ತನ್ನ ರಾಜಕುಮಾರತನದ ಮೀಸೆಯ ಚಿಗುರು
ದೇಶ ಕಾಣದ ಹಾಗೆ ನೆರೆದು, ಕತ್ತಿನ ಕುಣಿಕೆ
ಹರಿದು ಹರವೋ ಹರ. ಹುಲ್ಲು, ಧರೆ, ಗಿಡ, ಹೊದರು-
ಎಲ್ಲವನ್ನೆತ್ತೆತ್ತಿ ಕುತ್ತಿ ತೀರದ ತುರಿಕೆ
ಮೊಳೆವ ಕೊಂಬಿಗೆ. ಆಕಾಶ ಕೈಗೆಟುಕದಿದ್ದಕ್ಕೆ,
ಕೋಶಾವಸ್ಥೆ ಮರಳಿಬಾರದ್ದಕ್ಕೆ, ತನಗಿಂತ ಮೊದಲೆ ತನ್ನಪ್ಪ ಹುಟ್ಟಿದ್ದಕ್ಕೆ,
ಮೊಲೆ ಬಿಡಿಸಿದವಮಾನ ಮುಯ್ಯಿ ತೀರದ್ದಕ್ಕೆ
ರೊಚ್ಚು; ಕೊಚ್ಚುತ್ತಾನೆ ಗಾಳಿಮೋಪು;
ರೇಗಿ ಕಿರುಚುತ್ತಾನೆ ಭಾರಿ ರೋಪು; || ೧೦ ||
ಹೂಂಕರಿಸಿ ಹಾರುತ್ತಾನೆ ಮೂರು ಗುಪ್ಪು.
– ೨ –
ಕಿಲಾಡಿರಸ್ತೆಯ ಕೊನೆಯ ತಿರುವುನಲ್ಲಪಘಾತ
ನ ಪ್ರಮದಿತವ್ಯ ಬೋರ್ಡಿನ ಕೆಳಗೆ. ಹೆದ್ದಾರಿ
ಬಿಟ್ಟು ಬಿದ್ದೆದ್ದು ಹೆದ್ದಾರಿ ಹಿಡಿವುತ್ಪಾತ
ವರ್ಧಮಾನದ ವರಾತ. ಬಿದ್ದು ಮೊಣಕಾಲೂರಿ,
ತರಿದ ಮೈ ಕೈ, ಹರಿದ ರೆಕ್ಕೆ, ಜಜ್ಜಿದ ಚಹರೆ
ಉಜ್ಜುವುದು ನಭದ ತುರುಚೆಗೆ. ಗಾಳಿಗುದುರೆ ಸವಾರಿ
ಗುಬ್ಬಿಸಿದ ಹಿಪ್ಪಿಗೆಳೆಯರು ದೂರ ದೂರ ಗೆಲ್ಲಿನ ಮೇಲೆ
ಹುಬ್ಬೇರಿಸುವರು, ಹಲ್ಕಿರಿಯುವರು, ತಮ್ಮೇಕತಾರಿ ಜೋಗುಳ ಹೀರಿ
ತೂಕಡಿಸುವರು. ಕಂದಕ ತುಂಬಿ ಬಿದ್ದಿರುವ ಬೂತ ವಿರಾಧ || ೨೦ ||
ನ ಸುತ್ತಲೂ ಕಣ್ಣಗುಡ್ಡೆ, ತಲೆಬುರುಡೆ, ಹೃತ್ಖಂಡ ಚರು.
ಕರುಳು ಗೋಜಲು ತೊಡರಿ ತೊಡರಿ ಬಿದ್ದೆದ್ದು ಹರೆವ ಕುಮಾರ
ಕಂಠೀರವಾಭಿನಯ ಕಂಡು ನಲಿವವರಿಲ್ಲ. ಸುನೀತಿ ಕಣ್ಣೀರು ಸುರು
ಚಿಯ ತಿರಸ್ಕಾರ ಗುರು, ಸುಗ್ರೀವಾಜ್ಞೆ ಹೊತ್ತ ವೀರಾಧಿವೀರ
ನಿಗೆ ಆಜ್ಞೆಯೊಕ್ಕಣೆ ಮರೆವು. ಅಂತೂ ತೆವಳಿ ತನ್ನುಸುರು
ತನ್ನ ಮಂಡೀಸಾಧನೆಗೆ ತಾನೆ ಚಪ್ಪಾಳೆ
ತಟ್ಟಿ ತಡಕುತ್ತ ತೊಳಲುತ್ತ ಮುನ್ನುಗ್ಗಿದರೆ
ಸರಿ, ಇಲ್ಲ, ತನ್ನ ತನ್ನ ಕಿಷ್ಕಿಂಧಕ್ಕೆ,
ತನ್ನ ಶಾಪಗ್ರಸ್ತ ಸೆರೆಗೆ ತಾನೇ ಪಹರೆ
– ೩ –
ಕೊರಕಲಿನ ದಂಡೆಯರೆ ಮೇಲೆ ಕುಳಿತಿದ್ದೇನೆ || ೩೦ ||
ಸಿಗರೇಟು ಹಚ್ಚಿ ಸೇದುತ್ತ ಸುಡುವುರಿಯಲ್ಲಿ
ಬೇಸಗೆಯ ಮದ್ಯಾಹ್ನ, ಕೆಳಗೆ ಅಳಲುತ್ತಾನೆ
ಪಂಚಾಗ್ನಿ ಮಧ್ಯಸ್ಥ ಮಗ. ಕೂಗಿ ಕೂಗಿ ಕರೆಯುತ್ತೇನೆ ಮಂಡೆ ಬಿಸಿ
