ಜಗದ ಕಡಲನು ಸುತ್ತುತಿದೆ ಹಗಲಿರುಳ ಹಡಗು
ನಿಮಿ ನಿಮಿಷದೊಂದು ತೆರೆ ತೆರೆವ ಅನಿಮಿಷ-ಮಿಣುಕು.
ಗಾಳಿ-ಬಿರುಗಾಳಿ-ಸುಳಿ ಕರುಣೆ-ಕ್ಷೌರದ ತೊಡಕು.
(ರಟ್ಟೆ ಸೋತರು ಮತ್ತೆ ಹುಟ್ಟು ಹಾಕುವ ಬೆಡಗು!)
ಮೂಡ-ಪಡುವಣ ಮುಖಕೆ ರಕ್ತ ಚಿಮ್ಮುವ ಹೊತ್ತು
ಜೀವ ಜೀವದ ನೀರು ಪುಟಿದು ಸಾಗರವರಿದು
ಒಡಲ ಕಡೆವುದು, ದಂಡೆಗಪ್ಪಳಿಸಿ ಮೊರೆಯುವುದು.
ಹಿಮಗಿರಿ ತಿಮಿಂಗಿಲಗಳಜ್ಜಗಾವಲು ಸುತ್ತು!
ಮಳಲಿನಂಚಿಗೆ ಬಾಯಿ ಬಿಡುವ ಭಾವದ ಸಿಂಪು,
ತಳದ ಕತ್ತಲ ಗವಿಯ ತೊಳೆವ ಜೀವದ ಮುತ್ತು,
ನಡುವೆ ಅಪರಂಪಾರ ಮುಳುಗಿ ಏಳುವ ಬದುಕು.
ಸಂತತ ಸ್ವತಂತ್ರವಿದು ಯಾರೆ ಹೂಡಲಿ ಸಂಪು-
ತಪ್ಪು ಯಾರದು?- ಎಲ್ಲ ಉಪ್ಪು ನೀರಿಗೆ ಗೊತ್ತು;
ಈ ಸರಕು ಬಂದರಿಗೆ ಒಯ್ದು ಒಗೆದರೆ ಸಾಕು.
*****
