ತಿ
ಕಲ್ಲೆದೆಯ ಕಟುಗಿಡುಗ ಹೊಂಚುತಿಹುದು;
ಬಣ್ಣ ಬಣ್ಣದ ಗರಿಯ ರೋಮಗಳ ಕಿತ್ತೆಸೆದು
ನಿರ್ದಯದಿ ನೆತ್ತಿಯನು ಕುಕ್ಕುತಿಹುದು. ೪೮೦

ಚಂದ್ರಮನ ಶೀತಸುಧೆ ಮನದಾಳಕಿಳಿಯುವದೆ
ಅರೆಜೀವ ಬರಿಸಾವು ಕೊನೆಗೊಳ್ವುದೆ?
ಶಾಂತಿರಸ ಎದೆಗೋತು ಎದೆಯನ್ನೆ ಯಾಗುವಳೆ
ವಿಶ್ವದಂತಃಕರಣ ಬದುಕಿಸುವದೆ?

ತಲೆತುಂಬ ಪಾಂಡಿತ್ಯ-ಒಲವಿನರ್ಥಕೆ ಶೂನ್ಯ-
ರಾಗಿ ಬಾಳ್ವರ ಕಂಡರೆನಗಾಗದು;
ಮಾತು ಮಾತಿಗೆ ಮೋಸ, ಪರರ ಛಿದ್ರಾನ್ವೇಷ
ಇವರ ಆಳವನಿಲ್ಲೆ ಅಳೆಯಬಹುದು.

ಬೇಡವಿನ್ನೀ ಬಯಕೆ ಕೊಟ್ಟಣವ ಕುಟ್ಟುವಿಕೆ
ತಲೆಚಿಟ್ಟು ಓಕರಿಕೆ ಬಂಟರುವದು; ೪೯೦
ತೆಗಳಿಕೆಯ ತಳಮಳಿಕೆ ಹೊಗಳಿಕೆಯ ಬುಡುಬುಡಿಕೆ
ಕಾಲದೊರೆಗಲ್ಲಿನಲಿ ತಿಳಿಯಬಹುದು.

ಆತ್ಮಾನುಸಂಧಾನಕೆನ್ನ ನೆಳಸೈ ತಂದೆ
ಸರ್ವಾತ್ಮ ಸಾಕ್ಷಿಯಲಿ ನೀ ಬೆಳಗುತ
ಮರ್ತ್ಯವನ್ನು ಗೆದ್ದ ಮೃತ್ಯುಂಜಯೋಜ್ವಲನವೆ
ಎನ್ನೊಡಲ ಕಾಳಿಕೆಯ ಸುಟ್ಟುರಿಸುತ!

ನನ್ನ ಉಪಕಾರವಿದು ಎಂಬಹಂಕಾರವೇ?-
ಅಂಥ ಅಹಮಹಮಿಕೆಯು ಮೊದಲಿಗಿಲ್ಲ:
ನಮ್ರತೆಯು ಜಿಜ್ಞಾಸೆ ನನಗೆ ಸುಖವಿತ್ತಿಹವು
ಜಂಭ ಬಡಿವಾರ ಕೈವಾರವಲ್ಲ! ೫೦೦

ಲೆಕ್ಕವಿಲ್ಲದ ಜನರ ಹೊತ್ತು ತಿರುಗುತ್ತಿರುವ
ಈ ನೆಲದ ಹುಡಿಯಲ್ಲಿ ನಾನೊಂದು ಕಣವು;
ಬಾನ್ನೆಲವ ಸುತ್ತಿ ನೆರೆಮುತ್ತಿ ಘೂರ್ಮಿಸುತಿರುವ
ಬೆಂಗಾಡ ಬಿರುಗಾಳಿಯೊಂದು ಅಣುವು.

ಭುಲ್ಲವಿಸಿ ಬಲ್ದೆರೆಗಳೆದ್ದು ಹೊಯ್ದಾಡುತಿಹ
ಕಡಲಾಳದಲ್ಲಿ ನಾನೊಂದು ಹನಿಯು;
ಇಕ್ಕೆಲದಿ ಎಕ್ಕೆಕ್ಕೆ ಗಜರಿ ಗರ್ಜಿಸುತ್ತಿರುವ
ನೀರ್-ಬೀಳಿನಲಿ ಸಿಡಿವ ಜಿನುಗು ಹನಿಯು.

