ಹೊಸ ವರುಷದ ಸ್ವಾ(ಸ್ವ)ಗತ ಭಾಷಣ

ಯಥಾಪ್ರಕಾರ
ತಿಥಿ ನಕ್ಷತ್ರಗಳ ಅಕ್ಷಮಾಲೆಯ ಹಿಡಿದು
ಹಬ್ಬ-ಹುಣ್ಣಿಮೆ-ಅಮಾವಾಸ್ಯೆಗಳ ರುಬ್ಬುಗುಂಡಿನಲಿ ಸಜ್ಜಾಗಿ
ಯಾವ ಹೂರಣ ತುಂಬಿ ಕೊಡಬಂದೆ ವಿಶ್ವಾವಸು?
ಏನೇನು ಹೆಚ್ಚಿ ಹರಚಿ ಪಚಡಿ ಮಾಡುವೆ ಹೇಳು:
ಏನೆಲ್ಲ ಕೂಡಿಸಿ, ಕುಟ್ಟಿ ಚಟ್ನಿ ಅರೆಯಲಿಕಿರುವೆ?
ಯಾವ ಕಾಳನು ಕುದಿಸಿ ಗುಗ್ಗರಿ ಮಾಡಿ, ಒಗ್ಗರಣೆ ಭಗ್ಗನಿಸುವೆ?
ಯಾವ ಬೆಂಕಿಯ ಮೇಲೆ ಇಟ್ಟು ಹಪ್ಪಳ ಸುಡುವೆ?
ಯಾವ ಬಾಣಲೆಯಲ್ಲಿ ಏನ ಬಡಿಸುವೆ ಬಡಿಸು
ನಾವು ಹಸಿದಿದ್ದೇವೆ.

ದಿನವೂ ನಮಗೆ ಶಿವರಾತ್ರಿ
ಪ್ರತಿಯೊಂದು ಹಗಲಿರುಳ ಸಂಧಿಕಾಲವೂ ನಮಗೆ ಸಂಕ್ರಾಂತಿ.
ಎತ್ತರದ ಬಾನಿನಲಿ ಬಿಳಿಯ ಕುಸುರೆಳ್ಳುಗಳ ಹರವಿ
ಆಶೆ ತೋರಿಸಬೇಡ:
ಕೊಡುವುದಾದರೆ ನೆಲದ ಉಡಿತುಂಬ ಕೊಡು
ಹೊಡೆಯೆತ್ತಿ ನಿಲ್ಲಲಿ ಬದುಕು.

ಉಂಡು ಉಪವಾಸಿಗಳು ನಾವು
ಬಳಸಿದ ಬ್ರಹ್ಮಚಾರಿಗಳು.
ಸರ್‍ವಧರ್‍ಮ ಸಹಿಷ್ಣುತೆಯ ಜಗಜ್ಜಾಹೀರಗೊಳಿಸಿ
ಜಾತಿಕೂಪಕೆ ಮತ್ತೆ ಜಾರಿಕೊಂಡವರು;
ಗಾಳಿ ಬೀಸಿದ ಹಾಗೆ ತೂರಿಕೊಂಡವರು.

