೧
ಪೂರ್ವ-ಪಶ್ಚಿಮಕೆರಡು ಹೋಳಾದ ಪಾಕ
ಎಲಾ! ಏನಿದೀ ಅವಿವೇಕ?
ಒಂದು ವ್ಯವಹಾರಕೂ ಇಲ್ಲ ಸಮತೂಕ.
ಪಾಕವೆ ಹಸಿ-ಬಿಸಿಯು, ಹಂಡ-ಬಂಡ?
ಹಾಕಿ ಮಾತಿನ ಲಾಗ ಕೋತಿ ಕುಣಿಸುತ್ತಿರುವೆ
ಕೃತಿಯು ಕಂಡದ್ದೆ ಇದೆ; ತೆರು ನೀನೆ ದಂಡ.
ಕೂಡಿ ಬಾಳಲಾರದ ನೀನೆ ಬೇರಾದೆ
ಕಿತ್ತೆಸೆದೆ ಹೊಳೆವ ಕನ್ನಡಿ ಹರಳು;
ಅತ್ತಿತ್ತ ಆರಿಸಿಕೊಂಡು ಚೂರು, ಚೂರಿ ಮಸೆದೆ.
ಇಡಿಯ ಮನೆತನ ಒಡೆದು
ನಡುವೆ ಗೋಡೆಗಳೆದ್ದು
ಕರಿನೆರಳು ಚಾಚುವುದ ಕಂಡ ತಂದೆ:
ಕೈಮುಗಿದು ಪ್ರಾರ್ಥನೆಯ ಮಾಡಿದರು
ಕಂಬನಿಯ ಹಣತೆಗಳ ಬೆಳಕ ನೀಡಿದರು:
“ಈಶ್ವರ ಅಲ್ಲಾ ತೇರೆ ನಾಮ್
ಸಬ್ಕೊ ಸನ್ಮತಿ ದೇ ಭಗವಾನ್”
ಊರುಗೋಲಿಗೆ ನೂರು ಹೆಜ್ಜೆ ಮುಂದಕೆ ನಡೆದು
ನಿನ್ನ ಮಕ್ಕಳ ಕಣ್ಣ ನೀರನೊರಸಿದರು;
ಸೋಜಿಗಕೆ ಸೋಜಿಗವೆನಿಸಿ ತಾವೆ ಬಲಿಯಾದರು.
ಆ ನಮ್ಮ ಹಿರಿಯಣ್ಣ
(ಹೆಸರಿಗೆ ತಕ್ಕ ರನ್ನ)
ನಿನ್ನ ದ್ವೇಷವ ನಿನ್ನ ಪಾಲಿಗೇ ಬಿಟ್ಟು ಹರಸಿದರು
ಕಿರುಕುಳವನೆಲ್ಲ ತಡಕೊಂಡು ಸಂಬಾಳಿಸಿದರು.
ಕಾದ ಹೆಂಚಿನ ಮೇಲೆ ತಮ್ಮ ಮನವನು ಹೇಗೊ ತಾಳಿಸಿದರು
ಕಥೆಯಲ್ಲವಿದು ತಮ್ಮ: ಒಡೆದ ಬಾಳಿನ ವ್ಯಥೆ
ಹಿಂದಿನಿತಿಹಾಸವನು ನೀನು ಮರೆತೆ.
೨
ಮನಬಲ್ಲಂತೆ ಅಡ್ಡಾತಿಡ್ಡ ಗಡಿ ಕೊರದು
ಅಡತೊಡಗಿದೆ ನೀನೆ ಹುಡುತುತು;
ಆಡಾಡ್ತ ಅಡವಿ ಬಿದ್ದೆ.
ನುಗ್ಗಿ ಬೇಲಿಯ ಬರುವ ಪೋಲಿ ದನಗಳ ಕಾಟ,
ತಿರುತಿರುಗಿ ತುಡುಗು ಮೇಯುವದೊಂದೆ ಪರಿಪಾಠ-
ಕೊನೆಗೊಮ್ಮೆ ಹಿಡಿದು, ಮೈಹುಳೇ ಬಡಿದು, ಕಟ್ಟಿ
ಕೊಂಡವಾಡೆಗಟ್ಟುವ ಸರದಿ ಬಂತು.