ದಟ್ಟೈಸಿ ಹಳು ಬೆಳೆದ ಕಟ್ಟರಣ್ಯದ ನಡುವೆ
ತರುಗುಲ್ಮಗಳಲಿ ನಾನೊಂದು ಎಲೆಯು; ೫೧೦
ಅಂತವಿಲ್ಲದ ಗಗನ ವಿಸ್ತೀರ್ಣದಲಿ ತೇಲಿ
ಲೀನವಾಗುವ ಮೋಡದೊಂದು ಎಳೆಯು.

ಜಗದೆಲ್ಲ ಜನರ, ಮಿಗ, ಹಕ್ಕಿಗಳ, ಕೀಟಗಳ
ಗಜಬಜೆಯ ಗದ್ದಲದಲೊಂದು ದನಿಯು
ಮದ ಮೋಹ ಮಾತ್ಸರ್ಯ ಕೋಪ ತಾಪಂಗಳಿಗೆ
ಹತಿಗೊಂಡ ಖತಿಗೊಂಡ ಸೀಳು ತಲೆಯು!

ಇಲ್ಲದ್ದು ಇದ್ದದ್ದು ಎದ್ದೆದ್ದು ಬಡಿಯುತಿರೆ,
ಕಾಲ ರಣಹದ್ದಿನೊಲು ಚಂಚು ತಿವಿಯೆ,
ನಾನೆಲ್ಲಿ ನನ್ನ ಪರಿಸರವೆಲ್ಲಿ ತೆರವೆಲ್ಲಿ
ಇರವೆಲ್ಲಿ ಹೋಹುದೋ ಅರಿಯೆ ಅರಿಯೆ! ೫೨೦

“ಓದು ವಾದಗಳೆಲ್ಲ ಶಕ್ತಿಯುಕ್ತಿಗಳೆಲ್ಲ
ಮುಗಿದು ನಿಜ ನಿಂತದ್ದೆ ಭಾವ ಮುಕ್ತಿ”
ಮಧುರ ಚೆನ್ನರ ಮಧುರ ನುಡಿಯ ಮರ್ಮವನರಿತು
ಮಾರುವೋಯಿತು ನನ್ನ ಭಾವ ಭಕ್ತಿ.

ಒಂದಿಲ್ಲ ಒಂದು ದಿನ ಸಾನಂದ ಸುಂದರನು
ಎದೆಯ ಪೀಠಕೆ ಬಿಜಯಗೈಯಬಹುದು:
ಭಾವಜೀವಿಯ ವಿಮಲ ಭಾವಾನುಭಾವದಲಿ
ಒಳನಿಧಾನದ ಪರಿಯ ತೋರಬಹುದು.

ಆವರೆಗು ಅನಿಸಿಕೆಯ ನೆನಸಿಕೆಯು ತುಂಬಿರುವ
ಚಿತ್ಸೂರ್ಯ ಕಿರಣಗಳನಾಯುತಿಹೆನು: ೫೩೦
ಹಗಲುಗಳ್ಳರು ನನ್ನ ಮನವ ಹಾಡೇ ಹಗಲು
ಹೊಕ್ಕಿರಲು ಮೊದಲವರ ಓಡಿಸುವೆನು.

ಪಂಚೇಂದ್ರಿಯಗಳುಣುವ ಪಂಚಕದ ಪರಮಾನ್ನ
ನೀರಡಿಸಿ ನೆನೆಗುದಿಗೆ ಬಿದ್ದಿರುವುದು;
ಬೇವು ತಿ೦ದರು ಬೆಲ್ಲ ತಿಂದಂತೆ ಸಸಿಯಾಗಿ
ರುಚಿಸುವರೆಗೂ ರಸನೆ ಕಾದಿರುವುದು

ರಸವಂತಿ ವಾಸಂತಿ ಗುಣವತಿಯಾದಂದು
ಕೋಗಿಲೆಗು ಸವಿಹಾಡ ಕಲಿಸಬಹುದು:
ಕೊರಳ ಕೊಂಕಿಸಿ ಗರಿಯ ನೂರು ಕಂಗಳ ಹರಹಿ
ಕುಣಿವ ನವಿಲಿಗೆ ಕೇಕೆ ಹೊಡೆಯಬಹುದು! ೫೪೦

ಕವಿಯ ಭಾವದ ಮೋಡ ತಂಗಾಳಿ ಸಖ್ಯದಲಿ
ಸುರುಚಿರಾಮೃತ ವರ್ಷ ಸುರಿಸಬಹುದು;
ಯಾತರದೊ ಯಾತನೆಯ ಕಾತರದಿ ಕುಳಿತಿರುವ
ಚಾತಕವು ಆತುರದಿ ಈ೦ಟಬಹುದು!

