“ಊರಿಗೆ ಬಂದರೆ ದಾಸಯ್ಯ! ನಮ್ಮ
ಕೇರಿಗೆ ಬಂದ್ಹೋಗೊ ದಾಸಯ್ಯ”
ಓ, ಅಂದ ಹಾಗೆ ಬಂದೇ ಬಿಟ್ಟಿರಾ! ಬನ್ನಿ.
ಎಷ್ಟು ವರುಷದ ಮೇಲೆ ನಿಮ್ಮ ದರ್‍ಶನವಾಯ್ತು;
ನೋಡಿ, ನಮ್ಮ ಗಡಿಬಿಡಿಯಲ್ಲಿ ನಿಮ್ಮ ಹೆಸರೇ ಮರೆತುಹೋಯ್ತು.
‘ಏಳಯ್ಯ ಬೆಳಗಾಯಿತು’ ಎಂದು ಮೊನ್ನೆ ಮೊನ್ನೆಯೆ
ಬಂದು ಎಚ್ಚರಿಸಿದರು; ಕನಸಿನಲಿ ಗೆಜ್ಜೆ ಕಟ್ಟಿ ಕುಣಿದಾಡಿದರು.
ನಿಮ್ಮನ್ನು ಕಂಡಾಗ ಅವರದೇ ನೆನಪಾಯ್ತು: ಇಬ್ಬರದು ತದ್ರೂಪ.
ನೋಡಿದಿರಾ: ನಿಮಗಾಗಿ ಏನೆಲ್ಲ ಸಿದ್ಧತೆ, ಸಂಭ್ರಮ, ಸಮಾರಂಭ
ನಿಮ್ಮ ಒಪ್ಪಿಗೆಯ ಕೇಳದೆಯೆ ಆಮಂತ್ರಣವ ಅಚ್ಚು ಮಾಡಿದ್ದೇವೆ
ಆದರೂ ದೊಡ್ಡ ಮನಸ್ಸು ಮಾಡಿ ಬಂದಿರಿ, ತುಂಬ ಸಂತೋಷ.
“ಮಾನವ ಜನ್ಮ ದೊಡ್ಡದು. ಇದ ಹಾನಿ ಮಾಡಬೇಡಿ ಹುಚ್ಚಪ್ಪಗಳಿರಾ”
ಇಲ್ಲ; ನಾವು ಜಾಣರು:
ಸ್ವಂತ ಲಾಭವಿಲ್ಲದೆ ಯಾವ ಕೆಲಸಕ್ಕೂ ಕೈ ಹಾಕುವುದಿಲ್ಲ.
ನೂರು ವರುಷಕ್ಕೊಮ್ಮೆ, ನಾನೂರು ವರುಷಕ್ಕೊಮ್ಮೆ
ಹಿಂದೆ ಹೂತಿಟ್ಟ ಧನ, ಕನಕ, ವಜ್ರ, ವೈಡೂರ್‍ಯಗಳ ಹೊರದೆಗೆದು ಪ್ರದರ್‍ಶನಕ್ಕಿಟ್ಟು ನಾಲ್ಕು ದಿನ ಹೀಗೆ-
ಮತ್ತೆ ಮೊದಲಿನಂತೆಯ ನೆಲದ ಮರೆಗಿಟ್ಟು
ಏಳು ಹೆಡೆ ಸರ್ಪಗಾವಲಿಗೆ ಒಪ್ಪಿಸುತ್ತೇವೆ.
“ನಗೆಯು ಬರುತಿದೆ, ಎನಗೆ ನಗೆಯು ಬರುತಿದೆ” ಎಂದಿರಾ?
ಇಷ್ಟಾದರೂ ನಿಮ್ಮ ಪುಣ್ಯ
ಇಲ್ಲವಾದರೆ ನಿಮ್ಮ ಹೆಸರು ನಾಲ್ಕೂ ಕಡೆಗೆ ಕೇಳಿಬರುತ್ತಿತ್ತೆ ಹೇಳಿ-
ನೀವು ಕರುಣಿಸಿ ಕೊಟ್ಟ ಕಲ್ಲು ಸಕ್ಕರೆ ಸವಿದು
ಒಂದೆರಡು ಹನಿ ಒಳಗೆ ಇಳಿಸಿದ್ದೇವೆ.
“ಸವಿಯು ಸಕ್ಕರೆಯೊಳಗೊ, ಸಕ್ಕರೆಯು ಸವಿಯೊಳಗೊ?”
ಸುಳ್ಳಲ್ಲ; ಪೆಪ್ಪರಮಿಂಟು, ಚಾಕಲೇಟಿಗಿಂತ
ಇದರ ರುಚಿ ಬೇರೆ ಕಂಡಿದ್ದೇವೆ.
“ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ
ವಿಠಲನಾಮ ತುಪ್ಪವ ಬೆರಸಿ ಬಾಯಿ ಚಪ್ಪರಿಸಿರೋ”
ಎಂದು ಹೇಳಿದಿರಲ್ಲ,- ಹೇಳಿದ್ದೆ ತಡ, ನಮ್ಮ ನಾಲಗೆಯಲ್ಲು ನೀರೂರಿ
ನಾವೂ ಬಾಯಿ ಚಪ್ಪರಿಸಿದೆವು: ರಾಮ, ಕೃಷ್ಣ, ವಿಠಲರನ್ನು ಸ್ವಲ್ಪ ಬದಿಗಿಟ್ಟು, ಭೇದವಿಷ್ಟೇ, ಹರಿದಾಸರೆ ನಾವು ನರದಾಸರು.
ದಾಸ್ಯದ ನೊಗವ ಕಿತ್ತೊಗೆದರೂ, ಯಾರೋ ಮೂಗುದಾಣವ ಹಾಕಿ
ಜಗ್ಗಿದಂತೆ, ಮತ್ತಾರೋ ಬಾಲವ ಹಿಡಿದು ತಿರುವಿದಂತೆ
ನಮ್ಮ ಅನುಭವ ನಮಗೆ ತಪ್ಪಿಲ್ಲ.
“ತಲ್ಲಣಿಸದಿರು ಕಂಡ್ಯ ತಾಳು ಮನವೇ’
ತಾಳಿಕೊಳ್ಳಲು ನಮಗೆ ಸಮಯವಿಲ್ಲ.
ನಿಮ್ಮದೊಂದೇ ದಾರಿ: ಏಕತಾರಿಯ ಹಾಗೆ
ನಾದ ಒಂದೇ, ನಡಾವಳಿಯು ಒಂದೇ.
ನಮ್ಮ ತಂಬೂರಿಯಲಿ ನೂರಾರು ತಂತಿಗಳು
ಒಂದು ಕಿವಿ ಹಿಂಡಿದರೆ ಇನ್ನೊಂದು ಬಾಯ್ ತೆರೆಯುವದು
ಒಂದೊಂದರದು ಕಿರಿಚು ತಿಂದು ಬೇರೆ.
ವಿವಿಧತೆಯಲ್ಲಿ ಏಕತೆಯ ಮಂತ್ರ ಒಂದೇ ಸವನೆ ಜಪಿಸಿದರೂ
ಜಗ್ಗಲಾರದು ಖೋಡಿ,
‘ತಂಬೂರಿ ತುಂಬೆಲ್ಲ ಕೀಸರುಬಾಸರು ಬೇಸರು ಬಂದೈತಿ’
ಹೇಗೂ ಅನಾಯಾಸ ದಯಮಾಡಿಸಿದ್ದೀರಿ-
ಏನು ಮಾಡುತ್ತೀರೋ ಮಾಡಿ,
ಯಾವ ರಾಗ ಹಾಡುತ್ತೀರೋ ಹಾಡಿ;
ನಮ್ಮ ಕೈಗೂ ತಾಳ ಕೊಟ್ಟು ನೋಡಿ.
ಓಣಿ ಓಣಿಗಳಲ್ಲ, ದೇಶ ದೇಶವ ತಿರುಗಿ ಬಂದರೂ
ತುಂಬಿಲ್ಲ ನಮ್ಮ ಗೋಪಾಳಬುಟ್ಟಿ
ನಾಮದ ಬಲದ ಮೇಲೆಯೇ ತಿರುಗುತ್ತಿದೆ ನಮ್ಮ ಸೃಷ್ಟಿ.
“ಎಲ್ಲಾರು ಮಾಡುವದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ, ತುತ್ತು ಹಿಟ್ಟಿಗಾಗಿ”
ಭಿಕ್ಷಕ್ಕೆ ನೀವು ಬೇಡಿದ ರಾಗಿ
ನಾವಿನ್ನೂ ಬಿತ್ತಿ ಬೆಳೆದಿಲ್ಲ:
ಕುಳಿತಿದ್ದೇವೆ ರಾಗಾನುರಾಗಗಳ ಬಲೆಯಲ್ಲಿ ಸಿಕ್ಕು ಕಂಗಾಲರಾಗಿ.
ಕ್ಷಮಿಸಿ, ಮುಂದಿನ ಮನೆಗೆ ಹೋಗುವಂಥವರಾಗಿ.
ಯೋಗ್ಯರಾಗಿ ಭೋಗ್ಯರಾಗಿ, ಭಾಗ್ಯವಂತರಾಗುವವರೆಗೂ
ದಾಸರೆ, ನೀವು ಪ್ರತಿದಿನವು ಬಂದು ಹಾಡಿ, ಹರಸಿ ಹೋಗಿ.
*****