ಹುಡುಗಾಟ ಹುಚ್ಚಾಟಗಳನೆಲ್ಲ ಸಹಿಸಿಕೊಂಡದ್ದಾಯ್ತು;
‘ಛೀ, ಹಚಾ’ ಎಂಬ ಬರಿ ಬಾಯಿಮಾತಿಗೆ ನೀನು ಹಣಿಯದಾದೆ;
ಕಚ್ಚತೊಡಗಿದೆ ಹುಚ್ಚುನಾಯಾಗಿ-
ಅದಕಾಗಿ
ನಿನಗೆ ಗುಂಡಿಕ್ಕದೆಯೆ ಬೇರೆ ಮಾರ್ಗವಿಲ್ಲ.
೩
ಯುದ್ಧ ಯಾರಿಗೆ ಬೇಕು?
ತಂತಮ್ಮ ಮನೆಯೊಳು ತಾವು ಚಂದಾಗಿ ಬಾಳಿದರೆ ಸಾಕು.
ಮನಮನದ ಮಂದಾರವರಳಿ ಹಾಡಿನುಯ್ಯಾಲೆ ತೂಗಬೇಕು:
ಇದು ನಾವು ಕಂಡ ಕನಸು.
ನಿನ್ನದೋ ಬೇರೆಡೆಗೆ ಮನಸು.
ಹಿಟ್ಲರ್ ಮುಸೋಲಿನಿಯ ಬೂಟುಗಾಲಿನ ಹೆಜ್ಜೆ ಹಿಡಿದು
ಜನಮನದ ಬುಗ್ಗೆಯನ್ನೊತ್ತಿ, ಹೂವು, ಮೊಗ್ಗೆಯ ತುಳಿದು
ಸರ್ವಾಧಿಕಾರದ ಪಟ್ಟವೇರಿ ಕುಳಿತೆ.
ಅವರಿವರ ಮದ್ದು-ಗುಂಡುಗಳ ಕಡ ತಂದು
ಅಬಡಾಜಬಡ ತಿಂದು ತೇಗಿದೆ.
ನಿನ್ನ ಕಾಲಮೇಲೆಯ ಕಲ್ಲು ಚೆಲ್ಲಿಕೊಂಡು
ನೀತಿ ನಿಯಮಗಳ ಗೆರೆ ದಾಟಿ ಹೂಂಕರಿಸಿದೆ.
ಎದ್ದ ಮೇಲಾಳಲ್ಲ ಸನ್ನದ್ಧ ಭಾರತ:
ಸೊಂಡಿಲದೊಳಗೆ ಸುತ್ತಿ ಎತ್ತೆತ್ತಿ ಒಗೆವ ಮದ್ದಾನೆ ತುಳಿತ.
ಲಾಸ್ಮಕ್ಕು ತಾಂಡವರು ಶಿವನ ಅಧಿದೈವತ.
“ಸಾಧುಗೆ ಸಾಧು, ಮಾಧುರ್ಯಂಗೆ ಮಾಧುರ್ಯ
ಬಾಧಿಪ್ಪ ಕಲಿಗೆ ಕಲಿಯುಗವಿಪರೀತ” –
ಈ ರೀತಿ ನಾವು ಶಾಸನಬದ್ಧ.
ಬುದ್ಧಿಗಲಿಸುವುದಕ್ಕೆ ಕೋಟಿ ಕೋಟಿ ಜನ ಸಿದ್ಧ.
ಹೇಳು: ಯಾರಿಗೆ ಬೇಕು ಯುದ್ಧ?
ನಿನ್ನ ಪಿತ್ತಕ್ಕೆ ನಮ್ಮ ಯೋಧರೆ ತಕ್ಕ ಮದ್ದು.
ಹದ್ದುಮೀರದಿರು, ಸಾಕು ಆ ಪೀತಾಂಬರದ ವಿಷಕನ್ನೆ- ಮುದ್ದು.
ಅಡು-ಅಡುತ ಆರು ಸಲ ಹಳಸಿರುವ ಪಾಕ
ದೈವ ದುರ್ವಿಪಾಕ.
ದ್ವೇಷ-ಮಾತ್ಸರ್ಯಗಳನ್ನೆಲ್ಲ ಒಟ್ಟಿಗೆ ಸುಟ್ಟು, ಈ ಸಮರಭೂಮಿಯಲಿ
ಯಾವ ಚಿಗುರೊಡೆಯುವದೊ: ಅದು ಯಾರ ಕೈಲಿ?
ನಮ್ಮ ಕೈಯೊಳಗುಂಟು ಪಾಂಚಜನ್ಯವು-ಮುರಲಿ.
*****