ಅಲೆವ ಗಾಳಿಯ ಹಿಡಿದು ತಂತಿಗಳ ಹೆಣೆಹೆಣೆದು
ವೀಣೆಯಂದದಿ ಝಣತ್ಕರಿಸಬಹುದು!
ದೇಶ ದಿಗ್ದೇಶಗಳ ಒಡಪಿನೊಡಗತೆಗಳನು
ಗಾಳಿ ಮೂಲಕ ಕೇಳಿ ಬಿಡಿಸಬಹುದು!

ಸೂರೆಪಾನದ ಹೂವ ಪುಷ್ಪಕ ವಿಮಾನದಲ್ಲಿ
ಕುಳಿತು ಬಾಂದಳದಲ್ಲಿ ಏರಬಹುದು; ೫೫೦
ಅಲ್ಲಿ ಗೃಹ ತಾರೆಗಳ ಮಂಚದಲಿ ಮಂಡಿಸುತ
ಚಂದ್ರನೊಡ ಚದುರಂಗವಾಡಬಹುದು.

ಇಳೆಯ ಬಾಳಿನ ಹಂತ ಮುಗಿಲುಗಳ ಪರ್ಯಂತ
ಎತ್ತರಿಸಿ ಬಿತ್ತರಿಸಿ ಬಾಳಬಹುದು;
ಪ್ರೇಮಮೂರ್ತಿಯು ನಮ್ಮ ರಾಜರಾಜೇಶ್ವರಿಯು,
ನೀತಿ ಸಮತೆಯು-ನಾಡಬೆಳಗಬಹುದು.

ಭಾವಜೀವಿಯು ನಾನು, ನನ್ನೆದೆಯ ನಂಬಿರುವ
ತುಂಬಿರುವ ಕನಸುಗಳೆ ಕಲ್ಪವೃಕ್ಷ!
ಯಾವುದಾದರು ಏನು ಕೃತಿಯಲ್ಲಿ ಬರುವನಕ
ಕನಸಲ್ಲವೆ?-ಅಲ್ಲವೆನಲು ರುಕ್ಷ! ೫೬೦

ಮನೆಯ ಕಟ್ಟುವ ಮೊದಲು ನಕ್ಷೆಯನು ತೆಗೆವಂತೆ
ಭಾವ ಕಾಣುವುದದನು ಕನಸಾಗಿಸಿ,
ಆಮೇಲೆ ಕಲ್ಲು ಇಟ್ಟಿಗೆ ಗಚ್ಚು ಗಾರೆಯಲಿ
ಭದ್ರಗೊಳಿಸುವರದನು ರೂಪುಗೊಳಿಸಿ.

ನನ್ನ ಬಗೆಯನೆ ಬಗಿದು ಹೊಗುವ ಭರದಲ್ಲಿರಲು
ಬಗೆಬಗೆಯ ಅನುಭವವು ಬಂದುದುಂಟು;
ಅದರ ತಿಳಿಯೊಂದಿನಿತು ನನ್ನ ನುಡಿಯೊಳಗಿಳಿದು
ಬಂದಿರಲು ಜೀವಕ್ಕೆ ಹರುಷವುಂಟು!

ಮಿಡಿಗಾಯನೊತ್ತಿಟ್ಟು ಹಿಸುಕಿ ಹಣ್ಣಿಸಬಹುದೆ?
ಹಸಿಬಿಸಿಯು ರಸಪಾಕವಾಗಬಹುದೆ? ೫೭೦
ಉಂಡ ಅನ್ನವು ಅರಗಿ ಮೈಗೂಡಿಕೊಳ್ಳದಿರೆ
ದೇಹಕೆನಿತಾದರೂ ಸೌಖ್ಯವಿಹುದೆ?

ಎದೆಯ ಗುಹೆಯೊಳಗಿರುವ ಗುರು ಗುಹೇಶ್ವರನರಸಿ
ಕಂಡುದನು ಮನದಲ್ಲಿ ಕಂಡರಿಸುತ,
ಮನುಜನೊಳಗಿನ ಮಹೇಶ್ವರನುದಿಸಿ ಕರುಣೆಯಲಿ
ಬಂದಂದು ಲೋಕಕ್ಕೆ ಸುಖದ ಸ್ರೋತ!
* * *
“ಅನುಭಾವವೆಂಬುವದು ಅಂತರಂಗದ ರತ್ನ
ಶಿಸು ಕಂಡ ಕನಸು ತಾನಾತ್ಮ ವಿದ್ಯೆ
ನಿಜನಿವಾಸದಲಿರಿಸಿ ತನ್ನರಿವ ತೋರುವದು
ಅನುಭಾವ ತಾನಲ್ಲ ಶಾಸ್ತ್ರ ವಿದ್ಯೆ!” ೫೮೦
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