ಸದ್ಯ

ಬಸ್ಸಿನಲ್ಲಿ ಹೋಗುತ್ತಿದ್ದಾಗ
ದಾರಿಯಲ್ಲೆಲ್ಲೋ ಜನ
ಮುಕುರಿದ್ದ ಗಟಾರದ ಬದಿಗೆ
ಬಿದ್ದ ಪರದೇಶಿ ಹೆಣ ಕಂಡೆ

ಮುಂದೆ ಮುಂದೆ
ಹೋದಂತೆ ಆ ಮುಖ ಎಲ್ಲೋ
ಕಂಡಂತೆ ನೆನಪುಗುದ್ದಲಿ ಕುಕ್ಕಿ
ಮೆತ್ತಗೆ ಸಂಶಯ ಹೊಕ್ಕಿ
ಅದು ನನ್ನದಿರಬಹುದೆ ನನ್ನದೆ
ಅರೇ ಹೌದು ನನ್ನದೇ ಇತ್ತಲ್ಲ!
ಅಂತೆಲ್ಲ ಖಾತ್ರಿಯಾಗಿ
ಕಂಗಾಲು ಬೆದೆಪಟ್ಟು ಸ್ಟಾಪಿಗೆ ಮೊದಲೇ
ಧಡಕ್ಕನಿಳಿದು ಓಡುತ್ತಲೇ ತಿರುಗಿ
ಸುಳಿವು ಹಿಡಿದು ಹಿಂದೆ ಓಡಿದೆ

ಮುಗಿಬಿದ್ದ ಜನ
ಭೋರ್‍ಗರೆವ ವಾಹನ
ಸರಿಸಿ ಇಣುಕಿದೆ
ಸದ್ಯ ಹೆಣದ ತುಂಬ ಬೆಳ್ಳನೆ ಹೊದಿಕೆ
ಮುಚ್ಚಿಬಿಟ್ಟಿದ್ದರು.

ನಿರಾಳತೆಯಿಂದ ಶೇಂಗಾ ತಿಂದು
ಬೇರೆ ಬಸ್ಸು ಹತ್ತಿದೆ
*****