ಘನತೆ-ಗೌರವ-ಸಮತೆಗಿಷ್ಟಗಲ ತೆರೆದ ಕಿವಿ.
ಕ್ಷಿತಿಜದಂಚಿಗೆ ತಾಗಿ ಆಚೆ ಹೊಳೆಯುವ ದೃಷ್ಟಿ.
ಯೋಜನೆಯ ಮೇಜು ಹಣೆ, ತುಟಿ-ವಿನಯ-ಸಂತುಷ್ಟಿ.
ನೇರ ಬಾಳಿದ ಮೂಗು, ದುಡಿಮೆ-ದೀಕ್ಷಾ-ತವಸಿ.
ಶುಭ್ರ ಜರಿಪೇಟೆ: ಮೇಧಾಕಿರೀಟ; ಶಾಂತರಸ.
ಓರಣಕೆ ತೋರಣವಕಟ್ಟಿದುಡುತೊಡುಗೆ. ನಡಿಗೆ-
ನೂರು ಸಂವತ್ಸರದ ಕೊಡುಗೆ; ಕನ್ನಡ ಗುಡಿಗೆ
ಚಂದನದ ತೇರು, ಕೋಲಾರ-ಚಿನ್ನದ ಕಳಸ.
ಸಂಕಲ್ಪ ಮಾತ್ರದಲಿ ಶತಮಾನಗಳ ಕನಸ
ಕಡೆದು ನಿಲಿಸುವ ಶಿಲ್ಪಿ; ಯಂತ್ರ-ಗಡಗಡ-ಗಾಲಿ
ಉಕ್ಕು-ಕಬ್ಬಿಣ-ಸೊಕ್ಕು, ವಿದ್ಯುಚ್ಛಕ್ತಿ ಮೈಲಿ!
ವೃಂದಾವನದಿ ಮತ್ತೆ ಜೀವ ಪುಟಿಯುವ ರಾಸ.
ಅಜ್ಜನದ್ಭುತ ಕಥೆಗೆ ಮೊಮ್ಮಗನ ಮೈನವಿರು
ಉಜ್ಜು ಭಾರತವಜ್ರ ಜಂಗುತಿಂದವರಿವರು.
*****
