ಹಂಸ-ಕ್ಷೀರ

ಬೆಳ್ಳಗಿದ್ದದ್ದೆಲ್ಲ ಹಾಲೆಂದು ಕುಡಿದೆವೋ-
ಹೊಟ್ಟೆ ತೊಳಸುತ್ತಿಹುದು. ಮುಟ್ಟಿದರೆ ಮಾಸುತಿಹ
ಬೆಳ್ಳಕ್ಕಿಯೆಂದು ಬಕದ ಬಾಯಲಿ ಬಿದ್ದವೊ-
ಸುಖವಾಯ್ತು, ಬಂದು ಕೂಡಿದವಲ್ಲ ಅಷ್ಟಗ್ರಹ.

ಮಂದಗಿನ ಹಾಲು ಕರೆಯುವದನ್ನೆ ತೊರೆದವೋ
ನಮ್ಮ ಹೆಮ್ಮೆಯ ಎಮ್ಮೆ? ಅವಕೆ ಎರಡೇ ಕೋಡು!
ಅಂಗೈದಪ್ಪ ಕೆನೆಯ ಮೊಸರು ತಿಳಿದುಪ್ಪವೋ-
ಅಯ್ಯ ನಮ್ಮಪ್ಪ! ಬಾ ಮುಂಗೈ ಮೂಸಿ ನೋಡು.

ತಪ್ಪು, ಹಸುಗಳದಲ್ಲ. ನೀರು ಬೆರೆಸಿದ ಹಾಲು
ನೋಡಲಿಕೆ ಯಂತ್ರವಿದೆ. ಮನುಜನೆದೆ ತಳಪಾಯ
ಭಾವಶುದ್ಧಿಯನಳೆಯಲಾವ ಮಂತ್ರ-ಸವಾಲು?
ಮಾನಸ ಸರೋವರದಿ ಹಂಸ-ಕ್ಷೀರನ್ಯಾಯ.

ಹೆಪ್ಪುಂಡ ಹಾಲು ತುಪ್ಪವಾಗುವದೊಂದು ಕ್ರಮ.
ತಪ್ಪಲಿ, ಒಡೆದ ಹಾಲನು ಕಡೆದು ನೋಡುವ ಶ್ರಮ.
*****