ಕಂದ ಕಿವುಡಾಗಿದ್ದಾನೆ. ಅಥವಾ ಅವನ ಬಾಷೆಯೇ
ಬೇರೊ? ಕಿವುಚುವ ಕರುಳ ಹಿಡಿದು ಕೊರಗುತ್ತೇನೆ: ರಾತ್ರಿ
ನಿದ್ದೆಯೇ ಇಲ್ಲ; ಕಳೆಗೆಟ್ಟ ಮುಖ; ತೊಟ್ಟರಿವೆ ಹಿಸಿ
ದು ಹರಕಲು, ಹಗಲೆಲ್ಲ ಹಿಪ್ಪಿಗಳ ಜೊತೆ ಹೀರಿ
ಹಿಪ್ಪೆಯಾಗಿದ್ದಾನೆ. ನನ್ನ ಪ್ರತಿರೂಪ ಹುಡಿಗೊಳ್ಳುವೀ ಕಸಿ
ವಿಸಿಗೆ ಕಂಗಾಲಾದೆ. ಮುತ್ತಜ್ಜ ಕಟ್ಟಿದ್ದ ಮನೆ
ದೀಪ ಹಚ್ಚುವರಿಲ್ಲ. ಶ್ರದ್ಧೆ ಕೊಡುವನ್ನ ನೀರಿಲ್ಲದೆಯೆ || ೪೦ ||
ಉರುಳುವರು ಪಿತೃಪಿತಾಮಹರು. ಹೊಕ್ಕುಳಿನ ಬಳ್ಳಿ
ಕತ್ತರಿಸಬಾರದೋ – ಏನೊ. ಬಿತ್ತಕ್ಕೆ ಬೇರಿನ ಚಿಂತೆ
ಇಲ್ಲ, ಆದಷ್ಟು ದೂರ ಟಣ್ಣೆಂದೆಗರಿ
ಬಿಚ್ಚುವುದು ತನ್ನ ಮಾಯಾ ಪಟವ. ಪ್ರಾಯದ ಲಹರಿ
ಗೆಲ್ಲಿ ಯಾವುದು ತೀರ, ಯಾವ ನೆಲೆ, ಯಾವ ಗುರಿ?
– ೪ –
ಗಹ್ವರದ ಒಳಗತ್ತಲಲ್ಲಿ ಸುತ್ತಲು ತಡಕಿ ತಡೆದು ನಡೆಯುವ,
ನಡೆದು ಮುಗ್ಗರಿಸಿ ಬಿದ್ದೆದ್ದು ಹರೆವ, ಹರಿಯುವ ಜಾಡು
ಹಿಡಿವ, ಗುರುತಿಸುವ, ಬೇರೆ ಬಗೆವ, ಕಳೆದದ್ದನ್ನು ಪಡೆವ,
ಪಡೆದದ್ದಕ್ಕೆ ಪಡಿ ಹತ್ತು ಹಡೆವ ಕವನದ ಕರಡು
ಸಿದ್ಧಪಡಿಸುವ ಕವ್ಯ ವರ್ಧಮಾನಗೆ. ತನ್ನ ತಾನೇ ತಿಕ್ಕಿ || ೫೦ ||
ತಿಕ್ಕಿ, ಚಕಮಕಿಯ ಕಿಡಿಯುಕ್ಕಿಯುಕ್ಕಿ, ಕತ್ತಲ ಹೊಟ್ಟೆ
ಹೊಕ್ಕು ಹೊಯ್ಯುವ ಹವ್ಯ. ಗಹ್ವರವಾಸದೆಕ್ಕಟ್ಟಿಮೊಟ್ಟೆ
ಹೊತ್ತು ಸಲ್ಲುವುದೆ ಗುರುದಕ್ಷಿಣೆ. ದೂರದ ಕಡಲ ತೆರೆ ಸೊಕ್ಕಿ
ಬಡಿವ, ಬಾರಿಸುವ ಮರ್ಮರಲಾಲಿಲಯಕ್ಕೆ ಸರಿದೊರೆ ಬಡಿವ
ಕಡಿವ ಚಾಣದ ಪೆಟ್ಟುಪೆಟ್ಟಿಗೂ ಹಲ್ಲುಗುರುಕೊಂಬು ಇವು ಅಷ್ಟಿಷ್ಟು
ಸವೆದು ಸಾಕ್ಷಾತ್ಕಾರಗೊಳ್ಳಬಹುದಾದ ಅಂಶಾವ
ತಾರ ಹೋರೆ. ಉರಿ ಹತ್ತಿ ಕೊಳ್ಳಿ ಧಗಧಗಿಸಿ ಕತ್ತಲ ಮಷ್ಟು
ಹೊತ್ತಿಕೊಳ್ಳಲಿ. ಸ್ವಯಂಪ್ರಭೆ ಸ್ಪುರಿಸುವುದೆ ಆದ್ಯ
ಸ್ವರಿತ – ಉದಾತ್ತ ಅನುದಾತ್ತಶತಪಥದಲ್ಲಿ.
ಗಹ್ವರದ ಮುಖ ಅಲ್ಲಿ; ಆಚೆ ಬಯಲು ಬರಾವು; || ೬೦ ||
ಹಣ್ಣುಹಂಪಲು ಹಸುರು ಬಲ್ಲೆ, ಬಲ್ಲೆ;
ಜೀವನನಿಧಾನಶೃತಿ ಶುದ್ಧಿ ಮೊರೆವ ಕರಾವು;
ಹನುಮದ್ವಿಕಾಸಕ್ಕೆ ಇಲ್ಲ ಎಲ್ಲೆ.
*****
ಆಗಸ್ಟ್ ೧೯೭೦