ಹೊಸ ವರುಷವೇ ಬಾ, ಹಿಂಜರಿಯದಿರು
ನಿನಗು ಗೊತ್ತಿರಬೇಕು. ನಾವು ಸತ್ಕಾರಶೂರರು ಎಂದು.
ತತ್ಕಾಲದಲಿ ಸಭೆಗೂಡಿ, ಕೊರಳಿಗೆ ಪುಷ್ಪಹಾರವ ಬಿಗಿದು
ಪುಕ್ಕಟೆಯಾಗಿ ಚಪ್ಪಾಳೆ ತಟ್ಟುವವರು.
ಪೇಟೆಯಲಿ ಸಿಗದ ಸಕ್ಕರೆಯನೆಲ್ಲ ಮಾತಿನಲಿ ತಂದು ಸುರಿವವರು
ಘಾಯದ ಮೇಲೆ ಅಹಿಂಸಕ ಜೇನುತುಪ್ಪವ ಸವರಿದವರು.
ಬೆಳ್ಳಗಿನ ಬಟ್ಟೆ ತೊಟ್ಟ ಬೆಳ್ಳಕ್ಕರಿಗರು.
ಮನದ ಬೇವೆಲ್ಲ ಹರಿದು ನಾಲಗೆ ತುದಿಯ ಬೆಲ್ಲದಲಿ ಕೂಡಿ
ರಸಸಿದ್ಧಿ ಪಡೆದವರು.
ಸತ್ಯದ ಮಿಸುನಿ-ಮಿಂಚನು ಅಸತ್ಯದ ಖನಿಯ ತೋಡಿ ಹುಗಿದವರು.

ಇಷ್ಟಾದರೂ ನಾವು ಬದುಕಿದ್ದೇವೆ, ಬಾ
ಈ ಮಿಶ್ರಿತಬೆಣ್ಣೆಯನ್ನು ಸಳಮಳ ಕುದಿಸಿ, ಸೋಸಿ
ತುಪ್ಪ ಬಂದರೆ ಉಳಿಸು;

ಇಲ್ಲ, ತಪ್ಪು ದಂಡವ ಕೊಡಿಸು.
ವರುಷದ ವಸಂತಕ್ಕೆ ಹರುಷದಲಿ ಪಲ್ಲವಿಸಿ
ಭುಲ್ಲವಿಸಿ ನಿಂತಿವೆ ಹೊಂಗೆ, ಮಾವು, ಬೇವು.
ನಾವೇನು ಪಾಪ ಮಾಡಿದ್ದೇವೆ?
ಭೂತದ ಬೇರಿನಿಂದ ವರ್‍ತಮಾನದ ಟೊಂಗೆ ಟಿಸಿಲೊಡೆದು
ಭವಿಷ್ಯದ ಚಿಗುರು, ಹೂ, ಹಣ್ಣುಗಳ ನೀಡು ನಮಗೆ:
ನಾವು ಹಸಿದಿದ್ದೇವೆ.

ಅಂತೂ ಸಕಾಲಕ್ಕೆ ಆಗಮಿಸಿ, ವೇದಿಕೆಯ ಮೇಲೆ
ವಿರಾಜಮಾನನಾಗಿರುವ ವಿಶ್ವಾವಸು-
ದಯವಿಟ್ಟು ಅಧ್ಯಕ್ಷತೆಯ ವಹಿಸು
ನಮ್ಮ ಮುಂದಿನ ಕಾರ್‍ಯ ಸಾಂಗಗೊಳಿಸು.
ಹಿಂದಿನ ಮಹಾಶಯರು ಇದೇ ಕುರ್ಚಿಯಲಿ ಕುಳಿತು
ಮಾಡಿದ ಕಮಾಯ, ನಡೆಸಿದ ಕಾರಭಾರ
ಎಲ್ಲವನು ವರದಿಯಲಿ ಸಾದರಗೊಳಿಸಿ ಒಪ್ಪಿಸಿದ್ದೇವೆ.
ಕಾರ್‍ಯಕ್ರಮದ ಪಟ್ಟಿ ತುಂಬ ಭಾರವಾಗಿದ್ದರೂ
ಕೊನೆಗೆ ಅಭಾರಮನ್ನಣೆಯುಂಟು;
ಕೆಲವರಿಗಾದರೂ ಅಲ್ಪೋಪಹಾರದ ವ್ಯವಸ್ಥೆಯುಂಟು;
ನಿನಗೂ
ನಿನ್ನ ಪರಿವಾರಕ್ಕೂ
ಮತ್ತೊಮ್ಮೆ ಸುಸ್ವಾಗತ.
*****